ಅಧ್ಯಯನ ಪೀಠ ಬೇಡ, ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ

Date:

ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ ನಾಡಿನಾದ್ಯಂತ ಬಾಳಿ ಬದುಕಿದ ಇತಿಹಾಸವಿದೆ. ತತ್ವಪದಕಾರರು ಆಯಾ ಕಾಲದ ಪ್ರಭುತ್ವದ ಅನಾಚಾರ, ಅಹಂಕಾರಗಳಂತಹ ಅನೇಕ ವೈರುಧ್ಯಗಳನ್ನು ಪ್ರಶ್ನಿಸಿ ತಕ್ಷಣವೇ ಪ್ರತಿಭಟನೆಯ ಪದಕಟ್ಟಿ ಹಾಡಿದವರು. ಅವರು ಭವರೋಗ ವೈದ್ಯರು. ಪ್ರಯುಕ್ತ ಕರ್ನಾಟಕದ ಸಮಗ್ರ ತತ್ವಪದಗಳ ಹಾಗೂ ತತ್ವಪದಕಾರರ ಕುರಿತು ಆಳದ ಸಂಶೋಧನೆ ಸಮಗ್ರ ಅಧ್ಯಯನಕ್ಕಾಗಿ ಮತ್ತು ತತ್ವಪದಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಯ ಅಗತ್ಯವಿದೆ

ಬಾಯಿಲೊಂದು ಆಡ್ತೀರಿ
ಮನಸಿನಾಗೊಂದು ಮಾಡ್ತೀರಿ
ಬರೆದಿಟ್ಟದ್ದು ಓದಿಕೊಂಡು
ಭ್ರಾಂತಿಗೆಟ್ಟು ಹೋಗ್ತೀರಿ//

ಶೀಲವಂತರಂತೀರಿ
ಸುಳ್ಳೇಶೀಲ ಮಾಡ್ತೀರಿ
ಸಂತೆಯೊಳಗಿನ ಲಿಂಗ ಕಟ್ಟಿಕೊಂಡು
ಸತ್ಯನಾಶವಾಗಿ ಹೋಗ್ತೀರಿ //

ಮುಸಲ್ಮಾನರಂತೀರಿ
ತುರ್ತುಸುಂತಿ ಮಾಡ್ತೀರಿ
ಉಸುಲು ಬಿಟ್ಟು ಫಾತೆಕೊಟ್ಟು
ಬಿಸ್ಮಿಲ್ಲಾ ಅಂತ ಹೇಳ್ತೀರಿ //

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬ್ರಾಹ್ಮಣರಂತ ಹೇಳ್ತೀರಿ
ನೀರಾಗ ಮುಳ ಮುಳಗೇಳ್ತೀರಿ
ಪಾಪದಿಂದ ಸುಟ್ಟುಕೊಂಡು
ದೀಪ ಬಡಕೊಂಡು ಹೋಗ್ತೀರಿ //

ಸಾಧುರಂತ ಹೇಳ್ತೀರಿ
ಸೋಹಂ ಭಜನೆ ಮಾಡ್ತೀರಿ
ಅಡ್ಡದುಡ್ಡಿಗೆ ಆಸೆ ಮಾಡಿ
ದಡ್ಡರಾಗಿ ಹೋಗ್ತೀರಿ //

ಪಟ್ಟದ ಚರಮೂರ್ತಿ ಅಂತೀರಿ
ಪರಮಾತ್ಮನ ನೆನೆಯುತೀರಿ
ಪರನಾರಿ ಸ್ನೇಹ ಮಾಡಿ
ಗುಡ್ಡದ ಮಹಾಂತಗ ಹಾಕ್ತೀರಿ //

