- ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ
- ವಿಧಾನಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತ ಬೊಮ್ಮಾಯಿ
ಕಾಂಗ್ರೆಸ್ ಗೆ ಅಧಿಕಾರ ನಡೆಸುವ ಪಾತ್ರವನ್ನು ಜನರು ನೀಡಿದ್ದಾರೆ. ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಾವು ಕೆಲಸ ಮಾಡುತ್ತೇವೆ. ಜನ ವಿರೋಧಿ ನೀತಿ, ಯೋಜನೆಗಳನ್ನ ಜಾರಿಗೆ ಮುಂದಾದರೆ, ನಾವು ಸುಮ್ಮನಿರುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು(ಜೂನ್ 5) ಬೆಳಗಾವಿಯಲ್ಲಿ ಪಕ್ಷದ ಮುಖಂಡರ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ವಿಧಾನಸಭೆ ಚುನಾವಣೆಯ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಸೋಲಿನ ಪರಾಮರ್ಶೆ ಮಾಡಿಕೊಂಡು, ಇಂದಿನಿಂದಲೇ ಲೋಕಸಭಾ ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ ಎಂದರು.
ಚುನಾವಣೆಯ ವೇಳೆ ನಾವು ತಡವಾಗಿ ಸೀಟ್ ಅನೌನ್ಸ್ ಮಾಡಿದೆವು. ಹೊಸಬರಿಗೆ ಟಿಕೆಟ್ ಕೊಟ್ಟಿದ್ದು ಸಂಯೋಜನೆ ಆಗಲಿಲ್ಲ. ಸ್ಥಳೀಯವಾಗಿಯೂ ಸಹ ಕೆಲವು ತೊಂದರೆ ಆಗಿದೆ ಎನ್ನುವುದು ನಮ್ಮಗಳ ಅರಿವಿಗೆ ಬಂದಿದೆ ಎಂದು ಬೊಮ್ಮಾಯಿ ಹೇಳಿದರು.
ಸರ್ಕಾರದ ವಿರುದ್ಧ ಕಿಡಿ
ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಹಿಂದಿನ ಅಭಿವೃದ್ಧಿ ಕೆಲಸಗಳನ್ನು ಸ್ಥಗಿತಗೊಳಿಸಬಾರದು. ಹಾಗೆಯೇ ವಿವೇಕ ಯೋಜನೆ ಇವರು ನಿಲ್ಲಿಸಬಾರದು. ಅದು ಬಿಜೆಪಿಯ ಯೋಜನೆ ಅಲ್ಲ. ಇದಕ್ಕಾಗಿ ಈಗಾಗಲೇ ಎಂಟು ಸಾವಿರ ಕೊಠಡಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಏನು ನಿರ್ಣಯ ಮಾಡುತ್ತಾರೆ ನೋಡೋಣ ಎಂದರು.
ಗೋಹತ್ಯೆ ಕಾಯ್ದು ಜಾರಿ ವಿರೋಧ ಕಾಂಗ್ರೆಸ್‌ಗೆ ಆಪತ್ತು
ಗೋಹತ್ಯೆ ನಿಷೇಧ ಕಾಯ್ದೆ ಮರುಪರಿಶೀಲನೆ ಬಗೆಗಿನ ಕಾಂಗ್ರೆಸ್ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಗೋವಿನ ಪವಿತ್ರ ಸಂಬಂಧ ಲೆಕ್ಕಿಸದೇ ಸಚಿವರು ಮಾತನಾಡಿದ್ದಾರೆ. ಅದು ಖಂಡನೀಯ. ನಾವು ತಂದ ಕಾನೂನಿನಲ್ಲಿ ಗೋಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವುದು ಇದೆ. ಗೋಹತ್ಯೆ ನಿಷೇಧ ಕಾಯ್ದೆ 1960 ರಲ್ಲೇ ಬಂದಿರುವಂಥದ್ದು, ಹೀಗಾಗಿ ಅವರೇನು ತಿದ್ದುಪಡಿ ತರುತ್ತಾರೋ ತರಲಿ, ನೋಡೋಣ. ಗೋಹತ್ಯೆ ನಿಷೇಧ ಕಾಯ್ದೆ ಕಾನೂನು ಮುಟ್ಟಿದರೆ ಕಾಂಗ್ರೆಸ್‌ಗೆ ಆಪತ್ತು ಕಾದಂತೆಯೇ ಎಂದರು.
ಕಾಂಗ್ರೆಸ್‌ಗೆ ಅಧಿಕಾರದ ಅಮುಲು
ಗೋಹತ್ಯೆ ನಿಷೇಧ, ಪಠ್ಯ ಪುಸ್ತಕ ಪರಿಷ್ಕರಣೆ, ಸರ್ಕಾರದ ವಿರುದ್ಧ ಮಾತನಾಡಿದರೆ ಜೈಲಿಗೆ ಹಾಕುತ್ತೇವೆ ಎಂಬ ಕೆಲ ಸಚಿವರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮಾಜಿ ಸಿಎಂ, ಈ ಸರ್ಕಾರಕ್ಕೆ ಅಧಿಕಾರದ ಅಮುಲು ಏರಿದೆ.
ಕೆಲ ಸಚಿವರ ಹೇಳಿಕೆ ನೋಡಿದರೆ ಇವರು ವಾಕ್ ಸ್ವಾತಂತ್ರ್ಯ ಮೊಟಕುಗೊಳಿಸುತ್ತಿದ್ದಾರೆ. ನಮ್ಮ ಅಭಿಪ್ರಾಯಕ್ಕೆ ಸಹಮತ ಇಲ್ಲದವರ ಧ್ವನಿಯನ್ನು ಹತ್ತಿಕ್ಕುವ ಪ್ರವೃತ್ತಿಯಲ್ಲಿ ಮಾತನಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಕರ್ನಾಟಕದಲ್ಲಿ ಎಮರ್ಜೆನ್ಸಿ ಬರುತ್ತದೆಯೇನೋ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ?:ಜನರ ಸಮಸ್ಯೆಗೆ ಅಧಿಕಾರಿಗಳಿಂದ ಉಡಾಫೆ ಸಲ್ಲದು: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಅಧಿಕಾರ ದುರುಪಯೋಗ ಮಾಡಿಕೊಳ್ಳಲು ನಿಮಗೆ ರಾಜ್ಯದ ಜನರು ಅಧಿಕಾರ ಕೊಟ್ಟಿಲ್ಲ. ನಾವು ವಿರೋಧ ಪಕ್ಷವಾಗಿ ಸುಮ್ಮನೇ ಕೂರುವುದಿಲ್ಲ. ಯಾರು ಯಾರನ್ನು ಜೈಲಿಗೆ ಹಾಕುತ್ತಿರೋ ಹಾಕಿ. ನಿಮ್ಮ ನೀತಿ, ವರ್ತನೆಗಳ ವಿರುದ್ಧ ಜನರು ತಿರುಗಿ ಬಿದ್ದರೆ ನಿಮಗೆ ಜೈಲುಗಳು ಸಾಕಾಗುವುದಿಲ್ಲ. ತಾಕತ್ತಿನಿಂದ ಮಣಿಸುತ್ತೇವೆಂದರೆ, ನಮ್ಮದೇನು ಇಸ್ಲಾಂ ರಾಷ್ಟ್ರವಲ್ಲ. ಎಮರ್ಜೆನ್ಸಿ ಹೇರಲು ಪ್ರಜಾಪ್ರಭುತ್ವದಲ್ಲಿ ಜನತೆ ಕೈಯಲ್ಲಿ ದೊಡ್ಡ ಶಕ್ತಿಯಿದೆ. ಖಂಡಿತವಾಗಿ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡ ಬೊಮ್ಮಾಯಿ, ನಾಯಕನ ಆಯ್ಕೆಯನ್ನು ಖಂಡಿತವಾಗಿ ಅತಿ ಶೀಘ್ರವೇ ಮಾಡುತ್ತೇವೆ. ಈ ಅಧಿವೇಶನದೊಳಗೆ ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.