ಉತ್ತರಪ್ರದೇಶದ ಅಯೋಧ್ಯೆಯ ಫೈಜಾಬಾದ್ ಗ್ರಾಮದ ಬಳಿಯ ನಿರ್ಜನ ಕಾಲುವೆಯಲ್ಲಿ ನಾಪತ್ತೆಯಾಗಿದ್ದ ದಲಿತ ಯುವತಿಯ ಬೆತ್ತಲೆ ಮೃತದೇಹ ಪತ್ತೆ ಬೆನ್ನಲ್ಲೇ ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಮಾಧ್ಯಮದ ಮುಂದೆ ಗದ್ಗದಿತರಾಗಿ ಅಳುತ್ತಿರುವುದು ಕಂಡುಬಂದಿದೆ.
ಫೈಜಾಬಾದ್ ಗ್ರಾಮದಲ್ಲಿ ದಲಿತ ಸಮುದಾಯದ ಯುವತಿಯೊಬ್ಬರು ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ, ಆಕೆಯ ಕಣ್ಣುಗಳನ್ನು ಕಿತ್ತು ಹಾಕಲಾಗಿದೆ, ಮೃತದೇಹದ ಮೇಲೆ ಆಳವಾದ ಗಾಯಗಳು ಕಂಡು ಬಂದಿದೆ ಎಂದು ಮೃತ ಯುವತಿಯ ಕುಟುಂಬ ಆರೋಪಿಸಿದೆ.
ಘಟನೆಯ ಬಗ್ಗೆ ಅಯೋಧ್ಯೆಯ ಸಂಸದ ಅವಧೇಶ್ ಪ್ರಸಾದ್ ಮಾಧ್ಯಮದ ಮುಂದೆ ಮಾತನಾಡುತ್ತಾ ದುಃಖವನ್ನು ವ್ಯಕ್ತಪಡಿಸಿದ್ದಾರೆ. “ನಾನು ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿ ವಿಷಯವನ್ನು ಪ್ರಸ್ತಾಪಿಸುತ್ತೇನೆ. ನಮಗೆ ನ್ಯಾಯ ಸಿಗದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ. ಆ ಯುವತಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾಮ ಎಲ್ಲಿದ್ದೀಯಾ, ಸೀತಾ ತಾಯಿ ಎಲ್ಲಿದ್ದೀಯಾ?” ಎಂದು ಗದ್ಗದಿತರಾಗಿ ಪ್ರಶ್ನಿಸಿದ್ದಾರೆ.
ಈ ವೇಳೆ ಅಲ್ಲಿದ್ದವರು ಜನರಿಗಾಗಿ ಹೋರಾಡಲು ನಿಮ್ಮನ್ನು ಸಂಸದರನ್ನಾಗಿ ಮಾಡಲಾಗಿದೆ. ಆದ್ದರಿಂದ ನೀವು ಹೋರಾಡಿ ನ್ಯಾಯ ಪಡೆಯುತ್ತೀರಿ ಎಂದು ಅವರಿಗೆ ಸಮಾಧಾನ ಪಡಿಸುತ್ತಿರುವುದು ಕಂಡು ಬಂದಿದೆ.
ಈ ಸುದ್ದಿ ಓದಿದ್ದೀರಾ? ಅಲ್ಲಮನ ಅನನ್ಯ ಪದಪ್ರಯೋಗಗಳು | ಸಜ್ಜನವೆ ಮಜ್ಜನ: ಪುಣ್ಯಸ್ನಾನವಲ್ಲ
“ಗುರುವಾರ ರಾತ್ರಿಯಿಂದ ಯುವತಿ ನಾಪತ್ತೆಯಾಗಿದ್ದಾಳೆ, ನಂತರ ಗ್ರಾಮದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸಣ್ಣ ಕಾಲುವೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಆಕೆಯ ಕೈಗಳು ಮತ್ತು ಕಾಲುಗಳನ್ನು ಹಗ್ಗಗಳಿಂದ ಕಟ್ಟಿ ಹಾಕಲಾಗಿತ್ತು, ಆಕೆಯ ದೇಹದ ಮೇಲೆ ತೀವ್ರವಾದ ಗಾಯಗಳು ಕಂಡು ಬಂದಿದೆ, ಆಕೆಯ ಕಾಲು ಮುರಿದಿತ್ತು” ಎಂದು ಯುವತಿಯ ಸೋದರ ಮಾವ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸ್ ಅಧಿಕಾರಿ ಅಶುತೋಷ್ ತಿವಾರಿ, ಶುಕ್ರವಾರ ಯುವತಿಯ ನಾಪತ್ತೆ ಕುರಿತು ಪ್ರಕರಣ ದಾಖಲಾಗಿತ್ತು. ಯುವತಿಯ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
