ಡಾ. ಸಿ. ಆರ್. ಚಂದ್ರಶೇಖರ್ ಎಂಬ ಅಪ್ಪಟ ಜವಾರಿ ಮನುಷ್ಯನಿಗೆ ಹುಡುಕಿಕೊಂಡು ಬಂದ ಪದ್ಮಶ್ರೀ ಪ್ರಶಸ್ತಿ

Date:

ಡಾ. ಸಿ.ಆರ್. ಚಂದ್ರಶೇಖರ ಅಂದರೆ ಅಪ್ಪಟ ಜವಾರಿ ಮನುಷ್ಯನೊಬ್ಬನ ಸೀದಾ ಮತ್ತು ಸಾದಾತನದ ಸಾಕ್ಷಾತು. ಅತ್ಯಪರೂಪದ ವ್ಯಕ್ತಿತ್ವ. ಕೃಷ್ಣವರ್ಣ. ಸೌಜನ್ಯ ಕಾಲದ ಆದರ್ಶ ಮಾದರಿಯ ಉಡುಪು. ಸರಳತೆ, ಸಜ್ಜನಿಕೆ, ಸಾತ್ವಿಕತೆ, ಸಭ್ಯತೆ ಅಂದರೇನು ಅಂಬುದಕ್ಕೆ ಅವರ ಬದುಕೇ ಸೂಕ್ತ ಉತ್ತರ. ಅಸಲೀ ಮನುಷ್ಯರು ಕಣ್ಮರೆಯಾಗಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಸಿ.ಆರ್.ಸಿ. ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಹುಡುಕಿಕೊಂಡು ಬಂದು ಗೌರವಿಸಿದೆ. ಆ ನೆಪದಲ್ಲಿ ಸಿ.ಆರ್.ಸಿ. ವ್ಯಕ್ತಿತ್ವದತ್ತ ಒಂದು ಕಿರುನೋಟ…

ಡಾ. ಸಿ.ಆರ್. ಚಂದ್ರಶೇಖರ ಅವರು ತಮ್ಮ ಬಾಲ್ಯ, ಓದು, ಬದುಕು, ಕಾಯಕ ಕುರಿತು ತಾವೇ ಹಚ್ಚಿಟ್ಟ ಕರ್ಪೂರ. ಅಲ್ಲಿ ಇದ್ದಿಲು ಹುಡುಕಲಾಗದು. ಅದು ಚುಕ್ಕಿಯೊಳಗಣ ಪರಂಜ್ಯೋತಿಯ ಬೆಳಕು. ಚನ್ನಪಟ್ಟಣ ರಾಜಣ್ಣಾಚಾರ್ ಚಂದ್ರಶೇಖರ, ತಮ್ಮ ಒಡನಾಟದ ಆಪ್ತ ವಲಯದಲ್ಲಿ ಸಿ.ಆರ್.ಸಿ. ಅಂತಲೇ ಚಿರಪರಿಚಿತರು. ಕರ್ನಾಟಕದಲ್ಲಿ ತೀರಾ ಅಲ್ಪಸಂಖ್ಯಾತರಲ್ಲದ ಅತ್ತ ಬಹುಸಂಖ್ಯಾತರಂತೂ ಅಲ್ಲವೇ ಅಲ್ಲದ ಅಕ್ಕಸಾಲಿಗ (ವಿಶ್ವಕರ್ಮ) ಜನಾಂಗಕ್ಕೆ ಸೇರಿದ ಸಾಮಾನ್ಯ ಕುಟುಂಬದಿಂದ ಬಂದವರು. ಅವರ ಹುಟ್ಟೂರು (12.12.1948) ಅಂದಿನ ಮಂಡ್ಯ ಜಿಲ್ಲೆಯ ಚನ್ನಪಟ್ಟಣ. ರಾಜಣ್ಣಾಚಾರ್ ಸರೋಜಮ್ಮ ಇವರ ಅಪ್ಪ ಅಮ್ಮ.

ಸಿ.ಆರ್.ಸಿ. ಅಂದರೆ ಅಪ್ಪಟ ಜವಾರಿ ಮನುಷ್ಯನೊಬ್ಬನ ಸೀದಾ ಮತ್ತು ಸಾದಾತನದ ಸಾಕ್ಷಾತು. ಅತ್ಯಪರೂಪದ ವ್ಯಕ್ತಿತ್ವ. ಕೃಷ್ಣವರ್ಣದ ಸಿ.ಆರ್.ಸಿ. ಅವರದು ಸೌಜನ್ಯ ಕಾಲದ ಆದರ್ಶ ಮಾದರಿಯ ಉಡುಪು. ಅದೊಂದು ಬಗೆಯ ನಿಸರ್ಗದತ್ತ ಬೋಳೇತನದ ಚೆಲುವು. ಹುಡುಕಿದರೂ ಅಲ್ಲೆಲ್ಲೂ ತೋರಿಕೆಯ ಸುಳಿವಿಲ್ಲ. ಸರಳತೆ, ಸಜ್ಜನಿಕೆ, ಸಾತ್ವಿಕತೆ, ಸಭ್ಯತೆ ಅಂದರೇನು ಅಂಬುದಕ್ಕೆ ಸಿ.ಆರ್.ಸಿ. ಬದುಕೇ ಸೂಕ್ತ ಉತ್ತರ. ಸಭ್ಯತೆ ಮತ್ತು ಅಸಲೀ ಮನುಷ್ಯರು ಕಣ್ಮರೆಯಾಗಿ ಹೋಗುತ್ತಿರುವ ಈ ಕಾಲಘಟ್ಟದಲ್ಲಿ ಸಿ.ಆರ್.ಸಿ. ನಮ್ಮ ನಡುವೆ ಅವುಗಳ ಸಾಕ್ಷೀಪ್ರಜ್ಞೆಯಂತೆ ಬದುಕಿರುವುದೇ ನಮ್ಮಕಾಲದ ಪುಣ್ಯವೆಂದು ಭಾವಿಸಬೇಕಿದೆ.

ಮೇಲೆ ಪ್ರಸ್ತಾಪಿಸಿದ ನನ್ನ ಖಿನ್ನತೆಯಂತೆ ಅದೆಷ್ಟೋ ನೂರು, ಸಾವಿರ, ಲಕ್ಷ ಮಂದಿಯ ಖಿನ್ನತೆ, ತೀವ್ರ ತೆರನಾದ ಮನೋವ್ಯಾಕುಲತೆ ನೀಗಿಸಿ, ಸ್ವಾಸ್ಥ್ಯಬಾಳಿಗೆ ದಾರಿ ತೋರಿಸಿ ಕೊಟ್ಟವರು ಡಾ. ಸಿ.ಆರ್. ಚಂದ್ರಶೇಖರ. ಅವರ ಅನುಭವಜನ್ಯ ಚಿಂತನೆಯ ಕುಲುಮೆಯಲ್ಲಿ ಜನ್ಮತಾಳಿದ ಇನ್ನೂರೈವತ್ತು ಪುಸ್ತಕಗಳು ಮನೋವಿಜ್ಞಾನ ಜಗತ್ತಿನ ವಿವಿಧ ಬಗೆಯ ಸರಳ ಶಿಸ್ತು ಸ್ತರಗಳ ದಿವ್ಯ ದೀವಟಿಗೆಗಳು. ಇಂತಹ ದಿವಿನಾದ ದೀವಟಿಗೆಗಳಿಂದಲೇ ಕಳ್ಳತನದ ಕೊಳ್ಳಿ ದೆವ್ವಗಳು ಓಡಿ ಹೋದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಲ್ಲೆಲ್ಲೋ ಶೃಂಗೇರಿ ಬಳಿಯ ತ್ಯಾವಣ, ಭಾಗಮಂಡಲದ ಭೂತಗಣ, ಕಲ್ಯಾಣ ಕರ್ನಾಟಕದ ಕೆಲವು ಹಳ್ಳಿಗಳ ಬಾನಾಮತಿಯಂತಹ ನೂರಾರು ಬನಾವಟಿ ದಂಧೆಗಳ ಮೇಲೆ ವೈಚಾರಿಕ, ವೈಜ್ಞಾನಿಕ ಹತಾರಗಳನ್ನು ಝಳಪಿಸಿ ಸತ್ಯದ ಬೆಳಕು ಚೆಲ್ಲಿ ಮೂಢನಂಬಿಕೆಯ ಬುಡಕ್ಕೆ ಕೊಡಲಿ ಏಟುಕೊಟ್ಟು ನಿಜದನೆಲೆಯ ಒಳಹೇತು ಬಟಾಬಯಲು ಮಾಡಿದರು. ಇದೆಲ್ಲ ವಿಚಾರವಾದಿ ಡಾ. ಎಚ್. ನರಸಿಂಹಯ್ಯನವರೊಡಗೂಡಿ ಮಾಡಿದ ಸಾಹಸ. ಇಂತಹ ಸಾಮಾಜಿಕ ಸ್ತರದ ಯಜ್ಞೋಪಾದಿ ಸಾಹಸಗಳು ಹತ್ತಾರು. ಬೇರೆಯವರಾಗಿದ್ದರೇ ಮಾಡಿದ ನಾಲ್ಕಾಣೆ ಕೆಲಸಕ್ಕೆ ಹನ್ನೆರಡಾಣೆ ಪ್ರಚಾರ ಗಿಟ್ಟಿಸುವ ಕಲಾವಂತರಾಗಿರ್ತಿದ್ರು.

