ವಿವಾಹೇತರ ಸಂಬಂಧ ಹೊಂದಿದ್ದರೆಂಬ ಆರೋಪದ ಮೆಲೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ತಲೆಯನ್ನೇ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಣಿಯನಹುಂಡಿಯಲ್ಲಿ ಘಟನೆ ನಡೆಸಿದ್ದು, ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಆರೋಪಿ ದೇವರಾಜ್ ಎಂಬಾತ ತನ್ನ ಪತ್ನಿ ತೇಜು ಅವರನ್ನು ಹತ್ಯೆಗೈದಿದ್ದು, ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ತೇಜು ಅವರು ಬೇರೊಬ್ಬ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಇತ್ತೀಚೆಗೆ, ಆತನೊಂದಿಗೆ ಮನೆ ತೊರೆದು ಹೋಗಿದ್ದರು ಎಂದು ಆರೋಪಿಸಲಾಗಿದೆ. ಆ ಬಳಿಕ, ಪತಿ-ಪತ್ನಿಯರ ನಡುವೆ ರಾಜೀ ಸಂದಾನ ಮಾಡಲಾಗಿತ್ತು ಎಂದು ಹೇಳಲಾಗಿದೆ.
ಆದರೆ, ಬುಧವಾರ ಆಕೆಯನ್ನು ದೇವರಾಜ್ ಬರ್ಬರವಾಗಿ ಹತ್ಯೆಗೈದಿದ್ದಾನೆ. ಪೊಲೀಸರ ಎದುರು ಶರಣಾಗಿದ್ದಾನೆ.
ತೇಜು ಮತ್ತು ದೇವರಾಜ್ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಹತ್ಯೆ ಸಂಬಂಧ ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.