ದೇಶದ ಶೇ. 80ರಷ್ಟು ಸಂಪತ್ತು ಕೇವಲ ಶೇ. 20ರಷ್ಟಿರುವ ಮೇಲ್ವರ್ಗದವರ ಬಳಿ ಶೇಖರಣೆಗೊಂಡಿದೆ. ಶೇ. 80ರಷ್ಟಿರುವ ಅಹಿಂದ ವರ್ಗಗಳ ಜನರು ಇನ್ನೂ ಬಡತನ ರೇಖೆಯಲ್ಲಿಯೇ ಇದ್ದಾರೆ. ಇದು ದೇಶದ ಅಸಮಾನತೆಯನ್ನು ಎತ್ತಿ ತೋರಿಸುತ್ತದೆ ಎಂದು ರಾಜ್ಯ ವಿಧಾನಸಭೆ ಮಾಜಿ ಕಾಯ೯ದಶಿ೯ ಹಾಗೂ ಅಹಿಂದ ಚಳವಳಿ ರಾಜ್ಯ ಪ್ರಧಾನ ಸಂಚಾಲಕ ಎಸ್ ಮೂತಿ೯ ಹೇಳಿದರು.
ಶಿವಮೊಗ್ಗದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ʼಅಹಿಂದ ಸಮ್ಮಿಲನ-ಚಿಂತನ ಮಂಥನʼ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಅಹಿಂದ ವರ್ಗಗಳ ಬಡವರು ಮೇಲ್ವರ್ಗಗಳ ಬಳಿ ಇರುವ ಸಂಪತ್ತನ್ನು ನಿರ್ವಹಣೆ ಮಾಡುವ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಭಾರತ ಸ್ವತಂತ್ರಗೊಂಡು 76 ವರ್ಷ ಪೂರೈಸಿದ್ದರೂ ದೇಶದ ಬಹುಸಂಖ್ಯಾತ ಜನರ ಸ್ಥಿತಿ ಇದೇ ಆಗಿದೆ. ಆದರೆ ಯಾರೂ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ದೇಶದ ಕಾರ್ಯಾಂಗ, ಉದ್ಯೋಗ ಕ್ಷೇತ್ರದಲ್ಲಂತೂ ಕೇವಲ 3 ಪಸೆಂ೯ಟ್ ಇರುವ ಬ್ರಾಹ್ಮಣರೇ ತುಂಬಿಹೋಗಿದ್ದಾರೆ. ಹಾಲಿ 650 ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗಳ ಪೈಕಿ 500 ಹುದ್ದೆಗಳು ಬ್ರಿಟಿಷ್ ಕಾಲದಲ್ಲೇ ಬುದ್ಧಿವಂತರಾಗಿದ್ದವರ ಪಾಲಾಗಿವೆ” ಎಂದು ಅಂಕಿ-ಅಂಶ ನೀಡಿದರು.

ರಾಜ್ಯದ 2011ರ ಜನಗಣತಿ ಪ್ರಕಾರ ಎರಡೂ ಮುಕ್ಕಾಲು ಕೋಟಿ ಇರುವ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಸಿಕ್ಕ ಶಾಸಕರ ಸ್ಥಾನ ಕೇವಲ 30 ರಿಂದ 40 ಮಾತ್ರ. ಆದರೆ ತಲಾ 60 ಲಕ್ಷ ಜನಸಂಖ್ಯೆ ಹೊಂದಿರುವ ಎರಡು ಮೇಲ್ವಗ೯ಗಳ ಶಾಸಕರು 140ಕ್ಕೂ ಹೆಚ್ಚು. ರಾಜ್ಯದ ಉತ್ತರ ಭಾಗವನ್ನು ಒಂದು ಜಾತಿಯವರು ಆಳಿದರೆ ದಕ್ಷಿಣ ಭಾಗವನ್ನು ಇನ್ನೊಂದು ಜಾತಿಯವರು ಆಳುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಸಾಂಸ್ಕೃತಿಕ ಅವನತಿಯು ಯುವ ಪೀಳಿಗೆಯನ್ನು ವಿಕೃತಗೊಳಿಸುತ್ತಿದೆ: ಸುಬ್ಬರಾಜು
ಕಾರ್ಯಕ್ರಮದಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ ನ ಶ್ರೀನಿವಾಸ್, ಅಹಿಂದ ಚಳವಳಿಯ ಮೊಹಮ್ಮದ್ ಸನಾವುಲ್ಲಾ, ಜಿ ಪರಮೇಶ್ವರಪ್ಪ, ಮಿಲಿಂದ ಸಂಘಟನೆಯ ಅಣ್ಣಪ್ಪ ಆಯನೂರು ಕೋಟೆ, ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪ್ರೊ. ಹೆಚ್ ರಾಚಪ್ಪ, ಸಂಚಾಲಕ ಎ ಕೆ ಚಂದ್ರಪ್ಪ, ಕಲ್ಲಪ್ಪ, ಉಮೇಶ್ ಯಾದವ್ ಸೇರಿದಂತೆ ಹಲವರು ಇದ್ದರು.
