ತಲಾ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಸಕ್ತ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದ ಕೊನೆಯ ಪಂದ್ಯಗಳನ್ನಾಡಲಿವೆ.
ಎ-ಗುಂಪಿನಲ್ಲಿ ಸ್ಥಾನ ಪಡೆದಿರುವ ಇವೆರಡೂ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವುದರಿಂದ ಈ ಪಂದ್ಯದ ಫಲಿತಾಂಶ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ ಇಂದು ನಡೆಯಲಿರುವ ಪಂದ್ಯವು ಭಾರತ ತಂಡದ ಸೆಮಿಫೈನಲ್ ಎದುರಾಳಿಯನ್ನು ನಿರ್ಧರಿಸಲಿದೆ.
ಉಭಯ ತಂಡಗಳ ಹಳೆಯ ದಾಖಲೆಗಳನ್ನು ಗಮನಿಸಿದರೆ ಈವರೆಗೆ ಎರಡೂ ತಂಡಗಳು 118 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 60 ಪಂದ್ಯಗಳಲ್ಲಿ ಭಾರತ, 50 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ. 7 ಪಂದ್ಯಗಳು ಫಲಿತಾಂಶವಿಲ್ಲದೇ ರದ್ದಾಗಿದ್ದರೆ, 1 ಪಂದ್ಯ ಟೈನಲ್ಲಿ ಅಂತ್ಯಗೊಂಡಿದೆ.
ತಲಾ 4 ಅಂಕ ಗಳಿಸಿದ್ದರೂ ರನ್‌ರೇಟ್ ಆಧಾರದಲ್ಲಿ ಕಿವೀಸ್ ಎ-ಗುಂಪಿನ ಅಗ್ರಸ್ಥಾನದಲ್ಲಿದ್ದರೆ, ಭಾರತ 2ನೇ ಸ್ಥಾನದಲ್ಲಿದೆ. ಭಾನುವಾರದ ಪಂದ್ಯದಲ್ಲಿ ಭಾರತ ಗೆದ್ದರೇ ತನ್ನ ಗುಂಪಿನಿಂದ ಅಗ್ರಸ್ಥಾನಿಯಾಗಿ ಹೊಮ್ಮಲಿದೆ. ವಿಜೇತ ತಂಡ ಸೆಮೀಸ್ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸುವ ಅವಕಾಶವನ್ನು ಪಡೆದುಕೊಳ್ಳಲಿದೆ.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ | ಪಾಕ್ ವಿರುದ್ಧದ ಒಂದು ಪಂದ್ಯ – ವಿರಾಟ್ ಕೊಹ್ಲಿಗೆ ಹಲವು ದಾಖಲೆಗಳ ಕಿರೀಟ
ಹಿಂದಿನ ಪಂದ್ಯಗಳ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ ಬ್ಯಾಟರ್‌ಗಳು ಸ್ಪಿನ್ ಬೌಲಿಂಗ್‌ನಲ್ಲಿ ರನ್‌ಗಳಿಸಲು ಪರದಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್‌ಗಳಾದ ಮೆಹಿದಿ ಹಸನ್ ಮಿರಾಜ್ (0/37) ಮತ್ತು ರಿಷಾದ್ ಹೊಸೈನ್ (2/38) ಅವರ ಬೌಲಿಂಗ್ ದಾಳಿ ಎದುರಿಸುವ ಸಂದರ್ಭದಲ್ಲಿ ಭಾರತೀಯ ಬ್ಯಾಟರ್‌ಗಳು ಎಚ್ಚರಿಕೆಯ ಆಟ ಪ್ರದರ್ಶಿಸಿದ್ದರು.
