ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದ ನಂತರ ಸಾವಿರಾರು ಜನರು ತಮ್ಮ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ ಎಂಬ ಆರೋಪವನ್ನು ಭಾರತೀಯ ರೈಲ್ವೆಯ ಟಿಕೆಟ್ ಬುಕಿಂಗ್ ಸಂಸ್ಥೆಯಾದ ಐಆರ್‌ಸಿಟಿಸಿ ನಿರಾಕರಿಸಿದೆ.
ಅಪಘಾತದ ನಂತರ ರೈಲಿನಲ್ಲಿ ಪ್ರಯಾಣಿಸುವುದು ಸುರಕ್ಷಿತವಲ್ಲ ಎಂದು ಭಾವಿಸಿ ಅನೇಕ ಜನರು ತಮ್ಮ ರೈಲು ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ ಎಂದು ಕೆಲವು ರಾಜಕೀಯ ನಾಯಕರು ಆರೋಪಿಸಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ರೈಲ್ವೆಯ ಟಿಕೆಟ್ ಬುಕಿಂಗ್ ಸಂಸ್ಥೆಯ ಏಕೈಕ ವೆಬ್‌ಸೈಟ್ ಆಗಿರುವ ಐಆರ್‌ಸಿಟಿಸಿ, ದೇಶದಲ್ಲಿ ರೈಲ್ವೆಯ ಟಿಕೆಟ್ ರದ್ದತಿ ಪ್ರಮಾಣ ಈ ಘಟನೆಯ ಬಳಿಕ ಏರಿಕೆಯಾಗಿಲ್ಲ. ಬದಲಾಗಿ ಇಳಿಕೆಯಾಗಿದೆ. ಅಲ್ಲದೆ ಎಷ್ಟು ಪ್ರಮಾಣದ ಟಿಕೆಟ್ ರದ್ದತಿ ಇಳಿಕೆಯಾಗಿದೆ ಎನ್ನುವ ಮಾಹಿತಿಯನ್ನೂ ಟ್ವೀಟ್‌ನಲ್ಲಿ ನೀಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜದ್ರೋಹದ ಕಾನೂನನ್ನು ಬಲಪಡಿಸಬೇಕೆಂಬ ಶಿಫಾರಸು ಅನಾಹುತಕಾರಿ
ರೈಲ್ವೆ ಟಿಕೆಟ್ ರದ್ದತಿ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಆದರೆ, ಮತ್ತಷ್ಟು ಕಡಿಮೆಯಾಗಿದೆ. 2023ರ ಜೂನ್ 1 ರಂದು ಸಾರ್ವಜನಿಕರು 7.7 ಲಕ್ಷ ಟಿಕೆಟ್‌ಗಳನ್ನು ರದ್ದು ಮಾಡಿದ್ದರೆ, ಅದೇ 2023ರ ಜೂನ್ 3 ರಂದು ಈ ಪ್ರಮಾಣ 7.5 ಲಕ್ಷಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದೆ.
ಶುಕ್ರವಾರ ಸಂಜೆ ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳು ಡಿಕ್ಕಿಯಾಗಿ ಕನಿಷ್ಠ 278 ಜನರು ಸಾವನ್ನಪ್ಪಿದ್ದಾರೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬೆಂಗಳೂರು – ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್ – ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು. ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅದರ ಬಹುತೇಕ ಬೋಗಿಗಳು ಹಳಿತಪ್ಪಿದವು. ಅದೇ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು – ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಕೋಚ್‌ಗಳ ಮೇಲೆ ಕೋರಮಂಡಲ್‌ನ ಕೆಲವು ಬೋಗಿಗಳು ಉರುಳಿದವು.