ವೃತ್ತಿ ರಂಗಭೂಮಿಯ ಆವರಣವು ಭಾರತೀಯ ರಂಗಭೂಮಿಯ ಹೋರಾಟದ ಸಂಕಥನ ಮತ್ತು ರಂಗಾನುಸಂಧಾನವೇ ಆಗಿದೆ. ಅದರ ಮುಂದುವರಿದ ಭಾಗದಂತೆ ಕನ್ನಡ ಭಾಷಾ ಸಂವೇದನೆಯ ಕೆಚ್ಚು, ಖಾದಿ ಚಳವಳಿ, ದೇಶಭಕ್ತಿ, ಅವಿಭಜಿತ ಕುಟುಂಬ ಮತ್ತು ಜಾತಿ ನಿರಶನ ಪ್ರೀತಿ ಮೆರೆದುದು ವೃತ್ತಿ ರಂಗಭೂಮಿ.
ಕನ್ನಡ ರಂಗಭೂಮಿಗೆ ನೂರೈವತ್ತಕ್ಕೂ ಹೆಚ್ಚು ವರುಷಗಳ ಇತಿಹಾಸವಿದೆ. ಅಷ್ಟು ಸುದೀರ್ಘ ವರುಷಗಳ ಇತಿಹಾಸದ ಉದ್ದಕ್ಕೂ ಕನ್ನಡ ವೃತ್ತಿ ರಂಗಭೂಮಿಯ ಚಾರಿತ್ರಿಕ ಇತಿಹಾಸವೂ ಸಹಿತ ಹಾಸು ಹೊಕ್ಕಾಗಿದೆ. ಹಾಗೆ ನೋಡಿದರೆ ವೃತ್ತಿ ರಂಗಭೂಮಿ ಚರಿತ್ರೆಯದು ನಿಜಕ್ಕೂ ಕನ್ನಡ ರಂಗಭೂಮಿಯ ಸಮಗ್ರ ಐತಿಹ್ಯದ ಅಪೂರ್ವ ಭಾಗವೇ ಆಗಿದೆ.
ಕನ್ನಡ ರಂಗಭೂಮಿ ಚರಿತ್ರೆ ಎಂದರೆ ಪಾರ್ಸಿ ಮೂಲ ಸಂವೇದನೆಯ ದೇಸಿಯ ರಂಗಸಂಸ್ಕೃತಿಯೇ ಆಗಿದೆ. ಅಷ್ಟು ಮಾತ್ರವಲ್ಲದೇ ಅದು ಕನ್ನಡದ ರಾಷ್ಟ್ರೀಯತೆಯೂ ಆಗಿದೆ. ಹಾಗೆ ಹೇಳಲು ಹತ್ತು ಹಲವು ರಂಗಸಾಕ್ಷ್ಯಗಳಿವೆ. ಹಾಗೊಂದು ವೇಳೆ “ರಾಷ್ಟ್ರೀಯ ರಂಗಭೂಮಿಕೆ”ಎಂಬುದು ಅಂತಃಶ್ರೋತಗೊಳ್ಳುವುದಿದ್ದರೆ ಅದು ಅಕ್ಷರಶಃ ಭಾರತೀಯ ವೃತ್ತಿ ರಂಗಭೂಮಿಯೇ ಅದಾಗಿದೆ.
