ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಈ ವರ್ಷ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಅವರ ಶ್ರೇಣಿಕೃತ ಕೇಂದ್ರೀಯ ಗುತ್ತಿಗೆ ಪಟ್ಟಿಯನ್ನು ಇನ್ನು ಪ್ರಕಟಿಸಿಲ್ಲ. ಮಾಧ್ಯಮಗಳ ವರದಿಯ ಪ್ರಕಾರ ಈ ಮೂವರು ಆಟಗಾರರ ಎ+ ಗುತ್ತಿಗೆಯನ್ನು ಅಂತಿಮಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಬಿಸಿಸಿಐನಿಂದ ಎ+ ಶ್ರೇಣಿ ಗುತ್ತಿಗೆಯ ಮಾನದಂಡ ಪಡೆಯಬೇಕಾದರೆ ಏಕದಿನ, ಟೆಸ್ಟ್ ಹಾಗೂ ಟಿ20 ಮಾದರಿಯ ಕ್ರಿಕೆಟ್‌ಗಳಲ್ಲಿ ಅತ್ಯುತ್ತಮವಾಗಿ ಆಟವಾಡುತ್ತಿರಬೇಕು. ಆದರೆ ಈ ಮೂವರು ಆಟಗಾರರು ಟಿ20ಯಿಂದ ಕಳೆದ ವರ್ಷ ನಿವೃತ್ತರಾಗಿದ್ದಾರೆ. ಸಾಮಾನ್ಯವಾಗಿ ಬಿಸಿಸಿಐನ ಕೇಂದ್ರೀಯ ಗುತ್ತಿಗೆಯನ್ನು ಐಪಿಎಲ್‌ಗೂ ಮುನ್ನ ಪ್ರಕಟಿಸಲಾಗುತ್ತದೆ. ಆದರೆ ಮೂಲಗಳ ಪ್ರಕಾರ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ಅಂತ್ಯಗೊಂಡ ನಂತರ ನಿರ್ಧರಿಸಲಿದೆ.
ಆದಾಗ್ಯೂ, ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಮೂವರು ಉತ್ತಮ ಪ್ರದರ್ಶನದಿಂದ ಈ ಆಟಗಾರರ ಕೇಂದ್ರೀಯ ಗುತ್ತಿಗೆಯನ್ನು ಮುಂದುವರಿಸಬಹುದು ಎಂದು ಹೇಳಲಾಗುತ್ತಿದೆ. ಸದ್ಯದ ಪ್ರಕಾರ ಮೂರು ಶ್ರೇಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾಗೆ ಯಾವುದೇ ಸಮಸ್ಯೆಯಿಲ್ಲದೆ ಎ+ ಶ್ರೇಣಿ ಮುಂದುವರಿಸಲಾಗುವ ಸಾಧ್ಯತೆ ಹೆಚ್ಚಾಗಿದೆ.
ಇನ್ನೊಂದು ವರದಿಗಳ ಪ್ರಕಾರ, ಶಿಸ್ತಿನ ಕಾರಣದಿಂದ ಕಳೆದ ವರ್ಷ ಗುತ್ತಿಗೆಯಿಂದ ರದ್ದುಗೊಂಡಿದ್ದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ಈ ಬಾರಿ ಗುತ್ತಿಗೆಗೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಚಾಂಪಿಯನ್ಸ್ ಟ್ರೊಫಿ ಮಾತ್ರವಲ್ಲದೆ ದೇಶೀಯ ಕ್ರಿಕೆಟ್‌ನಲ್ಲೂ ಉತ್ತಮ ಪ್ರದರ್ಶನ ನೀಡಿರುವುದರಿಂದ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್: ಆಸ್ಟ್ರೇಲಿಯಾ ಮಣಿಸಿ ಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ
“ಚಾಂಪಿಯನ್ಸ್ ಟ್ರೋಫಿಯ ನಂತರ ರೋಹಿತ್ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿರುವುದರಿಂದ ಬಿಸಿಸಿಐ ಅಲ್ಲಿಯವರೆಗೂ ಕಾಯುತ್ತಿದೆ. ಒಂದು ವೇಳೆ ನಿವೃತ್ತಿ ಪ್ರಕಟಿಸಿದರೆ, ನಂತರ ಮಂಡಳಿ ಏನು ಮಾಡಬೇಕೆಂದು ಯೋಚಿಸಲಿದೆ. ಟಿ20 ವಿಶ್ವಕಪ್ ಗೆಲ್ಲಿಸುವುದರ ಜೊತೆ ಚಾಂಪಿಯನ್ಸ್ ಟ್ರೋಫಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಆತನ ಸಾಮರ್ಥ್ಯವನ್ನು ಕಡೆಗಣಿಸುವಂತಿಲ್ಲ” ಎಂದು ಮೂಲಗಳು ತಿಳಿಸಿವೆ.
ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿಯನ್ನು ಪ್ರತಿನಿಧಿಸಿರುವ ಎಬಿಡಿ ವಿಲಿಯರ್ಸ್ ಅವರು ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಕಡಿಮೆಯಾಗಿದೆ ಎಂಬುದು ಹಾಸ್ಯಾಸ್ಪದ ಎನ್ನುತ್ತಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿರುವ ಅವರು, “ಇತ್ತೀಚಿನ ದಿನಗಳಲ್ಲಿ ವಿರಾಟ್ ಸ್ಟ್ರೈಕ್ ರೇಟ್ ಕಡಿಮೆಯಾಗಿದೆ ಎಂದು ಟೀಕೆಮಾಡುವುದು ಹಾಸ್ಯಾಸ್ಪದ. ತಂಡಕ್ಕೆ ಏನು ಬೇಕೊ ಅದನ್ನು ಕೊಹ್ಲಿ ನೀಡುತ್ತಾ ಬಂದಿದ್ದಾರೆ. ಎಲ್ಲವೂ ಪರಿಸ್ಥಿತಿಯ ಆಧಾರದ ಮೇಲೆ ನಿರ್ದಾರವಾಗುತ್ತದೆ. ಮತ್ತೊಂದು ತುದಿಯಲ್ಲಿ ಜೊತೆಗಾರ ಆಟಗಾರನಿದ್ದರೆ ಆತನನ್ನು ನಂಬುವ ಜೊತೆಗೆ ಪ್ರಯೋಗಾತ್ಮಕ ಆಟದ ಜೊತೆ ಸ್ವತಂತ್ರವಾಗಿ ