ಮಹಾರಾಷ್ಟ್ರದ ದಲಿತ ಚಳವಳಿಯಲ್ಲಿ ದಾಖಲಾದ ʼನಾಮಾಂತರ ಚಳವಳಿʼ

Date:

Advertisements

ಜನವರಿ 14, ಮಹಾರಾಷ್ಟ್ರದ ದಲಿತ ಚಳವಳಿಯಲ್ಲಿ ಐತಿಹಾಸಿಕ ದಿನ. ಸುದೀರ್ಘ 17 ವರ್ಷಗಳ ಹೋರಾಟದ ನಂತರ ಔರಂಗಾಬಾದಿನ (ಈಗಿನ ಛತ್ರಪತಿ ಸಂಭಾಜಿ ನಗರ) ಮರಾಠಾವಾಡ ವಿಶ್ವವಿದ್ಯಾಲಯಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಮರಾಠಾವಾಡ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿದ ದಿನ. ಈ ಹೋರಾಟದ ಸಂಕ್ಷಿಪ್ತ ವಿವರ ಇಲ್ಲಿದೆ.

ಹೈದರಾಬಾದ್ ನಿಜಾಮರ ಆಳ್ವಿಕೆಯಲ್ಲಿದ್ದ ಮರಾಠಾವಾಡಾ ಭಾಗವು ಶೈಕ್ಷಣಿಕವಾಗಿ ತುಂಬಾ ಹಿಂದುಳಿದಿತ್ತು. ಇದನ್ನು ಗಮನದಲ್ಲಿರಿಸಿಕೊಂಡು 1949ರಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಔರಂಗಾಬಾದ್‌ನಲ್ಲಿ ಮಿಲಿಂದ್ ಕಾಲೇಜಿನ ಅಡಿಪಾಯವನ್ನು ಹಾಕಿದರು. ಔರಂಗಾಬಾದ್‌ಗೆ ಬಹುಭೇಟಿಯ ಸಮಯದಲ್ಲಿ ಅವರು ಔರಂಗಾಬಾದಿನಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯದ ಅಗತ್ಯವನ್ನು ಮನಗಂಡರು. ಡಾ. ಅಂಬೇಡ್ಕರ್ ಅವರು ʼಭಾಷಾ ರಾಜ್ಯʼ ಸಮಿತಿಯ ಮುಂದೆ ಪ್ರತ್ಯೇಕ ವಿಶ್ವವಿದ್ಯಾಲಯದ ಬೇಡಿಕೆಯನ್ನು ಮಂಡಿಸಿದರು. ಆದರೆ ಸರಕಾರದಿಂದ ತಕ್ಷಣಕ್ಕೆ ಯಾವುದೇ ಕ್ರಮ ಬರಲಿಲ್ಲ. ನಂತರ ಮರಾಠವಾಡದ ಜನರ ಆಂದೋಲನದ ನಂತರ 23 ಆಗಸ್ಟ್, 1958ರಂದು ಮರಾಠಾವಾಡಾ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದಿತು. ವಿಶ್ವವಿದ್ಯಾನಿಲಯವು 725 ಎಕರೆಗಳಲ್ಲಿ ಹರಡಿದೆ, ಮಹಾರಾಷ್ಟ್ರ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ (ಔರಂಗಾಬಾದ್, ಜಲ್ನಾ, ಬೀಡ್ ಮತ್ತು ಉಸ್ಮಾನಾಬಾದ್) ಸುಮಾರು 456 ಕಾಲೇಜುಗಳಿಗೆ ಸಂಯೋಜಿತವಾಗಿದೆ.

ವಿಶ್ವವಿದ್ಯಾನಿಲಯ ಸ್ಥಾಪನೆಯಾದ ನಂತರ ಔರಂಗಾಬಾದ್ ವಿಶ್ವವಿದ್ಯಾನಿಲಯಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರನ್ನು ಇಡಬೇಕೆಂದು ವಿವಿಧ ಅಂಬೇಡ್ಕರ್ ಗುಂಪುಗಳಿಂದ ಬೇಡಿಕೆ ಇತ್ತು. 26 ಜೂನ್, 1974ರಂದು ಮರಾಠವಾಡ ರಿಪಬ್ಲಿಕನ್ ವಿದ್ಯಾರ್ಥಿ ಸಂಘವು ಮರಾಠವಾಡದ ಕನಿಷ್ಠ ಒಂದು ವಿಶ್ವವಿದ್ಯಾಲಯಕ್ಕಾದರೂ ಬಾಬಾಸಾಹೇಬರ ಹೆಸರಿಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಿತು. ವಿಶ್ವವಿದ್ಯಾಲಯದ ಹೆಸರು ಬದಲಾವಣೆಗಾಗಿ ಮಂಡಿಸಲಾದ ಮೊದಲ ಅಧಿಕೃತ ಬೇಡಿಕೆ ಇದಾಗಿದೆ. ಆ ದಿನಗಳಲ್ಲಿ ದಲಿತ ಪ್ಯಾಂಥರ್ ಸಂಘಟನೆಯು ಮಹಾರಾಷ್ಟ್ರದ ಸಾಮಾಜಿಕ ಮತ್ತು ರಾಜಕೀಯವಾಗಿ ತುಂಬಾ ಸಕ್ರಿಯವಾಗಿತ್ತು. ಅವರು ನಾಮಾಂತರ ಚಳವಳಿಯ ನಿಜವಾದ ಹೋರಾಟಗಾರರು.

Advertisements

1977ರಲ್ಲಿ ದಲಿತ ಪ್ಯಾಂಥರ್ ವಿಸರ್ಜಿಸಲಾಯಿತು. ಗಂಗಾಧರ ಗಾಡೆ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ಈ ನಿರ್ಧಾರ ಕೈಗೊಳ್ಳುವಂತೆ ಆಗಿನ ಮುಖ್ಯಮಂತ್ರಿ ಶಂಕರರಾವ ಚವ್ಹಾಣ ಅವರು ರಾಜಾ ಢಾಲೆ ಅವರ ಮನವೊಲಿಸಿದ್ದಾರೆ ಎಂಬ ವದಂತಿಗಳು ಹರಡಿದವು. ಆದರೆ ಢಾಲೆ ಅವರ ಈ ನಿರ್ಧಾರವನ್ನು ಮಹಾರಾಷ್ಟ್ರದ ಯುವ ಪ್ಯಾಂಥರ್ ಗಳು ಒಪ್ಪಿಕೊಳ್ಳಲಿಲ್ಲ.

ಗಂಗಾಧರ ಗಾಡೆ ಕಾರ್ಯದರ್ಶಿಯಾಗಿ ಅರುಣ ಕಾಂಬಳೆ ನೇತೃತ್ವದಲ್ಲಿ ಭಾರತೀಯ ದಲಿತ ಪ್ಯಾಂಥರ್ ಎಂಬ ಹೆಸರಿನ ಹೊಸ ಸಂಘಟನೆ ಅಸ್ತಿತ್ವಕ್ಕೆ ಬಂದಿತು. ನಂತರ ರಾಮದಾಸ ಅಠವಲೆ, ದಯಾನಂದ ಮ್ಹಾಸ್ಕೆ, ಪ್ರೀತಂ ಕುಮಾರ್ ಶೇಗಾಂವ್ಕರ ಮುಂತಾದವರು ಸೇರಿಕೊಂಡರು. ಹೊಸದಾಗಿ ರೂಪುಗೊಂಡ ಈ ಪ್ಯಾಂಥರ್ ನ ಸದಸ್ಯರು ಮರಾಠಾವಾಡ ವಿಶ್ವವಿದ್ಯಾಲಯದ ಮರುನಾಮಕರಣಕ್ಕಾಗಿ ಪೂರ್ಣ ಪ್ರಮಾಣದ ಚಳವಳಿಯನ್ನು ಆಯೋಜಿಸಿದರು. ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರವು ಮರಾಠವಾಡ ಜನರ ಬೇಡಿಕೆಗಳಿಗೆ ಕಿವಿಗೊಡಲಿಲ್ಲ.

17ನೇ ಜುಲೈ 1977ರಂದು ಔರಂಗಾಬಾದಿನ ವಿದ್ಯಾರ್ಥಿ ಸಂಘಟನೆಗಳು ಹೋರಾಟದ ಕ್ರಿಯಾಯೋಜನೆ ನಿರ್ಧರಿಸಲು ಸರಸ್ವತಿ ಭುವನ್ ಮೈದಾನದಲ್ಲಿ ಸಭೆಯನ್ನು ಆಯೋಜಿಸಿದವು. ದಲಿತ ಯುವ ಅಘಾಡಿ, ಯುವ ರಿಪಬ್ಲಿಕನ್, ಎಬಿವಿಪಿ, ವಿದ್ಯಾರ್ಥಿ ಕಾಂಗ್ರೆಸ್, ದಲಿತ ಪ್ಯಾಂಥರ್ ಮುಂತಾದ ವಿವಿಧ ಸಂಘಟನೆಗಳು ಈ ಸಭೆಯಲ್ಲಿ ಭಾಗವಹಿಸಿದ್ದವು. ಈ ವಿದ್ಯಾರ್ಥಿಗಳ ಸಂಘಟನೆಯು ಸರ್ಕಾರದ ಮುಂದೆ ಬೇಡಿಕೆಗಳ ಪಟ್ಟಿಯನ್ನು ಮಂಡಿಸಿತು. ವಿಭಿನ್ನ ರಾಜಕೀಯ ಸಿದ್ಧಾಂತಗಳ ವಿವಿಧ ವಿದ್ಯಾರ್ಥಿ ಸಂಘಟನೆಗಳು ಒಗ್ಗೂಡಿದ್ದು ಇದೇ ಮೊದಲ ಬಾರಿಗೆ.