ಇದು ಕಡಕೋಳ ಮಡಿವಾಳಪ್ಪನ ತತ್ವಪದ. ಎಲ್ಲಾ ಜಾತಿ, ಕುಲ, ಮತ, ಧರ್ಮಗಳ ಒಳ ಪೊಳ್ಳುತನಗಳನ್ನು ನೇರಾನೇರ ಕಿತ್ತಿ ಜಾಡಿಸಿದ ಬಂಡುಖೋರ ಪದವಿದು. ವರ್ತಮಾನ ಭಾರತದ ರಾಜಕೀಯ ಒಳಹೇತುಗಳಿಗೆ ಮದ್ದು ಅರೆಯುವ ಪದ್ಯ ಇದಾಗಿದೆ. ಬಹುತೇಕ ತತ್ವಪದಗಳು ಜಾತಿ, ಮತ, ಧರ್ಮ ನಿರಸನದ ಅವೈದಿಕ ನೆಲೆಯ ತತ್ವ ಸಿದ್ಧಾಂತಗಳನ್ನು ಸರಳ ಮತ್ತು ಸುಂದರವಾಗಿ ನಿರೂಪಿಸುತ್ತವೆ.

ಎಂಥಾ ಕಂಡಾಬಟ್ಟೆ ಸೂಳೆ ಮಕ್ಕಳಿವರೋ
ಕಲ್ಲು ಮಣ್ಣು ದೇವರೆಂದು ಪೂಜೆ ಮಾಡುವರೋ/
ಬಹಳ ಬಲ್ಲಿದರು ಬಂದರೆ ಕೊಲ್ಲು ಎಂಬುವರೋ//

ಮೌಢ್ಯಾಚರಣೆ ವಿರೋಧದ ಮಡಿವಾಳಪ್ಪನ ತತ್ವಪದ ಇದು. ಪ್ರಸ್ತುತ ಭಾರತದ ಅನೇಕ ಅಪಸವ್ಯಗಳ ವಿರುದ್ಧ ವೈಚಾರಿಕ ಪ್ರಜ್ಞೆಯ ಚುರುಕು ಹುಟ್ಟಿಸಿ ಆತ್ಮಸ್ಥೈರ್ಯ ತುಂಬಬಲ್ಲ ಪದವಿದು. ಲೋಕಮನಸು ಮುಟ್ಟಬಲ್ಲ ಇಂತಹ ಸಹಸ್ರಾರು ತತ್ವಪದಗಳನ್ನು ಬರೆದ ತತ್ವಪದಕಾರರು ಕರ್ನಾಟಕದ ಎಲ್ಲ ಕಡೆಗೂ ಆಗಿ ಹೋಗಿದ್ದಾರೆ. ಅವರ ಪದಗಳು ಇಂದಿನ ಮತ್ತು ನಾಳಿನ ಭಾರತದ ಒಳಿತು ಮತ್ತು ತಿಳಿಬಾಳಿನ ಬೆಳಕಾಗಿವೆ. ಅವುಗಳ ಗಂಭೀರ ಅಧ್ಯಯನ ಮತ್ತು ಸಂಶೋಧನಾ ಕಾರ್ಯ ತುರ್ತಾಗಿ ಜರುಗಬೇಕಿದೆ.

