ಇಸ್ರೇಲ್‌ನ ಆಕ್ರಮಣಕ್ಕೆ ಬಲಿಯಾಗಿರುವ ಪ್ಯಾಲೆಸ್ತೀನ್‌ನ ಗಾಜಾಪಟ್ಟಿಯನ್ನು ಅಮೆರಿಕ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಗಾಜಾವನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸಿ, ಉದ್ಯೋಗ ಸೃಷ್ಟಿಸಲಾಗುತ್ತದೆ, ವಸತಿ ಒದಗಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿ ನೀಡಿದ್ದು, ಟ್ರಂಪ್ ಅವರೊಂದಿಗೆ ಸಭೆ ನಡೆಸಿದ್ದಾರೆ. ಬಳಿಕ, ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಟ್ರಂಪ್, “ಗಾಜಾ ಪಟ್ಟಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು, ಅಭಿವೃದ್ಧಿ ಪಡಿಸುತ್ತೇವೆ” ಎಂದು ಹೇಳಿದ್ದಾರೆ.
“ಗಾಜಾ ಪಟ್ಟಿಯಲ್ಲಿರುವ ಸ್ಪೋಟಕ ಮತ್ತು ಶಸ್ತ್ರಾಸ್ತ್ರಗಳ ಅವಶೇಷಗಳು, ನಾಶವಾಗಿರುವ ಕಟ್ಟಡಗಳನ್ನು ತೆರವುಗೊಳಿಸಿ, ಅಭಿವೃದ್ಧಿ ಪಡಿಸುವ ಜವಾಬ್ಧಾರಿಯನ್ನು ಅಮೆರಿಕ ತೆಗೆದುಕೊಳ್ಳುತ್ತದೆ. ಪ್ಯಾಲೆಸ್ತೀನಿಯರು ಗಾಜಾಗೆ ಮರಳಲೇಬೇಕು. ಅವರಿಗೆ ಬೇರೆ ಜಾಗವಿಲ್ಲ” ಎಂದು ಹೇಳಿದ್ದಾರೆ.
“ಗಾಜಾದಲ್ಲಿನ ಕಟ್ಟಡಗಳು ಸಂಪೂರ್ಣವಾಗಿ ಧ್ವಂಸವಾಗಿವೆ. ಅಲ್ಲಿನ ಜನರು ಕಟ್ಟಡಗಳ ಅವಶೇಷಗಳ ಅಡಿಯಲ್ಲೇ ವಾಸಿಸುತ್ತಿದ್ದಾರೆ. ಗಾಜಾವನ್ನು ಅಮೆರಿಕ ಅಭಿವೃದ್ಧಿ ಪಡಿಸಲಿದೆ. ಅಲ್ಲಿನ ಜನರು ಸುರಕ್ಷಿತವಾಗಿ ಬದುಕಬಹುದು” ಎಂದು ಹೇಳಿದ್ದಾರೆ.