WhatsApp Image 2025 01 14 at 1.34.36 PM
ದಲಿತ ಪ್ಯಾಂಥರ್‌ ಚಳವಳಿಯ ದೃಶ್ಯ

‘ನಾಮಾಂತರ’ ಚಳವಳಿಯನ್ನು ಕೆಲವು ಜನರು ಜಾತಿ ಮತ್ತು ಧಾರ್ಮಿಕ ದೃಷ್ಟಿಕೋನದಿಂದ ನೋಡಿದರು. ಔರಂಗಾಬಾದ್‌ನಲ್ಲಿ ವಿದ್ಯಾರ್ಥಿಗಳ ಒಂದು ವಿಭಾಗವು ‘ನಾಮಾಂತರ’ ಬೇಡಿಕೆಯನ್ನು ವಿರೋಧಿಸಲು 21 ಜುಲೈ, 1977ರಂದು ಒಂದು ರ್‍ಯಾಲಿಯನ್ನು ಆಯೋಜಿಸಿತು. ಆದುದರಿಂದ ‘ನಾಮಾಂತರ’ ಚಳವಳಿಯು ಸರ್ಕಾರ ಮಾತ್ರವಲ್ಲದೆ ಮರಾಠವಾಡದಲ್ಲಿ ದಲಿತ ವಿರೋಧಿ, ಅಂಬೇಡ್ಕರ್ ವಿರೋಧಿ ಶಕ್ತಿಗಳ ವಿರುದ್ಧವೂ ಹೋರಾಡಬೇಕಾಯಿತು. 27ನೇ ಜುಲೈ 1977ರಂದು ಖ್ಯಾತ ಸಮಾಜವಾದಿ ನಾಯಕ ಎಸ್.ಎಂ. ಜೋಶಿ ಅವರು ನಾಮಾಂತರ ಚಳವಳಿ ಮತ್ತು ದಲಿತ ಪ್ಯಾಂಥರ್ ಗೆ ತಮ್ಮ ಬೆಂಬಲವನ್ನು ನೀಡಿದರು. ಈ ‘ನಾಮಾಂತರ’ ಚಳವಳಿಯು ಮಹಾರಾಷ್ಟ್ರದ ಪ್ರಗತಿಪರ ನಾಯಕರಿಗೆ ಅಗ್ನಿಪರೀಕ್ಷೆಯಾಗಿತ್ತು ಎಂದು ಹೇಳಲಾಗುತ್ತದೆ.

ದಲಿತ ಪ್ಯಾಂಥರ್ ಮತ್ತು ‘ನಾಮಾಂತರ’ ಚಳವಳಿಯ ನಾಯಕರ ನಿಯೋಗವು 8ನೇ ಸೆಪ್ಟೆಂಬರ್ 1977ರಂದು ಆಗಿನ ಮುಖ್ಯಮಂತ್ರಿ ವಸಂತದಾದಾ ಪಾಟೀಲ್ ಅವರನ್ನು ಭೇಟಿ ಮಾಡಿ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸುವ ತಮ್ಮ ಬೇಡಿಕೆಯನ್ನು ಮಂಡಿಸಿದರು. ವಸಂತದಾದಾ ಅವರು ಬೇಡಿಕೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ತೋರಿದರು. ಈ ಕಾರಣದಿಂದಾಗಿ “ನಾಮಾಂತರ ವಿರೋಧಿ” ಸಂಘಟನೆಗಳು ಮರಾಠವಾಡದ ಅನೇಕ ಭಾಗಗಳಲ್ಲಿ ಅನೇಕ ಪ್ರತಿಭಟನೆ ಮತ್ತು ಮೆರವಣಿಗೆಗಳನ್ನು ಆಯೋಜಿಸತೊಡಗಿದವು.

