ಸಂವಿಧಾನ ಶಿಲ್ಪಿ ಅಂಬೇಡ್ಕರ್ ಸಾಧನೆಯ ಹಿಂದೆ ಅವರ ಪತ್ನಿ ಮಾತೆ ರಮಾಬಾಯಿ ಇದ್ದರು ಎನ್ನುವುದನ್ನು ಒಪ್ಪಲಾಗುವುದಿಲ್ಲ. ಬದಲಾಗಿ ಅವರ ಹೋರಾಟದ ಪ್ರತಿ ಹಂತದಲ್ಲೂ ರಮಾಬಾಯಿ ಜೊತೆಗೇ ಇದ್ದರು ಎನ್ನುವುದು ವಾಸ್ತವ ಎಂದು ಹಿರಿಯ ಸಾಹಿತಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಶ್ರೀನಿವಾಸರಾವ ರಘೋಜಿ ಸಭಾಂಗಣದಲ್ಲಿ ನಾರಿಶಕ್ತಿ ಕರ್ನಾಟಕ, ಬಂಡಾಯ ಸಾಹಿತ್ಯ ಸಂಘಟನೆ, ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಹಾಗೂ ಫುಲೆ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ 127ನೇ ಜಯಂತ್ಯುತ್ಸವ ಹಾಗೂ ಹಿಂಸೆಮುಕ್ತ ಸ್ವಾವಲಂಬಿ ನಡೆಗಾಗಿ-ಘನತೆಯ ಬದುಕಿಗಾಗಿ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಂದು ಹೆಣ್ಣು ಮಕ್ಕಳ ಎಲ್ಲಾ ಸಾಧನಗಳ ಹಿಂದೆ ಸಾವಿತ್ರಿ ಬಾಯಿ ಫುಲೆ ಹಾಗೂ ಶೇಖ್ ಫಾತಿಮಾ ಅವರ ಹೋರಾಟದ ಶಕ್ತಿಯಿದೆ. ಆದರೆ, ಸಾಮಾಜಿಕ, ಆರ್ಥಿಕ ಉತ್ಪಾದನಾ ಸಾಮಗ್ರಿಗಳು ಪುರುಷರ ಕೈಯಲ್ಲಿ ಇಟ್ಟುಕೊಂಡಿದ್ದರಿಂದ ಮಹಿಳೆಯರು ಮುಖ್ಯ ವಾಹಿನಿಗೆ ಬರಲು ಬಹಳ ಸಮಯ ಬೇಕಾಯಿತು. ಶ್ರೇಣೀಕೃತ ವ್ಯವಸ್ಥೆಯಲ್ಲಿ ಬದುಕುತ್ತಿರುವ ದೇಶದ ಎಲ್ಲಾ ಮಹಿಳೆಯರು ಶೋಷಿತರೇ ಆಗಿದ್ದಾರೆ. ಆದರೆ, ಶ್ರೀಮಂತ ಹೆಣ್ಣು ಮಕ್ಕಳದು, ಬಡ ಹೆಣ್ಣು ಮಕ್ಕಳದು, ಮೇಲ್ಜಾತಿಯ ಹೆಣ್ಣುಮಕ್ಕಳದು ಹಾಗೂ ದಲಿರ ಹೆಣ್ಣು ಮಕ್ಕಳದು ಹೀಗೆ ಎಲ್ಲರೂ ಬೇರೆ ಬೇರೆ ರೀತಿಯ ಶೋಷಣೆಯನ್ನು ಅನಿಭವಿಸುತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಕೊಟ್ಟಿದ್ದರೂ ದೇವದಾಸಿ ಪದ್ದತಿ ನಿಂತಿಲ್ಲ, ಬಾಲ್ಯ ವಿವಾಹ ನಿಂತಿಲ್ಲ. ವರ್ಷದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 13477 ಬಾಲ ಗರ್ಭಿಣಿಯರು ಇದ್ದಾರೆ. ಕೌಟುಂಬಿಕ ಹಲ್ಲೆಗಳು, ಪುರುಷ ಅಹಂಕಾರದಿಂದ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. 2 ವರ್ಷದಲ್ಲಿ 40 ಸಾವಿರ ಹೆಣ್ಣು ಮಕ್ಕಳು ಕಣ್ಮರೆಯಾಗಿದ್ದಾರೆ ಇದಕ್ಕೆ ಯಾರು ಹೊಣೆಗಾರರು” ಎಂದು ಕಳವಳಗೊಂಡರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, “ತಮ್ಮ ವಿದ್ವತ್ತಿನಿಂದ ದೇಶ ನಡೆಸಲು ಬಯಸಿದ ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಇದ್ದಷ್ಟರಲ್ಲೇ ಅಚ್ಚುಕಟ್ಟಾಗಿ ಮನೆ ನಡೆಸುತ್ತಿದ್ದ ಮಾತೆ ರಮಾತಾಯಿ ಅವರ ದಾಂಪತ್ಯದ ಬದುಕು ನಮ್ಮೆಲ್ಲರಿಗೂ ಮಾದರಿಯಾಗಿದೆ. ಅಂದು ಹಿಂದೂ ಕೋಡ್ ಬಿಲ್ ತೀವ್ರವಾಗಿ ವಿರೋಧ ಮಾಡಿದವರೇ ಇಂದು ಪ್ರಥಮ ಮತ್ತು ಅತಿ ಹೆಚ್ಚು ಫಲಾನುಭವಿಗಳಾಗಿದ್ದಾರೆ ಎನ್ನುವುದು ನಾವ್ಯಾರೂ ಮರೆಯುವಂತಿಲ್ಲ. ಆದರೆ, ಅವರೆಲ್ಲ ಋಣ ಮರೆತ ಮಕ್ಕಳಾಗಿದ್ದಾರೆ ಎನ್ನುವುದೇ ದುರಂತ” ಎಂದು ವಿಷಾದ ವ್ಯಕ್ತಪಡಿಸಿದರು.