ಅಷ್ಟಕ್ಕೂ ಕನ್ನಡ ಸಂಸ್ಕೃತಿಯ ಲೌಕಿಕ ಮತ್ತು ಅಲೌಕಿಕ ಕಸುವನ್ನು ಮೆರೆದುದು ತತ್ವಪದ ಸಾಹಿತ್ಯ. ಪ್ರಪಂಚ ಮತ್ತು ಪಾರಮಾರ್ಥ, ಇಹ ಪರ ಗೆಲ್ಲುವ ‘ಅಚಲ’ಶಕ್ತಿ ತತ್ವಪದಗಳದ್ದು. ಇಂತಹ ತತ್ವಪದ ಸಾಹಿತ್ಯಕ್ಕೆ ಚಾರಿತ್ರಿಕವಾಗಿ ದಕ್ಕಲೇಬೇಕಿದ್ದ ಪ್ರಧಾನ ಸಾಂಸ್ಕೃತಿಕ ಧಾರೆಯ ಸ್ಥಾನಮಾನ ದಕ್ಕಿಲ್ಲ. ಅದಕ್ಕೆ ಬದಲು ತತ್ವಪದ ಸಾಹಿತ್ಯ ಬಾಹುಳ್ಯದ ಕಾಲಮಾನವನ್ನು ಗಂಭೀರವಾಗಿ ಗುರುತಿಸಲಾಗದೇ ಅದೊಂದು ‘ಕತ್ತಲೆಯುಗ’ ಎಂದು ಬಿಂಬಿಸುವ ಬೀಸುನಿರ್ಲಕ್ಷ್ಯ ತೋರಿದುದು ಚಾರಿತ್ರಿಕ ದುರಂತವೇ ಸೈ! ಹೀಗಂತಲೇ ಇವತ್ತಿಗೂ ಅಮಾವಾಸ್ಯೆಯ ಕತ್ತಲು, ಸತ್ತವರ ಮನೆಯ ಹೆಣದ ಸಾನಿಧ್ಯದಲ್ಲಿ ಏಕತಾರಿ ನಾದಗಳ ನಡುವೆ ಅಹೋರಾತ್ರಿ ಕೇಳಿಬರುವ ಭಜನೆ ಪದಗಳವು.

ಇದನ್ನು ಓದಿದ್ದೀರಾ?: ಹೊಸ ಪುಸ್ತಕ | ಹೊಸತಲೆಮಾರಿನ ತರುಣ ತರುಣಿಯರು ಓದಬೇಕಾದ ‘ಗುರುತಿನ ಬಾಣಗಳು’ : ರಹಮತ್ ತರೀಕೆರೆ

ಕಾವ್ಯಮೀಮಾಂಸಕರ ವಿದ್ವತ್ ಲೋಕ ಮರೆತರೇನಂತೆ ಜನಸಾಮಾನ್ಯರ ಮಾನಸ ಲೋಕ ಶತಮಾನಗಳ ಕಾಲ ತತ್ವಪದಗಳನ್ನು ತಮ್ಮ ಜೀವಹೃದಯ, ನಾದನಾಭಿಗಳ ತುಂಬಾ ತುಂಬಿಸಿಕೊಂಡು ಹರಿಗಡಿಯದೇ ಹರಿಸುತ್ತಲೇ ಬಂದಿದೆ. ಅದೊಂದು ಸಹೃದಯತೆಯ ಸುದೀಪ್ತ ಸಂಬಂಧ. ತನ್ಮೂಲಕ ನೆಲಮೂಲದ ಸಹಬಾಳ್ವೆ ಬದುಕಿ ತೋರಿದೆ. ಅಂತೆಯೇ ಲೋಕ ಮೀಮಾಂಸೆ ಎಂಬುದು ಪಂಡಿತರ ಮೀಮಾಂಸೆಗಿಂತ ಹಿರಿದಾದುದು. ಅಷ್ಟುಮಾತ್ರವಲ್ಲ ಅದಕ್ಕೆ ವರ್ತಮಾನದಲ್ಲೂ ಪ್ರಜಾಸತ್ತಾತ್ಮಕ ಹಿರಿಮೆ ಗರಿಮೆಯ ಪಟ್ಟ ಕಟ್ಟಿಟ್ಟ ರೊಟ್ಟಿ ಬುತ್ತಿಯಂತಿದೆ.

