ಇದೇ 15ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಜರುಗಿದ ‘ಕುಂಭಮೇಳ ಯಾತ್ರಾರ್ಥಿಗಳ’ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದ 285 ವಿಡಿಯೋಗಳನ್ನು 36 ತಾಸುಗಳಲ್ಲಿ ತೆಗೆದು ಹಾಕುವಂತೆ ರೈಲ್ವೆ ಮಂತ್ರಾಲಯ ‘ಎಕ್ಸ್’ (ಟ್ವಿಟರ್) ಜಾಲತಾಣಕ್ಕೆ ಆಣತಿ ನೀಡಿದೆ. ಕಾಲ್ತುಳಿತ ದುರಂತದ ಫೋಟೋಗಳು ಮತ್ತು ವಿಡಿಯೋಗಳ ಪ್ರಕಟಣೆ ನೈತಿಕ ರೂಢಿ ಮಾದರಿಗಳ ಉಲ್ಲಂಘನೆ ಎಂದಿರುವುದು ಅತ್ಯಂತ ಹಾಸ್ಯಾಸ್ಪದ.
ಇಂದಿರಾಗಾಂಧಿಯವರು 1975ರಲ್ಲಿ 21 ತಿಂಗಳ ಕಾಲ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದರು. ಆಗ ಜಾರಿಯಲ್ಲಿದ್ದ ಹಲವು ಜನತಂತ್ರ ವಿರೋಧಿ ಮತ್ತು ದಮನಕಾರಿ ಕ್ರಮಗಳ ಪೈಕಿ ಪತ್ರಿಕಾ ಸೆನ್ಸಾರ್‌ಶಿಪ್ ಕೂಡ ಒಂದು. ಪತ್ರಿಕೆಗಳು- ನಿಯತಕಾಲಿಕಗಳು ಪ್ರಕಟಿಸುವ ಎಲ್ಲ ಸುದ್ದಿಗಳಿಗೆ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿತ್ತು. ಸರ್ಕಾರವನ್ನು ವಿರೋಧಿಸುವ ಸುದ್ದಿಗಳನ್ನು ಪ್ರಕಟಿಸುವಂತಿರಲಿಲ್ಲ. ತಡರಾತ್ರಿಯ ಕಡೆಯ ಗಳಿಗೆಗಳಲ್ಲಿ ಸೆನ್ಸಾರ್‌ಶಿಪ್ ಅಧಿಕಾರಿಗಳು ತೆಗೆದು ಹಾಕಿದ ಸುದ್ದಿಯ ಜಾಗದಲ್ಲಿ ಮತ್ತೊಂದು ಸುದ್ದಿಯನ್ನು ಹಾಕಿ ಜಾಗ ತುಂಬಿಸಲು ಎಷ್ಟೋ ಸಲ ಕಾಲಾವಕಾಶವೇ ಇರುತ್ತಿರಲಿಲ್ಲ. ಹೀಗಾಗಿ ಪತ್ರಿಕೆಗಳು ಆ ಜಾಗಗಳು ಖಾಲಿ ಉಳಿಸುತ್ತಿದ್ದವು. ಖಾಲಿ ಜಾಗ ಉಳ್ಳ ಪತ್ರಿಕೆಗಳನ್ನು ಇಂದಿನ ಓದುಗರು ಕಲ್ಪಿಸಿಕೊಳ್ಳುವುದೂ ದುಸ್ತರ ಇದ್ದೀತು. ಆದರೆ, ಇಂದು ಕೂಡ ಅಂತಹ ಕಾಲ್ಪನಿಕ ಖಾಲಿ ಜಾಗಗಳು ಉಂಟು. ಅವುಗಳನ್ನು ಅರ್ಥ ಶೂನ್ಯ ಅಥವಾ ಆಳುವವರ ಹಿತಗಳ ತಂಟೆಗೆ ಹೋಗದ ಸುದ್ದಿಗಳಿಂದ ತುಂಬಿಸಲಾಗುತ್ತಿದೆ.
