ವಿವಾಹೇತರ ಸಂಬಂಧದ ಕಾರಣಕ್ಕೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಅಮಾನವೀಯ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿಯು ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮೃತ ವ್ಯಕ್ತಿಯ ಕುಟುಂಬಸ್ಥರು, “ಈ ಸಾವಿಗೆ ಕಾರಣ, ಈಕೆಯೇ ಮಹಿಳೆ” ಎಂದು ಅನುಮಾನ ಪಟ್ಟು ಈ ರೀತಿ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮರಕ್ಕೆ ಕಟ್ಟಿ ಹಲ್ಲೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳ ಮೂಲಕ ತಡವಾಗಿ ಬೆಳಕಿಗೆ ಬಂದಿದೆ. ಆ ದೃಶ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಇದ್ದರೂ ಯಾರು ಕೂಡ ಕಾಪಾಡುವುದಕ್ಕೆ ಮುಂದಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಈ ಕುರಿತು ಆಕ್ರೋಶವೂ ವ್ಯಕ್ತವಾಗುತ್ತಿದೆ.
ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಿದ್ದರೂ ತಮಗೆ ಸಂಬಂಧವಿಲ್ಲದಂತೆ ವರ್ತಿಸಿದರು ಎಂದು ಸ್ಥಳೀಯರೊಬ್ಬರು ‘ಈದಿನ.ಕಾಂ’ಗೆ ಮಾಹಿತಿ ನೀಡಿದ್ದಾರೆ. ಜಾಲಹಳ್ಳಿ ಗ್ರಾಮದಲ್ಲಿ ಸಣ್ಣ ಗಲಾಟೆಯಾದರೂ ಪೊಲೀಸರಿಗೆ ಮಾಹಿತಿ ಇರುತ್ತದೆ. ಆದರೆ ಇಂತಹ ಕೃತ್ಯ ಘಟಿಸಿದರೂ ಯಾಕೆ ಅವರು ಆಗಮಿಸಿಲ್ಲ ಎಂದು ಪ್ರಶ್ನಿಸಿದರು.
“ವಿಡಿಯೋ ಮಾಡುವುದಕ್ಕೆ ಯಾರಾದರೂ ಮುಂದಾದರೆ ಅವರ ಮೇಲೆಯೂ ಹಲ್ಲೆ ಮಾಡುವ ಸಾಧ್ಯತೆ ಇತ್ತು” ಎಂದು ಅವರು ಅಂದಿನ ಘಟನೆಯನ್ನು ವಿವರಿಸಿದ್ದಾರೆ.