ಹಾಡುಗಬ್ಬದ ಮೌಖಿಕ ಸಂಸ್ಕೃತಿಯ ತರಹೇವಾರಿ ಭಜನೆಗಳ ಮೂಲಕ ತತ್ವಪದಗಳನ್ನು ಜನಪದರು ಕಾಪಿಟ್ಟುಕೊಂಡು ಬಂದವರು. ಪ್ರಾಯಶಃ ಈ ಕಾರಣಕ್ಕೆಂದೇ ತತ್ವಪದ ಸಾಹಿತ್ಯವನ್ನು ಜನಪದ ಸಾಹಿತ್ಯ ಪ್ರಾಕಾರಕ್ಕೆ ಸೇರಿರಬಹುದೆಂಬ ಕೆಲವು ಹಳೆಯ ಜಿಜ್ಞಾಸುಗಳ ಅನುಮಾನಗಳು. ಇವತ್ತಿಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಜಾನಪದ ಸಂಗೀತ ಕಾರ್ಯಕ್ರಮದ ಹೆಸರಲ್ಲಿ ತತ್ವಪದಗಳು ಪ್ರಸಾರಗೊಳ್ಳುವುದನ್ನು ಗಮನಿಸಬಹುದು. ಅದೇನೆ ಇರಲಿ ತತ್ವಪದ ಸಂಸ್ಕೃತಿಯು ಸಾಹಿತ್ಯ ಚರಿತ್ರೆಕಾರರ ಅವಜ್ಞೆಗೊಳಗಾದುದು ಸುಳ್ಳಲ್ಲ. ಶಾಸ್ತ್ರೀಯ ಸಂಗೀತದ ಎಲೈಟ್ ಮಂದಿಯ ವೀಣೆ, ತಂಬೂರಿ ತಂತಿನಾದಗಳ ಮೇಲ್ಪಂಕ್ತಿಯ ಭರಾಟೆಯಲ್ಲಿ ತತ್ವಪದ ಭಜನೆಕಾರರ ಕರಿ ಕುಂಬಳಕಾಯಿಯ ಏಕತಾರಿ ತಂತಿನಾದಗಳು ಮುನ್ನೆಲೆಗೆ ಬಾರದಂತಾಗಿ ಬಿಟ್ಟವು. ಖರೇವಂದ್ರ ಲೋಕಕಲ್ಯಾಣಕ್ಕಾಗಿ ಏಕತಾರಿ ನಾದಲೋಕದ ಪರಿಮಳ ಅರಳಬೇಕಿದೆ.

ಬಸವಪ್ರಣೀತ ವಚನ ಚಳವಳಿ ಮತ್ತು ಹರಿದಾಸ ಭಕ್ತಿ ಜಾಗರಣೆಯ ತರುವಾಯ ಸಾಮಾಜಿಕ, ಧಾರ್ಮಿಕ ಮತ್ತು ಅನುಭಾವದ ಅನುಸಂಧಾನದಂತೆ ಗುರುಮಾರ್ಗ, ಗುರುಪಂಥ ಪರಂಪರೆಯ ಜನಸಂಸ್ಕೃತಿ ರೂಪಿಸಿದ್ದು ತತ್ವಪದ ಸಾಹಿತ್ಯ ಚಳವಳಿ. ಧರ್ಮನಿರಪೇಕ್ಷ ನೆಲೆಗೆ ಸೇರಿದ ಇವರದು ಅಪ್ಪಟ ಮನುಷ್ಯ ಪಂಥ. ಬ್ರಾಹ್ಮಣ, ಲಿಂಗಾಯತ, ಮುಸಲ್ಮಾನ, ದಲಿತರಾದಿಯಾಗಿ ಸಮಾಜದ ಬಹುಪಾಲು ಜಾತಿಯ ಐನೂರಕ್ಕು ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ ನಾಡಿನಾದ್ಯಂತ ಬಾಳಿ ಬದುಕಿದ್ದನ್ನು ಮಾಹಿತಿಯೊಂದು ಶೃತಪಡಿಸುತ್ತದೆ. ತತ್ವಪದಕಾರರು ಆಯಾ ಕಾಲದ ಪ್ರಭುತ್ವದ ಅನಾಚಾರ, ಅಹಂಕಾರಗಳಂತಹ ಅನೇಕ ವೈರುಧ್ಯಗಳನ್ನು ಪ್ರಶ್ನಿಸಿ ತಕ್ಷಣವೇ ಪ್ರತಿಭಟನೆಯ ಪದಕಟ್ಟಿ ಹಾಡಿದವರು. ಅಂತೆಯೇ ಅವರು ಭವರೋಗ ವೈದ್ಯರು.

