ಜನವರಿ 23ರಿಂದ ಆರಂಭವಾಗುವ ರಣಜಿ ಟ್ರೋಫಿಯ ಟೂರ್ನಿಯಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದೆಹಲಿ ತಂಡದಲ್ಲಿ ಆಡಲಿದ್ದಾರೆ. ದೆಹಲಿಯ 22 ಆಟಗಾರರ ತಾತ್ಕಾಲಿಕ ಪಟ್ಟಿಯಲ್ಲಿ ಕೊಹ್ಲಿ ಹೆಸರಿದೆ ಎಂದು ತಿಳಿದುಬಂದಿದೆ. ಆದರೆ, ಇತ್ತೀಚೆಗೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ ವೇಳೆ ಗುತ್ತಿಗೆ ನೋವಿನಿಂದ ಬಳಲುತ್ತಿದ್ದ ಕೊಹ್ಲಿ, ರಣಜಿಯಲ್ಲಿ ಭಾಗವಹಿಸುವರೇ ಎಂಬ ಸಂದೇಹಗಳೂ ಇವೆ.
ತಾವು ಕುತ್ತಿಗೆ ನೋವು ಅನುಭವಿಸುತ್ತಿರುವ ಬಗ್ಗೆ ಕೊಹ್ಲಿ ‘ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್’ನ (ಡಿಡಿಸಿಎ) ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅವರಿಗೆ ಅಲ್ಲಿನ ಫಿಸಿಯೋ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ, ಅವರು ರಣಜಿ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿಲ್ಲ ಎಂದೂ ಹೇಳಲಾಗಿದೆ.
ರಣಜಿಯ ಮೊದಲ ಪಂದ್ಯವು ದೆಹಲಿ ಮತ್ತು ಸೌರಾಷ್ಟ್ರ ನಡುವೆ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಅವರು ಆ ಪಂದ್ಯಕ್ಕಾಗಿ ರಾಜ್‌ಕೋಟ್‌ಗೆ ತೆರಳುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ತಿಳಿಸಿದ್ದಾರೆ.
ಕೊಹ್ಲಿ ಕೊನೆಯ ಬಾರಿಗೆ 2012ರಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧ ದೆಹಲಿ ತಂಡದಲ್ಲಿ ರೆಡ್-ಬಾಲ್ ಪಂದ್ಯವನ್ನು ಆಡಿದ್ದರು. ಅದಾದ ಬಳಿಕ, ಮತ್ತೆ ರಣಜಿಯಲ್ಲಿ ಕೊಹ್ಲಿ ಆಡಿರಲಿಲ್ಲ. ಇದೀಗ, ಮತ್ತೆ ರಣಜಿ ಪಂದ್ಯಗಳಲ್ಲಿ ಆಡಲು ಸಜ್ಜಾಗಿದ್ದಾರೆ.
ಅಲ್ಲದೆ, ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ಸುಮಾರು ಏಳು ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿದ್ದಾರೆ. ಅವರು ಕೂಡ ದೆಹಲಿ ತಂಡದಲ್ಲಿ ಇರಲಿದ್ದಾರೆ.
ಭಾರತೀಯ ತಂಡದಲ್ಲಿ ಆಡಲು ಕೇಂದ್ರೀಯವಾಗಿ ಒಪ್ಪಂದ ಮಾಡಿಕೊಂಡಿರುವ ಕ್ರಿಕೆಟಿಗರು ದೇಶೀಯ ಕ್ರಿಕೆಟ್ ‘ರಣಜಿ’ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿದೆ. ರಣಜಿಯಲ್ಲಿ ಆಡದಿದ್ದರೆ, ಅಂತಹವರ ವಿರುದ್ಧ ನಿರ್ಬಂಧಗಳನ್ನು ಹೇರಬಹುದು. ಅಲ್ಲದೆ, ಐಪಿಎಲ್‌ನಲ್ಲಿ ಆಡುವುದನ್ನೂ ನಿಷೇಧಿಸಬಹುದು ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.
ಹೀಗಾಗಿ, ಭಾರತೀಯ ತಂಡದ ಆಟಗಾರರು ರಣಜಿಯಲ್ಲಿ ಆಡಲಿದ್ದಾರೆ. ಮುಂಬೈ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಪಂಜಾಬ್ ತಂಡದಲ್ಲಿ ಶುಭಮನ್ ಗಿಲ್ ಸೇರಿಕೊಂಡಿದ್ದಾರೆ.