ವರನಟ ಡಾ. ರಾಜಕುಮಾರ ಮನೋವೈದ್ಯಕೀಯ ವಿಷಯಗಳ ಕುರಿತು ಸಿನೆಮಾ ಮಾಡುವಾಗ ಸಿ.ಆರ್.ಸಿ. ಅವರೊಂದಿಗೆ ಗಂಭೀರವಾಗಿ ಚರ್ಚಿಸಿರುವ ಸಂಗತಿಗಳು ಅವರ ಮಹತ್ವದ ಒಡನಾಟಕ್ಕೆ ದಕ್ಕಿದ ಅಪರೂಪದ ಅನುಭವಗಳು. ವೈದ್ಯಸಾಹಿತ್ಯ ಬ್ರಹ್ಮ ಡಾ. ಡಿ.ಎಸ್. ಶಿವಪ್ಪ. ಡಾ. ಶಿವರಾಂ ಇನ್ನೂ ಮೊದಲಾದ ಹಿರಿಯರ ಪ್ರೀತಿಗೆ ಪಾತ್ರರು. ಇದು ಸಾಹಿತ್ಯದ ಸಾಹಚರ್ಯವಾದರೆ ತಮ್ಮ ಕಾಯಕದ ಜನಾರೋಗ್ಯ ಇಲಾಖೆಯಲ್ಲಿ ನಿರ್ದೇಶಕರಾಗಿದ್ದ ಡಾ. ವೈ.ಪಿ. ರುದ್ರಪ್ಪ ಅವರಂತಹ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ಅನನ್ಯ ಪ್ರೀತಿ ಗಳಿಸುವುದೆಂದರೆ ಸುಮ್ಮನಲ್ಲ. ತಮ್ಮ ಒಡನಾಟದ ಅಂತಸ್ತು, ದೊರೆತ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ಅವರು ನೆನಪಲ್ಲಿ ಕೂಡಾ ಇಟ್ಟುಕೊಂಡವರಲ್ಲ. ಡಾ. ಸಿ.ಆರ್.ಸಿ. ಅವತ್ತು ಇವತ್ತು ಯಾವತ್ತೂ ಪ್ರಚಾರ, ಕೀರ್ತಿ ಶನಿಯನ್ನು ತೊಲಗಾಚೆ ದೂರ ಎಂಬಂತೆ ಅವುಗಳಿಂದ ಗಾವುದ, ಗಾವುದ ದೂರ. ಅದು ಅವರ ಸಹಜ ಜಾಯಮಾನ.

ಮತ್ತೊಂದೆಡೆ ಚಿಕ್ಕಮಕ್ಕಳು, ಹದಿಹರೆಯದ ಜೀವಗಳು, ಪ್ರಬುದ್ದರು, ವೃದ್ದರು ಎಲ್ಲರನ್ನೂ ಕಾಡುವ ಭಿನ್ನ ಭಿನ್ನ ಖಿನ್ನತೆ, ಅದು ಹಾಗೇ ಮುಂದುವರಿದರೆ ತೀವ್ರತರದ ರೋಗಬಾಧೆಗೆ ಹಾದಿ. ಅದರ ಹಿಂದಿನ ರಾಸಾಯನಿಕ ಬದಲಾವಣೆಯ ವೈಜ್ಞಾನಿಕ ಮತ್ತು ಸಾಮಾಜಿಕ ಪರಿಸ್ಥಿತಿಯೂ ಕಾರಣ. ಅದೆಲ್ಲ ಜನಸಾಮಾನ್ಯರ ಭಾವಕೋಶದ ಹೃದಯ ಮತ್ತು ತಲಸ್ಪರ್ಶಿಯಾಗಿಸುವ ಅಕ್ಷರ ಪುಸ್ತಕಗಳ ರಚನೆ. ಹತತ್ರ ಅರ್ಧಲಕ್ಷ ಜನಗಳಿಗೆ ತಾವೇ ಖುದ್ದಾಗಿ ಪತ್ರ ಬರೆದು ಆರೋಗ್ಯ ಸಲಹೆಗಳನ್ನು ನೀಡಿರುವುದು. ವಿವಿಧ ಪತ್ರಿಕೆಗಳಲ್ಲಿ ಸಾವಿರಕ್ಕೂ ಹೆಚ್ಚು ಮನೋಸ್ವಾಸ್ಥ್ಯ ಸಂಬಂಧಿತ ಆರೋಗ್ಯ ಶಿಕ್ಷಣದ ಲೇಖನಗಳ ಪ್ರಕಟಣೆ. ಮಾನಸಿಕ ಆರೋಗ್ಯ ಶಿಬಿರ, ತರಬೇತಿಗಳ ಲೆಕ್ಕ ಇಟ್ಟವರಲ್ಲ. ಹಾಗೆ ತರಬೇತಿ ಪಡೆದ ಸಾವಿರಾರು ಮಂದಿ ಆಪ್ತ ಸಮಾಲೋಚಕರಾಗಿ ಉಚಿತಸೇವೆ ಸಲ್ಲಿಸುತ್ತಿದ್ದಾರೆ. ಇದೆಲ್ಲವನ್ನು ಬಿಡಿ ಬಿಡಿಯಾಗಿ ಉಪ ಶೀರ್ಷಿಕೆಗಳಡಿ ಹಾಳತವಾಗಿ ನಿರೂಪಿಸಿದ್ದಾರೆ.