ಅದಕ್ಕೆ ಪೂರಕವಾಗಿ ಹೇಳಬೇಕೆಂದರೆ ಸ್ವಾತಂತ್ರ್ಯ ಚಳವಳಿಯಲ್ಲಿ ವೃತ್ತಿ ರಂಗಭೂಮಿಯ ಪಾತ್ರ ಮಹತ್ತರವಾದುದು. ಅದೆಷ್ಟೋ ಮಂದಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅಡಗು ತಾಣ, ಆಶ್ರಯ ತಾಣಗಳಾದುವೇ ವೃತ್ತಿ ನಾಟಕ ಕಂಪನಿಗಳು. ಸ್ವಾತಂತ್ರ್ಯ ಹೋರಾಟಗಾರರು ಅನೇಕ ಬಾರಿ ಪೊಲೀಸರಿಂದ ತಪ್ಪಿಸಿಕೊಂಡು ಬಂದು ನಾಟಕ ಕಂಪನಿಗಳಲ್ಲಿ ಬಣ್ಣ ಹಚ್ಚಿಕೊಂಡು ಪಾತ್ರ ಮಾಡುವ ಮೂಲಕ ಬ್ರಿಟಿಷ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನಿಸಿದ ಹಲವಾರು ನಿದರ್ಶನಗಳಿವೆ. ಈ ಸಂಗತಿಯನ್ನು ಕೇವಲ ಕನ್ನಡ ರಂಗಭೂಮಿಗೆ ಸೀಮಿತಗೊಳಿಸಿ ಹೇಳುವುದಲ್ಲ, ಭಾರತೀಯ ರಂಗಭೂಮಿ ಸಂದರ್ಭದಲ್ಲಿ ಜರುಗಿದ ಇಂತಹ ಹತ್ತಾರು ನಿದರ್ಶನಗಳುಂಟು.
ಹೀಗೆ ವೃತ್ತಿ ರಂಗಭೂಮಿಯ ಆವರಣವು ಭಾರತೀಯ ರಂಗಭೂಮಿಯ ಹೋರಾಟದ ಸಂಕಥನ ಮತ್ತು ರಂಗಾನುಸಂಧಾನವೇ ಆಗಿದೆ. ಅದರ ಮುಂದುವರಿದ ಭಾಗದಂತೆ ಕನ್ನಡ ಭಾಷಾ ಸಂವೇದನೆಯ ಕೆಚ್ಚು, ಖಾದಿ ಚಳವಳಿ, ದೇಶಭಕ್ತಿ, ಅವಿಭಜಿತ ಕುಟುಂಬ ಮತ್ತು ಜಾತಿ ನಿರಶನ ಪ್ರೀತಿ ಮೆರೆದುದು ವೃತ್ತಿ ರಂಗಭೂಮಿ. ಹೀಗೆಂತಲೇ ಅದಕ್ಕೆ ದಕ್ಕಬಹುದಾದ ಆನುಷಂಗಿಕ ಫಲ ಅದೆಲ್ಲವೂ ಆಗಿದ್ದವು. ಅಂತೆಯೇ ಬೇಂದ್ರೆ, ಕುವೆಂಪು, ಅ.ನ.ಕೃಷ್ಣರಾಯರಂತಹ ಮಹನೀಯರು ವೃತ್ತಿ ರಂಗಭೂಮಿ ಕುರಿತು ಅದಮ್ಯ ಪ್ರೀತಿ ಹೊಂದಿದ್ದರು. ಖುದ್ದಾಗಿ ಅವರೆಲ್ಲರೂ ವೃತ್ತಿ ಕಂಪನಿ ನಾಟಕಗಳನ್ನು ವೀಕ್ಷಿಸಿ ಪತ್ರಿಕೆಗಳಿಗೆ ಸದಭಿಪ್ರಾಯದ ಲೇಖನಗಳನ್ನು ಬರೆದ ಉದಾಹರಣೆಗಳುಂಟು.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಮಹಾನ್ ರಂಗನಟ ಬಿದರಕೆರೆ ಓಬಳೇಶ್ “ಖಾದಿಸೀರೆ” ಮತ್ತು “ಮುಂಡೇಮಗ” ಎಂಬ ಹೆಸರಿನ ನಾಟಕಗಳನ್ನೇ ಬರೆದು, ನಾಯಕ ನಟನಾಗಿ ಅಭಿನಯಿಸಿ ನೂರಾರು ಪ್ರಯೋಗಗಳೊಂದಿಗೆ ಕರ್ನಾಟಕದ ತುಂಬಾ ರಂಗಮೌಲ್ಯ ಮೆರೆದಿದ್ದಾರೆ. ಆ ಮೂಲಕ ಖಾದಿಪ್ರೀತಿ ಮತ್ತು ರಾಜಕೀಯ ವೈರುಧ್ಯದ ವಿಭಿನ್ನ ತಾತ್ವಿಕತೆ ಮೆರೆದ ಉದಾಹರಣೆ ಉಂಟು. ಮಾಸ್ಟರ್ ಹಿರಣ್ಣಯ್ಯ ಮತ್ತು ತೀರ್ಥಹಳ್ಳಿ ಶಾಂತಕುಮಾರ್ ಅಂಥವರು ವಿರೋಧ ಪಕ್ಷದ ನಾಯಕರಂತೆ ಆಡಳಿತ ಪಕ್ಷದ ಅಪಸವ್ಯಗಳನ್ನು ಉಲ್ಲೇಖಿಸಿ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ.
