ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಡವರ ವಿರೋಧಿಯಾಗಿದ್ದು, ಕಾರ್ಪೊರೇಟ್ ಆಪ್ತರಿಗೆ ಮತ್ತು ಶ್ರೀಮಂತರಿಗೆ ಹೇಳಿ ಮಾಡಿಸಿದಂತಿದೆ ಎಂದು ಆರೋಪಿಸಿರುವ ರೈತ ಸಂಘಟನೆಗಳು, ಫೆ. 5ರಂದು ದೇಶಾದ್ಯಂತ ಕೇಂದ್ರ ಬಜೆಟ್ ಪ್ರತಿ ಸುಟ್ಟು ಐಕ್ಯ ಪ್ರತಿಭಟನೆಗೆ ಕರೆ ನೀಡಿದೆ.
ಈ ಬಗ್ಗೆ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಕರ್ನಾಟಕ ರಾಜ್ಯ ಸಮಿತಿ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. 2025ರ ಫೆಬ್ರವರಿ 5ರಂದು ಎಸ್‌ಕೆಎಂ ಮತ್ತು ಕೆಪಿಆರ್‌ಎಸ್ ಜಂಟಿ ಪ್ರತಿಭಟನೆಯನ್ನು ಬೃಹತ್ ಪ್ರಮಾಣದಲ್ಲಿ ಯಶಸ್ವಿಯಾಗಿ ನಡೆಸಲಿದೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ | ಗುಂಡೇಟಿನ ಗಾಯಕ್ಕೆ ‘ಸಣ್ಣ ಬ್ಯಾಂಡೇಜ್’ ಹಾಕಿದಂತಿದೆ: ರಾಹುಲ್ ಗಾಂಧಿ ವ್ಯಂಗ್ಯ
“ಜಿಡಿಪಿಗೆ ಕೃಷಿ ಮತ್ತು ಸಂಬಂಧಿತ ವಲಯಗಳ ಕೊಡುಗೆಯು ಬಜೆಟ್‌ನಲ್ಲಿ ಶೇಕಡ 16ಕ್ಕೆ ಏರಿದೆ. ಆದರೆ 2024-25ರ ಪರಿಷ್ಕೃತ ಅಂದಾಜುಗಳಿಗಿಂತ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಹಂಚಿಕೆ ಕಡಿಮೆಯಾಗಿದೆ. 2024-25ರ ಪರಿಷ್ಕೃತ ಅಂದಾಜುಗಳು ರೂ. 376720.41 ಕೋಟಿಗಳು 2025-26 ರ ಹಂಚಿಕೆ ಕೇವಲ ರೂ. 371687.35 ಕೋಟಿ ಆಗಿದೆ” ಎಂದು ವಿವರಿಸಿದೆ.
“ಹಣದುಬ್ಬರವನ್ನು ಲೆಕ್ಕ ಹಾಕಿದಾಗ, ಇದು ಹಂಚಿಕೆಯಲ್ಲಿ ಭಾರಿ ಕಡಿತವಾಗಿದೆ. 2020-21ರಿಂದ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ನೈಜ ವೆಚ್ಚಗಳು ಸ್ಥಿರವಾಗಿ ಕುಸಿದಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರೈತರಿಗೆ ಆದ್ಯತೆ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಎಂಎಸ್‌ಪಿಗೆ ಕಾನೂನು ಜಾರಿ ಕುರಿತು, ಕೃಷಿ ಉತ್ಪನ್ನಗಳ ಖರೀದಿ ವಿಸ್ತರಣೆ ಕುರಿತು ಬಜೆಟ್‌ನಲ್ಲಿ ಏನೂ ಇಲ್ಲ. ರೈತರನ್ನು ಸಾಲಭಾಧೆಯಿಂದ ಮುಕ್ತಗೊಳಿಸುವ, ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸನ್ನೂ ಗಾಳಿಗೆ ತೂರಲಾಗಿದೆ” ಎಂದು ರೈತ ಸಂಘಟನೆಗಳು ಆಕ್ರೋಶ ಪಡಿಸಿದೆ.