ಇನ್ನೇನು ಬೇಡ ನವಕರ್ನಾಟಕ ಪ್ರಕಾಶನವೊಂದೇ ಇವರ ಪುಸ್ತಕಗಳ ನಾಲ್ಕು ಲಕ್ಷಕ್ಕೂ ಮಿಕ್ಕಿದ ಪ್ರತಿಗಳನ್ನು ಮಾರಾಟ ಮಾಡಿದೆ. ಕೆಲವು ಕೃತಿಗಳು ಹತ್ತರಿಂದ ಇಪ್ಪತ್ತೆಂಟು ಬಾರಿ ಮರು ಮುದ್ರಣ ಕಂಡಿವೆ. ಮೂವತ್ತು ಲಕ್ಷಕ್ಕೂ ಅಧಿಕ ಓದುಗರು ಇವರ ಪುಸ್ತಕಗಳ ಓದಿನ ಲಾಭ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ದ್ವಿಲಿಂಗಿಗಳ ಮನೋದೈಹಿಕ ವೈಪರೀತ್ಯಗಳ ಕುರಿತು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡದ ವೈದ್ಯ ಸಿ.ಆರ್.ಸಿ. Trans sexualism ವಿಷಯಗಳನ್ನು ವೈದ್ಯಕೀಯ ಕಣ್ಣುಗಳಲ್ಲದೇ ಸಮಾಜಶಾಸ್ತ್ರೀಯ ನೆಲೆಗಳಲ್ಲಿ ಗಂಭೀರ ಚರ್ಚೆಗಳನ್ನು ಹುಟ್ಟು ಹಾಕಿದವರು. ಹೀಗೆ ಕನ್ನಡ ಅಕ್ಷರಲೋಕದ ಅದರಲ್ಲೂ ವೈದ್ಯ ಸಾಹಿತ್ಯ ಲೋಕದಲ್ಲಿ ಈ ಎಲ್ಲ ದಾಖಲೆಗಳನ್ನು ಇದುವರೆಗೆ ಯಾರೂ ಮುರಿದಿರಲಾರರು. ಅದೆಲ್ಲ ಹತ್ತಾರು ವರ್ಷಗಳ ನಿರಂತರ ಅಧ್ಯಯನ, ಸಂಶೋಧನೆ ಶ್ರಮಗಳ ಪ್ರತಿಫಲ. ಅದೆಲ್ಲಕ್ಕೂ ಮುಖ್ಯವಾಗಿ ಸಾಮಾಜಿಕ ಬದ್ಧತೆ. ಅದರೊಟ್ಟಿಗೆ ಡಾ. ಸಿ.ಆರ್.ಸಿ. ಅವರ ಶಿಸ್ತು, ಶಾಂತಚಿತ್ತ ಸ್ವಭಾವ, ಸಂಯಮ, ಸಮಾಧಾನಗಳಿಗೆ ಸಾವಿರ ಸಲಾಮು ಸಲ್ಲಬೇಕು. ಪ್ರಜಾಸತ್ತಾತ್ಮಕ ನೆಲೆಗಟ್ಟಿನ ಒಟ್ಟು ಆರೋಗ್ಯ ಸೇವಾ ವ್ಯವಸ್ಥೆ ಜನಪದೀಕರಣಗೊಳ್ಳಬೇಕೆಂಬ ಸದಿಚ್ಛೆಯ ಅವರು ಮಾನಸಿಕ ಆರೋಗ್ಯ ಸೇವೆಗಳ ಅಮರಶಿಲ್ಪಿ.

ಸಾಮಾನ್ಯರಿಗಾಗಿ ಬರೆದ ಶುದ್ದ ಸರಳ ಭಾಷೆಯ ಪುಸ್ತಕ ಲಕ್ಷ, ಲಕ್ಷ ಓದುಗರು, ಮನೋರೋಗಿಗಳ ನೆರವಿಗೆ ನಿಂತಿವೆ. ಶೈಕ್ಷಣಿಕವಾಗಿ ಅವರ ಬೋಧನೆ, ಮಾರ್ಗದರ್ಶನ ಪಡೆದ ಸಹಸ್ರಾರು ಮಂದಿ ತಜ್ಞವೈದ್ಯರ ಪಟ್ಟಿಯೇ ಇದೆ. ಸಾರ್ವಜನಿಕ ಬದುಕಿನಲ್ಲಂತೂ ಲೆಕ್ಕವಿಲ್ಲದಷ್ಟು ಜನೋಪಯೋಗಿ ಕೆಲಸಗಳು. ಹಳ್ಳಿಯಿಂದ ದಿಲ್ಲಿವರೆಗೂ, ದಿಲ್ಲಿ ದಾಟಿ ವಿಶ್ವ ಆರೋಗ್ಯಸಂಸ್ಥೆ (WHO)ಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದುಂಟು. ಅವೆಲ್ಲವುಗಳನ್ನು ಅವರು ಪ್ರಾಸಂಗಿಕವಾಗಿ ಆತ್ಮಕಥನದಲ್ಲಿ ಸ್ಮರಿಸಿಕೊಂಡಿದ್ದಾರೆ. ಇನ್ನು ತಾವೊಬ್ಬರೇ ಪುಸ್ತಕ ಬರೆದು, ಭಾಷಣದ ಮೂಲಕ ನೀಡುವ ಮನೋಚಿಕಿತ್ಸೆ ಕೆಲವೇ ಜನಕ್ಕೆ ತಲುಪಿದರೆ ಸಾಲದೆಂದು ತಮ್ಮ ಹಾಗೇ ಜನರ ಮನಮುಟ್ಟುವ ಪ್ರಭಾವೀ ಮಟ್ಟದ ತರಬೇತಿ ನೀಡಿ ತಂಡೋಪತಂಡ ಸಹಸ್ರ, ಸಹಸ್ರ ಸಂಖ್ಯೆಯ ಆಪ್ತ ಸಮಾಲೋಚಕ ಸೇನಾನಿಗಳನ್ನೇ ಸಿದ್ಧಗೊಳಿಸಿದರು. ಅವರ ಕನಸಿನ ಪ್ರಸನ್ನ, ಸಮಾಧಾನ ಆಪ್ತ ಸಲಹಾ ಕೇಂದ್ರಗಳು ಹತ್ತಾರು ವರ್ಷಗಳಿಂದ ಉಚಿತ ಆಪ್ತ ಸಮಾಲೋಚನೆ, ಚಿಕಿತ್ಸೆಗಳೊಂದಿಗೆ ಬಡವರ ಆಶಾಕಿರಣಗಳಾಗಿವೆ.

“ಕನ್ನಡದ ಪುಣ್ಯತನ”

ಮರಾಠಿಯಲ್ಲಿ ಆತ್ಮಕಥನ ಸಾಹಿತ್ಯದ ಸತ್ವಯುತ ಪರಂಪರೆಯೇ ಬೆಳೆದಿದೆ. ಅದರಲ್ಲೂ ವಿಶೇಷವಾಗಿ ದಲಿತ ಜೀವನ ಕಥನಗಳ ಹೊಸದಾದ ಮತ್ತು ಹೃನ್ಮನ ಕಲಕುವ ಅನುಭವಗಳ ಅಚ್ಚರಿಯ ಲೋಕದರ್ಶನವೇ ಅಲ್ಲಿದೆ. ಶರಣಕುಮಾರ ಲಿಂಬಾಳೆ, ಲಕ್ಷ್ಮಣ ಗಾಯಕವಾಡ ಇನ್ನೂ ಅನೇಕರ ಆತ್ಮಕಥನಗಳು ಸಾಹಿತ್ಯದ ಅನನ್ಯ ಪ್ರಾಕಾರವಾಗಿ ರೂಪುಗೊಂಡಿವೆ. ಅದರಲ್ಲೂ ಶರಣಕುಮಾರ ಲಿಂಬಾಳೆಯವರ “ಅಕ್ರಮಾಸಿ” (ಅಕ್ರಮಸಂತಾನ) ಆತ್ಮಕಥನ ಕನ್ನಡವೂ ಸೇರಿದಂತೆ ಭಾರತದ ಹತ್ತಾರು ಭಾಷೆಗಳಿಗೂ ಅನುವಾದಗೊಂಡು ಆತ್ಮಕಥನ ಜಗತ್ತಿನಲ್ಲಿ ಹೊಸದೊಂದು ಮನ್ವಂತರ ಸೃಷ್ಟಿಸಿರುವುದು ಇತಿಹಾಸದ ಪುಟ ಸೇರಿದೆ.