ಅಕ್ಟೋಬರ್ 31ರಂದು ಅಂದಿನ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ಮಹಾರಾಷ್ಟ್ರ ಪ್ರವಾಸದಲ್ಲಿದ್ದರು. ಅವರು ಅಂಬೇಜೋಗಿಯಲ್ಲಿದ್ದಾಗ ಪ್ಯಾಂಥರ್ ನಾಯಕರು ಕಪ್ಪು ಬಾವುಟದೊಂದಿಗೆ ಅವರನ್ನು ವಿರೋಧಿಸಿದರು. ನಂತರ ತಮ್ಮ ಭಾಷಣದಲ್ಲಿ ವಾಜಪೇಯಿ ಅವರು ಬಾಬಾಸಾಹೇಬರ ಹೆಸರನ್ನು ಔರಂಗಾಬಾದ್ ವಿಶ್ವವಿದ್ಯಾನಿಲಯಕ್ಕೆ ನೀಡಿದರೆ ತಾವು ತುಂಬಾ ಕೃತಜ್ಞರಾಗಿರುವುದಾಗಿ ಹೇಳಿದರು. ಹಾಗಾಗಿ ಮಹಾರಾಷ್ಟ್ರದ ದಲಿತ ಮುಖಂಡರು ರಾಜ್ಯ ಸರ್ಕಾರವೇ ‘ನಾಮಾಂತರ’ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದೆ ಎಂದು ಭಾವಿಸಿದರು.

ಒಮ್ಮೆ ಸಿಎಂ ವಸಂತದಾದಾ ಪಾಟೀಲ ಅವರು ಭೀಡ ಜಿಲ್ಲೆಗೆ ಭೇಟಿ ನೀಡಿದ್ದರು. ಶಿಕ್ಷಣ ಅಥವಾ ಸಾಮಾಜಿಕ ಸಂಸ್ಥೆಗಳಿಗೆ ಯಾವುದೇ ವ್ಯಕ್ತಿಯ ಹೆಸರನ್ನು ಇಡದಿರಲು ನಮ್ಮ ಸಂಪುಟ ನಿರ್ಧರಿಸಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು. ಅವರ ಈ ಹೇಳಿಕೆ ನಾಮಾಂತರ ಬೆಂಬಲಿಗರಲ್ಲಿ ಆಕ್ರೋಶದ ಅಲೆಯನ್ನು ಎಬ್ಬಿಸಿತು. ದಲಿತ ಪ್ಯಾಂಥರ್ 2ನೇ ಅಕ್ಟೋಬರ್ 1977ರಂದು ಅವರ ಈ ಹೇಳಿಕೆಯನ್ನು ವಿರೋಧಿಸಿ ಚಪ್ಪಲ್ ಮಾರ್ಚ್ ಅನ್ನು ಆಯೋಜಿಸಿತು.

ನಾಮಾಂತರ ಚಳವಳಿಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಚುರುಕು ಮುಟ್ಟಿಸಲು ಸುಮಾರು 4 ಲಕ್ಷ ಪ್ಯಾಂಥರ್ ಗಳು ಸಂಸತ್ತಿನ ಎದುರು ಮತಪ್ರದರ್ಶನ ನಡೆಸಿದರು. ಈ ಜಾಥಾದ ನೇತೃತ್ವವನ್ನು ರಾಮದಾಸ್ ಅಠವಳೆ, ಗಂಗಾಧರ ಗಾಡೆ, ಪ್ರೊ. ಅರುಣ ಕಾಂಬಳೆ ಮುಂತಾದವರು ವಹಿಸಿದ್ದರು. ಮುಂಬೈನಲ್ಲಿ ರಾಜಾ ಢಾಲೆ ವಿಧಾನಸೌಧದ ಮುಂದೆ ಪ್ರತಿಭಟನೆ ಆಯೋಜಿಸಿದ್ದರು. ಅಂತಿಮವಾಗಿ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಘಟಿತ ಒತ್ತಡದ ನಂತರ ಕ್ಯಾಬಿನೆಟ್ ನಿರ್ಧಾರದ ಬಗ್ಗೆ ಮರುಚಿಂತನೆ ಮಾಡಲು ಒಪ್ಪಿಕೊಂಡಿತು. ಆದರೆ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವ ಕಾರಣ ಇದು ಕೇವಲ ಹುಸಿ ಭರವಸೆಯಾಗಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ವಸಂತದಾದಾ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ‘ನಾಮಾಂತರ’ ಬೇಡಿಕೆಯನ್ನು ನಿರ್ಲಕ್ಷಿಸಿತು ಮತ್ತು ಇದು ದಲಿತ-ಅಂಬೇಡ್ಕರ್ ವಿದ್ಯಾರ್ಥಿಗಳಲ್ಲಿ ಮತ್ತೆ ಅಸಮಾಧಾನವನ್ನು ಹುಟ್ಟುಹಾಕಿತು.

