ಟ್ರಂಪ್ ಟೀಮ್‌ನಿಂದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಔಟ್ ಆಗಿದ್ದೇಕೆ?

Date:

Advertisements
ಟ್ರಂಪ್ ಟ್ರೂಪ್, ಅಧಿಕಾರ ಸ್ವೀಕರಿಸುವ ದಿನವೇ ಒಡೆದು ಚೂರಾಗಿದೆ. ರಿಪಬ್ಲಿಕನ್ ಪಕ್ಷದೊಳಗೇ ವಲಸೆ ವಿಷಯಕ್ಕೆ ಭಿನ್ನಾಭಿಪ್ರಾಯ ತಲೆದೋರಿದೆ. ಸದ್ಯಕ್ಕೆ ಅಧಿಕಾರದಲ್ಲಿರುವ ಟ್ರಂಪ್ ಕೈ ಮೇಲಾಗಿದೆ, ವಿವೇಕ್ ಎಡಬಿಡಂಗಿಯಾಗಿದ್ದಾರೆ. ಇದು ಅಮೆರಿಕ ಮತ್ತು ಟ್ರಂಪ್ ಕುರಿತು ಇಂಥದ್ದೇ ನಿಲುವು ಹೊಂದಿರುವ ಪ್ರಧಾನಿ ಮೋದಿಯವರಿಗೂ, ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಬಹುದೇ? 

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ ದಿನವೇ, ಅವರ ಆಪ್ತ ಬಳಗದ ವಿವೇಕ್ ರಾಮಸ್ವಾಮಿಯವರನ್ನು ಟ್ರಂಪ್ ಗುಂಪಿನಿಂದ ಹೊರದಬ್ಬಲಾಗಿದೆ. ಇದು ಈಗ ಅಮೆರಿಕದಲ್ಲಷ್ಟೇ ಅಲ್ಲ, ಭಾರತದಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿದೆ.  

ಕಳೆದ ಡಿಸೆಂಬರ್‍‌ನಲ್ಲಿ ನಡೆದ ಅಮೆರಿಕ ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆದ್ದ ನಂತರ, ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಮತ್ತು ದಕ್ಷಿಣ ಆಫ್ರಿಕಾ ಮೂಲದ ಎಲಾನ್ ಮಸ್ಕ್ ಎಂಬ ಇಬ್ಬರು ನಂಬಿಕಸ್ಥರನ್ನು, ಆಪ್ತಕೂಟದಲ್ಲಿ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲ, ಅವರಿಗಾಗಿಯೇ ಸರ್ಕಾರದ ದಕ್ಷತೆಯ ವಿಭಾಗ(Department of Government Efficiency) ಹುಟ್ಟುಹಾಕಿ, ಅದರ ಮುಖ್ಯಸ್ಥರನ್ನಾಗಿಸಿದ್ದರು.

ಅದಷ್ಟೇ ಅಲ್ಲ, ಆ ಹೊಸ ವಿಭಾಗ ಕುರಿತು ಟ್ರಂಪ್, ‘DOGE ಎಂಬ ಹೊಸ ಏಜೆನ್ಸಿಯು ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತುಹಾಕಲು, ಹೆಚ್ಚುವರಿ ನಿಯಮಾವಳಿಗಳನ್ನು ಸರಳಗೊಳಿಸಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಮತ್ತು ಫೆಡರಲ್ ಏಜೆನ್ಸಿಗಳನ್ನು ಪುನರ್ರಚಿಸಲು ಸಹಾಯ ಮಾಡುತ್ತದೆ’ ಎಂದು ವಿವರಿಸಿದ್ದರು. ಅಂದರೆ, ಅದು ಹೊಸ ಸರ್ಕಾರದಲ್ಲಿ ವಹಿಸಲಿರುವ ಪಾತ್ರ ಕುರಿತು, ಅದಕ್ಕೆ ಅರ್ಹರನ್ನು ಆರಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು.