ವೃತ್ತಿರಂಗ ಚರಿತ್ರೆಗೆ ಮತ್ತೆ ಮರಳುವುದಾದರೆ…
ಕೋಲ್ಕತ್ತಾದಲ್ಲಿ ತಮ್ಮ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದ ಅಂದಿನ ಬ್ರಿಟಿಷ್ ಮತ್ತು ಪಾರ್ಸಿ ವರ್ತಕರು ತಮ್ಮ ಮನರಂಜನೆಗಾಗಿ ಪ್ರೊಸಿನಿಯಂ ನಾಟಕಗಳನ್ನು ಆಡಲು ಆರಂಭಿಸುತ್ತಾರೆ. ಹದಿನೇಳನೇ ಶತಮಾನದ ಮಧ್ಯ ಕಾಲದಲ್ಲಿ ತಮ್ಮದೇ ಪಾರ್ಸಿ ಮೂಲದ ನಾಟಕಗಳನ್ನು ಕಾಲೋಚಿತವಾಗಿ ಜನಪ್ರಿಯ ಮಾಡುತ್ತಾರೆ. ಹಾಗೆಂದ ಮಾತ್ರಕ್ಕೆ ಆಗ ನೆಲಮೂಲದ ರಂಗಭೂಮಿಯೇ ಇರಲಿಲ್ಲ ಎಂದರ್ಥವಲ್ಲ. ಅದಕ್ಕೆ ಮೊದಲು ಜನಪದ ರಂಗಭೂಮಿ ಇದ್ದೇ ಇತ್ತು. ಕನ್ನಡದ ಸಂದರ್ಭದಲ್ಲಿ ಯಕ್ಷಗಾನ, ಮೂಡಲಪಾಯ, ದೊಡ್ಡಾಟ, ಕೃಷ್ಣ ಪಾರಿಜಾತ ಮೊದಲಾದ ಜಾನಪದ ಮೂಲದ ರಂಗಭೂಮಿ ಕೂಡ ಇತ್ತು. ಅವು ನೆಲಧರ್ಮದ ಅಟ್ಟದಾಟಗಳಾಗಿದ್ದವು. ಆದರೆ ಪ್ರೊಸಿನಿಯಂ ಮಾದರಿ ಆರಂಭಗೊಂಡುದು ಪಾರ್ಸಿ ಮೂಲದ ನಾಟಕಗಳಿಂದ ಎಂದು ಹೇಳಬಹುದು.
ಹಾಗೆ ನೋಡುವುದಾದರೆ ಹನ್ನೆರಡನೇ ಶತಮಾನದ ವಚನ ಚಳವಳಿ ಕಾಲದ “ಬಹುರೂಪಿ ಚೌಡಯ್ಯ” ಈ ನೆಲದ ಮೊಟ್ಟಮೊದಲ ವೃತ್ತಿ ರಂಗದ ಕಾಯಕ ಜೀವಿ ಎಂಬುದನ್ನು ಕನ್ನಡ ರಂಗಭೂಮಿಯ ಹೆಮ್ಮೆಯಂತೆ ಭಾವಿಸಬೇಕಿದೆ. ಚೌಡಯ್ಯನದು ಜಾಗತಿಕ ರಂಗಭೂಮಿಯ ಪ್ರಿಮಿಟಿವ್ ಕ್ಯಾರೆಕ್ಟರ್ ಅಂತಲೇ ಕರೆಯಬಹುದು. ಅಷ್ಟು ಮಾತ್ರವಲ್ಲ ಬಹುರೂಪಿ ಭಾರತದ ಪ್ರಾತಿನಿಧಿಕ ಸಂಗತಿಯಾಗಿಯೂ ಬಹುತ್ವವನ್ನು ಪ್ರತಿಪಾದಿಸಬಲ್ಲದು. ಮೈಸೂರು ರಂಗಾಯಣದ ‘ಬಹುರೂಪಿ’ ರಂಗೋತ್ಸವವು ರಂಗಕರ್ಮಿ ಬಹುರೂಪಿ ಚೌಡಯ್ಯನ ಹೆಸರು ಸ್ಮರಿಸುವ ನೆಲೆಯಲ್ಲಿ ಹೆಚ್ಚು ಅರ್ಥಪೂರ್ಣ. ಹೀಗೆ ಕನ್ನಡ ರಂಗಭೂಮಿಯ ಪ್ರಾಚೀನತೆ ಮತ್ತು ಹಿರಿಮೆ ವಚನ ಚಳವಳಿ ಕಾಲದಷ್ಟು ಹಿರಿದಾದುದು.

