ʻಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕತ್ವ ಸ್ಥಾನ ತ್ಯಜಿಸಿದ ವಿರಾಟ್ ಕೊಹ್ಲಿಯ ನಿರ್ಧಾರ ಬಿಸಿಸಿಐಗೆ ಅಚ್ಚರಿ ಮೂಡಿಸಿತ್ತುʼ ಎಂದು ಸೌರವ್ ಗಂಗೂಲಿ ಹೇಳಿದ್ಧಾರೆ.
ʻಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸುವ ಯಾವುದೇ ಆಲೋಚನೆಯನ್ನು ಬಿಸಿಸಿಐ ಹೊಂದಿರಲಿಲ್ಲ. ಆದರೆ 2022ರ ದಕ್ಷಿಣ ಆಫ್ರಿಕಾ ಸರಣಿಯ ಬಳಿಕ ಕೊಹ್ಲಿ, ತಾವಾಗಿಯೇ ನಾಯಕ ಪಟ್ಟವನ್ನು ಬಿಟ್ಟುಕೊಟ್ಟರು. ಇದು ಅವರ ಸ್ವಂತ ನಿರ್ಧಾರವಾಗಿತ್ತುʼ ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ ಹೇಳಿದ್ಧಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತ ಬಳಿಕ ರೋಹಿತ್ ಶರ್ಮಾ ನಾಯಕತ್ವದ ಸಾಮರ್ಥ್ಯದ ಕುರಿತು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿಗೆ ಮತ್ತೆ ನಾಯಕತ್ವ ಜವಾಬ್ದಾರಿ ನೀಡುವಂತೆ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಗಂಗೂಲಿ ಹೇಳಿಕೆ ಮಹತ್ವ ಪಡೆದಿದೆ.
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ನಾಯಕತ್ವ ತ್ಯಜಿಸಲು ವಿರಾಟ್ ಕೊಹ್ಲಿ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಆಪಾದನೆ ಕೇಳಿ ಬಂದಿತ್ತು. ಈ ಕುರಿತು ʻಆಜ್ ತಕ್ʼ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗಂಗೂಲಿ, ʻವಿರಾಟ್ರನ್ನು ನಾಯಕತ್ವದಿಂದ ಕೆಳಗಿಳಿಸಲು ಮಂಡಳಿ ಸಿದ್ಧವಿರಲಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರವಾಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸದ ಸೋಲಿನ ನಂತರ ಅವರು ಹಠಾತ್ ರಾಜೀನಾಮೆ ಘೋಷಿಸಿದರು. ನಮಗೂ ಇದು ಅನಿರೀಕ್ಷಿತವಾಗಿತ್ತು. ನಾಯಕತ್ವ ತೊರೆದ ನಿರ್ಧಾರದ ಹಿಂದಿನ ಉದ್ದೇಶ ಏನೆಂಬುದನ್ನು ಅವರೇ ಬಲ್ಲರು, ಅವರೇ ಅದನ್ನು ಬಹಿರಂಗಪಡಿಸಬೇಕುʼ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆದ ಕಾರಣದ ಕುರಿತು ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ. ಕೊಹ್ಲಿ ನಿರ್ಗಮನದ ಬಳಿಕ ತಂಡಕ್ಕೆ ಹೊಸ ನಾಯಕನ ಅಗತ್ಯವಿತ್ತು. ಆ ಸಮಯದಲ್ಲಿ ರೋಹಿತ್ ಶರ್ಮಾ ಉತ್ತಮ ಆಯ್ಕೆಯಾಗಿದ್ದರು ಎಂದು ಸೌರವ್ ಸಂದರ್ಶನದಲ್ಲಿ ಹೇಳಿದ್ದಾರೆ.
ಸೌರವ್- ವಿರಾಟ್ ಕಿತ್ತಾಟ: 2021ರಲ್ಲಿ ವಿರಾಟ್ ಕೊಹ್ಲಿ ಟಿ20 ನಾಯಕತ್ವ ತೊರೆದ ಬಳಿಕ ಏಕದಿನದಿಂದಲೂ ಬಿಸಿಸಿಐ ರಾಜೀನಾಮೆ ಬಯಸಿತ್ತು. ಆದರೆ, ವಿರಾಟ್ ಇದಕ್ಕೆ ಸಿದ್ಧರಿರಲಿಲ್ಲ. ಹೀಗಾಗಿ ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಘೋಷಿಸಿತು. ಅಂದಿನಿಂದ ವಿರಾಟ್ ಮತ್ತು ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಮಧ್ಯೆ ಕಿತ್ತಾಟ ಶುರುವಾಗಿತ್ತು. ಯಾವುದೇ ಮಾಹಿತಿ ನೀಡದೇ ವಿರಾಟ್ ಅವರನ್ನು ನಾಯಕತ್ವ ಸ್ಥಾನದಿಂದ ವಜಾ ಮಾಡಿದ್ದು, ಅಭಿಮಾನಿಗಳನ್ನು ಕೆರಳಿಸಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ವಿರಾಟ್ ಟೆಸ್ಟ್ ನಾಯಕತ್ವಕ್ಕೂ ಹಠಾತ್ ರಾಜೀನಾಮೆ ನೀಡಿದ್ದರು. ಈ ಅನಿರೀಕ್ಷಿತ ಬೆಳವಣಿಗೆಯಿಂದ ಬಿಸಿಸಿಐ ರೋಹಿತ್ ಅವರನ್ನೇ ಟೆಸ್ಟ್ಗೂ ಕ್ಯಾಪ್ಟನ್ ಆಗಿ ಮುಂದುವರಿಸಿತು. ಮೂರೇ ತಿಂಗಳಲ್ಲಿ ಟೆಸ್ಟ್, ಏಕದಿನ, ಟಿ20 ನಾಯಕತ್ವವನ್ನು ತೊರೆದ ಕೊಹ್ಲಿಯ ಈ ನಿರ್ಧಾರ ಕ್ರಿಕೆಟ್ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಿಸಿತ್ತು.