29 ವರ್ಷಗಳ ನಂತರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಿ ಅತ್ಯಂತ ಕಳಪೆಯಾಟವಾಡಿ ಸೆಮಿಫೈನಲ್‌ನಿಂದ ನಿರ್ಗಮಿಸಿದ ಪಾಕಿಸ್ತಾನ ತಂಡದ ವಿರುದ್ಧ ಅಭಿಮಾನಿಗಳು ಹಾಗೂ ಮಾಜಿ ಆಟಗಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 1992ರ ಏಕದಿನ ವಿಶ್ವಕಪ್ ವಿಜೇತ ತಂಡದ ನಾಯಕ ಹಾಗೂ ಪಾಕ್‌ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದು,”ಮೆಚ್ಚಿನವರನ್ನು ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಕೂರಿಸಿದರೆ ಕ್ರಿಕೆಟ್ ನಾಶಗೊಳ್ಳುತ್ತದೆ” ಎಂದಿದ್ದಾರೆ.
“ಪಾಕಿಸ್ತಾನದ ಆಡಳಿತದಲ್ಲಿ ಮೋಷಿನ್ ನಿಖ್ವಿ ಹಲವು ಹುದ್ದೆಗಳನ್ನು ಹೊಂದಿದ್ದಾರೆ. ನಿಖ್ವಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದಾಗ ಹೆಚ್ಚು ಅನ್ಯಾಯವಾಗುತ್ತಿತ್ತು. ಅವರನ್ನು ಆಂತರಿಕ ಮಂತ್ರಿಯಾಗಿ ನೇಮಿಸಿದಾಗಲೂ ಅನ್ಯಾಯಗಳು ಮುಂದುವರಿಯುತ್ತಿದ್ದವು. ಅವರನ್ನು ಯಾವ ಹುದ್ದೆಗೂ ನೇಮಿಸಿದಾಗಲು ಆ ಕ್ಷೇತ್ರವನ್ನು ನಾಶಗೊಳಿಸುತ್ತಾರೆ. ಪಾಕ್ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದಾಗಲೂ ಗೌರವಾನ್ವಿತ ವ್ಯಕ್ತಿ ಯಾಕೆ ರಾಜಿನಾಮೆ ನೀಡಿಲ್ಲವೆಂದು ಇಮ್ರಾನ್ ಖಾನ್ ಪ್ರಶ್ನಿಸಿದ್ದಾರೆ” ಎಂದು ಇಮ್ರಾನ್ ಸಹೋದರಿ ಅಲೀಮಾ ಖಾನ್ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಪಾಕ್‌ನ ಕೇಂದ್ರ ಮಂತ್ರಿಯಾಗಿರುವ ಮೋಷಿನ್ ನಿಖ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯವಹಿಸಿರುವ ಪಾಕ್ ಲೀಗ್‌ನ ಪಂದ್ಯಗಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ಎದುರು ಸೋಲು ಅನುಭವಿಸಿ ಸೆಮಿಫೈನಲ್ ಹಂತ ಪ್ರವೇಶಿಸಲು ವಿಫಲವಾಗಿತ್ತು. ಲೀಗ್‌ನ ಕೊನೆಯ ಪಂದ್ಯ ಬಾಂಗ್ಲಾದೇಶದ ಎದುರು ಇಂದು ರಾವಲ್ಪಿಂಡಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆಟವಾಡಲಿದೆ.
ಕಳೆದ ವರ್ಷವು ಕೂಡ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸತತ ಸೋಲುಗಳಿಂದಾಗಿ ಗುಂಪು ಹಂತದಿಂದ ನಿರ್ಗಮಿಸಿತ್ತು. ಏಕದಿನ ವಿಶ್ವಕಪ್‌ನಲ್ಲಿ ಕಳಪೆಯಾಟವಾಡಿ ಹೊರಬಿದ್ದಿತ್ತು.
ಟೂರ್ನಿಯಲ್ಲಿ ಶತಕ ಗಳಿಸದ ಏಕೈಕ ತಂಡ ಪಾಕ್
ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿದಿವೆ. ಈ ಎಂಟು ತಂಡಗಳಲ್ಲಿ 7 ತಂಡಗಳ ಬ್ಯಾಟರ್ಗಳಿಂದ ಶತಕ ಮೂಡಿಬಂದಿವೆ. ಆದರೆ ಆತಿಥ್ಯವಹಿಸಿರುವ ಪಾಕಿಸ್ತಾನ ಬ್ಯಾಟರ್ಗಳ ಕಡೆಯಿಂದ ಒಂದೇ ಒಂದು ಶತಕ ಮೂಡಿಬಂದಿಲ್ಲ.
ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್ನ ವಿಲ್ ಯಂಗ್ (107) ಹಾಗೂ ಟಾಮ್ ಲ್ಯಾಥಮ್ (117) ಶತಕ ಸಿಡಿಸಿದ್ದರು. ಇದಾದ ಬಳಿಕ ಬಾಂಗ್ಲಾದೇಶ ವಿರುದ್ಧ ರಚಿನ್ ರವೀಂದ್ರ (112) ಶತಕ ಬಾರಿಸಿ ಮಿಂಚಿದ್ದಾರೆ.
ಇನ್ನು ಬಾಂಗ್ಲಾದೇಶ ಪರ ತೌಹಿದ್ ಹೃದೋಯ್ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ದುಬೈನಲ್ಲಿ ನಡೆದ ಭಾರತದ ವಿರುದ್ಧದ ಈ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತೌಹಿದ್ 118 ಎಸೆತಗಳಲ್ಲಿ 100 ರನ್ ಬಾರಿಸಿದ್ದಾರೆ.
ಹಾಗೆಯೇ ದಕ್ಷಿಣ ಆಫ್ರಿಕಾದ ಪರ ರಯಾನ್ ರಿಕೆಲ್ಟನ್ ಬ್ಯಾಟ್ನಿಂದ ಭರ್ಜರಿ ಶತಕ ಮೂಡಿಬಂದಿದೆ. ಕರಾಚಿಯಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಯಾನ್ ರಿಕೆಲ್ಟನ್ 106 ಎಸೆತಗಳಲ್ಲಿ 103 ರನ್ ಬಾರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಸಿಎಲ್ 2025 | ಕರ್ನಾಟಕ – ಪಂಜಾಬ್ ಆಟಗಾರರ ನಡುವೆ ಗಲಾಟೆ; ಸಿಟ್ಟಿಗೆದ್ದ ಸುದೀಪ್
ಇನ್ನು ಲಾಹೋರ್ನ ಗದ್ದಾಫಿ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ 143 ಎಸೆತಗಳಲ್ಲಿ 165 ರನ್ ಬಾರಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಪರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ಸ್ಕೋರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಬೆನ್ ಡಕೆಟ್ ಶತಕ ಬಾರಿಸಿದ ಪಂದ್ಯದಲ್ಲೇ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಇಂಗ್ಲಿಸ್ ಕೂಡ ಶತಕ ಸಿಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 86 ಎಸೆತಗಳಲ್ಲಿ ಅಜೇಯ 120 ರನ್ ಬಾರಿಸಿ ಇಂಗ್ಲಿಸ್ ಆಸ್ಟ್ರೇಲಿಯಾ ತಂಡಕ್ಕೆ ಜಯ ತಂದುಕೊಟ್ಟಿದ್ದರು.
ಚಾಂಪಿಯನ್ಸ್ ಟ್ರೋಫಿಯ 8ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಬ್ಯಾಟರ್ ಇಬ್ರಾಹಿಂ ಜದ್ರಾನ್ ದಾಖಲೆಯ ಶತಕ ಸಿಡಿಸಿದ್ದಾರೆ. ಲಾಹೋರ್ನಲ್ಲಿ ನಡೆದ ಈ ಪಂದ್ಯದಲ್ಲಿ 146 ಎಸೆತಗಳನ್ನು ಎದುರಿಸಿದ ಜದ್ರಾನ್ 177 ರನ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗೆಯೇ ಅಫ್ಘಾನಿಸ್ತಾನ್ ವಿರುದ್ಧ ಈ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಸಹ ಶತಕ ಬಾರಿಸಿದ್ದಾರೆ. ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರೂಟ್ 120 ರನ್ ಬಾರಿಸಿ ಮಿಂಚಿದ್ದಾರೆ.
ಇನ್ನು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಪರ ಇಬ್ಬರು ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ಅಜೇಯ 101 ರನ್ ಬಾರಿಸಿದರೆ, ಪಾಕಿಸ್ತಾನದ ವಿರುದ್ಧದ ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸಿದ್ದರು. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ 7 ತಂಡಗಳ ಆಟಗಾರರು ಒಟ್ಟು 11 ಶತಕಗಳನ್ನು ಬಾರಿಸಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಆತಿಥೇಯ ಪಾಕಿಸ್ತಾನದ ಒಬ್ಬನೇ ಒಬ್ಬ ಬ್ಯಾಟರ್ ಇಲ್ಲ.