ಅರಮನೆ ಮತ್ತು ಗುರುಮನೆಗಳಿಗೆ ಮೀಸಲಾಗಿದ್ದ ಶಾಸ್ತ್ರೀಯ ಸಂಗೀತ ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಮೂಲಕ ರಂಗ ಸಂಗೀತ ಪರಂಪರೆಯನ್ನೇ ಹುಟ್ಟುಹಾಕಿದ್ದು ವೃತ್ತಿ ನಾಟಕ ಪರಂಪರೆ. ಉತ್ತರ ಕರ್ನಾಟಕ ಭಾಗದಲ್ಲಿ ಉತ್ತರಾದಿ ಸಂಗೀತ ಶೈಲಿಯ ಕಂದಪದ್ಯಗಳನ್ನು ಪೌರಾಣಿಕ ನಾಟಕಗಳಲ್ಲಿ ಹಾಡುವುದನ್ನು ರೂಢಿಗೆ ತಂದದ್ದು ನಾಟಕ ಕಂಪನಿಗಳು. ಹಾಗೆಯೇ ದಕ್ಷಿಣ ಕರ್ನಾಟಕದ ಮೈಸೂರು ಪ್ರಾಂತ್ಯದಲ್ಲಿ ದಕ್ಷಿಣಾದಿ ಸಂಗೀತ ಶೈಲಿಯ ಕಂದಪದ್ಯಗಳನ್ನು ನಾಟಕಗಳಲ್ಲಿ ಹಾಡುವ ಮೂಲಕ ರಂಗಸಂಗೀತದ ಔಚಿತ್ಯ ಮೆರೆಯಲಾಯಿತು.
ಅದಕ್ಕೆ ಮೈಸೂರು ಮಹಾರಾಜರು ನೀಡಿದ ಪ್ರೋತ್ಸಾಹ, ಅಪಾರ ಬೆಂಬಲ ಅಕ್ಷರಶಃ ಅವಿಸ್ಮರಣೀಯ. “ಜಯಚಾಮರಾಜೇಂದ್ರ ನಾಟಕ ಸಭಾ” ಎಂಬ ನಾಟಕ ಮಂಡಳಿಯನ್ನೇ ಮಹಾರಾಜರು ಸ್ಥಾಪಿಸಿದ್ದರೆಂಬುದು ಈ ನಿಟ್ಟಿನಲ್ಲಿ ಗಮನಾರ್ಹ. ತನ್ಮೂಲಕ ಹಳೇ ಮೈಸೂರು ಪ್ರಾಂತ್ಯದಲ್ಲಿ ವೃತ್ತಿರಂಗ ಪರಂಪರೆಯನ್ನು ಉಳಿಸಿ ಬೆಳೆಸಿದ್ದು ಮೈಸೂರು ಒಡೆಯರು ಎಂಬುದು ಉಲ್ಲೇಖನೀಯ. ಅಂತೆಯೇ ಅಂದಿನ ಮೈಸೂರು ರಾಜ್ಯದಲ್ಲಿ ನಟ ನಟಿ ಪ್ರಣೀತ ಅಭಿನಯ ಪರಂಪರೆ, ರಂಗ ಸಂಗೀತ ಪರಂಪರೆ, ರಂಗ ಸಜ್ಜಿಕೆಯಂತಹ ಮೂರು ಮಹತ್ವದ ಪರಂಪರೆಗಳನ್ನು ಬದುಕಿ ತೋರಿದ್ದು ವೃತ್ತಿ ರಂಗಭೂಮಿ. ಒಂದರ್ಥದಲ್ಲಿ ಜನಸಂಸ್ಕೃತಿಯ ಸೌಹಾರ್ದತೆ ಮತ್ತು ವೈವಿಧ್ಯತೆ ಮೆರೆದು ತೋರಿದ್ದು ವೃತ್ತಿ ರಂಗಭೂಮಿ ಎಂದರೆ ಅತಿಶಯೋಕ್ತಿ ಏನಲ್ಲ.
