ಬೀದರ್‌ನ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾದ ಐದು ಜನ ಆರೋಪಿಗಳನ್ನು ಜೆಎಂಎಫ್‌ಸಿ ನ್ಯಾಯಾಲಯವು ಐದು ದಿನ ಸಿಐಡಿ ಕಸ್ಟಡಿಗೆ ವಹಿಸಿ ಶುಕ್ರವಾರ ರಾತ್ರಿ ಆದೇಶಿಸಿತು.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಕಲಬುರಗಿಯ ಮಾಜಿ ಕಾರ್ಪೊರೇಟರ್ ರಾಜು ಕಪನೂರ್, ನಂದಕುಮಾರ್ ನಾಗಭುಜಂಗೆ, ಗೋರಖನಾಥ್, ರಾಮನಗೌಡ ಪಾಟೀಲ್ ಹಾಗೂ ಸತೀಶ್ ಅವರನ್ನು ಸಿಐಡಿ ವಶಕ್ಕೆ ಒಪ್ಪಿಸಲಾಗಿದೆ.
ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ತಾತ್ಕಾಲಿಕವಾಗಿ ತೆಗೆದಿರುವ ಸಿಐಡಿ ಕಚೇರಿಯಲ್ಲಿ ಡಿಐಜಿಪಿ ಶಾಂತನು ಸಿನ್ಹಾ ಅವರ ಎದುರು ಐದು ಜನ ವಿಚಾರಣೆಗೆ ಹಾಜರಾದರು. ಅವರ ಹೇಳಿಕೆ ದಾಖಲಿಸಿದ ನಂತರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು, ನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶ ರಾಮಮೂರ್ತಿ ಅವರು ರಾಜು ಕಪನೂರ್ ಸೇರಿ ಇತರ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿ ವಾದ ಪ್ರತಿವಾದ ಆಲಿಸಿ ನಂತರ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು 5 ದಿನ ಸಿಐಡಿ ವಶಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ : ರಾಜು ಕಪನೂರ್ ಸೇರಿ ಐವರ ಬಂಧನ
ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿ ಸಚಿನ್ ಪಾಂಚಾಳ್ ಡಿ.26 ರಂದು ರಾಜು ಕಪನೂರ್ ಸೇರಿದಂತೆ ಎಂಟು ಜನರು ಹೆಸರು ಉಲ್ಲೇಖಿಸಿದ ಮರಣಪತ್ರ ಬರೆದಿಟ್ಟು ಬೀದರ್- ಹೈದರಾಬಾದ್ ಮಾರ್ಗದ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ಹಿನ್ನಲೆಯಲ್ಲಿ ಜ.6ರಂದು ಸಿಐಡಿ ತನಿಖಾ ತಂಡವು ವಿಚಾರಣೆಗೆ ಹಾಜರಾಗುವಂತೆ ಐವರು ಆರೋಪಿಗಳಿಗೆ ನೋಟಿಸ್ ನೀಡಿದ್ದರು. ಶುಕ್ರವಾರ ವಿಚಾರಣೆಗೆ ಆಗಮಿಸಿದ ಐವರು ಇದೀಗ ಸಿಐಡಿ ವಶಕ್ಕೆ ಕಳುಹಿಸಲಾಗಿದೆ.