ಇತ್ತೀಚಿನ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದ ಹಾದಿ ಬೇರೆಡೆಯೇ ಸಾಗುತ್ತಿದೆ. ಕನ್ನಡ ಕನಸುಗಳನ್ನು ಒಂದೆಡೆ ಸೇರಿಸುವ ಕೆಲಸ ಮಾಡಬೇಕಿದೆ. ಕನ್ನಡ ಓದುವುದು, ಮಾತನಾಡುವುದು ಕಡಿಮೆಯಾಗುತ್ತಿದೆ, ಕನ್ನಡ ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಸಾಗಿಸುವಂತಹ ಚಿಂತನೆಯಾಗಬೇಕಿದೆ ಎಂದು ರಾಯಚೂರಿನ ಹಿರಿಯ ಸಾಹಿತಿ ಶಾಶ್ವತಯ್ಯಸ್ವಾಮಿ ಮುಕ್ಕುಂದಿ ಮಠ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ವಿಮಾಬಾಯಿ ಭಗತ್‌ರಾಜ್ ನಿಜಾಮಕಾರಿ ಪ್ರತಿಷ್ಠಾನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ʼಬಿ.ಟಿ ಲಲಿತಾ ನಾಯಕ ಅವರಿಗೆ ಪ್ರೇರಣಾ ಪ್ರಶಸ್ತಿʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಗತ್‌ರಾಜ್ ನಿಜಾಮಕಾರರು ಅನೇಕ ವರ್ಷಗಳಿಂದ ಪ್ರೇರಣಾ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯವನ್ನ ಬೆಳೆಸಬೇಕು ಎನ್ನುವ ಅವರ ಆಸಕ್ತಿ ಇಳಿ ವಯಸ್ಸಿನಲ್ಲೂ ಕಡಿಮೆಯಾಗಿಲ್ಲ. ತಮ್ಮ ಪತ್ನಿಯ ಹೆಸರಿನಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರೇರಣಾ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಅವರ ಈ ನಡೆ ಕನ್ನಡ ಸಾಹಿತ್ಯಾಸಕ್ತಿದಾರರಿಗೆ ಮತ್ತಷ್ಟು ಪ್ರೇರಣೆ ನೀಡಲಿದೆ” ಎಂದರು.
ಡಾ. ಸ್ವಾಮಿರಾವ್ ಕಲಬುರಗಿ ಮಾತನಾಡಿ, “ಕನ್ನಡ ಸಾಹಿತ್ಯ ಎತ್ತ ಸಾಗುತ್ತಿದೆ ಅರಿಯದಾಗಿದೆ. ಇಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ಓದು ಬೇಡವಾಗಿದೆ. ಜಾತಿ, ಧರ್ಮ, ಮತ, ಪಂತ, ಪಂಗಡ ಮೀರಿ ಸಾಹಿತ್ಯ, ವೈಚಾರಿಕ ಚಿಂತನೆಗಳ ಮೂಲಕ ಕನ್ನಡ ಕನಸುಗಳನ್ನು ಕಟ್ಟಬೇಕಿದೆ. ಸಮಾಜದಲ್ಲಿ ಸಜ್ಜನರು ಸುಮ್ಮನಿದ್ದರೆ ದುರ್ಜನರು ಘರ್ಜಿಸುತ್ತಾರೆ. ಅನ್ಯಾಯ, ಅನೀತಿಯನ್ನು ಪ್ರತಿಭಟಿಸುವ ಶಕ್ತಿಯನ್ನು ಸಜ್ಜನರ ವರ್ಗ ಕಳೆದುಕೊಳ್ಳುತ್ತಿದೆ. ರಾಜ್ಯದಲ್ಲಿ 17 ಕನ್ನಡ ಪ್ರತಿಷ್ಠಾನಗಳು ಕೆಲಸ ಮಾಡುತ್ತಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಒಂದೂ ಇಲ್ಲ. ಬಿಜಾಪುರದಲ್ಲಿ 4, ಬೆಂಗಳೂರಿನಲ್ಲಿ 8, ಧಾರವಾಡದ 6 ಪ್ರತಿಷ್ಠಾನಗಳಿಗೆ ಸರ್ಕಾರವೇ ಧನ ಸಹಾಯ ನೀಡುತ್ತಿದೆ. ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ, ಸಾಹಿತ್ಯ ಕ್ಷೇತ್ರವಾಗಿದೆ, ಶರಣರು, ಜೈನರು, ದಾಸರ ಬೀಡಾಗಿದೆ. ಈ ಭಾಗದಲ್ಲಿ ಪ್ರತಿಷ್ಠಾನ ಮಾಡಲು ರಾಜಕಾರಣಿಗಳು ಮನಸ್ಸು ಮಾಡುತ್ತಿಲ್ಲ. ಕೇವಲ ಆಶ್ವಾಸನೆ, ಭರವಸೆಗೆ ಮಾತ್ರ ಸೀಮಿತವಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ನಗರದ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್: ಪಾಲಿಕೆ ಆಯುಕ್ತ ಜುಬಿನ್
ಈ ವೇಳೆ ಚಿಂತಕಿ ಬಿಟಿ ಲಲಿತಾ ನಾಯಕ ಅವರಿಗೆ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಾಬು ಬಂಡಾರಿಗಲ್, ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ರಾವುತರಾವ್, ಬಷೀರ್ ಅಹ್ಮದ್ ಹೊಸಮನಿ, ಶಿವಶಂಕರ ನಿಜಾಮ ಕಾರಿ ಸೇರಿದಂತೆ ಅನೇಕರು ಇದ್ದರು.