ನಾಟಕ ಕಂಪನಿಗೆ ಸುಗಂಧದೆಣ್ಣೆ ಸಿಂಪರಣೆ
ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆಯೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಟಿ. ಸೋಮಣ್ಣ ನಾಟಕಪ್ರಿಯರು. ಅರಸು ಅವರಿಗೆ ಪರಮಾಪ್ತರು. ಸೋಮಣ್ಣ ಮೂಲತಃ ದಾವಣಗೇರಿಯವರು. ಅಲ್ಲಿನ ಸಿ. ಕೇಶವಮೂರ್ತಿ, ಪ್ರೊ. ಸಾ.ಶಿ. ಮರುಳಯ್ಯ ಸೇರಿದಂತೆ ವಿವೇಕ (ವಿರಾಮ ವೇಳೆಯ ಕಲಾವಿದರು) ಎಂಬ ವಿಲಾಸಿ ತಂಡದ ಗೆಳೆಯರ ಗುಂಪು ಹವ್ಯಾಸಕ್ಕಾಗಿ ವೃತ್ತಿರಂಗ ಶೈಲಿಯ ಅನೇಕ ನಾಟಕಗಳನ್ನು ಆಡುತ್ತಿದ್ದರು. ದಾವಣಗೆರೆ ಅಲ್ಲದೇ ಪರ ಊರುಗಳಲ್ಲಿ ಸಹಿತ ಖುಷಿಗಾಗಿ ವೃತ್ತಿರಂಗದ ನಾಟಕಗಳನ್ನೇ ಪ್ರದರ್ಶಿಸುತ್ತಿದ್ದರು.
ಇದನ್ನು ಓದಿದ್ದೀರಾ?: ಕೊಪ್ಪಳ | ಅಜ್ಜನ ಜಾತ್ರೆಯ ದಾಸೋಹ ಪರಂಪರೆ
ಪರ ಊರುಗಳಿಂದ ದಾವಣಗೆರೆಗೆ ಆಗಮಿಸುವ ನಾಟಕ ಕಂಪನಿಗಳಿಗೆ ದಾವಣಗೆರೆ ಶಹರವೆಂಬ ತವರುಮನೆಯ ಅಪರೂಪದ ಆತಿಥ್ಯ. ಅದು ಅಕ್ಷರಶಃ ವಾತ್ಸಲ್ಯ ತುಂಬಿದ ತಾಯ್ತನ. ದೇವರಾಜ ಅರಸರಿಗೆ ನಾಟಕ ನೋಡುವ ಹುಚ್ಚು. ಆ ಕಾಲದಲ್ಲಿ ದಾವಣಗೆರೆ ನಗರದಲ್ಲಿ ಏಕಕಾಲಕ್ಕೆ ನಾಲ್ಕು ನಾಲ್ಕು ನಾಟಕ ಕಂಪನಿಗಳ ಕ್ಯಾಂಪ್. ಹಾಗೆ ಕ್ಯಾಂಪ್ ಹಾಕಿದ್ದು ಆಗ ಶ್ರೀ ಮಹಾಕೂಟೇಶ್ವರ ನಾಟ್ಯ ಸಂಘ ಕಾಕನೂರು. ಅದರ ಮಾಲೀಕ ಯಲ್ಲಪ್ಪ. ನಿರಂತರ ಆರೇಳು ವರ್ಷಗಳ ಕಾಲ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಬೀರೇಶ್ವರ ವ್ಯಾಯಾಮ ಶಾಲೆ ಜಾಗದಲ್ಲಿ ತಮ್ಮ ನಾಟಕ ಕಂಪನಿಯ ಮೊಕ್ಕಾಂ ಹಾಕುವ ಮೂಲಕ ರಂಗನಾಟಕಗಳ ಪ್ರಯೋಗ ಮಾಡಿ ಆಗ ದಾವಣಗೆರೆಯಲ್ಲಿ ರಂಗೇತಿಹಾಸ ನಿರ್ಮಾಣ ಮಾಡಿದ್ದರು. ಅದನ್ನು ಬಿ.ಟಿ. ಸೋಮಣ್ಣನವರ ಮೂಲಕ ಕೇಳಿ ತಿಳಿದುಕೊಂಡಿದ್ದ ಮುಖ್ಯಮಂತ್ರಿ ಅರಸು ನಾಟಕ ನೋಡಲೆಂದೇ ದಾವಣಗೆರೆಗೆ ಬಂದು ನಾಟಕ ನೋಡುವ ಸಂಕಲ್ಪ ಮಾಡುತ್ತಾರೆ.