ಇದನ್ನು ಓದಿದ್ದೀರಾ?: ಪ್ರಧಾನ ಅರ್ಚಕ ಮಹಂತ್ ಲಾಲ್ ದಾಸ್: ಕೊಂದರು, ಮೆರೆದರು ಮತ್ತು ಮರೆಸಿದರು

ಆದರೆ ಕನ್ನಡ ಸಾಹಿತ್ಯದಲ್ಲಿ ಬಂದಿರುವ ಬಹುಪಾಲು ಆತ್ಮಕಥನಗಳು ಏಕಮುಖ ಚಲನಶೀಲದ ಹಾದಿ ಹಿಡಿದಿರುವುದು ಸುಳ್ಳಲ್ಲ. ಆತ್ಮಸಾಕ್ಷಿಯಿಂದ ತುಸುದೂರ ಸರಿದು ತನಗೆ ಬೇಕಾದ ಸ್ವಪ್ರತಿಷ್ಠೆ ಮತ್ತು ಆತ್ಮರತಿಯ ಜಾಳು ಜಾಳಾದ ಸಂಗತಿಗಳ ಗೂಡಾಗಿರುವುದು ಢಾಳಾಗಿ ಗೋಚರಿಸುತ್ತವೆ. ಹೀಗಾಗಿ ಬಹುಪಾಲು ಆತ್ಮಕಥನಗಳು ಆತ್ಮರತಿಯ ಪ್ರತಿರೂಪಗಳ ನಾತ ಭರಿಸುತ್ತವಲ್ಲದೇ ಕೆಲವು ಒಣಕ್ಲೀಷೆಯ ವರದಿಗಳಾಗಿರುವುದೇ ಅಧಿಕ. ಪ್ರಸ್ತುತ ಸಿ.ಆರ್.ಸಿ. ಅವರ ಆತ್ಮಕಥನ ವಿಭಿನ್ನ ನೆಲೆಗಳ ಅಭಿವ್ಯಕ್ತಿಯ ಸಂಕಥನ. ಅದು ಅವರ ಆತ್ಮಕಥನದ ಜತೆ ಜತೆಯಲ್ಲೇ ಸಾಮಾಜಿಕ ಬದುಕಿನ ಆರೋಗ್ಯಕರ ಉದ್ಬೋಧನ ಗ್ರಂಥವೇ ಆಗಿದೆ. ಅಷ್ಟು ಮಾತ್ರವಲ್ಲ ಅದು ವ್ಯಕ್ತಿ ಮತ್ತು ಸಮಷ್ಟಿ ಜೀವ ಮತ್ತು ಜೀವನ ಪ್ರೀತಿಯ ಸ್ವಾಸ್ಥ್ಯ ಸಂಹಿತೆಯಂತೆ ಸಂರಚನೆಗೊಂಡಿದೆ.

ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಅವರೇ ಪ್ರಕಟಿಸಿದ “ಹಿತ- ಅಹಿತ” ಭಾಗಶಃ ಆತ್ಮಕಥನದ ಚಹರೆಗಳನ್ನು ಹೊಂದಿತ್ತು. ಅಷ್ಟೇ ಯಾಕೆ ಅವರೇ ಹೇಳಿಕೊಂಡಿರುವಂತೆ ಡಾ. ನಾ. ಸೋಮೇಶ್ವರ ಅವರ ನಿರೂಪಣೆಯ ಮನಸ್ವಿ, ಡಾ. ಕೆ.ಆರ್. ಶ್ರೀಧರ್ ಅವರ ನಿರೂಪಣೆಯ ಪುಸ್ತಕಗಳು ಭಾಗಶಃ ತಮ್ಮ ಜೀವನ ಕಥನಗಳೇ ಆಗಿವೆ. ಹೀಗಾಗಿ ಮತ್ತದರ ಅಗತ್ಯ ಇದೆಯೇ ಎಂಬುದು ಸಿಆರ್ಸಿ ಇರಾದೆಯಾಗಿತ್ತು. ಅದನ್ನವರು ಕಥನಕ್ಕೆ ಮುನ್ನದ ಮಾತುಗಳಲ್ಲಿ ಹೇಳಿಯೂ ಬಿಟ್ಟಿದ್ದಾರೆ. “ಹಿತ – ಅಹಿತ” ಪ್ರಕಟಗೊಂಡಾಗ ನಾಡಿನ ಅನೇಕ ಪತ್ರಿಕೆಗಳಲ್ಲಿ ಅದಕ್ಕೆ ಅತ್ಯುತ್ತಮ ವಿಮರ್ಶೆಗಳು ಪ್ರಕಟವಾದವು. ಅವುಗಳು ಕೂಡಾ ಪ್ರಸ್ತುತ ಹಚ್ಚಿಟ್ಟ ಕರ್ಪೂರದಲ್ಲಿ ಬೆಳಕು ಕಂಡಿವೆ.

ಹಚ್ಚಿಟ್ಟ ಕರ್ಪೂರದಲ್ಲಿ ಸಿ.ಆರ್.ಸಿ. ಅವರ ವೈಯಕ್ತಿಕ ಬಾಳಿನ ವಿವರಗಳಿಗಿಂತ ಮನೋವೈದ್ಯನಾಗಿ ತಾವು ಸಲ್ಲಿಸಿದ ಕಾಯಕ ವಿವರಗಳೇ ಅಧಿಕವಾಗಿವೆ. ಹೌದು ಅವರು “ಟ್ವೆಂಟಿಫೋರ್ ಬಾರ್ ಸೆವೆನ್” ಸೇವಾನಿರತ ಕಾಯಕಯೋಗಿ. ತನ್ನ ದೇಹ ಮತ್ತು ಮನಸುಗಳ ಭಾಗದಂತೆ ಕಾಯಕ ಪ್ರೀತಿ. ಸಾಹಿತ್ಯದಲ್ಲಿ ಅನ್ಯಜ್ಞಾನ ಶಿಸ್ತುಗಳ ಮೂಲಕ ಕೃತಿ ಪ್ರಾಕಾರವನ್ನು ಕಾವ್ಯ ಮೀಮಾಂಸಕರು ಕಾಣುವಂತೆ ಇದನ್ನು ನೋಡಲಾಗದು. ಅಗಾಧ ಲೋಕಪ್ರಜ್ಞೆಯ ಪ್ರೀತಿ ಬದುಕಿದವರಿಗೆ ಬದುಕು ಮತ್ತು ಸಾಧನೆಗಳನ್ನು ಬೇರ್ಪಡಿಸಿ ನೋಡುವುದು ದುಸ್ತರ. ಅವರು ಮೊದಲು ವೈದ್ಯ ಆಮೇಲೆ ಲೇಖಕ ಹೀಗೆ ಯಾವುದು ಮೊದಲು? ಎರಡೂ ಅಲ್ಲ ಮೊದಲು ಅವರೊಬ್ಬ ಪರಿಪೂರ್ಣ ಮನುಷ್ಯನೆಂಬುದು ಮೊದಲು. ಅಂಥವರಿಗೆ ವೈಯಕ್ತಿಕ ಬದುಕಿನ ವಿವರಗಳು ತಾನು ಮಾಡುವ ಕೆಲಸಕ್ಕಿಂತ ಅಧಿಕವೆಂದು ಕಂಡಿಲ್ಲವಾಗಿ ಅವರ ಅಂತಃಕರಣ ಒಲಿದಂತೆ ಹಾಡಿದ್ದಾರೆ.