ಶರದ್ ಪವಾರ ಅವರು 40 ಶಾಸಕರೊಂದಿಗೆ ಸರ್ಕಾರದಿಂದ ಹೊರಬಂದ ಕಾರಣ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಯಿತು. ಅವರು ಜನತಾ ಪಾರ್ಟಿಯೊಂದಿಗೆ ಕೈಜೋಡಿಸಿದರು ಮತ್ತು ರಾಜ್ಯದಲ್ಲಿ ಪ್ರಗತಿಶೀಲ ಪ್ರಜಾಸತ್ತಾತ್ಮಕ ರಂಗ ಸರ್ಕಾರವನ್ನು ರಚಿಸಿದರು. ಶರದ್ ಪವಾರ್ ಅವರು ರಾಜ್ಯದ ಸಾಮಾಜಿಕ ಸಮಸ್ಯೆಗಳ ಬಗ್ಗೆ ತಮ್ಮ ಪ್ರಗತಿಪರ ಧೋರಣೆಯನ್ನು ತೋರಿಸಲು ಬಯಸಿದ್ದರು. ಆದ್ದರಿಂದ ಅವರು 27 ಜುಲೈ, 1978ರಂದು ವಿಧಾನಸಭೆಯಲ್ಲಿ ‘ನಾಮಾಂತರ’ ನಿರ್ಣಯವನ್ನು ಔಪಚಾರಿಕವಾಗಿ ಮಂಡಿಸಿದರು ಮತ್ತು ಬಹುಮತದೊಂದಿಗೆ ಅದನ್ನು ಅಂಗೀಕರಿಸಿದರು. ಈ ನಿರ್ಣಯವನ್ನು ವಿಧಾನಪರಿಷತ್ತಿನಲ್ಲೂ ಅಂಗೀಕರಿಸಲಾಯಿತು.

WhatsApp Image 2025 01 14 at 1.34.39 PM

ಜುಲೈ 27ರ ನಂತರದ ಪರಿಣಾಮಗಳು ಶರದ್ ಪವಾರ್ ಉದ್ದೇಶಿಸಿದಂತೆ ಆಗಿರಲಿಲ್ಲ. ಔರಂಗಾಬಾದಿನ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರತಿಭಟನೆ ಮತ್ತು ಗಲಭೆಗಳು ನಡೆದವು. ದಲಿತರ ನೆಲೆಗಳ ಮೇಲೆ ಹಿಂಸಾಚಾರದ ಘಟನೆಗಳು ನಡೆದವು. ಇದು ವ್ಯಾಪಕ ಹಿಂಸಾಚಾರ ಮತ್ತು ಗಲಭೆಗಳ ಅವಧಿಯಾಗಿತ್ತು. ಮಹಾರಾಷ್ಟ್ರದ ಅನೇಕ ಗ್ರಾಮಗಳಲ್ಲಿ ದಲಿತರ ನೆಲೆಗಳ ಮೇಲೆ ದಾಳಿಗಳು ನಡೆದವು. ಈ ಎಲ್ಲಾ ಹಿಂಸಾಚಾರದ ನಂತರ ಸರ್ಕಾರ ಯು-ಟರ್ನ್ ತೆಗೆದುಕೊಂಡಿತು ಮತ್ತು ಸಮಾಜದ ಎಲ್ಲಾ ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ನಾಮಾಂತರ ನಿರ್ಣಯವನ್ನು ಜಾರಿಗೆ ತರಲಾಗುವುದು ಎಂದು ಹೇಳಿತು.

ಪ್ರೊ. ಜೋಗೇಂದ್ರ ಕವಾಡೆ: ಲಾಂಗ್ ಮಾರ್ಚ್
ಪ್ರೊ. ಜೋಗೇಂದ್ರ ಕವಾಡೆ ಅವರನ್ನು ಭಾರತದಲ್ಲಿ ‘ಲಾಂಗ್ ಮಾರ್ಚ್’ನ ಪ್ರವರ್ತಕ ಎಂದು ಕರೆಯಲಾಗುತ್ತದೆ. ನಾಗಪುರದ ಡಾ. ಅಂಬೇಡ್ಕರ್ ಕಾಲೇಜಿನಲ್ಲಿ ಅವರು ಪ್ರಾಧ್ಯಾಪಕರಾಗಿದ್ದರು. ಅವರ ಕ್ರಾಂತಿಕಾರಿ ಭಾಷಣಗಳು ಕಾಲೇಜುಗಳಲ್ಲಿ ಜನಪ್ರಿಯವಾಗಿದ್ದವು. ಕಾಲೇಜು ವಿದ್ಯಾರ್ಥಿಗಳ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದ ನಾಮಾಂತರ ಚಳವಳಿಗೆ ಪ್ರೊ. ಕವಾಡೆ ಅವರ ಭಾಷಣಗಳು ಪುನಃ ಶಕ್ತಿ ತುಂಬಲು ಸಾಧ್ಯವಾಯಿತು. ‘ನಾಮಾಂತರ’ ಚಳವಳಿಯ ನಾಯಕ ಎಂದು ಪರಿಗಣಿಸಲಾಗಿದೆ.