ಸುದ್ದಿ ತಿಳಿದ ಮಾಲೀಕ ಕಾಕನೂರು ಯಲ್ಲಪ್ಪ ಅಂತಹದ್ದೊಂದು ಸದವಕಾಶವನ್ನು ಸ್ಮರಣೀಯವಾಗಿರಿಸುವ ಸಂಕಲ್ಪ ಮಾಡುತ್ತಾರೆ. ರಂಗಸಜ್ಜಿಕೆ ಒಳಗೆ ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛಗೊಳಿಸುತ್ತಾರೆ. ತಳಿರು ತೋರಣ ಕಟ್ಟುತ್ತಾರೆ. ಬಗೆ ಬಗೆಯಾಗಿ ಸಿಂಗರಿಸುತ್ತಾರೆ. “ಧೀಮಂತ ನಾಯಕ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಮನದುಂಬಿದ ಸುಸ್ವಾಗತ” ಎಂಬ ದೊಡ್ಡದಾದ ನಾಲ್ಕೈದು ಬೋರ್ಡ್ ಬರೆಸಿ ಕಟ್ಟಿಸುತ್ತಾರೆ.
ಹೀಗೆ ಚೆಂದ ಚೆಂದವಾಗುವಂತೆ ಇಡೀ ರಂಗಸಜ್ಜಿಕೆ ಸಜ್ಜುಗೊಳಿಸುತ್ತಾರೆ. ಆದರೂ ಅವರಿಗೆ ಅದೇಕೋ ಸಿದ್ದತೆ ಸಮಾಧಾನ ತರುವುದಿಲ್ಲ. ಅರಸು ಮುಖ್ಯಮಂತ್ರಿಗಳಿಗೆ ಅಷ್ಟು ದೂರದಿಂದಲೇ ತಮ್ಮ ನಾಟಕ ಕಂಪನಿಯ ಪರಿಮಳ ಘಮ ಘಮಿಸಬೇಕೆಂಬ ವಿಚಾರ ಥಟ್ ಅಂತ ಹೊಳೆಯುತ್ತದೆ. ಕೂಡಲೇ ಹುಬ್ಬಳ್ಳಿಗೆ ಕಂಪನಿಯ ಜೀಪು ಕಳಿಸಿ ಒಂದು ಬ್ಯಾರಲ್ ಸುಂಗಂಧ ದ್ರವ್ಯದ ಗಂಧದೆಣ್ಣೆ ತರಿಸುತ್ತಾರೆ. ಥಿಯೇಟರಿನ ಒಳಗೂ ಹೊರಗೂ ಸೊಗಸಾಗಿ ಗಂಧದೆಣ್ಣೆ ಸಿಂಪಡಿಸಿ ಬಿಡುತ್ತಾರೆ. ಹತ್ತಾರು ಮಾರು ದೂರದಿಂದಲೇ ಗಂಧದೆಣ್ಣೆಯ ಪರಿಮಳ ಸೂಸುವುದನ್ನು ಸಂಭ್ರಮಿಸಲು ಜನಜಾತ್ರೆಯೇ ಸೇರುತ್ತದೆ. ಮುಖ್ಯಮಂತ್ರಿ ದೇವರಾಜ ಅರಸರು ಅಂದು ಪ್ರದರ್ಶನಗೊಂಡ “ಪ್ರಜಾಸರ್ಕಾರ” ಎಂಬ ನಾಟಕ ನೋಡಿ ಸಂಭ್ರಮಪಟ್ಟು ತಮ್ಮ ಭಾಷಣದಲ್ಲಿ ಕೊಂಡಾಡುತ್ತಾರೆ. ಹಿರೀಕರನೇಕರು ಕಾಕನೂರು ನಾಟಕ ಕಂಪನಿಯ ಗಂಧದೆಣ್ಣೆಯ ಅಂದಿನ ಸಡಗರವನ್ನು ಇಂದಿಗೂ ಮೆಲುಕಾಡುತ್ತಾರೆ.
