ಈಗಾಗಲೇ ಬೆಚ್ಚಗಿನ ಚಳಿಗಾಲ ಮುಗಿದಿದ್ದು, ಬಿಸಿಲು ಚಳಿಗಾಲದ ಅಂತ್ಯದಲ್ಲೇ ಅಧಿಕವಾಗಿದೆ. ಈ ನಡುವೆ ಮಾರ್ಚ್‌ನಿಂದ ಅಂದರೆ ಇಂದಿನಿಂದ (ಮಾರ್ಚ್ 1) ದೇಶದಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ ಇರಲಿದೆ. ಹಾಗೆಯೇ ಬಿಸಿ ಗಾಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
1901ರ ನಂತರ 2025ರ ಫೆಬ್ರವರಿಯು ಅತೀ ಅಧಿಕ ಬಿಸಿಯಾದ ತಿಂಗಳು ಎಂದು ಐಎಂಡಿ ಹೇಳಿದೆ. ಫೆಬ್ರವರಿಯ ಸರಾಸರಿ ತಾಪಮಾನ 20.7 ಡಿಗ್ರಿ ಸೆಲ್ಸಿಯಸ್ ಆಗಿದೆ. ಆದರೆ ಈ ವರ್ಷ 22.04 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 1901ರ ಬಳಿಕ ದಾಖಲಾದ ಅತೀ ಗರಿಷ್ಠ ತಾಪಮಾನ ಮತ್ತು ಅತ್ಯಧಿಕ ಕನಿಷ್ಠ ತಾಪಮಾನ ಇದಾಗಿದೆ.
ಇದನ್ನು ಓದಿದ್ದೀರಾ? ಅತೀವ ಬಿಸಿಲು | ರಾಜ್ಯದ 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಹವಾಮಾನ ಇಲಾಖೆ
ಈ ನಡುವೆ ದೇಶದಲ್ಲಿ ಜನವರಿ ಮತ್ತು ಫೆಬ್ರವರಿ ನಡುವೆ ಶೇಕಡ 59ರಷ್ಟು ಮಳೆಯ ಕೊರತೆ ಕಾಣಿಸಿಕೊಂಡಿದೆ. ಮಧ್ಯ ಭಾರತದಲ್ಲಿ ಶೇಖಡ 89ರಷ್ಟು ಮಳೆಯ ಕೊರತೆಯಿದ್ದರೆ, ವಾಯುವ್ಯ ಭಾರತದಲ್ಲಿ ಶೇಕಡ 64ರಷ್ಟು ಮಳೆ ಕೊರತೆ ಕಂಡು ಬಂದಿದೆ.
ಇನ್ನು ಪರ್ಯಾಯ ದ್ವೀಪ ಭಾರತದ ದಕ್ಷಿಣ ಭಾಗಗಳು ಮತ್ತು ಈಶಾನ್ಯ ಭಾರತದ ಪ್ರತ್ಯೇಕ ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಅಧಿಕ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳು ಕಂಡುಬರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
Time series of Maximum temperature, Minimum temperature and mean temperature over India for the month of February 1901-2025 pic.twitter.com/SMdiA5JqBR
— India Meteorological Department (@Indiametdept) February 28, 2025
ಈಶಾನ್ಯ ಭಾರತ, ಉತ್ತರ ಭಾರತ, ಪರ್ಯಾಯ ದ್ವೀಪದ ನೈಋತ್ಯ ಮತ್ತು ದಕ್ಷಿಣ ಭಾಗಗಳನ್ನು ಹೊರತುಪಡಿಸಿ ದೇಶದ ಅಧಿಕ ಭಾಗಗಳಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಸಾಮಾನ್ಯಕ್ಕಿಂತ ಅಧಿಕ ಶಾಖದ ಅಲೆಗಳು ಇರಬಹುದೆಂದು ಮುನ್ಸೂಚನೆ ನೀಡಿದೆ.
ಇದನ್ನು ಓದಿದ್ದೀರಾ? ಕರ್ನಾಟಕದ ಗೇರುಸೊಪ್ಪ ಸೇರಿ ಹಲವೆಡೆ ಮಳೆ; 4 ರಾಜ್ಯಗಳಲ್ಲಿ ಯೆಲ್ಲೋ ಅಲರ್ಟ್: ಹವಾಮಾನ ಇಲಾಖೆ
ಈ ನಡುವೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಬಿಸಿ ಗಾಳಿ ಇರಬಹುದು. ಇದು ಕೃಷಿಯ ಮೇಲೆ ಪ್ರಭಾವ ಬೀರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಗೋಧಿಯಂತಹ ಪ್ರಮುಖ ರಬಿ ಬೆಳೆಗಳ ಕೊಯ್ಲು ಮಾರ್ಚ್ ಮಧ್ಯದಲ್ಲಿ ಪ್ರಾರಂಭವಾಗುತ್ತದೆ. ಈ ನಡುವೆ ತಾಪಮಾನ ಏರಿಕೆ ಮುನ್ಸೂಚನೆ ರೈತರಲ್ಲಿ ಆತಂಕ ಸೃಷ್ಟಿಸಿದೆ. ಈಗಾಗಲೇ ಕಳೆದ ಮೂರು ವರ್ಷಗಳಿಂದ ದೇಶದಲ್ಲಿ ಗೋಧಿ ಬೆಳೆಯಲ್ಲಿ ಕೊರತೆ ಕಾಣಿಸಿಕೊಂಡಿದೆ. ಅದರಿಂದಾಗಿ ಗೋಧಿ ಬೆಲೆಯು ಗಗನಕ್ಕೇರಿದೆ. ಈಗ ಮತ್ತೆ ಹವಾಮಾನ ಬದಲಾವಣೆಯಿಂದಾಗಿ ಗೋಧಿ ಬೆಳೆ ಮೇಲೆ ಪ್ರಭಾವ ಬೀರಿದರೆ ಮತ್ತಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
