ಐಪಿಎಲ್ ಮತ್ತು ಆನ್‌ಲೈನ್ ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡು, ಸಾಲದ ಶೂಲಕ್ಕೆ ಸಿಲುಕಿಕೊಂಡು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಬಳಿಯ ಹಂಚ್ಯಾ ಗ್ರಾಮದ ಜೋಬಿ ಆಂಥೋನಿ, ಆತನ ಪತ್ನಿ ಶರ್ಮಿಳಾ ಹಾಗೂ ಸಹೋದರ ಜೋಷಿ ಆಂಥೋನಿ ಆತ್ಮಹತ್ಯೆಗೆ ಶರಣಾದವರು.
ಸೋಮವಾರ, ಜೋಷಿ ಅಂಥೋನಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಸಾವಿಗೂ ಮುನ್ನ ವಿಡಿಯೋ ಮಾಡಿಟ್ಟಿದ್ದ ಜೋಷಿ, “ಆನ್‌ಲೈನ್ ಬೆಟ್ಟಿಂಗ್‌ಗಾಗಿ ನನ್ನ ತಮ್ಮ ಜೋಬಿ ಮತ್ತು ಆತನ ಪತ್ನಿ ಶರ್ಮಿಳಾ ನನ್ನಿಂದ ಸಾಲ ಮಾಡಿದ್ದಾರೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಜೋಬಿ ಮತ್ತು ಶರ್ಮಿಳಾ ಮಾಡಿದ ಮೋಸದಿಂದಾಗಿ ಊರು ತುಂಬಾ ಸಾಲ ಮಾಡಿಕೊಂಡಿದ್ದೇವೆ. ನನ್ನ ತಂಗಿಯಿಂದಲೂ ಸಾಲ ಮಾಡಿಸಿ, ಮೋಸ ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಸಬೇಕು” ಎಂದು ಹೇಳಿದ್ದರು.
ಜೋಷಿ ಅವರು ವಿಡಿಯೋ ಮಾಡಿಟ್ಟು ಸಾವನ್ನಪ್ಪಿರುವ ಬಗ್ಗೆ ತಿಳಿದ ಜೋಬಿ ಆಂಥೋನಿ ಮತ್ತು ಶರ್ಮಿಳಾ ಕೂಡ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಬ್ಬರೂ ಬೆಟ್ಟಿಂಗ್ ದಂಧೆಯಲ್ಲಿ ಹಣ ಹಾಕಿ, ಹೆಚ್ಚು ಸಂಪಾದನೆ ಮಾಡಬಹುದೆಂಬ ಆಮಿಷಬಿದ್ದು, ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.