ಆಮ್ ಆದ್ಮಿ ಪಕ್ಷದ ನಾಯಕ, ಉದ್ಯಮಿ ಅನೋಕ್ ಮಿತ್ತಲ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಮಿತ್ತಲ್ ಅವರ ಪತ್ನಿ ಲಿಪ್ಸಿ ಮಿತ್ತಲ್ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪಂಜಾಬ್‌ನ ಡೆಹ್ಲೋ ಬಳಿಯ ರುರ್ಕಾ ಗ್ರಾಮದಲ್ಲಿ ಶನಿವಾರ ತಡರಾತ್ರಿ ಘಟನೆ ನಡೆದಿದೆ.
ಮಿತ್ತಲ್ ಮತ್ತು ಅವರ ಪತ್ನಿ ಲಿಪ್ಸಿ ಅವರು ಡೆಹ್ಲೋದಿಂದ ತಮ್ಮ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ, ಐವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅವರ ಕಾರನ್ನು ರುರ್ಕಾ ಗ್ರಾಮದ ಬಳಿ ತಡೆದಿದ್ದಾರೆ. ದಂಪತಿಗಳ ಮೇಲೆ ಕ್ರೂರವಾಗಿ ದಾಳಿ ನಡೆಸಿದ್ದಾರೆ.
ದರೋಡೆಕೋರರನ್ನು ತಡೆಯಲು ಅನೋಕ್ ಮಿತ್ತಲ್ ಪ್ರಯತ್ನಿಸಿದ್ದು, ದಂಪತಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದದ್ದ ಇಬ್ಬರನ್ನೂ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಲಿಪ್ಸಿ ಮಿತ್ತಲ್ ಘಟನಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ.
ದರೋಡೆಕೋರರು ಮಿತ್ತಲ್ ಅವರ ಕಾರು ಮತ್ತು ಇತರ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀರು ತನಿಖೆ ನಡೆಸುತ್ತಿದ್ದಾರೆ. ಎಲ್ಲ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ಯಮಿ ಅನೋಕ್ ಮಿತ್ತಲ್ ಸುಮಾರು ನಾಲ್ಕು ತಿಂಗಳ ಹಿಂದೆ ಎಎಪಿ ಸೇರಿದ್ದರು. ಪಕ್ಷದಲ್ಲಿ ತೊಡಗಿಸಿಕೊಂಡಿದ್ದ ಕಾರಣಕ್ಕಾಗಿ ಮಿತ್ತಲ್ ಕುಟುಂಬವು ವ್ಯವಹಾರ ಮತ್ತು ರಾಜಕೀಯ ವಲಯಗಳಲ್ಲಿ ಗಮನ ಸೆಳೆದಿತ್ತು.