Advertisements

ಆದರೆ, ಟ್ರಂಪ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ಆಪ್ತಕೂಟದ ಆಸಾಮಿ ವಿವೇಕ್ ರಾಮಸ್ವಾಮಿಯನ್ನು ಹೊಸ ಸರ್ಕಾರದಿಂದ ಹೊರಗಿಡಲಾಗಿದೆ. ಆ ತಕ್ಷಣವೇ ಉದ್ಯಮಿ ವಿವೇಕ್ ರಾಮಸ್ವಾಮಿ, ‘ಇನ್ನು ಮುಂದೆ ನಾನು ಸರ್ಕಾರದ ದಕ್ಷತೆಯ ಇಲಾಖೆಯ ಭಾಗವಾಗಿರುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಓಹಿಯೋ ರಾಜ್ಯದ ರಾಜ್ಯಪಾಲ ಹುದ್ದೆಗೆ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ಅಧಿಕಾರಕ್ಕೇರುವ ದಿನವೇ ಟ್ರಂಪ್ ಟ್ರೂಪ್‌ನಲ್ಲಿ ಬಿರುಕು, ಭಿನ್ನಾಭಿಪ್ರಾಯ, ಬಂಡಾಯ- ಎಲ್ಲವೂ ಒಂದೇ ದಿನ ಪ್ರಪಂಚದ ಮುಂದೆ ಅನಾವರಣಗೊಂಡಿದೆ. ಹಾಗೆಯೇ ಅಸಲಿ ಕಾರಣವೇನು ಎನ್ನುವುದು ಎಲ್ಲರಲ್ಲಿ ಕುತೂಹಲ ಕೆರಳಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಟ್ರಂಪ್ ಭಕ್ತರು ಮತ್ತು ಬೆಂಬಲಿಗರು ವಿವೇಕ್ ಮೇಲೆ ಮುಗಿಬಿದ್ದಿದ್ದಾರೆ. ಚಿತ್ರವಿಚಿತ್ರವಾಗಿ ಕಾಮೆಂಟ್ ಪಾಸ್ ಮಾಡುತ್ತಿದ್ದಾರೆ. ವಿವೇಕ್‌ರನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹರಿದು ಚಿಂದಿ ಮಾಡುತ್ತಿದ್ದಾರೆ.

ಅಸಲಿಗೆ ಅದು, ವಿವೇಕ್ ಮೇಲೆ ಬಿದ್ದಿರುವುದಲ್ಲ, ಭಾರತದ ಮೇಲೆ ಬಿದ್ದಿರುವುದು ಎಂದೇ ಭಾವಿಸಬೇಕಾಗಿದೆ. ಹಾಗಾದರೆ, ಡೊನಾಲ್ಡ್ ಟ್ರಂಪ್ ಮತ್ತು ವಿವೇಕ್ ನಡುವೆ ನಡೆದಿರುವುದಾದರೂ ಏನು? ಇದು ಸದ್ಯದ ಕುತೂಹಲಕರ ವಿಷಯ.

ಟ್ರಂಪ್ ಭಕ್ತರ ಪ್ರಕಾರ, ಡಿಸೆಂಬರ್ 26, 2024ರಂದು ಉದ್ಯಮಿ ವಿವೇಕ್ ರಾಮಸ್ವಾಮಿ, ‘ಎಕ್ಸ್’ ಖಾತೆಯಲ್ಲಿ ವಲಸೆ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಒಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಅದು ವಿವೇಕ್ ಒಪ್ಪಿಕೊಂಡಿರುವ ತಮ್ಮದೇ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿತ್ತು. ಅದು ಸಹಜವಾಗಿಯೇ ವಲಸಿಗರಾದ ಭಾರತೀಯರ ಪರವಾಗಿತ್ತು. ಆ ಪೋಸ್ಟನ್ನು ಇಲ್ಲಿಯವರೆಗೆ ಸುಮಾರು 118 ಮಿಲಿಯನ್ ಜನ ನೋಡಿದ್ದಾರೆ, ಲಕ್ಷಗಟ್ಟಲೆ ಜನ ಪ್ರತಿಕ್ರಿಯಿಸಿದ್ದಾರೆ, ಹಂಚಿಕೊಂಡಿದ್ದಾರೆ. ಅದೊಂದು ಪೋಸ್ಟ್ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಟ್ರಂಪ್‌ನ ಬಲಪಂಥೀಯ ಭಕ್ತರು ವಿವೇಕ್‌ರ ವರ್ಣ ಮತ್ತು ವಲಸೆ ಕುರಿತು ಎತ್ತಾಡುತ್ತಿದ್ದಾರೆ. ಟ್ರಂಪ್ ಸರ್ಕಾರದಿಂದ ವಿವೇಕ್‌ರನ್ನು ಹೊರಗಟ್ಟಿದೆ.

ಇದನ್ನು ಓದಿದ್ದೀರಾ?: ಟ್ರಂಪ್‌ 2ನೇ ವರಸೆ | ಇಸ್ರೇಲ್, ಭಾರತದ ವಿಚಾರದಲ್ಲಿ ಅಮೆರಿಕದ ನಡೆಯೇನು?