“ಉದ್ಯೋಗದಲ್ಲಿ ಕೃಷಿ ವಲಯದ ಪಾಲು 2017-18 ರಲ್ಲಿ ಶೇಕಡ 44.1 ರಿಂದ 2023-24ರಲ್ಲಿ ಶೇಕಡ 46.1ಕ್ಕೆ ಏರಿಕೆಯಾಗಿದ್ದು, ಯಾವುದೇ ಉದ್ಯೋಗಾವಕಾಶಗಳಿಲ್ಲದ ಕಾರಣ ನಗರ ಪ್ರದೇಶಗಳಿಂದ ಹಿಮ್ಮುಖ ವಲಸೆಯನ್ನು ಸೂಚಿಸುತ್ತದೆ. ಆದರೆ ಅಮಾನವೀಯ ರೀತಿಯಲ್ಲಿ, MGNREGAಗಾಗಿ ಬಜೆಟ್ ಹಂಚಿಕೆಯನ್ನು ಕೇವಲ ರೂ.86,000 ಕೋಟಿಗಳಲ್ಲಿ ಇರಿಸಲಾಗಿದೆ” ಎಂದು ರೈತ ಸಂಘಟನೆಗಳು ಆರೋಪಿಸಿದೆ.
ಇದನ್ನು ಓದಿದ್ದೀರಾ? ಕೇಂದ್ರ ಬಜೆಟ್ 2025 | ಜನರಿಗೆ ಅನುಕೂಲವಾಗುವುದು ಏನೂ ಇಲ್ಲ: ಸಚಿವ ಪ್ರಿಯಾಂಕ್ ಖರ್ಗೆ
“ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ. ಸರ್ಕಾರವು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಎಲ್ಲಾ ಹಣವನ್ನು ನಿಲ್ಲಿಸುತ್ತಿದೆ ಮತ್ತು ಅದಕ್ಕಾಗಿ ಬಜೆಟ್‌ನಲ್ಲಿ ಶೂನ್ಯ ಹಂಚಿಕೆ ಇದೆ. ಇದು ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಬಡವರ ಬಗ್ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಿರಾಸಕ್ತಿಯ ಪ್ರತಿಬಿಂಬವಾಗಿದೆ. ಆಹಾರ ಸಬ್ಸಿಡಿ 2024-25 ರಲ್ಲಿ ಮಾಡಿದ ಹಂಚಿಕೆಗಿಂತ ಕಡಿಮೆಯಾಗಿದೆ. ಕಲ್ಯಾಣ ಯೋಜನೆಗಳಿಗಾಗಿ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಬೇಳೆಕಾಳುಗಳ ವಿತರಣೆಗೆ ಹಂಚಿಕೆ ಶೂನ್ಯವಾಗಿದ್ದು, ಕಳೆದ ಬಜೆಟ್‌ನಲ್ಲಿ ರೂ.300 ಕೋಟಿಗಳನ್ನು ನಿಗದಿಪಡಿಸಲಾಗಿತ್ತು. 12 ಲಕ್ಷದವರೆಗಿನ ಆದಾಯ ತೆರಿಗೆಯ ಬಹು-ಪ್ರಚೋದಿತ ವಿನಾಯಿತಿಯು ತ್ವರಿತ ಚುನಾವಣಾ ಲಾಭಗಳ ಗುರಿಯನ್ನು ಹೊಂದಿದೆ. ಹೆಚ್ಚುತ್ತಿರುವ ಬೆಲೆಗಳು, ಹೆಚ್ಚಿನ ಮಟ್ಟದ ಪರೋಕ್ಷ ತೆರಿಗೆ, ಹೆಚ್ಚುತ್ತಿರುವ ಆಹಾರ, ಆರೋಗ್ಯ, ಶಿಕ್ಷಣ, ಪ್ರಯಾಣ ವೆಚ್ಚಗಳು ಈ ವಿನಾಯಿತಿಯ ಮೂಲಕ ಯಾವುದೇ ಪ್ರಯೋಜನವನ್ನು ಗಳಿಸಿದರೂ ಎಲ್ಲವೂ ನಿಷ್ಪ್ರಯೋಜಕವಾಗುತ್ತದೆ” ಎಂದು ರೈತ ಮುಖಂಡ ಯು ಬಸವರಾಜು ಹೇಳಿದ್ದಾರೆ.
“ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಬೆಳೆ ವಿಮೆಗೆ ನೀಡಲಾದ ಹಂಚಿಕೆಯು ರೂ.15,864 ಕೋಟಿಗಳಿಂದ ರೂ.12,242.27 ಕೋಟಿಗಳಿಗೆ ತೀವ್ರ ಕಡಿತವನ್ನು ಕಂಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಹಂಚಿಕೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಮತ್ತು ಯೋಜನೆಯು ಮೊದಲ ಬಾರಿಗೆ ಪ್ರಾರಂಭವಾದ 2019 ರಿಂದ ಹಣದುಬ್ಬರಕ್ಕೆ ಸಹ ಯಾವುದೇ ಹೊಂದಾಣಿಕೆಯನ್ನು ಹೊಂದಿಲ್ಲ. ರಸಗೊಬ್ಬರ ಸಬ್ಸಿಡಿಯನ್ನು ರೂ.171298.50 ಕೋಟಿಗಳಿಂದ ರೂ.167887.20 ಕೋಟಿಗಳಿಗೆ ಕಡಿತಗೊಳಿಸಲಾಗಿದ್ದು, ಅಂದರೆ ರೂ.3,411.30 ಕೋಟಿ ಕಡಿತಗೊಳಿಸಲಾಗಿದೆ” ಎಂದು ಹೇಳಿದೆ.
“ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯ ಮಿಷನ್‌ನ ಆರು-ವರ್ಷದ ಹಿಂದೆ ಪ್ರಾರಂಭಿಸಿದ್ದರೂ ಈ ಅನುದಾನ ಕೇವಲ ರೂ. 1000 ಕೋಟಿಗಳಷ್ಟಿದ್ದು, ಕೇಂದ್ರ ಸರ್ಕಾರದ ಪೊಳ್ಳುತನವನ್ನು ಬಹಿರಂಗಗೊಳಿಸಿದೆ. ಆದರೆ ಕೇವಲ 10 ದಿನಗಳ ಹಿಂದೆ ತೊಗರಿ ಬೆಳೆಯನ್ನು ಸುಂಕ ರಹಿತವಾಗಿ ಮೊಜಾಂಬಿಕ ಮತ್ತು ಇತರ ದೇಶಗಳಿಂದ ಆಮದು ಮಾಡಿಕೊಳ್ಳುವ ಅವಧಿಯನ್ನು ವಿಸ್ತರಿಸಿ ಈ ಸ್ವಾವಲಂಬನೆ ಮಾತುಗಳನ್ನು ಆಡುತ್ತಿರುವುದು ಒಂದು ಕಠೋರ ವ್ಯಂಗ್ಯವಾಗಿದೆ” ಎಂದು ರೈತ ಮುಖಂಡ ಟಿ ಯಶವಂತ ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ಬಜೆಟ್ 2025 | ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ?
“2024ರಲ್ಲಿ ಬೇಳೆಕಾಳುಗಳ ಆಮದು ಸರಿ ಸುಮಾರು ದ್ವಿಗುಣಗೊಂಡು 60 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ (ಜನವರಿ ಮತ್ತು ನವೆಂಬರ್ ನಡುವೆ). ಬೆಲೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್ ಮುಂದಿನ 4 ವರ್ಷಗಳವರೆಗೆ ಬೇಳೆಕಾಳುಗಳನ್ನು ಸಂಗ್ರಹಿಸುತ್ತವೆ ಎಂಬ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ಇದು ಖಾಸಗಿ ವಲಯವು ಎಂಎಸ್‌ಪಿಯಲ್ಲಿ ಖರೀದಿಸಲು ಸಿದ್ಧರಿಲ್ಲ ಎಂಬ ಅಂಶವನ್ನು ಮಾತ್ರ ಬಹಿರಂಗಪಡಿಸುತ್ತದೆ” ಎಂದು ಹೇಳಿದ್ದಾರೆ.
“ಕಡಿಮೆ ಇಳುವರಿ ಇರುವ 100 ಜಿಲ್ಲೆಗಳಿಗೆ ಸೇರಿದ ಸುಮಾರು 17 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ಧನ್ ಧ್ಯಾನ್ ಕೃಷಿ ಯೋಜನೆ ಘೋಷಿಸಲಾಗಿದೆ. ಆದರೆ ಅದಕ್ಕೆ ಪ್ರತ್ಯೇಕ ಅನುದಾನ ಒದಗಿಸಿಲ್ಲ. ಇದು ಅಸ್ತಿತ್ವದಲ್ಲಿರುವ ಕಾರ್ಯಕ್ರಮಗಳ ಮರುಹಂಚಿಕೆ ಮಾತ್ರ. ರಬ್ಬರ್ ಬೆಳೆ ಬೆಲೆ ಸ್ಥಿರೀಕರಣ ನಿಧಿಗೆ ಅಥವಾ ಕಾಡು ಪ್ರಾಣಿಗಳ ಹಾವಳಿಯನ್ನು ತಗ್ಗಿಸಲು ಯಾವುದೇ ಅನುದಾನ ಒದಗಿಸಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