ರಾಮನಾಥ ಗೋಯೆಂಕಾ ಅವರ ‘ಇಂಡಿಯನ್ ಎಕ್ಸ್ ಪ್ರೆಸ್’ ದಿನಪತ್ರಿಕೆ ತುರ್ತುಪರಿಸ್ಥಿತಿ ಹೇರಿಕೆಯನ್ನು ಪ್ರತಿಭಟಿಸಿ ಸಂಪಾದಕೀಯದ ಜಾಗವನ್ನು ಖಾಲಿ ಉಳಿಸಿ ಪತ್ರಿಕೆಯನ್ನು ಹೊರತಂದಿತ್ತು. ಆನಂತರ ಪತ್ರಿಕೆಗಳಲ್ಲಿ ಖಾಲಿ ಜಾಗಗಳನ್ನು ಉಳಿಸಕೂಡದು ಎಂದೂ ಫರ್ಮಾನು ಹೊರಟಿತ್ತು. ಭಾರತದಲ್ಲಿ ಇಂದಿರಾ ಸರ್ವಾಧಿಕಾರ ಎಂಬ ಅರ್ಥದ ತಲೆಬರೆಹಗಳು ವಿದೇಶಿ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಹಬ್ಬಿ ಹರಡಿದ್ದವು. ಹೆಚ್ಚೂ ಕಡಿಮೆ ಎರಡು ವರ್ಷಗಳ ಕಾಲ (21 ತಿಂಗಳು) ಇಂತಹ ಪರಿಸ್ಥಿತಿ ಇತ್ತು.
ಆದರೆ ಈಗ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ ಎಂದು ಪ್ರತಿಪಕ್ಷಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಹೇಳುತ್ತ ಬಂದಿವೆ. ಕರಾಳ ಶಾಸನಗಳ ಅಡಿಯಲ್ಲಿ ಈಗಲೂ ಮಾನವಹಕ್ಕುಗಳ ಹೋರಾಟಗಾರರ ಬಂಧನ ಆಗುತ್ತಿದೆ. ವಿಚಾರಣೆ-ಜಾಮೀನು ಇಲ್ಲದೆ ಪರ್ಷಗಟ್ಟಲೆ ಅವರನ್ನು ಜೈಲುಗಳಲ್ಲಿ ಕೊಳೆಯಿಸಲಾಗುತ್ತಿದೆ. ಫಾದರ್ ಸ್ಟ್ಯಾನ್ ಸ್ವಾಮಿ ಅಂಥವರು ಅನಾರೋಗ್ಯಕ್ಕೆ ಚಿಕಿತ್ಸೆಯೂ ಇಲ್ಲದೆ ಬಂಧನದಲ್ಲೇ ಕಡೆಯುಸಿರು ಎಳೆದಿದ್ದಾರೆ. ಪ್ರೊ.ಜಿ.ಎನ್. ಸಾಯಿಬಾಬಾ ಅಂತಹವರು ಐದಾರು ವರ್ಷ ಜೈಲಿನಲ್ಲಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆಯಾಗಿ ನಿಧನರಾಗಿದ್ದಾರೆ. ಇವೆರಡೂ ಪ್ರಭುತ್ವವೇ ನಡೆಸಿದ ಹತ್ಯೆಗಳು. ಇವು ಕಣ್ಣಿಗೆ ಕಂಡ ಹತ್ಯೆಗಳು.
