- ಜಿಲ್ಲಾ ಪರಿವೀಕ್ಷಣೆಗೆ ಅಣಿಯಾದ ಸಿಎಂ ಸಿದ್ದರಾಮಯ್ಯ
- ಮುಖ್ಯಮಂತ್ರಿ ಆದ ಬಳಿಕ ಮೊದಲ ಜಿಲ್ಲಾ ಭೇಟಿ
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಮೊದಲ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರ ಭಾಗವಾಗಿ ಅವರು ಇಂದು (ಜೂ.05) ದಾವಣಗೆರೆಗೆ ಭೇಟಿ ನೀಡಲಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರ ರಚನಾ ಕಾರ್ಯದಲ್ಲಿ ನಿರತರಾಗಿದ್ದ ಸಿದ್ದರಾಮಯ್ಯ, ಬಳಿಕ ಸಚಿವ ಸಂಪುಟ ರಚನೆ- ವಿಸ್ತರಣೆ ಹಾಗೂ ಗ್ಯಾರಂಟಿ ಯೋಜನೆ ಜಾರಿಯಲ್ಲೇ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು.
ಸರ್ಕಾರಕ್ಕೆ ಈಗ ಅರ್ಧ ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಅವರೀಗ ಜಿಲ್ಲೆಗಳತ್ತ ಮುಖ ಮಾಡಿದ್ದು ಜಿಲ್ಲಾ ಪ್ರವಾಸಗಳಿಗೆ ಅಣಿಯಾಗುತ್ತಿದ್ದಾರೆ.
ಸಿಎಂ ಅವರ ಪ್ರಸಕ್ತ ಸಾಲಿನ ಮೊದಲ ಪ್ರವಾಸ ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದ್ದು, ಜೂನ್ 5ರ ಮಧ್ಯಾಹ್ನ 12.15ಕ್ಕೆ ಹೆಲಿಕಾಪ್ಟರ್ ಮೂಲಕ ದಾವಣಗೆರೆಗೆ ತೆರಳಲಿದ್ದಾರೆ.
ನಂತರ ದಾವಣಗೆರೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಬಳಿಕ ತಮ್ಮ ವಿಶೇಷ ಅಧಿಕಾರಿ ವಿಜಯಕುಮಾರ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಅಲ್ಲಿಂದ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
ಇದು ಮುಖ್ಯಮಂತ್ರಿಗಳ ಇಂದಿನ ಕಾರ್ಯ ಚಟುವಟಿಕೆಯಾದರೆ, ಮತ್ತೊಂದು ಕಡೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? :ಹಾಲಿನ ದರ ಕಡಿತ ಮಾಡದಂತೆ ಕೆಎಂಎಫ್‌ಗೆ ಸೂಚನೆ
ಇಂದು ಮುಂಜಾನೆ 11 ಗಂಟೆಗೆ ನಡೆಯಲಿರುವ ಸಭೆಯಲ್ಲಿ ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಜೊತೆ ಮಳೆಗಾಲಕ್ಕೆ ನಗರ ಸಿದ್ದಪಡಿಸುವುದು ಹಾಗೂ ಮಳೆ ಮುಂಜಾಗ್ರತ ಕ್ರಮಗಳ ಬಗ್ಗೆ ಪ್ರಮುಖ ಚರ್ಚೆ ನಡೆಸಲಿದ್ದಾರೆ. ಹಾಗೆಯೇ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಸಭೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಂಸದರು, ಶಾಸಕರು ಹಾಗೂ ಎಂಎಲ್ಸಿಗಳು ಭಾಗಿಯಾಗಲಿದ್ದಾರೆ. ಸರ್ವ ಪಕ್ಷದ ನಾಯಕರುಗಳಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದೆ. ಅಲ್ಲದೇ ಸಭೆಯಲ್ಲಿ ಬಿಬಿಎಂಪಿ ಚುನಾವಣೆಗೆ ಕುರಿತಾಗಿ ಚರ್ಚಿಸುವ ಸಾಧ್ಯತೆ ಇದೆ.