ಭಾರತದ ಟಿ20 ತಂಡಕ್ಕೆ ವೇಗಿ ಬೌಲರ್ ಮೊಹಮ್ಮದ್ ಶಮಿ ಅವರು ಬರೊಬ್ಬರಿ 2 ವರ್ಷದ ಬಳಿಕ ಮತ್ತೆ ಆಯ್ಕೆಯಾಗಿದ್ದಾರೆ. 2022ರಿಂದ ಟಿ20 ಪಂದ್ಯಗಳಲ್ಲಿ ಆಡಿದ್ದು ಶಮಿ, ಆ ಬಳಿಕ ತಂಡದಿಂದ ಹೊರಗುಳಿದಿದ್ದರು. ಇದೀಗ, ಮತ್ತೆ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.
2022ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪಂದ್ಯ ಅವರ ಕೊನೆಯ ಪಂದ್ಯವಾಗಿತ್ತು. ಅಡಿಲೇಡ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ ಶಮಿ, 3 ಓವರ್‌ಗಳ ಬೌಲಿಂಗ್ ಮಾಡಿ, 39 ರನ್ ನೀಡಿದ್ದರು. ಆ ಬಳಿಕ ತಂಡದಿಂದ ಹೊರಗುಳಿದಿದ್ದರು.
ಮೂರು ಓವರ್‌ಗೆ 39 ರನ್ ನೀಡಿದ್ದನ್ನು ಕಳಪೆ ಪ್ರದರ್ಶನವೆಂದು ಪರಿಗಣಿಸಿದ್ದ ಬಿಸಿಸಿಐ, ಆ ಬಳಿಕ ಅವರನ್ನು ಟಿ20 ತಂಡದಿಂದ ಹೊರಗಿಟ್ಟಿತ್ತು. ಆ ನಂತರದ ಯಾವುದೇ ಟಿ20 ಟೂರ್ನಿಗಳಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಇದೀಗ, ಮತ್ತೆ ಟಿ20 ತಂಡಕ್ಕೆ ಪುನರ್ ಆಯ್ಕೆಯಾಗಿದ್ದಾರೆ. ಅದೂ, 790 ದಿನಗಳ (2ವರ್ಷ 3 ತಿಂಗಳ) ಬಳಿಕ.
ಕಳೆದ ಈ ಎರಡು ವರ್ಷಗಳಲ್ಲಿ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ಗಳಲ್ಲಿ ಶಮಿ ತಂಡದಲ್ಲಿದ್ದರು. ಉತ್ತಮ ಪ್ರದರ್ಶನವನ್ನೂ ನೀಡಿದ್ದರು. ಈಗ ಅವರು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ದದ ಪಂದ್ಯಗಳಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಿದರೆ, ಅವರನ್ನು ಮುಂದಿನ ಚಾಂಪಿಯನ್‌ಶಿಪ್ ಟ್ರೋಫಿಯ ಟೂರ್ನಿಗೂ ಆಯ್ಕೆ ಮಾಡುವ ಸಾಧ್ಯತೆ ಇದೆ.
ಇಂಗ್ಲೆಂಡ್ ವಿರುದ್ಧದ ಟೂರ್ನಿಯಲ್ಲಿ ಭಾರತದ ತಂಡದ ನಾಯಕತ್ವವನ್ನು ಸೂರ್ಯಕುಮಾರ್ ಯಾದವ್ ವಹಿಸಲಿದ್ದಾರೆ. ಅಕ್ಷರ್ ಪಟೇಲ್ (ಉಪಾನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೇಲ್ (ವಿಕೆಟ್ ಕೀಪರ್) ಇರಲಿದ್ದಾರೆ.