2024-25ನೇ ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯ 3,71,383 ಕೋಟಿ ರೂ. ಅಂದಾಜು ವೆಚ್ಚದ ರಾಜ್ಯ ಬಜೆಟ್ ಮಂಡಿಸಿದ್ದರು. ಆಗ ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಶೇ.2ರಷ್ಟು ಅನುದಾನ ಮೀಸಲಿಟ್ಟು, 6,688 ಕೋಟಿ ರೂ. ಹಂಚಿಕೆ ಮಾಡಿದ್ದರು. 2023-24ನೇ ಸಾಲಿಗೆ ಹೋಲಿಸಿಕೊಂಡರೆ 828 ಕೋಟಿ ರೂ. ಅನುದಾನ ಕೃಷಿ ವಲಯಕ್ಕೆ ಹೆಚ್ಚಿಗೆ ಸಿಕ್ಕಿತ್ತು. ಇದೇ ಮೊದಲ ಬಾರಿಗೆ ರಾಜ್ಯದ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ದಾಟಲಿದೆ ಎನ್ನಲಾಗಿದ್ದು, ಸಹಜವಾಗಿಯೇ ಕೃಷಿ ವಲಯದ ನಿರೀಕ್ಷೆಗಳು ಗರಿಗೆದರಿವೆ.
2025-26ನೇ ಸಾಲಿನ ಬಜೆಟ್‌ಅನ್ನು ಹಣಕಾಸು ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 14 ರಂದು ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ ಅವರ 16ನೇ ದಾಖಲೆಯ ಬಜೆಟ್ ಆಗಲಿದೆ.
ಹಲವು ಕಾಂಗ್ರೆಸ್ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಹಣ ಸಿಗದಿರುವ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿರುವುದು ಕಾಂಗ್ರೆಸ್ ಪಡೆಸಾಲೆಯಲ್ಲಿ ಹೆಚ್ಚು ಚರ್ಚೆಯಾಗಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವ ಜೊತೆಗೆ, ರಾಜ್ಯದ ಸಮಗ್ರ ಅಭಿವೃದ್ಧಿ ಕಾರ್ಯಗಳಿಗೆ ಉತ್ತೇಜನ ನೀಡುವ ಸವಾಲು ಮುಖ್ಯಮಂತ್ರಿಗಳ ಮುಂದಿದೆ. ಹೀಗಾಗಿ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ.ಗಳನ್ನು ದಾಟಲಿದೆ ಎನ್ನುವ ಮಾಹಿತಿಯೂ ಇದೆ.
2025-26ನೇ ಸಾಲಿನ ರಾಜ್ಯ ಬಜೆಟ್ ಸಿದ್ಧತೆ ಆರಂಭವಾಗಿದ್ದು, ಫೆ.6ರಿಂದ ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಪ್ರತೀ ಇಲಾಖೆಗೆ ಅರ್ಧ ತಾಸಿಗೂ ಹೆಚ್ಚು ಸಮಯ ಮೀಸಲಿಟ್ಟು ಸಿಎಂ ಸಿದ್ದರಾಮಯ್ಯ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ 16ನೇ ಬಜೆಟ್ ಸುತ್ತ ವಿವಿಧ ವಲಯಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.
ಬಿಜೆಪಿ ಸರ್ಕಾರದ ಕೃಷಿ ಕಾಯ್ದೆಗಳು ರದ್ದಾಗುತ್ತಾ?
ಅಧಿಕಾರಕ್ಕೆ ಬರುವ ಮೊದಲು ವಿರೋಧಪಕ್ಷದಲ್ಲಿದ್ದ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದಂತೇ ರಾಜ್ಯ ಸರ್ಕಾರವೂ ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆಗಳನ್ನು ವಾಪಸು ಪಡೆಯಬೇಕು ಎಂದು ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಆಗ್ರಹಿಸಿದ್ದರು.