ನಮ್ಮ‌ ಬಹುತೇಕ ವೀರಶೈವ ಹೆಸರಿನ ಪ್ರಕಾಶನಗಳು ವಚನ ಸಾಹಿತ್ಯಕ್ಕೆ ತೋರಿದ ಅದಮ್ಯ ಪ್ರೀತಿಯನ್ನು ತತ್ವಪದ ಸಾಹಿತ್ಯಕ್ಕೆ ತೋರಲಿಲ್ಲ. ಅದರಲ್ಲೊಂದು ಮಠ ವೀರಶೈವ ಪುಣ್ಯಪುರುಷರ ತತ್ವಪದಗಳನ್ನು ಹುಡುಕಿ ಪ್ರಕಟಿಸುವಲ್ಲಿ ಆಸಕ್ತಿ ತೋರಿತು. ಅದಕ್ಕೆ ವೀರಶೈವೇತರರು ಮತ್ತು ಮಹಿಳೆಯರ ಬಗ್ಗೆಯೇ ಅಸಡ್ಡೆತನ ಇದ್ದಂತಿತ್ತು. ಅದೇನೇ ಇದ್ದರೂ ಇದ್ದುದರಲ್ಲೇ ಕೆಲವು ಲಿಂಗಾಯತ ಮಠಗಳು ತತ್ವಪದ ಸಾಹಿತ್ಯಕ್ಕೆ ಮಹತ್ವದ ಸ್ಥಾನ ನೀಡಿ ಪ್ರಕಟಣೆಗೆ ಮುಂದಾಗಿವೆ. ಸಿದ್ಧರಾಮಯ್ಯನವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರಾಷ್ಟ್ರೀಯ ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮೂಲಕ ಮುವತ್ತೆರಡು ತತ್ವಪದಗಳ ಸಂಪುಟಗಳ ಪ್ರಕಟಣೆ ಕಾರ್ಯ ಜರುಗಿತು. ಇನ್ನೂ ಹದಿನೆಂಟು ಸಂಪುಟಗಳು ಪ್ರಕಟಗೊಳ್ಳಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆ ಕೆಲಸ ಪೂರೈಸಲಿ.