ಭಾರತದ ಬಹುತೇಕ ಮುಖ್ಯಪ್ರವಾಹದ ಮಾಧ್ಯಮಗಳ ಕಾರ್ಪೋರೇಟೀಕರಣ ಪ್ರಕ್ರಿಯೆ ತೊಂಬತ್ತರ ದಶಕದ ಕೊನೆಯ ವರ್ಷಗಳಲ್ಲೇ ಶುರುವಾಯಿತು. ವಾಜಪೇಯಿ-ಮನಮೋಹನಸಿಂಗ್ ಅವಧಿಯಲ್ಲಿ ಈ ಮಾಧ್ಯಮಗಳನ್ನು ಸರ್ಕಾರದ ಬೇಕು- ಬೇಡಗಳಿಗೆ ಬಗ್ಗಿಸಿಕೊಳ್ಳುವ ಜನತಂತ್ರ ವಿರೋಧಿ ಪ್ರಯತ್ನ ನಡೆಯಲಿಲ್ಲ. ಆನಂತರ ಈವರೆಗಿನ ಹನ್ನೊಂದು ವರ್ಷಗಳಲ್ಲಿ ಮುಖ್ಯಧಾರೆಯ ಮಾಧ್ಯಮವನ್ನು ಮಣಿಸಿ ತಮ್ಮ ಮುಂದೆ ಮಂಡಿಯೂರಿಸಿಕೊಂಡಿದ್ದಾರೆ ಆಳುವವರು. ಚಾನೆಲ್ಲುಗಳ ಪ್ರೈಮ್ ಟೈಮ್ ಚರ್ಚೆಗಳ ವಿಷಯವಸ್ತುಗಳನ್ನೂ, ಅವುಗಳಲ್ಲಿ ಬಿಂಬಿಸಬೇಕಾದ ಕೋನಗಳನ್ನೂ ನಿರ್ಧರಿಸುತ್ತಿದ್ದಾರೆ. ಇಂದಿರಾ ಕಾಲದಲ್ಲಿ ಟೀವಿ ಚಾನೆಲ್ಲುಗಳು ಇರಲಿಲ್ಲ. ಅಂತರ್ಜಾಲ ತಾಣಗಳ ‘ನವಮಾಧ್ಯಮ’ವೂ ಹುಟ್ಟಿರಲಿಲ್ಲ.
ಪತ್ರಿಕೆಗಳು-ನಿಯತಕಾಲಿಕೆಗಳ ಜೊತೆಗೆ ಈ ಕಾಲಮಾನದ ಅಂತರ್ಜಾಲ ತಾಣಗಳ ನವಮಾಧ್ಯಮ ಬೆಳೆದು ನಿಂತಿದೆ. ಸರ್ಕಾರ- ಖಾಸಗಿ ಕೈಗಾರಿಕೆ ವಲಯದಿಂದ ಬರುವ ಜಾಹೀರಾತು ಆದಾಯ, ಕರಾಳ ಶಾಸನಗಳು, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ, ಅಕ್ರಮ ಹಣ ವರ್ಗಾವಣೆ ದಾಳಿಗಳಿಗೆ ಬೆಚ್ಚಿರುವ ಬಹುತೇಕ ಪತ್ರಿಕಾ-ಟೀವಿ ಮಾಧ್ಯಮ ‘ಸುರಕ್ಷಿತ ವಲಯ’ವನ್ನು ಹುಡುಕಿಕೊಂಡು ಅದರಲ್ಲಿ ಹಚ್ಚಗೆ ಬೆಚ್ಚಗೆ ಪವಡಿಸಿದೆ. ಆಳುವವರ ಕುರಿತು ಎಣೆಯಿಲ್ಲದ ಗುಣಗಾನದಲ್ಲಿಯೂ ಪ್ರತಿಪಕ್ಷಗಳು ಮತ್ತು ಹೋರಾಟಗಾರರ ಬೇಟೆಯಲ್ಲಿಯೂ ಬಿಡುವಿಲ್ಲದೆ ಬ್ಯುಸಿಯಾಗಿದೆ. ಆಳುವವರು ಬಿತ್ತಿ ಬೆಳೆಯುತ್ತಿರುವ ಕಡುದ್ವೇಷ ಮತ್ತು ಕುರುಡು ದೇಶಭಕ್ತಿ- ಧರ್ಮಾಂಧತೆ, ಅಪಾಯಕಾರಿ ವ್ಯಕ್ತಿಪೂಜೆಯ ಫಸಲಿಗೆ ನೀರು ಗೊಬ್ಬರ ಎರೆಯುವುದೇ ಈ ಮಾಧ್ಯಮಗಳ ದಿನನಿತ್ಯದ ನೇಮವಾಗಿ ಹೋಗಿದೆ. ಆಳುವ ಪಕ್ಷಕ್ಕೆ ಬೇಡವೆನಿಸಿದ ಪತ್ರಕರ್ತರನ್ನು ಮನೆಗೆ ಕಳಿಸಲಾಗಿದೆ.
ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬುಗಳ ಅಂತರ್ಜಾಲ ತಾಣಗಳಲ್ಲಿ ಅರಳಿಕೊಂಡಿರುವ ಗಣನೀಯ ಸಂಖ್ಯೆಯ ನವಮಾಧ್ಯಮಗಳು ಕಷ್ಟನಷ್ಟಗಳ ಪರಂಪರೆಯ ನಡುವೆಯೂ ಕಾಲು ಕೀಳದೆ ಹಲ್ಲುಕಚ್ಚಿ ನಿಂತು ಜನಪರವಾಗಿ ಬಡಿದಾಡುತ್ತಿವೆ. ಆಳುವವರ ಕಣ್ಣಲ್ಲಿ ಕಣ್ಣಿಟ್ಟು ಸತ್ಯ ನುಡಿಯುತ್ತಿವೆ. ಪ್ರಶ್ನೆಗಳನ್ನು ಕೇಳುತ್ತಿವೆ. ಆಳುವವರು ಜನತೆಯ ಕಣ್ಣುಗಳಿಗೆ ಕಟ್ಟಿರುವ ಭ್ರಮೆಯ ಪರದೆಯನ್ನು ಆಗಾಗಲಾದರೂ ಹರಿಯುತ್ತಿವೆ. ದುರುಳತನ ಡಂಭಾಚಾರ ಸುಳ್ಳು ಮೋಸ ದ್ವೇಷಗಳನ್ನು ನಗ್ನಗೊಳಿಸುತ್ತಿವೆ. ಆದರೆ ಇಂತಹ ಮಾಧ್ಯಮಗಳ ಸಂಖ್ಯೆ ನಗಣ್ಯ.

ಅಂತರ್ಜಾಲ ಲೋಕವು ಹಳ್ಳಿ ಹಳ್ಳಿಗಳನ್ನೂ ತಲುಪಿರುವ ಇಂದಿನ ಸಂಪರ್ಕ ಕ್ರಾಂತಿಯಲ್ಲಿ ಲಕ್ಷ ಲಕ್ಷಾಂತರ ‘ವಾಟ್ಸ್ಯಾಪ್ ವಿಶ್ವವಿದ್ಯಾಲಯ’ಗಳನ್ನು, ಸುಳ್ಳುಸುದ್ದಿಗಳ ಕಾರ್ಖಾನೆಗಳನ್ನು ತೆರೆದು ಜನತೆಯನ್ನು ಮರುಳು ಮಾಡಿ, ಭ್ರಾಂತಿಯಲ್ಲಿ ಬಂಧಿಸುವ ಕೆಲಸವನ್ನು ಆಳುವವರು ಯಶಸ್ವಿಯಾಗಿ ಮಾಡಿದ್ದಾರೆ. ಆದರೆ ಅಂತರ್ಜಾಲ ತಾಣ ಈವರೆಗೆ ಮೇಲ್ನೋಟಕ್ಕಾದರೂ ಜನತಾಂತ್ರಿಕವಾಗಿ ಉಳಿದಿರುವುದು ಆಳುವವರ ಕಣ್ಣ ಕಿಸುರಾಗಿದೆ. ಯಾಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಆಳುವವರ ಸುಳ್ಳುಗಳನ್ನು, ಸತ್ಯವನ್ನು ಹೂತು ಹಾಕುವ, ತಿಪ್ಪೆ ಸಾರಿಸಿ ರಂಗೋಲಿ ಇಡುವ ಕೃತ್ಯಗಳನ್ನು ಬೆರಳೆಣಿಕೆಯ ಪತ್ರಕರ್ತರು ಮಾತ್ರವಲ್ಲದೆ ನಾಗರಿಕರೂ ಮಾಡತೊಡಗಿದ್ದಾರೆ. ಹೀಗಾಗಿ ಇವರೂ ‘ಪತ್ರಕರ್ತ’ರೇ ಆಗಿ ಹೋಗಿದ್ದಾರೆ.