ಆದರೆ, ಈಗ ರಾಜ್ಯ ಸರ್ಕಾರವು ಕೃಷಿ ಬೆಲೆ ಆಯೋಗಕ್ಕೆ ನೇಮಕ ಮಾಡಲಾದ ಅಧ್ಯಕ್ಷ ಮತ್ತು ಸದಸ್ಯರಿಗೆ ಷರತ್ತು-ನಿಬಂಧನೆ ಹಾಗೂ ಕರ್ತವ್ಯಗಳನ್ನು ನಿಗದಿ ಮಾಡಿ ಹೊರಡಿಸಿರುವ ಆದೇಶದಲ್ಲೇ ಕೇಂದ್ರ ಸರ್ಕಾರದ ಮೂರು ಕಾಯ್ದೆಗಳು ಮತ್ತು ಅದರ ಆಧಾರದಲ್ಲಿ 2020ರ ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಆಧಾರವಾಗಿಟ್ಟುಕೊಂಡು ರೈತರ ಆದಾಯ ಹೆಚ್ಚಿಸಲು, ಕೃಷಿ ಉತ್ಪನ್ನಗಳಿಗೆ ಮುಕ್ತ ಮಾರುಕಟ್ಟೆ ಮತ್ತು ಉತ್ತಮ ಬೆಲೆ ಒದಗಿಸಿಕೊಡಲು ಈ ಕಾಯ್ದೆಗಳ ಅನ್ವಯವೇ ಅಧ್ಯಯನ ನಡೆಸಲು ಸೂಚಿಸಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
"ಸಿಎಂ ಸಿದ್ದರಾಮಯ್ಯ ಅವರು ಮೊದಲು ಎಪಿಎಂಸಿ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ ಮತ್ತು ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆಗಳನ್ನು ವಾಪಸು ಪಡೆಯಬೇಕು. ಈ ಕಾಯ್ದೆಗಳು ಕಾರ್ಪೋರೆಟ್ ಕಂಪನಿಗಳ ಹಿತಾಸಕ್ತಿಯನ್ನು ಕಾಪಾಡುತ್ತವೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲೇ ಈ ಕಾಯ್ದೆಗಳನ್ನು ರದ್ದು ಪಡಿಸುವುದಾಗಿ ಹೇಳಿದೆ. ಸಿದ್ದರಾಮಯ್ಯ ಅವರು ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು" ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್ ಪ್ರಕಾಶ ಕಮ್ಮರಡಿ ಅವರು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳೆ ಬದಲಾವಣೆ | ರಾಜ್ಯದಲ್ಲಿ ಶೇ.78ರಷ್ಟು ಜೋಳ ಬೆಳೆಯುವ ಪ್ರದೇಶ ಕಣ್ಮರೆ, ಕುಸಿತಕ್ಕೆ ಕಾರಣವೇನು?
ಸಾಮೂಹಿಕ ಬೇಸಾಯಕ್ಕೆ ಪ್ರೋತ್ಸಾಹ ಸಿಗಲಿ
ಪ್ರಕಾಶ ಕಮ್ಮರಡಿ ಅವರನ್ನು ಕೃಷಿ ವಲಯದ ನಿರೀಕ್ಷೆಗಳ ಬಗ್ಗೆ ಈ ದಿನ.ಕಾಮ್ ಮಾತಿಗೆಳೆದಾಗ, “ಇಡೀ ದೇಶದಲ್ಲಿ ಕೃಷಿ ಬಿಕ್ಕಟ್ಟು ಎದುರಿಸುತ್ತಿರುವ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಭೂ ಸುಧಾರಣೆಯ ಮುಂದಿನ ಹಂತವೇ ಸಾಮೂಹಿಕ ಬೇಸಾಯ. ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಬದಲಾವಣೆ ತಂದು ಸಾಮೂಹಿಕ ಬೇಸಾಯಕ್ಕೆ ರಾಜ್ಯ ಸರ್ಕಾರ ಪ್ರೋತ್ಸಾಹ ಕೊಡಬೇಕು. ಬೆಳೆಗಾರರು ಮತ್ತು ಗ್ರಾಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆ ರೂಪಿಸಬೇಕು” ಎಂದರು.