ಪ್ರೊ. ಜೋಗೇಂದ್ರ ಕವಾಡೆ ಅವರು ಪ್ಯಾಂಥರ್ ನಲ್ಲಿ ಇರಲಿಲ್ಲ ಬದಲಾಗಿ ತಮ್ಮದೇ ಆದ ಸಂಘಟನೆಯನ್ನು ಹೊಂದಿದ್ದರು. ಕವಾಡೆ ಸರ್ ಅವರು 19 ನವೆಂಬರ್, 1979 ರಂದು ನಾಗಪುರದಿಂದ ಔರಂಗಾಬಾದ್ ವರೆಗೆ ಸುಮಾರು 470 ಕಿಮೀ ಉದ್ದದ ಮೆರವಣಿಗೆಯನ್ನು ಆಯೋಜಿಸಿದ್ದರು. ಸರ್ಕಾರವು ಲಾಂಗ್ ಮಾರ್ಚ್‌ನಲ್ಲಿ ರಸ್ತೆಗಳನ್ನು ತಡೆದು ನಾಯಕರನ್ನು ಬಂಧಿಸುವ ಮೂಲಕ ಅಡ್ಡಿಪಡಿಸಲು ಪ್ರಾರಂಭಿಸಿತು. ಪ್ರೊ. ಕವಾಡೆ ಅವರನ್ನೂ ಬಂಧಿಸಲಾಯಿತು, ಆದರೆ ಕೆಲವು ನಾಯಕರು ಲಾಂಗ್ ಮಾರ್ಚ್ ಅನ್ನು ಮುಂದುವರೆಸುವಲ್ಲಿ ಯಶಸ್ವಿಯಾದರು. ನಾಗಪುರದಲ್ಲಿ 11 ಹುಡುಗರು ಪೊಲೀಸರ ಗುಂಡಿಗೆ ಬಲಿಯಾದರು. ಇದರಿಂದಾಗಿ ಲಾಂಗ್ ಮಾರ್ಚ್ ನಿಲ್ಲಿಸಬೇಕಾಯಿತು.

ಎ.ಆರ್. ಅಂತುಳೆ ಅವರ ರೂಪದಲ್ಲಿ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ದೊರೆತು, ಕೆಲಕಾಲ ಚಳವಳಿಯಲ್ಲಿ ಮೌನ ಆವರಿಸಿತು. ಆದರೆ 1980-7990ರ ಅವಧಿಯಲ್ಲಿ ಪ್ಯಾಂಥರ್ ಸಣ್ಣಪುಟ್ಟ ಪ್ರತಿಭಟನೆ, ಮೆರವಣಿಗೆಗಳನ್ನು ಸಂಘಟಿಸುವ ಮೂಲಕ ಚಳವಳಿಯನ್ನು ಜೀವಂತವಾಗಿರಿಸಿತು. ಪ್ರೊ. ಜೋಗೇಂದ್ರ ಕವಾಡೆ ಅವರು ಔರಂಗಾಬಾದ್ ನಲ್ಲೂ ಸಕ್ರಿಯರಾಗಿ, ಕಾಲೇಜು ವಿದ್ಯಾರ್ಥಿಗಳಲ್ಲಿ ಆಂದೋಲನವನ್ನು ಹೆಚ್ಚು ಜನಪ್ರಿಯಗೊಳಿಸಿದವರು.

ಫೆಬ್ರವರಿ 1993ರಲ್ಲಿ ಮಹಾರಾಷ್ಟ್ರದ ಕೋಮುಗಲಭೆಗಳನ್ನು ನಿಯಂತ್ರಿಸುವಲ್ಲಿ ವಿಫಲರಾದ ಸುಧಾಕರರಾವ್ ನಾಯಕ್ ಅವರ ಸ್ಥಾನದಲ್ಲಿ ಶರದ್ ಪವಾರ್ ಮಹಾರಾಷ್ಟ್ರದ ಸಿಎಂ ಆದರು. ಶರದ್ ಪವಾರ್ ಹಿಂದೆ ಈ ಬೇಡಿಕೆಗೆ ಸಕಾರಾತ್ಮಕ ಧೋರಣೆಯನ್ನು ತೋರಿಸಿದ್ದರಿಂದ ‘ನಾಮಾಂತರ’ದ ಬೇಡಿಕೆಯು ಮತ್ತೆ ವೇಗವನ್ನು ಪಡೆಯಿತು. ಶರದ್ ಪವಾರ್ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಮರಾಠವಾಡ ಪರಿಸರವನ್ನು ಸೂಕ್ತವಾಗಿಸಲು ಪ್ರಯತ್ನಿಸಿದರು. ಹೆಸರು ಬದಲಾವಣೆಗೆ ಶಿವಸೇನೆ ವಿರೋಧ ವ್ಯಕ್ತಪಡಿಸಿತ್ತು. ಮರಾಠವಾಡದ ಜನರು ಮರಾಠವಾಡ ಪದಕ್ಕೆ ಭಾವನಾತ್ಮಕವಾಗಿ ಅಂಟಿಕೊಂಡಿದ್ದಾರೆ, ಹಾಗಾಗಿ ಅದನ್ನು ಕೈಬಿಡಬಾರದು ಎಂದು ಬಾಳಾಸಾಹೇಬ ಠಾಕ್ರೆ ಹೇಳಿದರು.