ಹೀಗೆ ವೃತ್ತಿ ರಂಗಭೂಮಿ ಹಾಗೂ ದೇವರಾಜ ಅರಸರ ಸಂಬಂಧವು ಕರ್ನಾಟಕ ನಾಮಕರಣ ಮಾಡಿದ ಸುವರ್ಣ ಕರ್ನಾಟಕದ ಸ್ಮರಣೆಯ ಸಂದರ್ಭದಲ್ಲಿ ರಂಗ ಪರಿಮಳದ ಅಂದಿನ ನೆನಪುಗಳು ಘಮ ಘಮಿಸುವಂತೆ ಮಾಡಿವೆ. ಈ ಐವತ್ತು ವರುಷಗಳ ಕಾಲಘಟ್ಟದಲ್ಲಿ ನಾಟಕ ಕಂಪನಿಗಳ ಸಂಖ್ಯೆ ಮತ್ತು ಗುಣಸಂಖ್ಯೆ ಇಳಿಮುಖದ ಹಾದಿ ಹಿಡಿದಿದೆ. ಕಳೆದ ವರ್ಷದ (2022-23) ಅಂಕಿ ಅಂಶಗಳ ಪ್ರಕಾರ ಅನುದಾನ ಪಡೆದು ನಾಟಕ ಪ್ರದರ್ಶನ ಮಾಡುತ್ತಿರುವ ಕಂಪನಿಗಳು ಕೇವಲ ಇಪ್ಪತ್ತೆರಡು. ಸರಕಾರಕ್ಕೆ ವೃತ್ತಿ ರಂಗಭೂಮಿಗೆ ಒಳಿತು ಮಾಡುವ ಮನಸ್ಸಿದೆ. ಆದರೆ ಯಾವ ರೀತಿ ಮಾಡಬೇಕೆಂಬ ಗೊತ್ತು ಗುರಿಗಳಿಲ್ಲ. ಅನುದಾನ ನೀಡುವುದೊಂದೇ ಮಾನದಂಡವಲ್ಲ. ಈ ಎಲ್ಲ ಸಂಗತಿಗಳ ನಡುವೆ ಕೆಲವು ಗಮನಾರ್ಹ ಕೆಲಸಗಳೂ ಜರುಗಿವೆ. ಅದರಲ್ಲಿ ಪ್ರಮುಖವಾಗಿ ಡಾ. ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಇದುವರೆಗೆ ಕರ್ನಾಟಕ ಸರಕಾರ ಮೂವತ್ತು ಮಂದಿ ಹಿರಿಯ ರಂಗ ಚೇತನಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಸಮಗ್ರ ವೃತ್ತಿ ರಂಗಭೂಮಿಯ ಪುನರುತ್ಥಾನ ಆಗಬೇಕಿದೆ. ಕರ್ನಾಟಕದಾದ್ಯಂತ ನಮ್ಮ ಗ್ರಾಮೀಣರು ಒಂದು ವರ್ಷಕ್ಕೆ ಎಪ್ಪತ್ತೈದರಿಂದ ನೂರು ಕೋಟಿಯಷ್ಟು ಹಣ ಖರ್ಚು ಮಾಡಿ ವೃತ್ತಿರಂಗ ಶೈಲಿಯ ನಾಟಕಗಳನ್ನೇ ಆಡುತ್ತಾರೆ. ಅವರೇ ನಾಟಕ ರಚಿಸಿ, ನಿರ್ದೇಶಿಸಿ, ಅಭಿನಯಿಸುವ ಜನಪ್ರಿಯ ಮಾದರಿಯ ಜನಸಾಮಾನ್ಯರ ನಾಟಕಗಳವು. ಹಲವು ಜವಾರಿ ಅಪಸವ್ಯಗಳ ನಡುವೆಯೂ ಅವು ತಮ್ಮ ಅಸ್ಮಿತೆ ಉಳಿಸಿಕೊಂಡು ಊರ ಜಾತ್ರೆ, ಹಬ್ಬಗಳಲ್ಲಿ ಪ್ರದರ್ಶನಗೊಳ್ಳುತ್ತವೆ.
