ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಗುರುವಾರ) ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತದ ಗೆಲುವಿಗೆ 229 ರನ್‌ಗಳು ಅಗತ್ಯವಿದೆ. ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಐದು ವಿಕೆಟ್‌ಗಳ ಸಾಧನೆ ಮಾಡಿದರೆ, ಅತ್ತ ದಿಟ್ಟ ಹೋರಾಟ ನೀಡಿದ ಬಾಂಗ್ಲಾದ ತೌಹಿದ್
ಹೃದೋಯ್ ಅಮೋಘ ಶತಕ ಗಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶದ ಆರಂಭ ಉತ್ತಮವಾಗಿರಲಿಲ್ಲ. ಭಾರತೀಯ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಹರ್ಷೀತ್ ರಾಣಾ ಆರಂಭದಲ್ಲೇ ಬಲವಾದ ಪೆಟ್ಟು ನೀಡಿದರು. ಆರಂಭಿಕ ಬ್ಯಾಟರ್ ಸೌಮ್ಯ ಸರ್ಕಾರ್ ಹಾಗೂ ನಾಯಕ ನಜ್ಮುಲ್ ಹುಸೇನ್ ಶಾಂತೊ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು.
ಬಳಿಕ ದಾಳಿಗಿಳಿದ ಅಕ್ಷರ್ ಪಟೇಲ್ ತನ್ಜೀದ್ ಹಸನ್ (25) ಹಾಗೂ ಮುಶ್ಫೀಕರ್ ರಹೀಮ್ (0) ಅವರನ್ನು ಪೆವಿಲಿಯನ್‌ಗೆ ಕಳಿಸಿದರು. ಪರಿಣಾಮ 8.3 ಓವರ್‌ಗಳಲ್ಲಿ 35 ರನ್ ಗಳಿಸವುಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಸುದ್ದಿ ಒದಿದ್ದೀರಾ? ಅಗರ್ಕರ್ – ಗಂಭೀರ್ ನಡುವೆ ಭಿನ್ನಾಭಿಪ್ರಾಯ; ರಾಹುಲ್ ಪರ ನಿಂತ ಟೀಂ ಇಂಡಿಯಾ ಕೋಚ್
ಈ ಮಧ್ಯೆ ನಾಯಕ ರೋಹಿತ್ ಶರ್ಮಾ ಸುಲಭ ಕ್ಯಾಚ್ ಕೈ ಚೆಲ್ಲಿದ ಪರಿಣಾಮ ಸ್ಪಿನ್ನರ್ ಅಕ್ಷರ್ ಪಟೇಲ್‌ಗೆ ಹ್ಯಾಟ್ರಿಕ್ ವಿಕೆಟ್ ಗಳಿಸುವ ಅವಕಾಶ ವಂಚಿತವಾಯಿತು. ಇದರ ಸ್ಪಷ್ಟ ಲಾಭ ಪಡೆದ ಜಾಕರ್ ಅಲಿ, ತೌಹಿದ್ ಹೃದೋಯ್ ಅವರೊಂದಿಗೆ ತಂಡವನ್ನು ನಿಧಾನವಾಗಿ ಮುನ್ನಡೆಸಿದರು. ಹೃದೋಯ್ ಹಾಗೂ ಜಾಕರ್ ಆರನೇ ವಿಕೆಟ್‌ಗೆ 154 ರನ್‌ಗಳ ಜೊತೆಯಾಟವಾಡಿ ಸವಾಲಿನ ಮೊತ್ತ ಪೇ ರಿಸಲು ನೆರವಾದರು.
ಜಾಕರ್ 114 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 68 ರನ್ ಗಳಿಸಿದರೆ, ಹೃದೋಯ್ 118 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ 100 ರನ್ ಪೇರಿಸಿದರು.
ಭಾರತದ ಪರ ಶಮಿ 53 ರನ್ ನೀಡಿ ಐದು ವಿಕೆಟ್ ಗಳಿಸಿದರು. ಅಲ್ಲದೆ ಏಕದಿನದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಸಾಧನೆ ಮಾಡಿರುವ ಶಮಿ, ಐಸಿಸಿ ಟೂರ್ನಿಗಳಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎನಿಸಿದರು. ಇನ್ನುಳಿದಂತೆ ಹರ್ಷಿತ್ ರಾಣಾ 3 ಹಾಗೂ ಅಕ್ಷರ್ ಪಟೇಲ್ 2 ವಿಕೆಟ್ ಕಬಳಿಸಿದರು.