ಇದನ್ನು ಓದಿದ್ದೀರಾ?: ಮಹಾತ್ಮ ಗಾಂಧಿ | ಸಂಭಾಷಣೆಯಲ್ಲಿ ರೂಪುಗೊಂಡ ಲೋಕಹಿತ ಚಿಂತಕ

ಇನ್ನೂ ಹತ್ತಾರು ಹಿಂದುಳಿದ ಜಾತಿಯ ನೂರಾರು ಮಹಿಳೆ ಮತ್ತು ಪುರುಷ ತತ್ವಪದಕಾರರ ಸಾವಿರಾರು ತತ್ವಪದಗಳು ಸಾಮಾನ್ಯ ಜನರ ಸಿರಿಕಂಠದಲ್ಲೇ ಉಳಿದುಕೊಂಡಿವೆ. ವಿಶ್ವವಿದ್ಯಾಲಯಗಳ ಕೆಲವು ಪ್ರಾಧ್ಯಾಪಕರ ಪಿಎಚ್.ಡಿ ಮತ್ತು ವಿದ್ವಾಂಸರ ಜ್ಞಾನಾರ್ಜನೆಯ ಹಸಿವು ತೀರಿಕೆಯ ಪುಸ್ತಕ ಸಂಗ್ರಹಗಳಾಗಿ ಪದಗಳು ಆಗಾಗ ಪ್ರಕಟಗೊಳ್ಳುತ್ತಿರುವುದು ಸಹಿತ ಸ್ವಾಗತಾರ್ಹ. ಮತ್ತೆ ಕೆಲವು ತತ್ವಪದ ಮತ್ತು ಸೂಫಿ ಸಂತಲೋಕದ ಮೇಲೆ ಒಳಬೆಳಕು ಚೆಲ್ಲುತ್ತಿರುವುದು ಸಂತಸದ ಸಂಗತಿ. ಇಲಾಖೆಯ ಪ್ರಕಟಿತ ಆ ಎಲ್ಲ ಪುಸ್ತಕಗಳು ಮಾಲಿಕೆ ರೂಪ ಧರಿಸಿದ್ದು ಸಹಜವಾಗಿ ಮಾಲಿಕೆ ಸಂಪಾದಕ ಮಂಡಳಿಯ ಸಾಮಾನ್ಯ ಪ್ರಸ್ತಾವನೆಯ ಏಕರೂಪದ ಸಂಪಾದಕೀಯಗಳು ಪ್ರಕಟಗೊಂಡಿವೆ. ಇದು ಒಂದು ಹಂತದ ಆರಂಭ ಮಾತ್ರ.

ಆದರೆ ತತ್ವಪದಗಳ ನಿಗೂಢ ಅಸ್ಮಿತೆ ಕುರಿತು, ತತ್ವಪದಕಾರರ ಬದುಕು, ಬರಹ, ಸಿದ್ಧಿ ಸಾಧನೆಯ ಅನುಸಂಧಾನಗಳು ಜರುಗಬೇಕು. ಆ ಎಲ್ಲ ಮಹಾ ಪ್ರಸ್ಥಾನಗಳ ಕುರಿತು ಆಮೂಲಾಗ್ರವಾಗಿ ತಿಳಿಯುವ ಕೆಲಸ ಆಗಬೇಕು. ನಾನಾ ಜ್ಞಾನಸಾರ ಶಿಸ್ತು ಮತ್ತು ಅವುಗಳ ಒಳಹೊಳಹುಗಳ ಆಳಗಲದ ಸಂಶೋಧನೆ ಹಾಗೂ ಸಮಗ್ರ ಅಧ್ಯಯನ ಆಗಲೇಬೇಕಿದೆ. ಬಹುಳಪ್ರಜ್ಞೆಯ ಜೀವಧಾತುವುಳ್ಳ ತತ್ವಪದಗಳು ಬಹುಮುಖಿ ಭಾರತ ಮತ್ತು ಕರ್ನಾಟಕದ ವರ್ತಮಾನಕ್ಕೆ ಅತ್ಯಗತ್ಯವಾಗಿವೆ. ಶಿಶುನಾಳ ಶರೀಫನ ಖಾದರಲಿಂಗ ಪ್ರಜ್ಞೆ ಮತ್ತು ಕಡಕೋಳ ಮಡಿವಾಳಪ್ಪನ ಜೀತಪೀರ ಮಹಾಂತ ಪ್ರಜ್ಞೆಗಳು ಇಂದಿನ ತುರ್ತುಅಗತ್ಯ. ಕೋಮು ಸೌಹಾರ್ದತೆ, ಪರಿಣಾಮಕಾರಿ ಭಾವೈಕ್ಯತೆ ಬಿತ್ತಿ ಬೆಳೆಯುವ ಬೀಜಪೈರಿನ ಜವಾರಿಗುಣ ಅವಕ್ಕಿದೆ. ಅಂತೆಯೇ ಕನ್ನಡದ ಈ ತತ್ವಪದಗಳು ಭಾರತದ ಎಲ್ಲ ಭಾಷೆಗಳಿಗೂ ತರ್ಜುಮೆಗೊಂಡು ಆಯಾ ಭಾಷೆಯಲ್ಲಿ ಓದುಗಳಾಗುವುದು ವಾಜಿಮಿ. ತತ್ವಪದಗಳ ಅಧ್ಯಯನ ಪೀಠ ರಚನೆಯ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಗುಲಬರ್ಗಾ ವಿವಿಯಲ್ಲಿ ಹತ್ತಾರು ಅಧ್ಯಯನ ಪೀಠಗಳಿದ್ದು ಅವುಗಳ ಹೆಸರುಗಳು ಸಹಿತ ನೆನಪಿರದಷ್ಟು ಅವುಗಳು ನಿಷ್ಕ್ರಿಯಗೊಂಡಿವೆ. ಅಧ್ಯಯನ ಪೀಠ ಮತ್ತು ವಿವಿಗಳೇ ಮುಚ್ಚಿಹೋಗುವ ಸ್ಥಿತಿಯಲ್ಲಿದ್ದು ಅವುಗಳ ಅಗತ್ಯವಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಗಾವಣೆಯ ಪ್ರಾಧಿಕಾರ ಸ್ಥಾಪನೆಯಾಗಲಿ.