ಮುಖ್ಯವಾಗಿ ನಾಟ್ಯಸಂಗೀತ ಮತ್ತು ರಂಗಸಜ್ಜಿಕೆ ಪರಂಪರೆ ಅಭಿವೃದ್ಧಿ ಪಡಿಸಬೇಕಿದೆ. ದಾವಣಗೆರೆಯ ವೃತ್ತಿ ರಂಗಭೂಮಿ ರಂಗಾಯಣ ಇದೀಗ ಆ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಲಿದೆ. ಅವುಗಳಲ್ಲಿ ಸಮಗ್ರ ರಂಗಭೂಮಿ ಕುರಿತ “ಮ್ಯುಸಿಯಮ್ ನಿರ್ಮಾಣದ” ಕನಸು ಮಹತ್ವದ ಆಯಾಮ ಪಡೆದುಕೊಂಡಿದೆ. ಕೊಂಡಜ್ಜಿ ಬೆಟ್ಟದ ಬಯಲಿನಲ್ಲಿ ರಂಗಾಯಣಕ್ಕಾಗಿ ಸರ್ಕಾರ ಹತ್ತೆಕರೆ ಜಮೀನು ನೀಡಿದೆ. ವೃತ್ತಿ ರಂಗಭೂಮಿ ರಂಗಾಯಣದ ರಂಗಮಂದಿರ ನಿರ್ಮಾಣ, ವಿವಿಧ ರಂಗಶಿಸ್ತುಗಳ ಅಧ್ಯಯನ ಮತ್ತು ರಂಗ ತರಬೇತಿ, ಸಂಶೋಧನೆ, ಭಾರತೀಯ ರಂಗಸಂಸ್ಕೃತಿಗೆ ಸಂಬಂಧಿಸಿದ ವಿಭಿನ್ನ ಚಿಂತನೆಗಳ ಬೃಹತ್ ಮ್ಯೂಸಿಯಂ ನಿರ್ಮಾಣ ಕಾರ್ಯ ಅಲ್ಲಿ ನೆರವೇರಬೇಕಿದೆ. ನೂರೈವತ್ತು ವರುಷಗಳ ರಂಗಪಯಣದಲ್ಲಿ ಮೂಡಿಬಂದ ಮಹತ್ತರ ರಂಗದಾಖಲೆಗಳ ಹೆಜ್ಜೆಗುರುತುಗಳು ಮ್ಯುಸಿಯಮ್ ಜಾಗದಲ್ಲಿ ಗುರುತರವಾಗಿ ಸ್ಥಾಪನೆಯಾಗಬೇಕು. ರಂಗಭೂಮಿಗೆ ಸಂಬಂಧಿಸಿದ ಬೃಹದಾಕಾರದ ಗ್ರಂಥಾಲಯ, ರಂಗ ಪ್ರಯೋಗಾಲಯ ಹೀಗೆ ಕನಸುಗಳ ರಂಗ ಬಯಲು ವಿಸ್ತಾರ ಬಲುದೊಡ್ಡದು.

ಮಲ್ಲಿಕಾರ್ಜುನ ಕಡಕೋಳ
ಸಾಹಿತಿ