ಹಾಗಾದರೆ ಆತ್ಮಕಥನವೊಂದರ ಹಂದರಕ್ಕೆ ಅಂತಹ ಆನುಷಂಗಿಕತೆಯ ಅಗತ್ಯವಿತ್ತೆ ಎಂಬುದನ್ನು ನಿಕಷಕ್ಕೊಡ್ಡಿದಾಗ ಖಂಡಿತವಾಗಿ ಬೇಡವೆನಿಸದು. ಆದರೆ ಅನೇಕ ಕಡೆ ಅದೊಂದು ಕಥನ ಕಲೆಯ ಬಿಸುಪು, ಬಿಗುವುಗಳನ್ನು ಗಟ್ಟಿಗೊಳಿಸದೇ ಹಳೆಯ ಪ್ರಕಟಿತ ಅನುಭವಗಳನ್ನೇ ಒಟ್ಟುಗೂಡಿಸಿಕೊಟ್ಟಿದೆ. ಆದಾಗ್ಯೂ ಸಾಧಕ ಬದುಕಿನ ಜೇನುಹುಟ್ಟು ಮುಟ್ಟಿದ ಅನುಭವ ಓದುಗನಿಗೆ. ಜೇನನ್ನು ನೇರವಾಗಿ ಹುಟ್ಟಿನಿಂದ ಹೆಕ್ಕಿ, ನೆಕ್ಕಿದಾಗ ಸಿಗುವ ಸಂತೃಪ್ತ ಭಾವ ಬಣ್ಣಿಸಲಸದಳ. ಅಷ್ಟಲ್ಲದೇ ಸ್ವಗತದ ಜೀವನ ಕಥನ ನಿರೂಪಣಾ ವಿಧಾನ ಸಂವಹನಗುಣ ಕಳೆದುಕೊಂಡಿಲ್ಲ ಅದರ ಆಯಾಮಗಳು ಅಲ್ಲಲ್ಲಿ ವಿಸ್ತಾರಗೊಂಡು ಆರೋಗ್ಯ ಶಿಕ್ಷಣದಂಥ ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತವೆ. ಅದು ಕಥನಕಾರನ ಗಮನಾರ್ಹ ಗುಣಗ್ರಾಹಿಕೆ.

ಆದರೆ ಕಣ್ಣಾಗ ಕಣ್ಣಿಟ್ಟು ಹುಡುಕಿದರೂ ಎಲ್ಲೂ ಪಾಂಡಿತ್ಯ ಪ್ರದರ್ಶನ, ಸುಳ್ಳುಸೃಷ್ಟಿ, ಆತ್ಮರತಿ, ಅತಿರೇಕಗಳ ಸುಳಿವಿಲ್ಲ. ಸಾಮಾಜಿಕ ಪ್ರಜ್ಞೆ ಹಾಗೂ ಸ್ವಾಸ್ಥ್ಯ ಸಮಷ್ಟಿಯ ಅವರ ಹೃತ್ಪೂರ್ವಕ ಕಾಳಜಿಗೆ ಮತ್ತೊಮ್ಮೆ ಸೆಲ್ಯೂಟ್ ಹೇಳಲೇಬೇಕು. ಅವರೊಬ್ಬ ಸಾಹಿತ್ಯದ ಉತ್ತಮ ಓದುಗ ಮತ್ತು ಅಧ್ಯಯನಕಾರ. ಶಿವರಾಮ ಕಾರಂತ, ತ್ರಿವೇಣಿ, ಭೈರಪ್ಪ ಹೀಗೆ ಇಂತಹ ಅನೇಕರ ಕಾದಂಬರಿಗಳನ್ನು ಓದಿ ಬೆಳೆದವರು. ನಾಲ್ಕು ದಶಕಗಳ ಹಿಂದೆಯೇ ಅನೇಕ ನಿಯತಕಾಲಿಕಗಳಿಗೆ ಕತೆ, ಪ್ರಬಂಧಗಳನ್ನು ಬರೆದವರು. ಅವರ ಆತ್ಮ ಕಥನದಲ್ಲಿ ಆಸಕ್ತ ಓದು, ಬರಹದ ಕೆಲವು ಪ್ರಸಂಗಗಳ ಪ್ರಸ್ತಾಪಗಳಿವೆ. ಆ ಮೂಲಕ ಭಾವ ಪ್ರಭಾವಗಳ ಸರಳ ಸಾತ್ವಿಕ ಬದುಕು ಕಟ್ಟಿಕೊಂಡು, ಮನೋಲೋಕದ ಜ್ಞಾನಹಂಚಿಕೆಯನ್ನೇ ತನ್ನ ಕಾಯಕವಾಗಿಸಿ ಅದರಲ್ಲೇ ಬಸವಪ್ರಣೀತ ಕೈಲಾಸದ ಯಶಸ್ಸು ಕಂಡವರು.

ನಗರ ಮತ್ತು ಗ್ರಾಮ ಜಗತ್ತಿನಲ್ಲಿ ಇವತ್ತು ಸಭ್ಯತೆ ಎಂಬ ಪದವೇ ಪತನವಾಗಿ ಹೋಗುತ್ತಿರುವಾಗ, ಅಪ್ಪಟ ಸಭ್ಯತೆಯ ಪರಿಪೂರ್ಣ ವ್ಯಕ್ತಿತ್ವದ ಮನುಷ್ಯನೊಬ್ಬ ನಮ್ಮ ನಡುವೆ ಇದ್ದಾರೆಂಬುದೇ ಪವಾಡ ಸದೃಶ ಮಜಕೂರ. ವಾಸ್ತವದಲ್ಲಿ ಅವರು ಪವಾಡ ವಿರೋಧಿಗಳು. ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆಯ ಅವರು ನಮ್ಮ ಹೆಮ್ಮೆಯ ಕನ್ನಡಿಗ. ಮತ್ತದರಲ್ಲೂ ಸರಳಾತಿ ಸರಳ ಸಂಪನ್ನ ಮನದ ಅವರು ಜನಸಾಮಾನ್ಯರ ವೈದ್ಯ. ಒಮ್ಮೊಮ್ಮೆ ಅವರು ಭವರೋಗದ ವೈದ್ಯರಂತೆಯೂ ನನ್ನಂಥವರಲ್ಲೂ ಪ್ರೀತಿ ಹುಟ್ಟಿಸುತ್ತಾರೆ. ಅವರಲ್ಲಿ ಹತ್ತಿರದ ಬಂಧುವಿನಂತಹ ಸಂತನೊಬ್ಬನನ್ನು ಕಂಡ ಸಂತಸ ನನ್ನದು.

ಸಿ.ಆರ್.ಸಿ. ಅವರ ಆತ್ಮಕಥನ ಹಚ್ಚಿಟ್ಟ ಕರ್ಪೂರದ ಪ್ರಮುಖ ಭಾಗದಲ್ಲಿ ತಾರುಣ್ಯ ಮತ್ತು ವೃದ್ಧಾಪ್ಯದ ಮನಸುಗಳಿಗೆ ಓದಲೇ ಬೇಕೆನಿಸುವ, ಪುಳಕ ಹುಟ್ಟಿಸುವ ಹತ್ತಾರು ಪ್ರೇಮಪತ್ರಗಳಿವೆ. ಎರಡು ಹರೆಯದ ಹೃದಯ ಪ್ರಭೇದಗಳ ಆಕರ್ಷಕ ಸಂವಾದ ಎಂಥವರಲ್ಲೂ ಪ್ರೇಮಾಂಕುರ ಹುಟ್ಟಿಸಬಲ್ಲ ಪತ್ರಗಳವು. ಹತ್ತತ್ರ ಅರ್ಧ ಶತಮಾನದ ನಂತರವೂ ಅವುಗಳನ್ನು ಸಿ.ಆರ್.ಸಿ. ಕಾಪಿಟ್ಟು ಕೊಂಡಿದ್ದಾರೆ. ತೀರಿಹೋದ ತಮ್ಮ ಬಾಳಸಂಗಾತಿ ಡಿ.ಎಸ್. ರಾಜೇಶ್ವರಿ (ಹೆಸರಾಂತ ಸಮಾಜವಾದಿ ಚಿಂತಕ, ಲೇಖಕ ಡಿ.ಎಸ್. ನಾಗಭೂಷಣರ ತಂಗಿ ರಾಜೇಶ್ವರಿ, ತಮ್ಮ ಮನೆಯ ದೇವತೆ ಎಂತಲೇ ಕರೆಯುತ್ತಾರಂತೆ) ಪತ್ನಿ ರಾಜೇಶ್ವರಿಯವರನ್ನು ಸಿ.ಆರ್.ಸಿ. ತಮ್ಮೆದೆಯ ಗುಂಡಿಗೆಯಲ್ಲಿ ಅದೆಷ್ಟು ಜತನವಾಗಿಟ್ಟು ಕೊಂಡಿದ್ದಾರೆಂಬುದಕ್ಕೆ ಆತ್ಮರಕ್ಷಕಗಳಂತಹ ಈ ಪತ್ರಗಳೇ ಖರೇ ಖರೇ ಸಾಕ್ಷಿ.

