- ಉದ್ಯಮಗಳು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಗೆ ದಾರಿ
- ಕಳೆದ 1 ವರ್ಷದಿಂದ 24/7 ಹೋಟೆಲ್ ತೆರೆಯಲು ಮನವಿ
ರಾಜಧಾನಿ ಬೆಂಗಳೂರಿನಲ್ಲಿ ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ನಿಟ್ಟಿನಲ್ಲಿ 24/7 ಹೋಟೆಲ್ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ಬಿಬಿಎಚ್ಎ) ಸರ್ಕಾರಕ್ಕೆ ಮನವಿ ಮಾಡಿದೆ.
ಕಳೆದ ಒಂದು ವರ್ಷದಿಂದ ಬಿಬಿಎಚ್ಎ 24/7 ಹೋಟೆಲ್ಗಳನ್ನು ತೆರೆಯಲು ಮನವಿ ಮಾಡುತ್ತಿದ್ದು, ಈ ಬಾರಿ ನೂತನ ಸರ್ಕಾರಕ್ಕೆ ಹಾಗೂ ಬೆಂಗಳೂರು ಪೊಲೀಸರಿಗೆ ಮನವಿ ಸಲ್ಲಿಸಿದೆ.
“ತಡರಾತ್ರಿ 1ರವರೆಗೆ ಎಲ್ಲ ಹೋಟೆಲ್, ಬೇಕರಿ, ಸ್ವೀಟ್ ಸ್ಟಾಲ್ ಹಾಗೂ ಐಸ್ಕ್ರೀಂ ಪಾರ್ಲರ್ಗಳನ್ನು ತೆರೆದಿಡಬಹುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರವೂ 24/7 ಹೋಟೆಲ್ಗಳನ್ನು ತೆರೆದಿಡಲು ಮಾರ್ಗಸೂಚಿ ನೀಡಿದ್ದರೂ ಪೊಲೀಸ್ ಇಲಾಖೆ ಅನುಮತಿ ನೀಡಿಲ್ಲ” ಎಂದು ಬಿಬಿಎಚ್ಎ ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ.
“ದೇಶದ ಇತರೆ ರಾಜ್ಯಗಳಾದ ತಮಿಳುನಾಡು, ಕೇರಳ, ಗುಜರಾತ್ ಮುಂತಾದ ಕಡೆಗಳಲ್ಲಿ ಈಗಾಗಲೇ 24/7 ಹೋಟೆಲ್ ತೆರೆದಿರಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ಮಾರ್ಗಸೂಚಿ ಹೊರಡಿಸಿವೆ. ಕೇರಳ ಮತ್ತು ತಮಿಳುನಾಡು ಉಚ್ಚನ್ಯಾಯಾಲಯಗಳು ಇದರ ಪರವಾಗಿ ತೀರ್ಪು ನೀಡಿವೆ. ಇದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಲಸೋರ್ ರೈಲು ಅವಘಡ | ಗಾಯಾಳು ಕನ್ನಡಿಗರ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ
“ಹೋಟೆಲ್ 24/7 ತೆರೆದಿರುವುದರಿಂದ ಹಾಲು ಮತ್ತು ದಿನಪತ್ರಿಕೆ ಸರಬರಾಜು ಮಾಡುವವರು, ತರಕಾರಿ, ಹೂವು, ಹಣ್ಣು ಮುಂತಾದವುಗಳನ್ನು ಮಾರ್ಕೆಟ್ಗೆ ತರುವ ರೈತರು ಹಾಗೂ ವ್ಯಾಪಾರಿಗಳು, ಶಿಫ್ಟ್ನಲ್ಲಿ ಕೆಲಸಕ್ಕೆ ಹೋಗುವವರು ಸೇರಿದಂತೆ ಬಹಳಷ್ಟು ಜನಸಾಮಾನ್ಯರು ಇರುತ್ತಾರೆ. ಇವರಿಗೆ ಆಹಾರದ ಅಗತ್ಯತೆ ಇರುತ್ತದೆ. ಇದಲ್ಲದೇ ಬಹಳಷ್ಟು ಪ್ರವಾಸಿಗರು ಬಸ್, ರೈಲು ಮತ್ತು ವಿಮಾನ ಮೂಲಕ ರಾತ್ರಿ ನಗರಕ್ಕೆ ಬಂದಿಳಿಯುವವರಿರುತ್ತಾರೆ. ಅಗತ್ಯ ಸೇವೆ ಒದಗಿಸುವ ಪೊಲೀಸ್, ಆಂಬ್ಯುಲೆನ್ಸ್, ವೈದ್ಯಕೀಯ ಸಿಬ್ಬಂದಿ ಮುಂತಾದವರು ರಾತ್ರಿ ಓಡಾಡುತ್ತಾರೆ. ಇವರಿಗೆಲ್ಲ ಅನುಕೂಲವಾಗಲಿದೆ” ಎಂದು ಹೇಳಿದ್ದಾರೆ.
“ಜನರಿಗೆ ಅಗತ್ಯವಿರುವ ಕುಡಿಯುವ ನೀರು, ಶೌಚಾಲಯಗಳನ್ನು ಉಚಿತವಾಗಿ ಪೂರೈಸುವುದರಿಂದ ಸಹಕಾರಿಯಾಗಲಿದೆ. ಇದರಿಂದ ಹೊಸ ಉದ್ಯಮಗಳು ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿವೆ” ಎಂದು ತಿಳಿಸಿದ್ದಾರೆ.