ಫ್ರೆಂಚ್ ಓಪನ್ ಟೆನಿಸ್ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರೋಲಂಡ್ ಗ್ಯಾರೋಸ್‌ನ ಫಿಲಿಪ್ ಚಾಟ್ರಿಯರ್ ಕೋರ್ಟ್‌ನಲ್ಲಿ ಶನಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸ್ವಿಯಾಟೆಕ್, ಚೆಕ್ ಗಣರಾಜ್ಯದ ಶ್ರೇಯಾಂಕ ರಹಿತ ಆಟಗಾರ್ತಿ ಕರೋಲಿನಾ ಮುಚೋವಾರನ್ನು 6-2, 5-7, 6-4 ಸೆಟ್‌ಗಳ ಅಂತರದಲ್ಲಿ ಮಣಿಸಿದರು. ಆ ಮೂಲಕ ರೋಲಂಡ್ ಗ್ಯಾರೋಸ್‌ನಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದು ದಾಖಲೆ ನಿರ್ಮಿಸಿದರು.
ವೃತ್ತಿ ಜೀವನದಲ್ಲಿ ಮೂರನೇ ಬಾರಿಗೆ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್, 2007ರ ಬಳಿಕ ಈ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದ ಮೊದಲ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪೋಲೆಂಡ್‌ನ 22 ವರ್ಷದ ಇಗಾ ಸ್ವಿಯಾಟೆಕ್, ತನ್ನ ಮೊದಲ ನಾಲ್ಕು ಗ್ರ್ಯಾಂಡ್ ಸ್ಲಾಮ್ ಫೈನಲ್‌ಗಳನ್ನು ಗೆದ್ದ ಮೂರನೇ ಮಹಿಳಾ ಆಟಗಾರ್ತಿಯಾಗಿದ್ದಾರೆ. ಇದಕ್ಕೂ ಮೊದಲು ಪ್ಯಾರಿಸ್‌ನಲ್ಲಿ (2020, 2022) ಮತ್ತು ಕಳೆದ ವರ್ಷ ಯುಎಸ್ ಓಪನ್ ಗೆದ್ದಿದ್ದರು.
ಮೋನಿಕಾ ಸೆಲೆಸ್ ಮತ್ತು ನವೋಮಿ ಒಸಾಕಾ ಮಾತ್ರ ಈ ಸಾಧನೆ ಮಾಡಿದ ಇತರ ಆಟಗಾರ್ತಿಯರಾಗಿದ್ದಾರೆ. 1990ರ ದಶಕದ ಆರಂಭದಲ್ಲಿ ಮೋನಿಕಾ ಸೆಲೆಸ್ (1990, 1991, 2002) ನಂತರ, ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಪ್ರಶಸ್ತಿಗಳನ್ನು ಉಳಿಸಿಕೊಂಡ ಅತ್ಯಂತ ಕಿರಿಯ ಮಹಿಳಾ ಆಟಗಾರ್ತಿ ಎನಿಸಿದ್ದಾರೆ.
ಸೆರೆನಾ ವಿಲಿಯಮ್ಸ್ (1999 ಯುಎಸ್ ಓಪನ್, 2002 ಫ್ರೆಂಚ್ ಓಪನ್, 2002 ವಿಂಬಲ್ಡನ್, 2002 ಯುಎಸ್ ಓಪನ್) ನಂತರ ನಾಲ್ಕನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆಗಳನ್ನು ಇಗಾ ಸ್ವಿಯಾಟೆಕ್ ಗಳಿಸಿದರು.