ಭಾರತದಲ್ಲಿ ಈ ವರ್ಷಾಂತ್ಯ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನ ತಾತ್ಕಲಿಕ ವೇಳಾಪಟ್ಟಿ ಬಿಡುಗಡೆಯಾಗಿದೆ.
ʻಇಎಸ್‌ಪಿಎನ್ ಕ್ರಿಕ್‌ಇನ್ಫೊʼ ಸಂಭಾವ್ಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ವರದಿಯ ಪ್ರಕಾರ, ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
2023ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯಲಿದೆ. ಮಹತ್ವದ ಟೂರ್ನಿಯ ಅಧಿಕೃತ ಮತ್ತು ಅಂತಿಮ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಬಿಡುಗಡೆ ಮಾಡಿಲ್ಲ
ಬಿಸಿಸಿಐ ಸಿದ್ಧ ಪಡಿಸಿರುವ ಕರಡು ವೇಳಾಪಟ್ಟಿಯನ್ನು ಈಗಾಗಲೇ ಐಸಿಸಿಗೆ ಕಳುಹಿಸಲಾಗಿದೆ. ಈ ಕರಡನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ದೇಶಗಳಿಗೆ ರವಾನಿಸಲಿದ್ದು, ಪಾಲ್ಗೊಳ್ಳುವ ರಾಷ್ಟ್ರಗಳ ಪ್ರತಿಕ್ರಿಯೆ ಪಡೆದ ಬಳಿಕ ಐಸಿಸಿ, ವೇಳಾಪಟ್ಟಿಯನ್ನು ಅಂತಿಮಗೊಳಿಸಲಿದೆ. ಹೀಗಾಗಿ ಅಧಿಕೃತ ವೇಳಾಪಟ್ಟಿಯು ಮುಂದಿನ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ತಾತ್ಕಲಿಕ ವೇಳಾಪಟ್ಟಿ ಪ್ರಕಾರ, ಕಳೆದ ಬಾರಿಯ (2019) ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ, ಅಕ್ಟೋಬರ್ 5ರಂದು ಟೂರ್ನಿಯ ಉದ್ಘಾಟನಾ ಪಂದ್ಯವು ಅಹಮದಾಬಾದ್‌ನಲ್ಲಿ ನಡೆಯಲಿದೆ. ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಆತಿಥೇಯ ಭಾರತವು, ಲೀಗ್ ಹಂತದ 9 ಪಂದ್ಯಗಳನ್ನು ಬೆಂಗಳೂರು ಸೇರಿದಂತೆ ಒಂಬತ್ತು ನಗರಗಳಲ್ಲಿ ಆಡಲಿದೆ.
- ಅಕ್ಟೋಬರ್ 8: ಭಾರತ vs ಆಸ್ಟ್ರೇಲಿಯಾ, ಚೆನ್ನೈ
- ಅಕ್ಟೋಬರ್ 11: ಭಾರತ vs ಅಫ್ಘಾನಿಸ್ತಾನ, ದೆಹಲಿ
- ಅಕ್ಟೋಬರ್ 15: ಭಾರತ vs ಪಾಕಿಸ್ತಾನ, ಅಹಮದಾಬಾದ್
- ಅಕ್ಟೋಬರ್ 19: ಭಾರತ vs ಬಾಂಗ್ಲಾದೇಶ, ಪುಣೆ
- ಅಕ್ಟೋಬರ್ 22: ಭಾರತ vs ನ್ಯೂಜಿಲ್ಯಾಂಡ್, ಧರ್ಮಶಾಲಾ
- ಅಕ್ಟೋಬರ್ 29: ಭಾರತ vs ಇಂಗ್ಲೆಂಡ್, ಲಖನೌ
- ನವೆಂಬರ್ 2: ಭಾರತ vs ( ಕ್ವಾಲಿಫೈಯರ್ ತಂಡ), ಮುಂಬೈ
- ನವೆಂಬರ್ 5: ಭಾರತ vs ದಕ್ಷಿಣ ಆಫ್ರಿಕಾ, ಕೋಲ್ಕತ್ತಾ
- ನವೆಂಬರ್ 11: ಭಾರತ vs ( ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಎರಡನೇ ತಂಡ), ಬೆಂಗಳೂರು
ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿರುವ ಕ್ರೀಡಾಂಗಣಗಳು ಇನ್ನೂ ಅಂತಿಮಗೊಂಡಿಲ್ಲ. ಸದ್ಯದ ಮಾಹಿತಿಯ ಪ್ರಕಾರ, ನವೆಂಬರ್ 15 ಮತ್ತು 16ರಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯವು ನವೆಂಬರ್ 19ರಂದು ನಡೆಯಲಿದೆ. ಭಾರತದ ಅತಿ ದೊಡ್ಡ ಕ್ರೀಡಾಂಗಣ, ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ ಎಂದು ʻಇಎಸ್‌ಪಿಎನ್ ಕ್ರಿಕ್‌ಇನ್ಫೊʼ ತಿಳಿಸಿದೆ.
ಪಾಕಿಸ್ತಾನವು ಅಹಮದಾಬಾದ್ (ಭಾರತದ ವಿರುದ್ಧ), ಬೆಂಗಳೂರು (ಆಸ್ಟ್ರೇಲಿಯಾ/ನ್ಯೂಜಿಲೆಂಡ್ ವಿರುದ್ಧ ), ಚೆನ್ನೈ (ಅಫ್ಘಾನಿಸ್ತಾನ/ದಕ್ಷಿಣ ಆಫ್ರಿಕಾ ವಿರುದ್ಧ ), ಕೋಲ್ಕತ್ತಾ (ಬಾಂಗ್ಲಾದೇಶ ವಿರುದ್ಧ) ಮತ್ತು ಹೈದರಾಬಾದ್ ಸೇರಿದಂತೆ 5 ಮೈದಾನಗಳಲ್ಲಿ ಆಡಲಿದೆ.