ತಮ್ಮ ದುಷ್ಟ ಕೆಲಸಗಳು, ವಿಪರೀತ ವೈಫಲ್ಯಗಳು, ಪರಮ ಅದಕ್ಷತೆಗಳು, ಪಕ್ಷಪಾತಗಳ ಹೊರಬೀಳದಂತೆ ಅಂತರ್ಜಾಲ ತಾಣಗಳು, ಯೂಟ್ಯೂಬರ್ ಗಳ ಮೇಲೆ ಬಡಿಗೆ ಬೀಸತೊಡಗಿದ್ದಾರೆ ಆಳುವವರು.
ಇದೇ 15ರಂದು ನವದೆಹಲಿ ರೈಲು ನಿಲ್ದಾಣದಲ್ಲಿ ಜರುಗಿದ ‘ಕುಂಭಮೇಳ ಯಾತ್ರಾರ್ಥಿಗಳ’ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದ 285 ವಿಡಿಯೋಗಳನ್ನು 36 ತಾಸುಗಳಲ್ಲಿ ತೆಗೆದು ಹಾಕುವಂತೆ ರೈಲ್ವೆ ಮಂತ್ರಾಲಯ ‘ಎಕ್ಸ್’ (ಟ್ವಿಟರ್) ಜಾಲತಾಣಕ್ಕೆ ಆಣತಿ ನೀಡಿದೆ. ಕಾಲ್ತುಳಿತ ದುರಂತದ ಫೋಟೋಗಳು ಮತ್ತು ವಿಡಿಯೋಗಳ ಪ್ರಕಟಣೆ ನೈತಿಕ ರೂಢಿ ಮಾದರಿಗಳ ಉಲ್ಲಂಘನೆ ಎಂದಿರುವುದು ಅತ್ಯಂತ ಹಾಸ್ಯಾಸ್ಪದ. ನೈತಿಕ ರೂಢಿ ಮಾದರಿಗಳಿಗೂ ತಮ್ಮ ಆಚಾರಗಳಿಗೂ ಸಂಬಂಧವೇ ಇಲ್ಲ ಎಂಬುದನ್ನು ಆಳುವವರು ಅಡಿಗಡಿಗೆ ರುಜುವಾತು ಮಾಡಿದ್ದಾರೆ.

ತ್ರಿವೇಣಿ ಸಂಗಮದ ನೀರು ಕುಡಿಯಲು ಬಿಡಿ, ಸ್ನಾನ ಮಾಡಲೂ ಯೋಗ್ಯವಲ್ಲ, ಅಷ್ಟೊಂದು ಮಲಿನವಾಗಿದೆ ಎಂದು ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ವರದಿ ನೀಡಿದೆ. ಆದರೂ ಈ ನೀರು ಕುಡಿಯಲು ಯೋಗ್ಯ ಎಂಬ ಹೇಳಿಕೆ ನೀಡುವ ಭಂಡತನ ತೋರುತ್ತಾರೆ ಯೋಗಿ ಆದಿತ್ಯನಾಥ್.