ಪ್ರತ್ಯೇಕ ಕೃಷಿ ಸಚಿವ ಸಂಪುಟ ಸಭೆ ನಡೆಯಲಿ "ಕರ್ನಾಟಕದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಪಾಳು ಬಿದ್ದಿದೆ. ಇದರ ಸದುಪಯೋಗವಾಗಬೇಕು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆಯಾಗಿ, ಕರ್ನಾಟಕ ಕೃಷಿ ಭೂಮಿ ಸದ್ಬಳಕೆ ಮಂಡಳಿ ಸ್ಥಾಪನೆಯಾಗಬೇಕು. ಕೃಷಿಗೆ ಸಂಬಂಧಿಸಿ ಎಲ್ಲ ಇಲಾಖೆಗಳ ನಡುವೆ ಸಮನ್ವಯತೆ ತರಲು ಪ್ರತ್ಯೇಕ ಕೃಷಿ ಸಚಿವ ಸಂಪುಟ ರಚನೆಯಾಗಬೇಕು. ಅಂದಾಗ ಒಕ್ಕಲುತನದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸಲು ಸಾಧ್ಯ" ಎಂದು ಪ್ರಕಾಶ ಕಮ್ಮರಡಿ ಹೇಳಿದರು.
ರಾಜ್ಯದಲ್ಲಿ ಒಣಭೂಮಿ ಕೃಷಿ ಪ್ರದೇಶ ಹೆಚ್ಚಿದೆ. ಭರಮುಕ್ತ ಕರ್ನಾಟಕ ಮಾಡಲು ಕೃಷಿ ಸಂಶೋಧನೆಗಳ ಅಗತ್ಯವಿದೆ. ಹವಾಮಾನ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಉನ್ನತ ಮಟ್ಟದ ಕೃಷಿ ಸಂಶೋಧನಾ ಪರಿಷತ್ ಸ್ಥಾಪನೆಯಾಗಬೇಕು. ಇದರ ಉಸ್ತುವಾರಿ ಮುಖ್ಯಮಂತ್ರಿಗಳೇ ಇರಬೇಕು. ರಾಜ್ಯದಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ ಲಭಿಸಬೇಕು. ಸಣ್ಣ ಸಾಗುವಳಿದಾರರಿಗೆ ಪ್ರೋತ್ಸಾಹ ಸಿಗಬೇಕು. ಮುಖ್ಯವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಖಾತ್ರಿ ಪಡಿಸಬೇಕು” ಎಂದು ಒತ್ತಾಯಿಸಿದರು.

20 ಸಾವಿರ ಕೋಟಿ ರೂ. ಅನುದಾನ ಬೇಕು "ರಾಜ್ಯ ಸರ್ಕಾರವು ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರಕ್ಕೆ ಕನಿಷ್ಠ 20 ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕು. ಅತಿವೃಷ್ಟಿಯಾದಾಗ, ಬರಗಾಲ ಸಂಭವಿಸಿದರೆ ರೈತರ ಅನುಕೂಲಕ್ಕಾಗಿ ಪ್ರತ್ಯೇಕವಾಗಿ 10 ಸಾವಿರ ಕೋಟಿ ರೂ. ಅನುದಾನವನ್ನು ಆವರ್ತ ನಿಧಿಯಾಗಿ ಸ್ಥಾಪಿಸಬೇಕು. ಇದು ಸಾಧ್ಯವಾದಾಗ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು. ರೈತ ಸಂಕಷ್ಟಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಲು ನೆರವಾಗುತ್ತದೆ" ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ಹೇಳಿದರು.
ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಎಕರೆಗೆ ಬೆಳೆ ಸಾಲ ಕೊಡಲಾಗುತ್ತದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ಎಕರೆಗೆ ಯಾವುದೇ ಬಡ್ಡಿಯಿಲ್ಲದೇ 1 ಲಕ್ಷ ಬೆಳೆ ಸಾಲ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಿಗುವಂತಾಗಬೇಕು. ಕಬ್ಬು ಉತ್ಪಾದನೆಯಲ್ಲಿ ಸಿಗುವ ಮೊಲಾಸಿಸ್ ನಿಂದಲೇ ರಾಜ್ಯ ಸರ್ಕಾರ ಕಳೆದ ವರ್ಷ 35 ಸಾವಿರ ಕೋಟಿ ಆದಾಯ ನಿರೀಕ್ಷಿಸಿತ್ತು. ಹೀಗಾಗಿ ಕಬ್ಬು ಬೆಳೆಗಾರರಿಗೂ ಪ್ರತಿ ಟನ್ ಕಬ್ಬಿಗೆ 500 ರೂ. ಅನ್ನು ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಕೊಡಬೇಕು. ಒಂದು ಶಾಸಕರಾಗಿ ಇಳಿದರೆ ಅವರಿಗೆ ತಿಂಗಳಿಗೆ 50 ಸಾವಿರಗಟ್ಟಲೇ ಮಾಸಾಶನವಿದೆ. ಆದರೆ ರೈತ ಜೀವನ ಪೂರ್ತಿ ದುಡಿದೇ ಉಣ್ಣಬೇಕು. ದೇಶಕ್ಕೆ ಅನ್ನ ಕೊಡುವ 60 ವರ್ಷ ಮೇಲ್ಪಟ್ಟ ರೈತರಿಗೆ 5 ಸಾವಿರ ಮಾಸಾಶನವನ್ನು ಸರ್ಕಾರ ಕೊಡಬೇಕು” ಎಂದು ಅಗ್ರಹಿಸಿದರು.
ಬೆಳೆ ನಷ್ಟ ಪರಿಹಾರ ನಿಯಮಗಳ ಪರಿಷ್ಕರಣೆಯಾಗಲಿ
ಕೃಷಿ ವಲಯದಲ್ಲಿ ಮನರೇಗಾ ದಿನಗಳನ್ನು ಹೆಚ್ಚು ಮಾಡಬೇಕು. ಉಳುಮೆ ದಿನಗಳನ್ನು ಹೊರತು ಪಡಿಸಿ ಕಾರ್ಮಿಕರಿಗೂ ಕೆಲಸ ಸಿಗುತ್ತದೆ. ಬೆಳಗಾವಿ ಭಾಗದಲ್ಲಿ ಹಣ್ಣುಗಳ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು. ಸಾಂಗ್ಲಿ ಮತ್ತು ವಿಜಯಪುರಕ್ಕೆ ಹೋಗಿ ದ್ರಾಕ್ಷಿಯನ್ನು ಬೆಳಗಾವಿ ರೈತರು ಸಂಸ್ಕರಣೆ ಮಾಡಿಕೊಂಡು ಬರುತ್ತಾರೆ. ಇದು ತಪ್ಪಬೇಕು. ಮಾರುಕಟ್ಟೆಗೆ ಬಂದ ರೈತ ಒಮ್ಮೊಮ್ಮೆ ಬಸ್ ತಪ್ಪಿ ಊರಿಗೆ ಹೋಗಲು ಅನನುಕೂಲವಾಗುತ್ತದೆ. ಹೀಗಾಗಿ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ರೈತ ಭವನ ನಿರ್ಮಾಣವಾದರೆ ರೈತರು ಅಲ್ಲೇ ತಗ್ಗಲು ಅನುಕೂಲವಾಗುತ್ತದೆ” ಎಂದರು.
ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಯಲು ಆನೆ ಕಾರಿಡಾರ್‌ಗಳನ್ನು ಎಲ್ಲಿ ಅರಣ್ಯ ಇದೆಯೋ ಅಲ್ಲಿ ಸ್ಥಾಪನೆಯಾಗಬೇಕು. ಖಾನಾಪುರ ಭಾಗದಲ್ಲಿ ಅರಣ್ಯ ಭಾಗದಲ್ಲಿ ವಾಸಿಸುವವರಿಗೆ ಅರಣ್ಯ ಇಲಾಖೆಯಿಂದ ಕಿರಿ ಕಿರಿ ಉಂಟಾಗುತ್ತಿದೆ. ಇದು ತಪ್ಪಬೇಕು. ಅರಣ್ಯ ಉದ್ಯಮಕ್ಕೆ ಸರ್ಕಾರ ಪ್ರೋತ್ಸಾಹ ಕೊಡಬೇಕು. 2016ರ ಬೆಳೆ ನಷ್ಟ ಪರಿಹಾರ ನಿಯಮಗಳನ್ನು ಪರಿಷ್ಕರಿಸಿ ಹೊಸದಾಗಿ ನಿಯಮಗಳನ್ನು ಜಾರಿಗೆ ತರಬೇಕು. ಬೆಳೆ ಖರೀದಿ ಕೇಂದ್ರಗಳು ಕೇವಲ ಹಂಗಾಮಿನಲ್ಲಿ ಮಾತ್ರ ತೆರೆಯದೇ ಸದಾಕಾಲ ತೆರೆಯುವಂತಾಗಬೇಕು” ಎಂದು ಒತ್ತಾಯಿಸಿದರು.

ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26ನೇ ಸಾಲಿನ ಕೇಂದ್ರ ಬಜೆಟ್ ಗಾತ್ರ 50.65 ಲಕ್ಷ ಕೋಟಿಯಾಗಿದ್ದು, ಸಾಲದ ಮೊತ್ತ 15.68 ಲಕ್ಷ ಕೋಟಿ ರೂ. ಹಾಗೂ ಬಡ್ಡಿ ಪಾವತಿಗೆ 12.70 ಲಕ್ಷ ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಗೆ ಕೇವಲ 1,27,290.16 ಕೋಟಿ ರೂ. ಹಂಚಿಕೆ ಮಾಡಲಾಗಿದೆ. (ಶೇ.1) 2024-25ಕ್ಕೆ ಹೋಲಿಸಿದರೆ 3,905.05 ಕೋಟಿ ರೂ. ಕಡಿಮೆಯಾಗಿದೆ.
2024-25ನೇ ಸಾಲಿನಲ್ಲಿ ಒಟ್ಟು 2,90,531 ಕೋಟಿ ರೂ.ಗಳ ರಾಜಸ್ವ ವೆಚ್ಚ, 55,877 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 24,974 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು ಸಿದ್ದರಾಮಯ್ಯ ಅವರು 3,71,383 ಕೋಟಿ ರೂ. ಅಂದಾಜು ವೆಚ್ಚದ ರಾಜ್ಯ ಬಜೆಟ್ ಮಂಡಿಸಿದ್ದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ ಶೇ.2ರಷ್ಟು ಅನುದಾನ ಮೀಸಲಿಟ್ಟು, 6,688 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. 2023-24ನೇ ಸಾಲಿಗೆ ಹೋಲಿಸಿಕೊಂಡರೆ 828 ಕೋಟಿ ರೂ. ಅನುದಾನ ಕೃಷಿ ವಲಯಕ್ಕೆ ಹೆಚ್ಚಿಗೆ ಸಿಕ್ಕಿದೆ. ಇದೇ ಮೊದಲ ಬಾರಿಗೆ ರಾಜ್ಯದ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂ. ದಾಟಲಿದೆ ಎನ್ನಲಾಗಿದ್ದು, ಸಹಜವಾಗಿಯೇ ಕೃಷಿ ವಲಯದ ನಿರೀಕ್ಷೆಗಳು ಗರಿಗೆದರಿವೆ.
***
ಸಿದ್ದರಾಮಯ್ಯ ಅವರು ಜುಲೈ 2023ರಲ್ಲಿ 14ನೇ ಬಜೆಟ್ ಮಂಡಿಸಿದಾಗಲೇ ಕರ್ನಾಟಕದಲ್ಲಿ ಹೆಚ್ಚು ಬಜೆಟ್ ಮಂಡಿಸಿದ ದಾಖಲೆಗೆ ಪಾತ್ರರಾಗಿದ್ದರು. ಇನ್ನು ರಾಜ್ಯದ ಮಾಜಿ ರಾಜ್ಯಪಾಲ, ಗುಜರಾತ್‌ನ ಮಾಜಿ ಆರ್ಥಿಕ ಸಚಿವ ವಜೂಬಾಯಿ ವಾಲಾ ಅವರು 18 ಬಾರಿ ಬಜೆಟ್ ಮಂಡಿಸುವ ಮೂಲಕ ದೇಶದಲ್ಲೇ ಹೆಚ್ಚು ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಿದ್ದಾರೆ. ಇವರ ದಾಖಲೆ ಮುರಿಯಲು ಸಿದ್ದರಾಮಯ್ಯ ಇನ್ನೂ ಮೂರು ಬಜೆಟ್ ಮಂಡಿಸಬೇಕಾಗುತ್ತದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.