ಆಟಗಾರರು ತಮ್ಮದೇ ಆದ ವೈಯಕ್ತಿಕ ಅಡುಗೆಯವರು, ಸ್ಟೈಲಿಸ್ಟ್‌ಗಳು ಮತ್ತು ಸಿಬ್ಬಂದಿಯನ್ನು ವಿದೇಶ ಪ್ರವಾಸಗಳಿಗೆ ಕರೆತರುವಂತಿಲ್ಲ ಎಂದು ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿದೆ. ಬಿಸಿಸಿಐನ ಈ ಖಡಕ್ ಸೂಚನೆಗಳು ವಿರಾಟ್ ಕೊಹ್ಲಿ ಅವರಿಗೆ ಹೊಸ ಫಜೀತಿ ತಂದಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಮುಗಿದ ನಂತರ ಭಾರತೀಯ ಕ್ರಿಕೆಟ್‌ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕೆಲವು ಚಟುವಟಿಕೆಗಳನ್ನು ನಿರ್ಬಂಧಿಸುವ 10 ಅಂಶಗಳ ಆದೇಶವನ್ನು ಬಿಸಿಸಿಐ ಹೊರಡಿಸಿದೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ದುಬೈಯಲ್ಲಿರುವ ಕೊಹ್ಲಿ ತಮ್ಮ ಬಾಣಸಿಗರನ್ನು ಕರೆದೊಯ್ಯಲಾಗದೆ ತನ್ನಿಷ್ಟದ ಆಹಾರವನ್ನು ಪಡೆಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ತನಗೆ ಬೇಕಾಗಿರುವ ಆಹಾರದ ಬಗ್ಗೆ ಸ್ಥಳೀಯ ತಂಡದ ವ್ಯವಸ್ಥಾಪಕರೊಂದಿಗೆ ಮಾತನಾಡಿದ್ದಾರೆ. ಈಗ ಕೊಹ್ಲಿಗಾಗಿ ಸ್ಥಳೀಯ ಹೋಟೆಲಿನಲ್ಲಿ ಆಹಾರ ಸಿದ್ಧಪಡಿಸಿ ಮೈದಾನಕ್ಕೆ ಕಳುಹಿಸಿಕೊಡಲಾಗಿದೆ. ಉಳಿದ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಮುಗಿಸಿ ಕಿಟ್ ಪ್ಯಾಕ್ ಮಾಡುತ್ತಿದ್ದರೆ ಕೊಹ್ಲಿ ಆಹಾರ ಸೇವಿಸುತ್ತಿದ್ದರು ಎಂದು ವರದಿಯಾಗಿದೆ.
ಆಟಗಾರರು ಇನ್ನು ಮುಂದೆ ಬಿಸಿಸಿಐ ಅನುಮೋದಿಸದ ಹೊರತು ಪ್ರವಾಸಗಳಲ್ಲಿ ಬಾಣಸಿಗರು, ಭದ್ರತಾ ಸಿಬ್ಬಂದಿ ಅಥವಾ ಸಹಾಯಕರಂತಹ ವೈಯಕ್ತಿಕ ಸಿಬ್ಬಂದಿಯನ್ನು ಕರೆತರಲು ಸಾಧ್ಯವಿಲ್ಲ. ಎಲ್ಲರೂ ನಿಗದಿಪಡಿಸಿದ ಹೊಸ ನಿಯಮಗಳಿಗೆ ಹೊಂದಿಕೊಳ್ಳಬೇಕಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟವಾಗಿ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ಡಬ್ಲ್ಯೂಪಿಎಲ್ 2025 | ರಿಚಾ ಘೋಷ್ ಅಬ್ಬರ: ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಶುಭಾರಂಭ
ಕೋಚ್ ಗೌತಮ್ ಗಂಭೀರ್ ಅವರು ವೈಯಕ್ತಿಕ ಸಹಾಯಕರೊಂದಿಗೆ ಟೂರ್ನಿಗೆ ಆಗಮಿಸಿದ್ದರೂ ಸಹಾಯಕರು ಬೇರೆ ಹೋಟೆಲಿನಲ್ಲಿ ತಂಗುವಂತೆ ಸೂಚಿಸಲಾಗಿದೆ.
ಈ ಹಿಂದೆ, ಮಂಡಳಿಯು ತನ್ನ ಆದೇಶದಲ್ಲಿ, 45 ದಿನಗಳನ್ನು ಮೀರಿದ ವಿದೇಶಿ ಪ್ರವಾಸಗಳ ಸಮಯದಲ್ಲಿ ಕುಟುಂಬಗಳು ಆಟಗಾರರೊಂದಿಗೆ ಇರಲು ಎರಡು ವಾರಗಳ ಅವಧಿಯನ್ನು ಮಾತ್ರ ಅನುಮೋದಿಸಿತು, ಜೊತೆಗೆ ವೈಯಕ್ತಿಕ ಸಿಬ್ಬಂದಿ ಮತ್ತು ವಾಣಿಜ್ಯ ಚಿತ್ರೀಕರಣದ ಮೇಲೆ ನಿರ್ಬಂಧ ವಿಧಿಸಿತು. ಚಾಂಪಿಯನ್ಸ್ ಟ್ರೋಫಿಯಂತಹ ಕಡಿಮೆ ಅವಧಿಗಳಿಗೆ, ಕುಟುಂಬ ಸದಸ್ಯರ ಸಹಭಾಗಿತ್ವವನ್ನು ಮೂಲತಃ ಅನುಮತಿಸಲಾಗುತ್ತಿರಲಿಲ್ಲ.
ಆದರೆ, ಕಾರ್ಯಕ್ರಮದ ಸ್ವರೂಪವನ್ನು ಪರಿಗಣಿಸಿ, ಮಂಡಳಿಯು ಪ್ರತಿ ಆಟಗಾರನಿಗೆ ಒಂದು ಪಂದ್ಯಕ್ಕೆ ಕುಟುಂಬ ಸದಸ್ಯರ ಸಹಭಾಗಿತ್ವವನ್ನು ಹೊಂದಲು ಅವಕಾಶ ನೀಡಿದೆ. ಅಂತೆಯೇ ಆಟಗಾರರು ಯಾವ ಪಂದ್ಯಕ್ಕೆ ಮಂಡಳಿಯ ಅನುಮೋದನೆಯನ್ನು ಪಡೆಯಲು ನಿರ್ಧರಿಸಿದ್ದಾರೆ ಎಂಬುದನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