ಸದನದಲ್ಲಿ ಮುಖ್ಯಮಂತ್ರಿಯ ಮುಂದೆ ಈ ನೀರನ್ನು ತುಂಬಿಸಿದ ಬಾಟಲಿ ಇಡಲಿ. ಅವರು ಕುಡಿದು ತೋರಿಸಲಿ. ಈ ನೀರನ್ನು ಬಿಜೆಪಿಯ ಎಲ್ಲ ನಾಯಕರ ಮನೆಗಳಿಗೆ ಟ್ಯಾಂಕರುಗಳಲ್ಲಿ ಪೂರೈಕೆ ಮಾಡಲಿ. ಅವರು ಅದೇ ನೀರು ಬಳಸಿ ಅಡುಗೆ ಮಾಡಲಿ, ಸ್ನಾನ ಮಾಡಲಿ, ಔಷಧದಂತೆ ಕುಡಿದು ಸೇವಿಸಲಿ ಎಂದು ಅಖಿಲೇಶ್ ಯಾದವ್ ಸವಾಲು ಹಾಕಿದ್ದಾರೆ. ಬಿಜೆಪಿ ನಾಯಕರು ಈ ಸವಾಲನ್ನು ಒಪ್ಪುವ ಪ್ರಾಮಾಣಿಕತೆ ತೋರಬೇಕು. ಡಂಭಾಚಾರವನ್ನು ಬಿಡಬೇಕು.
ಅಪಘಾತಗಳು ನಡೆದಾಗ ಪ್ರತ್ಯಕ್ಷ ಸಾಕ್ಷಿಗಳು ತಮ್ಮ ಫೋನುಗಳಲ್ಲಿ ಆ ದೃಶ್ಯಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಪ್ರಯಾಗರಾಜದ ಕುಂಭಮೇಳ ಕಾಲ್ತುಳಿತದಲ್ಲಿ 37 ಮಂದಿ ಯಾತ್ರಾರ್ಥಿಗಳು ಮಡಿದರು ಎನ್ನುತ್ತದೆ ಸರ್ಕಾರ. ಸಾವುಗಳ ಅಸಲು ಸಂಖ್ಯೆ ಈವರೆಗೂ ತಿಳಿದುಬಂದಿಲ್ಲ. ರಾತ್ರಿ ನಡೆದ ಈ ದುರಂತದ ಸತ್ಯಾಂಶಗಳನ್ನು ಬೆಳಗಿನ ತನಕ ಅದುಮಿಡುವ ಎಲ್ಲ ಪ್ರಯತ್ನಗಳನ್ನೂ ನಡೆಸಿತು ಯೋಗಿ ಸರ್ಕಾರ. ಮುಂಜಾನೆ ಏನೂ ಆಗಿಲ್ಲವೆಂಬಂತೆ ಸಾಧುಸಂತರ ಪವಿತ್ರ ಸ್ನಾನದ ಮೇಲೆ ಹೆಲಿಕಾಪ್ಟರುಗಳು ಹೂಮಳೆಗರೆಯುವ ದೃಶ್ಯಗಳನ್ನು ಚಲಾಯಿಸಲಾಯಿತು.