ಪ್ರೇಮ ಚಕೋರಿ ರಾಜೇಶ್ವರಿ, ರಾಜಹಂಸಿ, ಸುಹಾಸಿನಿ, ಸ್ನೇಹಮಯಿ, ಹೃದಯ ವಲ್ಲಭೆ, ಪ್ರಿಯಂವದೆ, ಹರ್ಷದಾಯಿನಿ, ಘಾಟಿಹುಡುಗಿ, ಸವಿಮಾತಿನ ಸೊಬಗಿ, ಪ್ರಿಯ ಮೈತ್ರಿ, ತುಳಸೀ ಭಕ್ತೆ, ಮೊಂಡು ಹುಡುಗಿ, ಲಾವಣ್ಯವತಿ, ಮದುವಣಗಿತ್ತಿ ಇವೆಲ್ಲವೂ ಮದುವೆಗೆ ಮುಂಚೆ ರಾಜೇಶ್ವರಿ ಅವರಿಗೆ ಸಿ.ಆರ್.ಸಿ. ಬರೆದ ಪತ್ರಗಳ ಸಂಬೋಧನಾ ಒಕ್ಕಣಿಕೆಗಳು. ಆದರೆ ರಾಜೇಶ್ವರಿ ಅವರು ಪ್ರಿಯ ಚಂದ್ರು ಒಲವಿನ ಚಂದ್ರು ಅಂತಲೇ ಬರೆದ ನೂರಾರು ಪ್ರೇಮಪತ್ರಗಳಿವೆ. ಪ್ರೇಮಿಗಳ ಹೃದಯದ ಮೊರೆತ ಸಾಂದರ್ಭಿಕ ಮಹತ್ವ ಮಾತ್ರವಲ್ಲ ಅವಕ್ಕೆ ಪ್ರೀತಿಜಗತ್ತಿನ ಸಾರ್ವಕಾಲಿಕ ಮಹತ್ವ ಪ್ರಾಪ್ತಿ. ವಿವಾಹ ಪೂರ್ವ ತರುಣ ಪ್ರಾಯದ ವಯೋಸಹಜ ಉತ್ಕಟ ಪ್ರೀತಿ ಪುಳಕಗಳು ಮಾತ್ರ ಅಲ್ಲಿ ನಿವೇದನೆಗೊಂಡಿಲ್ಲ. ಮೊದಲೇ ಕುಡುಮಿಯಂಥ ತಾನು ಓದಿದ ಭೈರಪ್ಪ, ಕಾರಂತ, ತ್ರಿವೇಣಿಯವರ ಕಾದಂಬರಿ ಪಾತ್ರಗಳ ಗಂಭೀರ ಚರ್ಚೆ ಟಪಾಲುಗಳ ಜೀವಾಳ. ಇಲ್ಲವೇ ತಾವು ನೋಡಿದ ಆ ಕಾಲದ ಸಿನೆಮಾ ಕುರಿತಾದ ಪುಟ್ಟ ವಿಮರ್ಶೆ. ಇವೆರಡೂ ಅಲ್ಲದಿದ್ದಲ್ಲಿ ಸಿ.ಆರ್ಸಿ, ಪ್ರೇಮ ಕವಿತ್ವದ ಸಾಲುಗಳು ಇರಲೇಬೇಕು. ಅಂತಹದ್ದೊಂದು ಸಾಲು ಇಲ್ಲಿದೆ.

ಆಲಿಸೆನ್ನ ಮನದರಸಿ
ಮುಳುಗ ಬಯಸಿಹೆ
ನಿನ್ನ ಕಣ್ಣಾಳದಲಿ
ಎನ್ನ ಮನದ ಜೋಕಾಲಿ
ನಿನ್ನ ವಕ್ಷದುಯ್ಯಾಲೆಯಲಿ
ಮಗು ನಾನು ನಿನ್ನ ಮಡಿಲಲಿ

ಇಂತಹ ಹಲವಾರು ಕವಿತೆಯ ಸಾಲುಗಳು ಕಾವ್ಯದ ಉಮೇದಿನಲ್ಲಿ ತೇಲಾಡುತ್ತವೆ. ಇಂದಿನ ಯುವಜನಾಂಗ ಅವುಗಳನ್ನು ಓದಲೇಬೇಕಿದೆ. ವಿವಾಹ ಪೂರ್ವದ ಹುಡುಗ ಹುಡುಗಿಯ ಆತುರ, ಕಾತರ, ವಿವಾಹ ನಂತರವೂ ಅವನ್ನು ಉಳಿಸಿಕೊಳ್ಳಬಹುದಾದ ಅನನ್ಯತೆ ಅವಕ್ಕಿದೆ. ಅವನ್ನು ನಾನು ಟಿಪ್ಸ್ ಎಂದು ಕರೆಯಲಾರೆ. ಏಕೆಂದರೆ ಟಿಪ್ಸ್ ಎಂಬುದು ವ್ಯಾವಹಾರಿಕ ಕೌಶಲ್ಯ ಪದವಾಗಿ ಜೀವಮೌಲ್ಯ ಕಳಕೊಂಡಿದೆ.

ಅವರೇ ಹೇಳುವಂತೆ ಅವರೆಂದೂ ಒಂಟಿಯಲ್ಲವಂತೆ‌. ರಾಜೇಶ್ವರಿ ಯಾವತ್ತೂ ಅವರ ಜೀವದೊಳಗಿನ ಜೀವದಂತೆ ಅವರೊಳಗೆ ಸದಾಜೀವಂತ. ಅಂತಹ ಬಾಳಸಂಗಾತಿ ಕಟ್ಟಿಹೋದ ಜೀವಕೋಟಿಗೆ ಅದೆಷ್ಟು ಕೋಟಿ ಕೊಟ್ಟರೂ ಸಾಲದು. ವಿದುಷಿ ರಾಜೇಶ್ವರಿ ಹೆಸರಲ್ಲಿ ಕೊಟ್ಟಿರುವ ಒಂದುಕೋಟಿ ಹಣವಲ್ಲದೇ ತಮ್ಮ ತರುವಾಯ ಸಂಗಾತಿ ರಾಜೇಶ್ವರಿಯ ಹೆಸರಲ್ಲಿ ಸಾಮಾನ್ಯರ ಮನೋಸ್ವಾಸ್ಥ್ಯಕ್ಕೆ ತಮ್ಮದೆನ್ನುವ ಎಲ್ಲ ಆಸ್ತಿಪಾಸ್ತಿ ಧಾರೆ ಎರೆಯುವ ಆಲೋಚನೆ ಅವರದಾಗಿರಬಹುದೆಂದು ಕೊಂಡಿದ್ದೇನೆ. ನಾನು ಕಂಡಂತೆ ಸಾಮಾನ್ಯವಾಗಿ ವೈದ್ಯರಾದವರು, ವೈಚಾರಿಕ ಮನೋಭಾವದವರಾಗಿದ್ದು ಭಾವುಕತೆ, ಕರುಳಿನ ಕಕ್ಕುಲತೆಗಳಿಂದ ದೂರವಾಗಿರುತ್ತಾರೆ. ಸಿ.ಆರ್.ಸಿ. ಹಾಗಲ್ಲ. ಅವರದು ಮಗು ಮತ್ತು ತಾಯ್ತನದ ಜೀವಸಂವೇದನೆ ತುಂಬಿ ತುಳುಕುವ ಮನಸು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ

ನೂರು ಪುಟಕ್ಕೂ ಹೇರಳವಾಗಿ ಇಲ್ಲಿ ಪ್ರಕಟಗೊಂಡಿರುವ ಪ್ರೇಮಪತ್ರಗಳದ್ದೇ ಪ್ರತ್ಯೇಕ ಪುಸ್ತಕವೇ ಪ್ರಕಟವಾಗಬೇಕು. ಸನ್ಮಿತ್ರರಾದ ಎಸ್.ಎಸ್. ಹಿರೇಮಠ ಅವರು ಅದೇ ಆಲೋಚನೆಯಲ್ಲಿದ್ದಾರೆ. ಹಿರೇಮಠ ಹಾಗೂ ಸಿ.ಆರ್.ಸಿ. ಅವರದು ಎರಡು ದಶಕಗಳಿಗೂ ಮಿಕ್ಕಿದ ಗೆಳೆತನ. ಕಲ್ಯಾಣ ಕರ್ನಾಟಕವೆಂದರೆ ಸಿ.ಆರ್.ಸಿ. ಅವರಿಗೆ ಥಟ್ಟನೆ ನೆನಪಿಗೆ ಬರುವುದು ಬಾನಾಮತಿ. ಪರಮ ಪ್ರೀತಿಯ ಮತ್ತೊಂದು ಹೆಸರೆಂದರೆ ಅವರ ಖಾಸಾ ಖಾಸಾ ದೋಸ್ತಿಯ ಹಿರೇಮಠ. ಹಚ್ಚಿಟ್ಟ ಕರ್ಪೂರ ಆತ್ಮಕಥನ ಮತ್ತು ಪ್ರೇಮಪತ್ರಗಳ ಪುಸ್ತಕ ಪ್ರಕಟಣೆಯ ತರುವಾಯ ಹಿರೇಮಠರು ತಮ್ಮ ಹವ್ಯಾಸಿ ಪ್ರಕಾಶನ ಕಾಯಕ ನಿಲ್ಲಿಸಿ ಬಿಡುವ ನಿರ್ಧಾರ ಘೋಷಿಸಿದ್ದಾರೆ.

ಆದರೆ ಆ ಎರಡೂ ಪುಸ್ತಕಗಳ ಅಂತರಂಗ ಬಹಿರಂಗಗಳ ಗುಣಾತ್ಮಕತೆ, ಸೊಗಸನ್ನು ಹಿರೇಮಠ ಸವಾಲಿನಂತೆ ಸ್ವೀಕರಿಸಿದ್ದು ಪುಸ್ತಕದ ಮುದ್ರಣ, ನಾಮಕರಣ, ನಾಳೆ ಬರುವ ಸಂಕ್ರಮಣಕ್ಕೇ ಲೋಕಾರ್ಪಣೆ. ಎಲ್ಲವೂ ಅಚ್ಚುಕಟ್ಟಾಗಿ ಜರುಗಬೇಕೆಂಬ ಸಂಕಲ್ಪ. ಆ ಬಗ್ಗೆ ಹಿರೇಮಠರು ಅತ್ಯಂತ ಪ್ರೀತಿ, ಶ್ರದ್ಧೆಗಳಿಂದ ಕಾರ್ಯಪ್ರವರ್ತರಾಗಿದ್ದಾರೆ. ಹೌದು ಮನೋವೈದ್ಯನೊಬ್ಬನ ಆತ್ಮಕಥನಕ್ಕೆ ಅನುರೂಪ ಮತ್ತು ಸಹಾನುಭೂತಿ ಗುಣವಿದ್ದರೆ, ಮಧುರಾನುಭೂತಿಯ ಪುಳಕ ಹುಟ್ಟಿಸುವ ತಾಜಾತನದ ಪ್ರೇಮಪತ್ರಗಳ ಲವ್ ಲವಿಕೆಯೇ ರೋಚಕವಾದುದು. ಓದುತ್ತಾ ಹೋದಂತೆ ಓದುಗನನ್ನು ಲಾವಣ್ಯಮಯ ಮಂಟಪಕೆ ಕೈ ಹಿಡಿದು ಕರೆದೊಯ್ಯುವ ದಿವಿನಾದ ಉಲ್ಲಾಸ ಪ್ರತಿಯೊಂದು ಪತ್ರಕ್ಕಿದೆ.

“ಸತಿಪತಿಗಳೊಂದಾದ ಭಕುತಿ ಹಿತವಾಗುವುದು ಶಿವಂಗೆ” ಎಂಬ ವಚನದ ಅನನ್ಯತೆ ಅಂತಃಶ್ರೋತಗೊಂಡ ದಾಂಪತ್ಯ ಅವರದು. ನಾಲ್ಕು ದಶಕಕ್ಕೂ ಅಧಿಕವಾದ ಅಖಂಡ ಪ್ರೀತಿಧಾರೆಗೆ ಮುಪ್ಪಾಗಲಿ, ಮುಕ್ಕಾಗಲಿ ಬರಲೇ ಇಲ್ಲ. ತಮಗೆ ಸಂತಾನ ಭಾಗ್ಯ ದೊರಕಲಿಲ್ಲ ಎಂಬ ಕೊರಗು ಅವರನ್ನು ಯಾವತ್ತೂ ಕಾಡಲಿಲ್ಲ. ಸಮಾಜದ ಹಲವಾರು ಅನಾಥ ಮಕ್ಕಳೆಲ್ಲರೂ ತಮ್ಮ ಮಕ್ಕಳೆಂಬ ಮಮಕಾರ. ಪರಸ್ಪರರಲ್ಲಿ ಈ ಬಗೆಯ ಹರಿಗಡಿಯದ ತಾಯ್ತನ ಉಕ್ಕಿ ಉಕ್ಕಿ ಹರಿವ ಹಾಲ್ಗಡಲು. ವರ್ತಮಾನ ಜಗತ್ತಿನ ಗಂಡ ಹೆಂಡತಿ ಇಬ್ಬರೇ ಇರುವ ನ್ಯೂಕ್ಲಿಯರ್ ಫ್ಯಾಮಿಲಿಗಳಿಗೆ ಸಿ.ಆರ್.ಸಿ. ದಂಪತಿ ಬದುಕಿದ ಅಪ್ಪಟ ಮನುಷ್ಯತನದ ಜೀವಪರ ದಾಂಪತ್ಯ ಬಾಳು ಅಕ್ಷರಶಃ ಆದರ್ಶಪ್ರಾಯ.