ಅಂತಿಮವಾಗಿ 14 ಜನವರಿ 1994ರಂದು ವಿಶ್ವವಿದ್ಯಾಲಯದ ಹೆಸರನ್ನು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯ ಎಂದು ಬದಲಾಯಿಸಲಾಯಿತು. ನಾಮಾಂತರ ಚಳವಳಿಯನ್ನು ಮಹಾರಾಷ್ಟ್ರದ ದಲಿತ-ಅಂಬೇಡ್ಕರ್ ಚಳವಳಿಯಲ್ಲಿ ಒಂದು ತಿರುವು ಎಂದು ಪರಿಗಣಿಸಲಾಗಿದೆ. 17 ವರ್ಷಗಳ ಈ ಸುದೀರ್ಘ ಹೋರಾಟದಲ್ಲಿ ಹಲವಾರು ಸಾಮಾಜಿಕ ಮತ್ತು ರಾಜಕೀಯ ನಾಯಕರು, ಸಾಹಿತಿಗಳು, ಕವಿಗಳು, ಹಾಡುಗಾರರು ಸೃಷ್ಟಿಯಾಗಿದ್ದಾರೆ. ಇದೊಂದು ರಾಜಕೀಯ ಮತ್ತು ಸಾಂಸ್ಕೃತಿಕ ಚಳವಳಿ ಎಂದು ಕರೆಯಲಾಗುತ್ತದೆ.

WhatsApp Image 2025 01 14 at 1.34.37 PM

ನಾಮಾಂತರ ಚಳವಳಿಯ ಹುತಾತ್ಮರು
ಪೋಚಿರಾಮ್ ಕಾಂಬಳೆ ‘ನಾಮಾಂತರ’ ಚಳವಳಿಯ ಮೊದಲ ಹುತಾತ್ಮರಾಗಿದ್ದರು. ಅವರು ನಾಂದೇಡ್ ಜಿಲ್ಲೆಯ ಟೆಂಬುರ್ಣಿ ಗ್ರಾಮದವರು. 4 ಆಗಸ್ಟ್, 1978ರ ರಾತ್ರಿ ಗಲಭೆಕೋರರ ಗುಂಪು ಪೋಚಿರಾಮ್ ಅವರ ಮನೆಗೆ ಬೆಂಕಿ ಹಚ್ಚಲು ಮುಂದಾಯಿತು. ಪೋಚಿರಾಮ್ ತನ್ನ ಸ್ನೇಹಿತರ ಮನೆಯಲ್ಲಿ ಅಡಗಿಕೊಂಡಿದ್ದ. ಆದರೆ ಗಲಭೆಕೋರರ ಗುಂಪೊಂದು ಆತನನ್ನು ಹಿಡಿದು ಕೊಡಲಿ ಮತ್ತು ದೊಣ್ಣೆಗಳಿಂದ ಥಳಿಸಿ, ಅವರನ್ನು ಜೀವಂತವಾಗಿ ಸುಟ್ಟುಹಾಕಲಾಯಿತು. ಪೋಚಿರಾಮ್ ಕಾಂಬಳೆ ಅವರು ದಲಿತ ಚಳವಳಿಗೆ ಸ್ಫೂರ್ತಿಯಾದ ನಿಜವಾದ ಅಂಬೇಡ್ಕರ್‌ವಾದಿ