ಮುಖ್ಯಧಾರೆಯ ಮಾಧ್ಯಮಗಳೂ ಸರ್ಕಾರದ ಈ ತಾಳಕ್ಕೆ ಕುಣಿದವು. ಪತ್ರಿಕೆಗಳು-ಚಾನೆಲ್ ಗಳು ಜನರ ಸಂಕಟಗಳಿಗೆ ದನಿಯಾಗಲಿಲ್ಲ. ಆದರೆ ಜನಸಾಮಾನ್ಯರ ಕೈಯಲ್ಲಿರುವ ಫೋನುಗಳು ಇನ್ನೂ ಆಳುವವರ ಅಂಕೆಗೆ ಸಿಕ್ಕಿಲ್ಲವಲ್ಲ? ಈ ಕಾಲ್ತುಳಿತ ದುರಂತದ ಆಳ ಅಗಲಗಳ ಅರಿವು ಮೂಡಿಸಿದ್ದು ಪ್ರತ್ಯಕ್ಷದರ್ಶಿಗಳು ಹಿಡಿದು ಟ್ವಿಟರ್-ಇನ್‌ಸ್ಟಾಗ್ರಾಮ್‌ಗಳಿಗೆ ‘ಅಪ್ಲೋಡ್’ ಮಾಡಿ ಹಂಚಿಕೊಂಡ ಸಾವಿರಾರು ವಿಡಿಯೋಗಳೇ. ಸರ್ಕಾರದ ದಾವೆಗಳಿಗೆ ಸವಾಲು ಎಸೆದು ಅವ್ಯವಸ್ಥೆಗಳಿಗೆ ಕನ್ನಡಿ ಹಿಡಿದ ವಿಡಿಯೋಗಳಿವು. ದೇಶದ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ಮತ್ತು ರೈಲು ಮಂತ್ರಿಯ ನಿವಾಸಗಳಿಂದ ಕೆಲವೇ ಕಿಲೋಮೀಟರುಗಳ ದೂರದ ರೈಲ್ವೇ ನಿಲ್ದಾಣದಲ್ಲಿ ಜನದಟ್ಟಣೆಯನ್ನು ನಿರ್ವಹಿಸಿ, ಸುವ್ಯವಸ್ಥೆ ಸ್ಥಾಪಿಸಲು ಉತ್ತರಪ್ರದೇಶ ಮತ್ತು ದೆಹಲಿಯ ಡಬಲ್ ಎಂಜಿನ್ ಸರ್ಕಾರಗಳು ಶೋಚನೀಯವಾಗಿ ಸೋತವು. ಈ ಸೋಲಿನ ತಿಪ್ಪೆ ಸಾರಿಸುವ ಪ್ರಯತ್ನ ನಡೆದಿದೆ.
ಇದೇ 15ರ ನವದೆಹಲಿ ರೈಲು ನಿಲ್ದಾಣದ ಕಾಲ್ತುಳಿತ ದುರಂತದಲ್ಲಿ ಅಸುನೀಗಿದವರ ಸಂಖ್ಯೆ 18 ಎಂದು ಸರ್ಕಾರ ಹೇಳಿದೆ. ಈ ಸಂಬಂಧ ಸರ್ಕಾರಿ ವೈಫಲ್ಯಗಳನ್ನು, ದುರಂತದ ಸ್ವರೂಪವನ್ನು ಬಿಂಬಿಸುವ ಎಲ್ಲ ವಿಡಿಯೋಗಳನ್ನು ತೆಗೆದು ಹಾಕುವಂತೆ ಸೂಚಿಸಲಾಗಿದೆ. ಈ ಬೃಹತ್ ಪರ್ಯಾಯ ‘ಪತ್ರಿಕೋದ್ಯೋಗ’ದ ಉಸಿರು ಕಟ್ಟಿಸಲು ಎಫ್.ಐ.ಆರ್. ದಾಖಲಿಸಲಾಗುತ್ತಿದೆ. ಕಾನೂನು ಕ್ರಮ ಜರುಗಿಸುವ ಬೆದರಿಕೆ ಹಾಕಲಾಗುತ್ತಿದೆ.