ಇದನ್ನು ಓದಿದ್ದೀರಾ?: ʼಗೋದಿ ಮೀಡಿಯಾʼ ಅಂದ್ರೇನು? ಇಲ್ಲಿದೆ ನೋಡಿ

ತತ್ವಪದಕಾರರಲ್ಲೇ ಕಡಕೋಳ ಮಡಿವಾಳಪ್ಪನಿಗೆ ಅಗ್ರಮಾನ್ಯ ಸ್ಥಾನ. ಅಂತೆಯೇ ವಿದ್ವಾಂಸರು ಮಡಿವಾಳಪ್ಪನನ್ನು ಅನುಭಾವದ ಹರಿಕಾರನೆಂತಲೂ, ತತ್ವಪದಗಳ ಅಲ್ಲಮನೆಂತಲೂ ಕರೆದಿದ್ದಾರೆ. ಕಲ್ಯಾಣ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಕಡಕೋಳ ಮಡಿವಾಳಪ್ಪನವರ ಶಿಷ್ಯರು ಬಾಳಿ ಬದುಕಿದ್ದಾರೆ. ಸಮಾಜದ ಎಲ್ಲ ಮತ ಪಂಥಕ್ಕೆ ಸೇರಿದವರಾದ ಇವರ ಶಿಷ್ಯರು ಕೂಡಾ ತತ್ವಪದಕಾರರಾಗಿದ್ದಾರೆ.

ಶಿವರಾಜ ತಂಗಡಗಿ-ಸಿದ್ದರಾಮಯ್ಯ

ಪ್ರಯುಕ್ತ ಕರ್ನಾಟಕದ ಸಮಗ್ರ ತತ್ವಪದಗಳ ಹಾಗೂ ತತ್ವಪದಕಾರರ ಕುರಿತು ಆಳದ ಸಂಶೋಧನೆ ಸಮಗ್ರ ಅಧ್ಯಯನಕ್ಕಾಗಿ ಮತ್ತು ತತ್ವಪದಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆಯಾಗಬೇಕು. ಮಡಿವಾಳಪ್ಪನ ಕರ್ಮಭೂಮಿಯಾದ ಕಲ್ಯಾಣ ಕರ್ನಾಟಕದ ಕಲಬುರ್ಗಿ ಪರಿಸರದಲ್ಲಿ “ಸೂಫಿ ಮತ್ತು ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ” ರಚನೆ ಮಾಡಬೇಕು. ಇಲ್ಲವೇ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮಾದರಿಯ ಕೇಂದ್ರವನ್ನಾದರೂ ಸ್ಥಾಪನೆ ಮಾಡುವ ಅಗತ್ಯವಿದೆ. ಪ್ರಸ್ತುತ ಮುಂಗಡ (ಬಜೆಟ್) ಪತ್ರದಲ್ಲಿ ಪ್ರಾಧಿಕಾರ ಸ್ಥಾಪನೆಯ ವಿಚಾರ ಮಂಡನೆಯಾಗಲಿ. ರಾಯಚೂರಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಕಡೆ ಜರುಗಿದ ಸಾಹಿತ್ಯ ಸಮ್ಮೇಳನಗಳಲ್ಲಿ ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರದ ಬೇಡಿಕೆ ಪ್ರಸ್ತಾಪ ಆಗಿರುವುದು ಉಲ್ಲೇಖನೀಯ. ಇಂತಹ ಸಾಂಸ್ಕೃತಿಕ ಪ್ರಾಧಿಕಾರದ ಮೂಲಕ ಕನ್ನಡ ಸೇರಿದಂತೆ ಉರ್ದು, ತೆಲುಗು, ಮರಾಠಿ ಭಾಷಿಕ ಮತ್ತು ಧಾರ್ಮಿಕ ಸಾಮರಸ್ಯದ ಆಡುಂಬೊಲವೇ ಆಗಿರುವ ಕರ್ನಾಟಕದ ಸೌಹಾರ್ದ ಬದುಕು ನಿರಂತರಗೊಳ್ಳಲಿ.

