ಕಾಂಗ್ರೆಸ್ ಸರ್ಕಾರ ತನ್ನ ಐದು ಮಹತ್ವಾಕಾಂಕ್ಷೆಯ ಭರವಸೆಗಳಲ್ಲಿ ಒಂದನ್ನು ಜಾರಿಗೊಳಿಸಿದೆ. ಭಾನುವಾರದಿಂದ (ಜೂನ್ 11) ಶಕ್ತಿ ಯೋಜನೆ ಅನುಷ್ಠಾನಗೊಂಡಿದ್ದು, ರಾಜ್ಯದ ಮಹಿಳೆಯರು ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದೊಂದಿಗೆ ಹರ್ಷಿಸುತ್ತಿದ್ದಾರೆ. ಪರ-ವಿರೋಧಗಳ ಚರ್ಚೆಯ ನಡುವೆಯೂ ಈ ಯೋಜನೆಯು ಮಹಿಳೆಯರು ಮತ್ತಷ್ಟು ‘ಸ್ವಾತಂತ್ರ್ಯ’ದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಮುಖ್ಯಮಂತ್ತಿ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿ, ಮಹಿಳೆಯರಿಗೆ ಉಚಿತ ಟಿಕೆಟ್ ವಿತರಿಸಿದ್ದಾರೆ. ಹಲವೆಡೆ ಕಂಡಕ್ಟರ್‌ಗಳು ಮಹಿಳೆಯರನ್ನು ವಿಶ್ವಾಸದಿಂದ ಸ್ವಾಗತಿಸಿದ್ದಾರೆ. ಈಗ ಮಹಿಳೆಯರು ತಾವು ಕೆಲಸ ಮಾಡುವ ಕಚೇರಿಗಳಿಗೆ, ಆಸ್ಪತ್ರೆಗೆ ಸೇರಿದಂತೆ ರಾಜ್ಯದಲ್ಲಿ ಯಾವ ಭಾಗಕ್ಕಾದರೂ ಪ್ರಯಾಣಿಸಬಹುದು. ಇದು ಕೇವಲ ಮಹಿಳಾ ಸಬಲೀಕರಣದ ದಿನ ಮಾತ್ರವಲ್ಲ, ಹೆಣ್ಣು ಮಕ್ಕಳ ಸ್ವಾಭಿಮಾನದ ಬದುಕಿಗೊಂದು ಮೆಟ್ಟಿಲಾಗಿದೆ. ಅವರು ಆರ್ಥಿಕವಾಗಿ ಸಬಲರಾಗಲು ಪ್ರಮುಖ ಪಾತ್ರವಹಿಸಿದೆ.
ಸಾಮಾನ್ಯವಾಗಿ ಮಹಿಳೆಯರು, ಅದರಲ್ಲೂ ಗೃಹಿಣಿಯರು ಎಲ್ಲಿಯೇ ಹೋಗಬೇಕೆಂದರೂ ಅವರ ಗಂಡನಿಂದ ಹಣ ಕೇಳಬೇಕಾಗುತ್ತದೆ. ಈಗ, ಅವರು ಕೇವಲ ಬಸ್ ಹತ್ತಿ ತಮ್ಮ ಗಮ್ಯಸ್ಥಾನವನ್ನು ತಲುಪಬಹುದು. ಇದು ಮಹಿಳೆಯರು ಗಂಡನ ಹಂಗಿನ ಬದುಕಿನಿಂತ ಕೊಂಚ ಸ್ವತಂತ್ರರನ್ನಾಗಿ ಮಾಡುತ್ತದೆ ಎಂದು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ ಮಂಡ್ಯದ ಮಹಿಳೆಯೊಬ್ಬರು ಹೇಳಿದ್ದಾರೆ.
“ನಮ್ಮ ಮಗಳು ಉಚಿತವಾಗಿ ಕಾಲೇಜಿಗೆ ಪ್ರಯಾಣಿಸಬಹುದು. ಹಲವು ಸಂದರ್ಭಗಳಲ್ಲಿ ಆಕೆಗೆ ಬಸ್ ಪಾಸ್ ಕೊಡಿಸುವುದೇ ಸವಾಲಾಗಿತ್ತು. ಬಸ್‌ಗೆ ಅಗತ್ಯವಿದ್ದ ಹಣ ಭರಸಲಾಗದೆ, ಪಾಸ್ ಪಡೆಯುವುದು ತಡವಾಗುತ್ತಿತ್ತು. ಎಷ್ಟೋ ದಿನಗಳ ಕಾಲ ಪ್ರಯಾಣ ದರ ನೀಡಿ ಪ್ರಯಾಣಿಸುತ್ತಿದ್ದಳು. ಈಗ ಆಕೆ ಬಸ್ ಚಾರ್ಜ್, ಪಾಸ್‌ನ ಚಿಂತೆಯಿಲ್ಲದೆ ಪ್ರಯಾಣಿಸಬಹುದು” ಎಂದು ಕೆ.ಆರ್ ಪೇಟೆ ತಾಲೂಕಿನ ವಿದ್ಯಾರ್ಥಿನಿಯೊಬ್ಬರ ಒಂಟಿ ಪೋಷಕಿ ಇಂದ್ರಮ್ಮ ಹೇಳಿದ್ದಾರೆ.
“ಗಾರ್ಮೆಂಟ್‌ಗಳಲ್ಲಿ ದುಡಿಯುವವರಿಗೆ ಕಡಿಮೆ ವೇತನ ಸಿಗುತ್ತದೆ. ಆ ಹಣದಲ್ಲಿಯೇ ಪ್ರಯಾಣ, ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸ ಖರ್ಚು ಎಲ್ಲವನ್ನೂ ಭರಿಸಬೇಕಿತ್ತು. ದುಡಿದ ಹಣದಲ್ಲಿ ಉಳಿತಾಯ ಮಾಡುವುದೇ ಕಷ್ಟವಾಗಿತ್ತು. ಈಗ, ಉಚಿತ ಪ್ರಯಾಣದ ಅವಕಾಶ ದೊರೆತಿರುವುದು ನಾನು ಮತ್ತು ನನ್ನ ಮಗಳ ಪ್ರಯಾಣದ ಹಣ ಉಳಿಯುತ್ತದೆ. ಮತ್ತೆನಾನ್ನಾದರೂ ಕೊಳ್ಳಲು ನೆರವಾಗುತ್ತದೆ” ಎಂದು ಮೈಸೂರಿನ ಗಾರ್ಮೆಂಟ್‌ವೊಂದರಲ್ಲಿ ದುಡಿಯುವ ಮಹಿಳೆ ಗಾಯತ್ರಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ʼನಮಸ್ಕಾರ ಬುದ್ಧಿ.. ಏನ್ಲಾ ಹೆಂಗಿದಿ..ʼ ಎನ್ನುವುದು ಗುಲಾಮಗಿರಿ ಮನಸ್ಥಿತಿ ಸಂಕೇತ: ಸಿಎಂ ಸಿದ್ದರಾಮಯ್ಯ