ರೈಲು ನಿಲ್ದಾಣದ ಕಾಲ್ತುಳಿತ ಜರುಗಿದ್ದು ರಾತ್ರಿ ಎಂಟೂವರೆಯಿಂದ ಒಂಬತ್ತೂವರೆಯ ನಡುವೆ. ಸಾವು ನೋವು ಸಂಭವಿಸಿದ್ದ ಆಗಲೇ. ಆದರೆ ಈ ದುರಂತವನ್ನು ಆಳುವವರು ಅರ್ಧರಾತ್ರಿಯ ತನಕ ವದಂತಿಗಳು ಎಂದು ತಳ್ಳಿ ಹಾಕಿದ್ದರು. ರೀಲು ಸಚಿವರೆಂದೇ ಹೆಸರಾಗಿರುವ ರೈಲು ಸಚಿವರು ಮತ್ತು ದೆಹಲಿಯ ಉಪರಾಜ್ಯಪಾಲರು ಈ ಕಾಲ್ತುಳಿತ ನಿಜವನ್ನು ತಾಸುಗಟ್ಟಲೆ ಅದುಮಿಟ್ಟರು. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಹಾಕಿದ ವಿಡಿಯೋಗಳು ಆಳುವವರ ಸುಳ್ಳುಗಳನ್ನು ಬಯಲು ಮಾಡಿದ್ದವು. ಅರ್ಧರಾತ್ರಿಯ ನಂತರ ಇನ್ನು ಅದುಮಿಡುವುದು ಅಸಾಧ್ಯ ಎನಿಸಿದಾಗ ಸಾವುನೋವುಗಳು ನಡೆದಿವೆಯೆಂದು ಒಪ್ಪಿಕೊಂಡರು.
ಸಂತ್ರಸ್ತರ ಕುಟುಂಬಗಳಿಗೆ ಅಂದು ರಾತ್ರಿಯೇ ಪರಿಹಾರ ನೀಡಿ ಆಸ್ಪತ್ರೆಗಳ ಹಿಂಬಾಗಿಲುಗಳಿಂದ ಸದ್ದಿಲ್ಲದೆ ರವಾನೆ ಮಾಡಿದರು. ಆಸ್ಪತ್ರೆಗಳ ಗೇಟುಗಳ ಮುಂದೆ ಬಂದೂಕುಗಳನ್ನು ಹಿಡಿದ ಅರೆಸೇನಾ ಪಡೆಗಳನ್ನು ನಿಯುಕ್ತಿ ಮಾಡಿದರು. ಮೀಡಿಯಾಕ್ಕೆ ಸಂಬಂಧಿಸಿದವರ್ಯಾರೂ ಆಸ್ಪತ್ರೆಗಳನ್ನು ಪ್ರವೇಶಿಸಿ ಸಂತ್ರಸ್ತರ ದುಃಖ ದುರಂತಗಳನ್ನು ದಾಖಲು ಮಾಡದಂತೆ ತಡೆಯುವುದು ಆಳುವವರ ಉದ್ದೇಶ ಆಗಿತ್ತು. ಇಲ್ಲದೆ ಹೋದರೆ ಸತ್ತವರು, ಗಾಯಾಳುಗಳು, ರೋಗಿಗಳಿರುವ ಆಸ್ಪತ್ರೆಗಳಿಗೆ ಸರ್ಪಗಾವಲು ಹಾಕುವ ಅವಶ್ಯಕತೆಯಾದರೂ ಏನಿತ್ತು?
ಜನ ಸತ್ತರೂ ಅವರ ಸಾವಿನ ಸುದ್ದಿ ಹೊರಬರದಂತಹ ಸನ್ನಿವೇಶ ಸೃಷ್ಟಿಯಾಗುತ್ತಿರುವುದು ಬಹು ದೊಡ್ಡ ವಿಡಂಬನೆ. ಮೀಡಿಯಾ ತನ್ನ ಕೆಲಸ ಮಾಡುತ್ತಿಲ್ಲವಾಗಿ, ಜನರೇ ಮೀಡಿಯಾದ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪತ್ರಕರ್ತನ ಕೆಲಸವನ್ನೂ ಮಾಡುತ್ತಿದ್ದಾರೆ. ತನಿಖಾ ಪತ್ರಿಕೋದ್ಯಮ, ವಿಶ್ಲೇಷಣಾ ಪತ್ರಿಕೋದ್ಯಮ ಮಾಡಿ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷಗಳು ಪತ್ರಿಕೋದ್ಯೋಗವನ್ನೂ ಮಾಡಬೇಕಿರುವ ದುಃಸ್ಥಿತಿಯಿದು.

ಡಿ ಉಮಾಪತಿ
ಹಿರಿಯ ಪತ್ರಕರ್ತರು