ಮಲ್ಲಿಕಾರ್ಜುನ ಕಡಕೋಳ
+ posts

ಸಾಹಿತಿ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ನೀತಿ ಸಂಹಿತೆ ನೆಪದಲ್ಲಿ ನೀಲಿ ಬಾವುಟ ತೆರವು; ಕೇಸರಿ ಬಿಟ್ಟಿದ್ದೇಕೆ ಎಂದಾಗ ರಾತ್ರೋರಾತ್ರಿ ಮರುಸ್ಥಾಪನೆ

ಆರಂಭದಲ್ಲಿ ನೆಪ ಹೇಳುತ್ತಿದ್ದ ಪಿಡಿಓಗೆ, ಜನರ ಜೈಭೀಮ್ ಘೋಷಣೆಗಳು ಅಪ್ಪಳಿಸಿದವು... ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯಂದು...

ಅಂಬೇಡ್ಕರರ ಪ್ರಬುದ್ಧ ಭಾರತ ಮತ್ತು ಮೋದಿಯವರ ವಿಕಸಿತ ಭಾರತ

ರಾಜಕೀಯ ಸ್ವಾತಂತ್ರ್ಯಕ್ಕಿಂತ ಸ್ವತಂತ್ರ ಭಾರತದಲ್ಲಿ ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಪ್ರಜಾಸತ್ತೆಗಳನ್ನು...

ಹಿಂದುತ್ವಕ್ಕೆ ಬಲಿಯಾದ ಕುಲಾಲ ಮತ್ತು ಸಣ್ಣ ಸಮುದಾಯಗಳ ಪ್ರಾತಿನಿಧ್ಯ!

ಬಿಜೆಪಿ ಮತ್ತು ಸಂಘಪರಿವಾರದಲ್ಲಿ ಕುಂಬಾರ/ಕುಲಾಲ್/ಮೂಲ್ಯ ಸಮುದಾಯಗಳ ಯುವಕರು ಇದ್ದರೂ ಅವರಿಗೆ ರಾಜಕೀಯ...

ಅಂಬೇಡ್ಕರ್ ವಿಶೇಷ | ಭಾರತೀಯರೆಲ್ಲರೂ ಗೌರವಿಸಲೇಬೇಕಾದ ಮೇರುವ್ಯಕ್ತಿತ್ವ- ಬಾಬಾ ಸಾಹೇಬ್ ಅಂಬೇಡ್ಕರ್

ಬಾಬಾ ಸಾಹೇಬ್ ಅವರಲ್ಲದೆ ಬೇರೆಯವರು ನಮ್ಮ ಸಂವಿಧಾನ ರಚಿಸಿದ್ದರೆ ಭಾರತ ಹೇಗಿರುತ್ತಿತ್ತು...