ಪತ್ನಿ ಡಿ.ಎಸ್. ರಾಜೇಶ್ವರಿ ದಕ್ಷಿಣಾದಿ ಶಾಸ್ತ್ರೀಯ ಸಂಗೀತದಲ್ಲಿ ಉನ್ನತ ಪದವಿ ಪಡೆದವರು. ಹತ್ತು ಹಲವು ಮಹತ್ವದ ವೇದಿಕೆಗಳಲ್ಲಿ ಸಂಗೀತ ಕಛೇರಿ ನಡೆಸಿಕೊಟ್ಟ ವಿದುಷಿ. ತೀರಿಹೋದ ಪತ್ನಿ ಹೆಸರಲ್ಲಿ ಸಿ.ಆರ್.ಸಿ. ಒಂದುಕೋಟಿ ರುಪಾಯಿ “ಸಮಾಧಾನ” ಆರೋಗ್ಯ ಸಂಸ್ಥೆಗೆ ದೇಣಿಗೆ ನೀಡಿದ್ದಾರೆ. ಸಾವಿರ ರುಪಾಯಿ ದಾನ ಮಾಡಿ ಹತ್ತು ಸಾವಿರ ರುಪಾಯಿಗಳ ಪ್ರಚಾರ ಗಿಟ್ಟಿಸುವ ಪ್ರಚಾರೋನ್ಮಾದದ ದಾನಿಗಳೇ ತುಂಬಿರುವ ಇಂದಿನ ದಿನಮಾನಗಳಲ್ಲಿ ಸಿ.ಆರ್.ಸಿ. ತಮ್ಮ ಬಲಗೈ ನೀಡಿದ ದಾನ ಎಡಗೈಗೆ ಗೊತ್ತಾಗದಂತೆ ಇದ್ದವರು.

ಇದನ್ನು ಓದಿದ್ದೀರಾ?: ನೂರರ ನೆನಪು | ಕಾವಾಡಿಗರ ಹಟ್ಟಿಯಿಂದ ಹಾಲಿವುಡ್ ಅಂಗಳಕ್ಕೆ ಜಿಗಿದ ಮೈಸೂರ್ ಸಾಬು

ಉಣಲು, ಉಡಲು, ತೊಡಲು, ಚೈನಿ ಮಾಡಲು ಯಥೇಚ್ಛ ಹಣವಿದ್ದರೂ ಪತಿ ಪತ್ನಿ ಇಬ್ಬರ ನಡುವಿರುವ ಅಹಮಿಕೆ, ಪರಸ್ಪರ ಜೀವನಾನುಸಂಧಾನದ ತಿಳಿವಳಿಕೆಯ ಕೊರತೆಯಿಂದಾಗಿ ಬಹುಪಾಲು ನ್ಯೂಕ್ಲಿಯರ್ ಕುಟುಂಬಗಳು ಆತ್ಮಹತ್ಯೆಯ ಹಾದಿ ಹಿಡಿದಿವೆ. ಈಗಂತೂ ಅವಿಭಜಿತ ಕೂಡು ಕುಟುಂಬಗಳದ್ದು ಮುಗಿದ ಅಧ್ಯಾಯ. ಕೌಟುಂಬಿಕ ಪ್ರೀತಿ, ನೆಮ್ಮದಿಯೇ ಇಲ್ಲದಿರುವಾಗ ಬಹುತ್ವ ಭಾರತವೆಂಬ ಕುಟುಂಬ ಬದುಕಿತಾದರೂ ಹೇಗೆ.? ಅಂತಹ ಮಹತ್ವದ ಜನಬದುಕು ಬದುಕುವ ಬಗೆಯನ್ನು ಹಚ್ಚಿಟ್ಟ ಕರ್ಪೂರ ಬಿಚ್ಚಿಟ್ಟಿದೆ.

“ಮನಸಾದಪ್ಪ ಇದು ಭಾಳ ಬೆರಕಿ
ಶುನಕನ್ಹಾಂಗ ಹೊಡಿತದ ಫಿರಕಿ”

ಇವು ತತ್ವಪದಕಾರ, ಅನುಭಾವದ ಹರಿಕಾರ ಕಡಕೋಳ ಮಡಿವಾಳಪ್ಪನವರ ತತ್ವಪದವೊಂದರ ಸರಳ ಸಾಲುಗಳು. ಇಡೀ ಪದವನ್ನು ನಿಕಷಕ್ಕೊಡ್ಡಿದಾಗ ಮನಸು ಮತ್ತು ಅಸ್ವಸ್ಥ ಮನಸಿನ ಒಳಾರ್ಥಗಳು ಅರ್ಥವಾಗುತ್ತವೆ. ಸಿ.ಆರ್.ಸಿ. ಪ್ರಣೀತ ಮನಃಶಾಸ್ತ್ರವೇ ಅನುಭಾವದ ತಾಯಿಬೇರಾಗಿದೆ. ಬೆಳಕು ಸಹಿಸದ ಬಾವಲಿಗಳು, ಕೆಲವು ಪ್ರಚ್ಛನ್ನವಾದಿಗಳು ನೀಡಿದ ಪ್ರಚ್ಛನ್ನ ಖಿನ್ನತೆಯೊಳಗೆ ನಾನು ಮುಳುಗಿದ್ದಾಗ ಹಚ್ಚಿಟ್ಟ ಕರ್ಪೂರ ಓದಲು ಆರಂಭಿಸಿ ಇದೀಗ ಬರೆದು ಮುಗಿಸಿದೆ. ಇದನ್ನು ಪ್ರಸ್ತಾವನೆಯೋ, ಮುನ್ನುಡಿಯೋ ಏನಾದರೂ ಅಂದುಕೊಳ್ಳಿರಿ. ಆದರೆ ಇದರಿಂದ ನನ್ನ ಮನದ ತುಂಬಾ ನಿರಾಳ ಮತ್ತು ಹಳಾರ. ಮನಸು ಖಾಲಿ ಮಾಡಿಕೊಳ್ಳುವುದು ಸುಲಭವಲ್ಲ.

ಹಚ್ಚಿಟ್ಟ ಕರ್ಪೂರ ಓದಿ, ಓದಿದ ಮತಿತಾರ್ಥ ಬರೆದು ಮುಗಿಸಿದಾಗ ಹೇಳದಿರಲಾಗದ ಸಣ್ಣದೊಂದು ಸಂತೃಪ್ತಭಾವ. ಬರೆದುದಕ್ಕಿಂತ ಓದಿದ ಘಳಿಗೆಗಳಲ್ಲಿ ಸಿಕ್ಕ ಖುಷಿಯೇ ಅಧಿಕ. ಇದನ್ನು ಓದಲು, ಬರೆಯಲು ಅನುವು ಮಾಡಿಕೊಟ್ಟ ಅನುಗಾಲದ ಸನ್ಮಿತ್ರ ಎಸ್.ಎಸ್. ಹಿರೇಮಠ ಮತ್ತು ನನಗೆ ವೈಯಕ್ತಿಕವಾಗಿ ಹೆಚ್ಚು ಪರಿಚಿತರಲ್ಲದ ಸಿ.ಆರ್.ಚಂದ್ರಶೇಖರ್, ಅವರ ಪುಸ್ತಕಗಳನ್ನು ಓದಿ, ವಿದ್ಯಾರ್ಥಿನಿಯರಿಗೆ ಬೋಧನಾ ವೃತ್ತಿಗೈಯ್ದ ನಾನು ಅವರ ಬರಹಗಳ ಅನುಸಂಧಾನದಲ್ಲಿ ಒಂದಾದವನು. ಅಂತಹ ಹದುಳ ಪ್ರೀತಿಯೇ ನನ್ನನ್ನು ಇಲ್ಲೀತನಕ ಎಳಕೊಂಡು ಬಂದಿದೆ.

ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. 1994 ರಲ್ಲಿ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಇವರ ಒಂದು ಲೇಖನ ನಮಗೆ ಪಾಠವಾಗಿತ್ತು. ಅದರಾಚೆಗೆ ಡಾ.ಸಿ.ಆರ್.ಸಿ ಯವರ ಗುರುತು ಗೊತ್ತಿಲ್ಲದ ಕನ್ನಡಿಗರಾರಿದ್ದಾರೆ? ಇವರು ಇಷ್ಟೊಂದು ಸರಳಜೀವಿಯೆಂದು ತಿಳಿದು ಮನದುಂಬಿ ಬಂತು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...