ಈ ಚಳವಳಿಯ ಎರಡನೇ ಹುತಾತ್ಮ ಜನಾರ್ದನ ಮೇವಾಡೆ. ಅವರು ನಾಂದೇಡ ಜಿಲ್ಲೆಯ ಸುಗಾವೊ ಗ್ರಾಮದವರು. ಗಲಭೆಕೋರರ ಗುಂಪು ಸುಗಾವೊ ಗ್ರಾಮದಲ್ಲಿ ದಲಿತರ ವಸಾಹತುಗಳ ಮೇಲೆ ದಾಳಿ ಮಾಡಿತು ಮತ್ತು ದಲಿತರ ಮನೆಗಳಿಗೆ ಬೆಂಕಿ ಹಚ್ಚಲು ಪ್ರಾರಂಭಿಸಿತು. ಜನಾರ್ದನ್ ತನ್ನ 500 ಸಹಚರರೊಂದಿಗೆ ಅವರೊಂದಿಗೆ ಹೋರಾಡುತ್ತಿದ್ದ. ಆದರೆ ದುರದೃಷ್ಟವಶಾತ್ ಜನಾರ್ದನ್ ಜನಸಮೂಹದ ಕೈಗೆ ಸಿಕ್ಕಿಬಿದ್ದರು. ಅವರನ್ನು ನಿರ್ದಯವಾಗಿ ಕೊಲ್ಲಲಾಯಿತು.

ನಾಮಾಂತರ ಹುತಾತ್ಮ ಸ್ಮಾರಕ
ನಾಮಾಂತರ ವಿರೋಧಿಗಳಿಂದ ಹತ್ಯೆಗೊಳಗಾದ ಮತ್ತು ಪೊಲೀಸ್ ಗೋಲಿಬಾರ್‌ನಲ್ಲಿ ಮಡಿದ ಭೀಮಸೈನಿಕರ ನೆನಪಿನಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಮರಾಠಾವಾಡಾ ವಿಶ್ವವಿದ್ಯಾಲಯದ ಮುಖ್ಯದ್ವಾರದ ಬಳಿ ನಾಮಾಂತರ ಹುತಾತ್ಮ ಸ್ಥಂಭ ಮತ್ತು ನಾಗಪುರದ ಇಂದೋರಾ 10ನೇ ಸೇತುವೆ ಬಳಿ ನಾಮಾಂತರ ಹುತಾತ್ಮ ಸ್ಮಾರಕ ನಿರ್ಮಿಸಲಾಗಿದೆ. ಪ್ರತಿ ವರ್ಷ ಜನವರಿ 14ರಂದು ನಾಮಾಂತರ ದಿವಸವನ್ನು ಆಚರಿಸಲಾಗುತ್ತಿದ್ದು, ಲಕ್ಷಾಂತರ ಜನರು ಹುತಾತ್ಮ ಸ್ಮಾರಕಗಳಲ್ಲಿ ಜಮಾವಣೆಯಾಗಿ ಹುತಾತ್ಮ ಭೀಮಸೈನಿಕರಿಗೆ ಗೌರವ ವಂದನೆ ಸಲ್ಲಿಸುತ್ತಾರೆ.

ಹುತಾತ್ಮ ಭೀಮಸೈನಿಕರು

  • ಪೋಚಿರಾಂ ಕಾಂಬಳೆ
  • ಜನಾರ್ಧನ ಮೆವಾಡೆ
  • ಸುಹಾಸಿನಿ ಬನಸೋಡೆ
  • ಗೋವಿಂದ ಭುರೆವಾರ
  • ಬಾಲಚಂದ್ರ ಬೋರ್ಕರ
  • ರೋಶನ ಬೋರ್ಕರ
  • ಅವಿನಾಶ ಡೋಂಗರೆ
  • ನಾರಾಯಣ ಗಾಯಕವಾಡ
  • ಶಬ್ಬೀರ ಅಲಿ ಕಾಜಲ ಹುಸೇನ್
  • ಚಂದರ್ ಕಾಂಬಳೆ
  • ಡೋಮಾಜಿ ಕುತ್ತರಮಾರೆ
  • ಜನಾರ್ಧನ ಮಸ್ಕೆ
  • ರತನ್ ಮೆಂಡೆ
  • ಕೈಲಾಸ ಪಂಡಿತ
  • ರತನ್ ಪರದೇಶಿ
  • ದಿಲೀಪ ರಾಮಟೇಕೆ
  • ಜ್ಞಾನೇಶ್ವರ ಸಾಖರೆ
  • ಅಬ್ದುಲ್ ಸತ್ತಾರ್
  • ಪ್ರತಿಭಾ ತಾಯಡೆ
  • ದಿವಾಕರ ಥೋರಾತ
  • ಗೌತಮ ವಾಘಮಾರೆ
  • ಮನೋಜ ವಾಘಮಾರೆ
  • ಶೀಲಾ ವಾಘಮಾರೆ
ಅನಿಲ ಹೊಸಮನಿ
ಅನಿಲ ಹೊಸಮನಿ, ವಿಜಯಪುರ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅನಿಲ ಹೊಸಮನಿ, ವಿಜಯಪುರ
ಅನಿಲ ಹೊಸಮನಿ, ವಿಜಯಪುರ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X