ಈ ಬಾರಿ ಚುನಾವಣೆಯಲ್ಲಿ ಟ್ರಂಪ್ ಅವರ ಟ್ರಂಪ್ ಕಾರ್ಡೇ ವಲಸೆ ವಿಷಯವಾದ್ದರಿಂದ, ಅದಕ್ಕೆ ಮೂಲ ಅಮೆರಿಕನ್ನರು ಬೆಂಬಲ ವ್ಯಕ್ತಪಡಿಸಿದ್ದರಿಂದ, ಟ್ರಂಪ್ ಅನಾಯಾಸವಾಗಿ ಗೆದ್ದಿದ್ದರು. ಅಂದರೆ ಜನಾಭಿಪ್ರಾಯ ವಲಸೆ ವಿರುದ್ಧವಿತ್ತು, ಟ್ರಂಪ್‌ರ ಘೋಷಣೆಯನ್ನು ಬೆಂಬಲಿಸಿತ್ತು. ಆದರೆ, ಟ್ರಂಪ್‌ರ ಆಪ್ತ ವಿವೇಕ್ ರಾಮಸ್ವಾಮಿ, ತಮ್ಮ ನಾಯಕನ ವಿರುದ್ಧವೇ ಅಭಿಪ್ರಾಯ ರೂಪಿಸಿದ್ದು ಅಸಮಾಧಾನಕ್ಕೆ, ಆಕ್ರೋಶಕ್ಕೆ ಕಾರಣವಾಗಿತ್ತು. ಸರ್ಕಾರದ ಪ್ರತಿಷ್ಠಿತ ಹುದ್ದೆಯಿಂದ ಹೊರದಬ್ಬಲು ಪ್ರೇರಣೆ ನೀಡಿತ್ತು.  

ಯಾರು ಈ ವಿವೇಕ್ ರಾಮಸ್ವಾಮಿ?

70ರ ದಶಕದಲ್ಲಿ ಕೇರಳದಿಂದ ಅಮೆರಿಕಕ್ಕೆ ವಲಸೆಹೋದ ರಾಮಸ್ವಾಮಿಯ ಪೋಷಕರು ಜನರಲ್ ಎಲೆಕ್ಟ್ರಿಕ್‌ನಲ್ಲಿ ಎಂಜಿನಿಯರ್ ಮತ್ತು ವಕೀಲರಾಗಿದ್ದರು. ಓಹಿಯೋನ ಸಿನ್ಸಿನಾಟಿಯಲ್ಲಿ 1985ರಲ್ಲಿ ಜನಿಸಿದ ವಿವೇಕ್ ರಾಮಸ್ವಾಮಿ, ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಜೀವಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಯೇಲ್ ಕಾನೂನು ಶಾಲೆಯಲ್ಲಿ ಅಧ್ಯಯನ ಮಾಡಿದರು. ಹೆಡ್ಜ್ ಫಂಡ್‌ಗಳು ಮತ್ತು ಔಷಧೀಯ ಸಂಶೋಧನೆಯಲ್ಲಿ ಅಪಾರ ಹಣ ಗಳಿಸಿದರು. 2014ರಲ್ಲಿ, ವಿವೇಕ್ 29 ವರ್ಷದವನಿದ್ದಾಗ, ರೋವಂಟ್ ಸೈನ್ಸಸ್ ಎಂಬ ಔಷಧೀಯ ಕಂಪನಿಯನ್ನು ಪ್ರಾರಂಭಿಸಿದರು.

2023ರ ಹೊತ್ತಿಗೆ ವಿವೇಕ್ ರಾಮಸ್ವಾಮಿ ಅಮೆರಿಕದ ಬಹುದೊಡ್ಡ ಉದ್ಯಮಿಯಾಗಿ ಪರಿವರ್ತನೆ ಹೊಂದಿದ್ದರು. ರಿಪಬ್ಲಿಕನ್ ಪಕ್ಷ ಸೇರಿ ದೇಶವನ್ನಾಳುವ ರಾಜಕೀಯ ನಾಯಕನಾಗಬೇಕೆಂದು ಬಯಸಿದ್ದರು. 2024ರ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿದ್ದರು. ಅಧ್ಯಕ್ಷೀಯ ಭಾಷಣಗಳಲ್ಲಿ ಕ್ರಾಂತಿಕಾರಿ ವಿಚಾರಗಳತ್ತ ಗಮನ ಹರಿಸಿ, ಜನನಾಯಕನಾಗಿ ರೂಪುಗೊಳ್ಳತೊಡಗಿದ್ದರು.

