ಸನ್ನಡತೆ ಆಧಾರದ ಮೇಲೆ 2023ರಲ್ಲಿಯೇ ಬಿಡುಗಡೆಯಾಗಿದ್ದ ಕೈದಿಯೊಬ್ಬರು, ನ್ಯಾಯಾಲಯ ವಿಧಿಸಿದ್ದ ದಂಡ ಪಾವತಿಸಲಾಗದ ಕಾರಣ ಜೈಲಿನಲ್ಲಿಯೇ ಇದ್ದರು. ಇದೀಗ, ಅವರಿಗೆ ಜೈಲು ಅಧಿಕಾರಿಗಳು ಸಹಾಯ ಮಾಡಿದ್ದು, ಜೈಲಿನಿಂದ ಹೊರಬಂದಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ದುರ್ಗಪ್ಪ ಅವರು ಕಲಬುರಗಿ ಜಿಲ್ಲಾ ಕಾರಾಗೃಹದಲ್ಲಿದ್ದರು. ಅವರನ್ನು 2023ರ ನವೆಂಬರ್‌ನಲ್ಲಿಯೇ ಬಿಡುಗಡೆ ಮಾಡಲಾಗಿತ್ತು. ಆದರೆ, ದಂಡ ಪಾವತಿಸದೆ ಜೈಲಿನಿಂದ ಹೊರಬರಲಾಗಿರಲಿಲ್ಲ. ಈಗ, ಅವರಿಗೆ ಜೈಲಧಿಕಾರಿಗಳು ಹಣದ ಸಹಾಯ ಮಾಡಿ, ದಂಡ ಪಾವತಿಸಿದ್ದು, ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.
2013ರಲ್ಲಿ ಕೊಲೆ ಪ್ರಕರಣದಲ್ಲಿ ದುರ್ಗಪ್ಪ ಅವರನ್ನು ಬಂಧಿಸಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವರನ್ನು ಕಲಬುರಗಿ ಜೈಲಿನಲ್ಲಿ ಇರಿಸಲಾಗಿತ್ತು.
ಆದಾಗ್ಯೂ, ಸನ್ನಡತೆ ಆಆರದ ಮೇಲೆ 2023ರನ ನವೆಂಬರ್‌ನಲ್ಲಿ ಅವರನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿತ್ತು. ಆದರೆ, ಕೊಲೆ ಪ್ರಕರಣದಲ್ಲಿ ಅವರಿಗೆ ವಿಧಿಸಲಾಗಿದ್ದ 1 ಲಕ್ಷ ರೂ. ದಂಡವನ್ನು ದುರ್ಗಪ್ಪ ಪಾವತಿ ಮಾಡಿರಲಿಲ್ಲ. ಅವರ ಸಂಬಂಧಿಗಳೂ ದಂಡ ಪಾವತಿಸಿ, ಅವರನ್ನು ಕರೆದೊಯ್ಯಲು ಮುಂದೆ ಬಂದಿರಲಿಲ್ಲ. ಪರಿಣಾಮ, ಅವರು ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ.
ಇದೀಗ, ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯ ಅಧಿಕ್ಷಕಿ ಡಾ. ಅರ್ ಅನಿತಾ ಅವರೇ ದುರ್ಗಪ್ಪಗೆ ಸಹಾಯ ಮಾಡಿದ್ದಾರೆ. ದಂಡದ ಮೊತ್ತವನ್ನು ಪಾವತಿಸಿದ್ದಾರೆ. ದುರ್ಗಪ್ಪ ಜೈಲಿನಿಂದ ಬಿಡುಗಡೆಯಾಗಿದ್ದಾರೆ.