ಪಾಕ್ ವಿರುದ್ಧದ ಪಂದ್ಯದಲ್ಲಿ ʻಮಿಸ್ಟರಿ ಸ್ಪಿನ್ನರ್ʼ ಎಂದೇ ಬಿರುದಾಂಕಿತ ಲೆಗ್ ಸ್ಪಿನ್ನರ್ ಅಬ್ರಾರ್ ಅಹಮದ್ (1/28) ಅವರ ಎಸೆತಗಳನ್ನು ಎದುರಿಸುವಾಗಲೂ ಅದೇ ಎಚ್ಚರಿಕೆ ಮತ್ತು ಸುರಕ್ಷಿತ ಆಟಕ್ಕೆ ರೋಹಿತ್ ಪಡೆ ಮುಂದಾಗಿತ್ತು. ಪ್ರತಿಯೊಂದು ಎಸೆತಗಳನ್ನು ಕೊಹ್ಲಿ ಎಚ್ಚರಿಕೆಯಿಂದ ಎದುರಿಸುತ್ತಿದ್ದರು. ಆದರೆ ಮಿಷಲ್ ಸ್ಯಾಂಟ್ನರ್ ನೇತೃತ್ವದಲ್ಲಿ ಬಲಿಷ್ಠ ಸ್ಪಿನ್ ಪಡೆಯನ್ನು ಹೊಂದಿರುವ ಕಿವೀಸ್‌ನಿಂದ ಭಾರತ ಕಠಿಣ ಸವಾಲನ್ನು ನಿರೀಕ್ಷಿಸಬಹುದಾಗಿದೆ.
ಪಾಕ್ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಕಿವೀಸ್‌ನ ಮಿಚೆಲ್ ಸ್ಯಾಂಟ್ನರ್ (66ಕ್ಕೆ 3), ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೈಕೆಲ್ ಬ್ರೇಸ್‌ವೆಲ್ (28ಕ್ಕೆ 4) ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು. ಹೀಗಾಗಿ ಬ್ಯಾಟಿಂಗ್ ಲಯಕ್ಕೆ ಮರಳಿರುವ ಕಿಂಗ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಶುಭಮನ್ ಗಿಲ್ ಅವರಿಂದ ಉತ್ತಮ ಪ್ರದರ್ಶನವನ್ನು ತಂಡ ನಿರೀಕ್ಷಿಸಿದೆ.
ಟೀಂ ಇಂಡಿಯಾ ಈವರೆಗೆ ಕಣಕ್ಕಿಳಿಸಿರುವ ಮೂವರು ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ, ಅಕ್ಷರ್ ಪಟೇಲ್ ಮತ್ತು ಕುಲ್‌ದೀಪ್ ಯಾದವ್ ಹೆಚ್ಚು ವಿಕೆಟ್‌ಗಳನ್ನು ಪಡೆಯದೇ ಇದ್ದರೂ ಎದುರಾಳಿ ಬ್ಯಾಟರ್‌ಗಳನ್ನು ನಿಯಂತ್ರಿಸಿದ್ದಾರೆ. ಅದರಲ್ಲೂ ಪಾಕ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ನೂರಕ್ಕೂ ಹೆಚ್ಚು ರನ್‌ಗಳ ಜೊತೆಯಾಟ ನೀಡಿದರೂ 11-34 ಓವರ್‌ಗಳ ಅವಧಿಯಲ್ಲಿ ಭಾರತೀಯ ಸ್ಪಿನ್ ಬೌಲಿಂಗ್ ಪಡೆಯ ದಾಳಿಯಿಂದ ಪಾಕ್ ರನ್ ಗಳಿಕೆ ಹೆಚ್ಚಿಸಲು ಹರಸಾಹಸ ಪಟ್ಟಿತು.
ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ವಿಲ್ ಯಂಗ್, ಟಾಮ್ ಲಾಥಮ್, ಡಿವೋನ್ ಕಾನ್ವೆ ಮತ್ತು ರಚಿನ್ ರವೀಂದ್ರ ಅವರು ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ಬ್ಯಾಟರ್‌ಗಳಾಗಿದ್ದಾರೆ.
