ವಲಸಿಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಅಮೆರಿಕ ಸರ್ಕಾರದ ನೀತಿಯ ಬಗ್ಗೆ ಬ್ರೆಜಿಲ್ ಆಡಳಿತ ಆಕ್ರೋಶ ವ್ಯಕ್ತಪಡಿಸಿದೆ. ಅಮೆರಿಕದಿಂದ ಹತ್ತಾರು ಮಂದಿಯನ್ನು ಗಡಿಪಾರು ಮಾಡಿದ ನಂತರ ಬ್ರೆಜಿಲ್ ಸರ್ಕಾರವು ಡೊನಾಲ್ಡ್ ಟ್ರಂಪ್ ಆಡಳಿತದಿಂದ ವಿವರಣೆಯನ್ನು ಕೋರುವುದಾಗಿ ತಿಳಿಸಿದೆ.
ಅಮೆರಿಕದ ಈ ಕೃತ್ಯದ ಬಗ್ಗೆ ಬ್ರೆಜಿಲ್‌ನ ವಿದೇಶಾಂಗ ಸಚಿವಾಲಯವು ವಲಸಿಗರನ್ನು ನಡೆಸಿಕೊಳ್ಳುತ್ತಿರುವ ಬಗೆಯು “ಮಾನವ ಹಕ್ಕುಗಳ ಘೋರ ನಿರ್ಲಕ್ಷ್ಯ” ಎಂದು ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣವಾದ ವಲಸೆ ವಿರೋಧಿ ಕಾರ್ಯಸೂಚಿಯೊಂದಿಗೆ ಲ್ಯಾಟಿನ್ ಅಮೆರಿಕದ ದೇಶಗಳ ವಿರುದ್ಧ ಹಿಡಿತ ಸಾಧಿಸುತ್ತಿರುವಾಗ ಈ ಬೆಳವಣಿಗೆ ನಡೆದಿದೆ. ಡೊನಾಲ್ಡ್ ಟ್ರಂಪ್ ಒಂದು ವಾರದ ಹಿಂದೆ ಅಧಿಕಾರಕ್ಕೆ ಮರಳಿದ ನಂತರ, ಗ್ವಾಟೆಮಾಲಾ ಮತ್ತು ಬ್ರೆಜಿಲ್‌ನಂತಹ ವಿವಿಧ ದೇಶಗಳ ಅಕ್ರಮ ವಲಸಿಗರನ್ನು ವಿಮಾನಗಳ ಮೂಲಕ ಸಾಮೂಹಿಕ ಗಡಿಪಾರು ಮಾಡುವ ಮೂಲಕ ದಮನಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಒಂದು ದಿನದ ಹಿಂದೆ ವಿಮಾನವೊಂದು ಬ್ರೆಜಿಲ್‌ನ ಉತ್ತರದ ನಗರವಾದ ಮನೌಸ್‌ನಲ್ಲಿ ಬಂದಿಳಿದಾಗ, ವಿಮಾನದಲ್ಲಿದ್ದ 88 ಬ್ರೆಜಿಲಿಯನ್ನರು ಕೈಕೋಳದಲ್ಲಿ ಇರುವುದನ್ನು ಅಲ್ಲಿನ ಅಧಿಕಾರಿಗಳು ಗಮನಿಸಿದರು. ತಕ್ಷಣ ಕೈಕೋಳವನ್ನು ಬಿಡಿಸಲು ಅಮೆರಿಕದ ಅಧಿಕಾರಿಗಳಿಗೆ ಆದೇಶಿಸಿದರು ಎಂದು ಬ್ರೆಜಿಲ್‌ನ ನ್ಯಾಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?
ಬ್ರೆಜಿಲ್‌ನ ನ್ಯಾಯ ಸಚಿವ ರಿಕಾರ್ಡೊ ಲೆವಾಂಡೋವ್ಸ್ಕಿ ಅವರು ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ “ನಮ್ಮ ದೇಶದ ನಾಗರಿಕರನ್ನು ಮೂಲಭೂತ ಹಕ್ಕುಗಳಿಂದ ಸ್ಪಷ್ಟವಾಗಿ ನಿರ್ಲಕ್ಷಿಸಿದ್ದಾರೆ” ಎಂದು ವಿವರಣೆ ನೀಡಿದ್ದಾರೆ.
ಶುಕ್ರವಾರ ರಾತ್ರಿ ವಿಮಾನದಲ್ಲಿ ಆಗಮಿಸಿದ ಬ್ರೆಜಿಲ್ ಪ್ರಯಾಣಿಕರನ್ನು ನಡೆಸಿಕೊಂಡ ಬಗ್ಗೆ ಅಲ್ಲಿನ ವಿದೇಶಾಂಗ ಸಚಿವಾಲಯವು ಅಮೆರಿಕ ಸರ್ಕಾರದಿಂದ ವಿವರಣೆಯನ್ನು ಕೋರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಮೆರಿಕದ ವಿಮಾನದಿಂದ ಆಗಮಿಸಿದ ಬ್ರೆಜಿಲ್‌ನ 31 ವರ್ಷದ ಕಂಪ್ಯೂಟರ್ ತಂತ್ರಜ್ಞ ಎಡ್ಗರ್ ಡಾ ಸಿಲ್ವಾ ಮೌರಾ ತಮಗಾದ ಕಿರುಕುಳವನ್ನು ವಿವರಿಸಿದರು. ಗಡಿಪಾರು ಮಾಡುವ ಮೊದಲು ಅವರನ್ನು 7 ತಿಂಗಳುಗಳ ಕಾಲ ಅಮೆರಿಕದಲ್ಲಿ ಬಂಧನದಲ್ಲಿಡಲಾಗಿತ್ತು. ವಿಮಾನದಲ್ಲಿ ಅಧಿಕಾರಿಗಳು ನಮಗೆ ನೀರು ನೀಡಲಿಲ್ಲ, ನಮ್ಮ ಕೈಕಾಲುಗಳನ್ನು ಬಂಧಿಸಲಾಗಿತ್ತು. ಶೌಚಕ್ಕೂ ಹೋಗಲು ಬಿಡಲಿಲ್ಲ. ಈ ರೀತಿ ನಡೆಸಿಕೊಂಡ ಕಾರಣದಿಂದ ಕೆಲವರು ಮೂರ್ಛೆ ಹೋದರು ಎಂದು ತಿಳಿಸಿದರು.
ಪ್ರಯಾಣಿಕರ ಕ್ಯಾಬಿನ್‌ನಲ್ಲಿ ಎಸಿ ಹಾಕದೆ 4 ಗಂಟೆಗಳ ಕಾಲ ಕರೆದುಕೊಂಡು ಬಂದ ಕಾರಣ ನಮಗೆ ಉಸಿರಾಟದ ತೊಂದರೆ ಉಂಟಾಯಿತು. ವಲಸಿಗರನ್ನು ಟ್ರಂಪ್ ಸರ್ಕಾರ ಅಪರಾಧಿಗಳು ಎಂದು ಪರಿಗಣಿಸಿದೆ ಎಂದು ಮತ್ತೊಬ್ಬ ಪ್ರಯಾಣಿಕರು ತಮ್ಮ ನೋವನ್ನು ವಿವರಿಸಿದರು.
ಈ ವಾರ ಗ್ವಾಟೆಮಾಲಾಕ್ಕೆ ಅಮೆರಿಕ 265 ವಲಸಿಗರನ್ನು ವಾಪಸ್ ಕಳಿಸಿದೆ. ವಲಸಿಗರನ್ನು ಕಳುಹಿಸಲು ಟ್ರಂಪ್ ಸರ್ಕಾರ ಮಿಲಿಟರಿ ವಿಮಾನಗಳನ್ನು ಬಳಸುತ್ತಿದೆ.
ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಅಂಕಿಅಂಶಗಳ ಪ್ರಕಾರ, ಅಮೆರಿಕದಲ್ಲಿ ಅಂದಾಜು 1.1 ಕೋಟಿ ದಾಖಲೆರಹಿತ ವಲಸಿಗರು ಇದ್ದಾರೆ ಎನ್ನಲಾಗಿದೆ.