ಕಲಬುರ್ಗಿ ವಿವಿಯ ಕುಲಸಚಿವೆ ಡಾ. ಮೇಧಾವಿನಿ ಕಟ್ಟಿ ಮಾತನಾಡಿ, “ಮಾತೆ ರಮಾಬಾಯಿ ಅಂಬೇಡ್ಕರ್ ಅವರ ಸಾಧನೆಗೆ ತಕ್ಕಂತೆ ಬರಹಗಳು ಬಂದಿಲ್ಲ ಹಾಗಾಗಿ, ಅವರು ಹೆಚ್ಚೆಚ್ಚು ಜನರಿಗೆ ತಲುಪಲು ಸಾಧ್ಯವಾಗಿಲ್ಲ. ಆದರೆ, ಈಗಲಾದರೂ ಅವರ ಜೀವನ ಸಂಘರ್ಷ ಕುರಿತು ಸಂಶೋಧನೆಗಳು ನಡೆಯಬೇಕು. ಅವರು ಕರುನಾಡಿನ ಧಾರವಾಡ ನಗರದ ವಿದ್ಯಾರ್ಥಿನಿಲಯದಲ್ಲಿ ಎರಡು ತಿಂಗಳು ಉಳಿದುಕೊಂಡಾಗ ಮಕ್ಕಳಿಗೆ ಊಟದ ಸಮಸ್ಯೆ ಎದುರಾಗುತ್ತದೆ. ಆಗ ತನ್ನ ಚಿನ್ನದ ಒಡವೆಯನ್ನು ಮಾರಿ ಮಕ್ಕಳಿಗೆ ಉಟ ಹಾಕುತ್ತಾರೆ. ಹಾಗಾಗಿ, ಮಹಿಳಾ ವಿದ್ಯಾರ್ಥಿನಿಲಯಗಳಿಗೆ ಮಾತೆ ರಮಾಬಾಯಿ, ಸಾವಿತ್ರಿಬಾಯಿ ಫುಲೆ ಹೆಸರಿಡಬೇಕು” ಎಂದರು.
ಇದೇ ಸಂದರ್ಭದಲ್ಲಿ ಶ್ರೀಮಂತ ಹೋಳಕರ ಹಾಗೂ ಡಾ. ಕರಿಗೂಳೇಶ್ವರ ಅವರನ್ನು ಸನ್ಮಾನಿಸಲಾಯಿತು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ವಿಚಿತ್ರ ಪ್ರತಿಭಟನೆ; ರಕ್ತದಿಂದ ಸಹಿ ಮಾಡಿ ಸರ್ಕಾರಕ್ಕೆ ಮನವಿ
ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಗೋದುತಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಪುಟ್ಟಮಣಿ ದೇವಿದಾಸ, ಅಂಬಿಕಾ ನಾಡಗೇರಿ, ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕಿ ಅಶ್ವಿನಿ ಮದನಕರ, ಶಿಕ್ಷಕಿ ಪರ್ವೀನಾ ಸುಲ್ತಾನಾ, ಶ್ರೀಮಂತ ಶೀಲ್ಡ್, ಡಾ.ಕಿರಣ ಗಾಜನೂರ, ಡಾ.ವಿಜಯಕುಮಾರ ಸಾಲಿಮನಿ, ಡಾ.ಶ್ರೀನಿವಾಸ, ಡಾ.ನಂದಕುಮಾರ, ಲಕ್ಷ್ಮೀ ಬಾವಗೆ, ಎ.ಎಂ.ನದಾಫ್, ದಿಲೀಪ ಕಾಯನಕರ ಅಕ್ಷತಾ ನೆಲ್ಲುರು, ಸುನೀಲ ಮಾನಪಡೆ ಸೇರಿದಂತೆ ಹಲವರಿದ್ದರು.
