ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಆಯೋಜನೆಗೆ ಸಂಬಂಧಪಟ್ಟ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದೆ. ʻಹೈಬ್ರಿಡ್ ಮಾದರಿʼಯಲ್ಲಿ ಪಂದ್ಯಾವಳಿ ಆಯೋಜಿಸಲು ಜಯ್ ಶಾ ಅಧ್ಯಕ್ಷರಾಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗುರುವಾರ ಒಪ್ಪಿಗೆ ಸೂಚಿಸಿದೆ. ಇದರನ್ವಯ, 6 ತಂಡಗಳು ಭಾಗವಹಿಸುವ ಟೂರ್ನಿಯು ಆಗಸ್ಟ್ 31ರಂದು ಆರಂಭವಾಗಲಿದ್ದು, ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ʻತಠಸ್ಥ ತಾಣʼ ಶ್ರೀಲಂಕಾದಲ್ಲಿ ನಡೆಯಲಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು, ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಯಿದೆ. ಟೂರ್ನಿಯ ಅಧಿಕೃತ ವೇಳಾಪಟ್ಟಿ ಇನ್ನಷ್ಟೇ ಹೊರಬರಬೇಕಿದೆ.
ಪೂರ್ವ ನಿಗದಿಯಂತೆ ಏಷ್ಯಾ ಕಪ್- 2023 ಟೂರ್ನಿಯು ಪಾಕಿಸ್ತಾನದಲ್ಲಿ ನಡೆಯಬೇಕಾಗಿತ್ತು. ಆದರೆ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದ ಹಿನ್ನಲೆಯಲ್ಲಿ ʻಹೈಬ್ರಿಡ್ ಮಾದರಿಗೆʼ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅನಿವಾರ್ಯವಾಗಿ ಸಹಕರಿಸಬೇಕಾಗಿದೆ. ಅದಾಗಿಯೂ ಟೂರ್ನಿಯ ಆತಿಥ್ಯ ಪಾಕಿಸ್ತಾನದ ಬಳಿ ಉಳಿಯಲಿದೆ. ಎಸಿಸಿ ನಿರ್ಧಾರವನ್ನು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಸ್ವಾಗತಿಸಿದ್ದಾರೆ.
ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಏಷ್ಯಾ ಕಪ್- 2023 ಟೂರ್ನಿಯ ಒಟ್ಟು 13 ಪಂದ್ಯಗಳ ಪೈಕಿ, ಪಾಕಿಸ್ತಾನದಲ್ಲಿ 4 ಮತ್ತು ಉಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಪಾಕಿಸ್ತಾನದ ಪಂದ್ಯಗಳು ಲಾಹೋರ್ನಲ್ಲಿ ಮತ್ತು ಶ್ರೀಲಂಕಾದ ಪಂದ್ಯಗಳಿಗೆ ಕ್ಯಾಂಡಿ ಮತ್ತು ಪಲ್ಲೆಕೆಲೆ ಮೈದಾನ ಆತಿಥ್ಯ ವಹಿಸಲಿದೆ.
ಒಂದೇ ಗುಂಪಿನಲ್ಲಿ ಭಾರತ-ಪಾಕಿಸ್ತಾನ!
ಭಾರತ, ಪಾಕಿಸ್ತಾನ, ನೇಪಾಳ ಒಂದು ಗುಂಪಿನಲ್ಲಿ ಮತ್ತು ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಮತ್ತೊಂದು ಗುಂಪಿನಲ್ಲಿ ಸ್ಥಾನ ಪಡೆದಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ʻಸೂಪರ್ ಫೋರ್ʼ ಹಂತಕ್ಕೆ ಅರ್ಹತೆ ಪಡೆಯಲಿವೆ. ಬಳಿಕ ʻಸೂಪರ್ ಫೋರ್; ಹಂತದಿಂದ ಅಗ್ರ ಎರಡು ತಂಡಗಳು ಫೈನಲ್ ಪ್ರವೇಶಿಸಲಿವೆ.
ಅಕ್ಟೋಬರ್-ನವೆಂಬರ್ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯಲಿದೆ. ಈ ಮಹತ್ವದ ಟೂರ್ನಿಗೆ ಪೂರ್ವಸಿದ್ಧತೆ ಎಂಬಂತೆ ಈ ಬಾರಿಯ ಏಷ್ಯಾ ಕಪ್ ಪಂದ್ಯಾವಳಿಯು 50 ಓವರ್ಗಳ ಮಾದರಿಯಲ್ಲಿ ನಡೆಯಲಿದೆ.
2008ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಪ್ರಮುಖ ಟೂರ್ನಿಯು ನಡೆಯುತ್ತಿರುವುದು ವಿಶೇಷ. ಪಂದ್ಯಾವಳಿಯ ಪಂದ್ಯಗಳು ನಡೆಯುತ್ತಿರುವುದು ಇದೇ ಮೊದಲು. ಕಳೆದ 15 ವರ್ಷಗಳಿಂದ ಭಾರತ ತಂಡ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಿಲ್ಲ. ಈ ಬಾರಿಯೂ ಪಾಕಿಸ್ತಾನದ ಅಭಿಮಾನಿಗಳಿಗೆ ಇಂಡೋ-ಪಾಕ್ ಪಂದ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಕೈ ತಪ್ಪಿದೆ.