ಆದರೆ, ಜನವರಿ 2024ರಲ್ಲಿ ಇದ್ದಕ್ಕಿದ್ದಂತೆ ತಮ್ಮ ಪ್ರಚಾರವನ್ನು ಸ್ಥಗಿತಗೊಳಿಸಿ, ಅಂತಿಮವಾಗಿ ವಿಜೇತ ಡೊನಾಲ್ಡ್ ಟ್ರಂಪ್ ಅನ್ನು ಅನುಮೋದಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್, ಅದಕ್ಕೆ ಪ್ರತಿಫಲವಾಗಿ ರಾಮಸ್ವಾಮಿ ಮತ್ತು ಎಲಾನ್ ಮಸ್ಕ್ ರನ್ನು ಅಕ್ಕ-ಪಕ್ಕ ಇಟ್ಟುಕೊಂಡರು. ಸೆಕೆಂಡ್ ಕ್ಯಾಬಿನೆಟ್ ಎಂದು ಗೌರವ ತೋರಿದರು. ಸಾಲದು ಎಂದು ಸರ್ಕಾರದ ದಕ್ಷತೆಯ ವಿಭಾಗದ ಮುಖ್ಯಸ್ಥರನ್ನಾಗಿ ಘೋಷಿಸಿದರು. ಅದಕ್ಕೆ ಪ್ರತಿಯಾಗಿ ವಿವೇಕ್ ರಾಮಸ್ವಾಮಿಯವರು, ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕಾವನ್ನು ಇನ್ನಷ್ಟು ಸದೃಢಗೊಳಿಸುವ ಕೆಲಸಕ್ಕೆ ನಾವೆಲ್ಲಾ ಕೈಜೋಡಿಸಬೇಕಿದೆ ಎಂದರು ಕರೆ ಕೊಟ್ಟರು.

musk trump 1

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ವಿವೇಕ್ ಕಟ್ಟಾ ಬಲಪಂಥೀಯರಾಗಿದ್ದರು. ಸರ್ವಾಧಿಕಾರಿ ಟ್ರಂಪ್‌ರ ತಿಕ್ಕಲುಗಳನ್ನು ಒಪ್ಪಿ, ಅವರ ಭಕ್ತರಾಗಿದ್ದರು. ಟ್ರಂಪ್‌ರಿಂದ ಭಾರತೀಯರಿಗೆ ತೊಂದರೆ ಉಂಟಾಗುತ್ತದೆ ಎಂದು ಗೊತ್ತಿದ್ದರೂ, ಅಧಿಕಾರ ಮತ್ತು ಹಣಕ್ಕಾಗಿ ಟ್ರಂಪ್‌ರನ್ನು ಓಲೈಸತೊಡಗಿದ್ದರು. ಟ್ರಂಪ್ ಕೂಡ ವಿವೇಕ್‌ ಮತ್ತು ಎಲಾನ್ ಮಸ್ಕ್‌ರನ್ನು ಹಿಂದಿಟ್ಟುಕೊಂಡು, ದೊಡ್ಡಣ್ಣನಂತೆಯೇ ದುರಹಂಕಾರದಿಂದ ವರ್ತಿಸುತ್ತಿದ್ದರು.

ಹೀಗಿದ್ದ ಟ್ರಂಪ್ ಟ್ರೂಪ್, ಅಧಿಕಾರ ಸ್ವೀಕರಿಸುವ ದಿನವೇ ಒಡೆದು ಚೂರಾಗಿದೆ. ರಿಪಬ್ಲಿಕನ್ ಪಕ್ಷದೊಳಗೇ ವಲಸೆ ವಿಷಯಕ್ಕೆ ಭಿನ್ನಾಭಿಪ್ರಾಯ ತಲೆದೋರಿದೆ. ಸದ್ಯಕ್ಕೆ ಅಧಿಕಾರದಲ್ಲಿರುವ ಟ್ರಂಪ್ ಕೈ ಮೇಲಾಗಿದೆ, ವಿವೇಕ್ ಎಡಬಿಡಂಗಿಯಾಗಿದ್ದಾರೆ. ಇದು ಅಮೆರಿಕ ಮತ್ತು ಟ್ರಂಪ್ ಕುರಿತು ಇಂಥದ್ದೇ ನಿಲುವು ಹೊಂದಿರುವ ಪ್ರಧಾನಿ ಮೋದಿಯವರಿಗೂ, ಭಾರತಕ್ಕೂ ಎಚ್ಚರಿಕೆಯ ಗಂಟೆಯಾಗಬಹುದೇ?

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯರು ಸೇರಿ 5.5 ಕೋಟಿ ವಿದೇಶಿಗರ ವೀಸಾಗಳ ಮರು ಪರಿಶೀಲನೆಗೆ ಟ್ರಂಪ್ ಆಡಳಿತ ನಿರ್ಧಾರ

ಅಮೆರಿಕಾದಲ್ಲಿ ವೀಸಾ ಹೊಂದಿರುವ 5.5 ಕೋಟಿ ವಿದೇಶಿಗರನ್ನು ಅವರ ದಾಖಲೆಗಳಲ್ಲಿ ಯಾವುದೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಹಿಂಸಾಚಾರ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಜಾಮೀನು

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್‌ಗೆ ಮೇ 9, 2023ರ ಹಿಂಸಾಚಾರ...

Download Eedina App Android / iOS

X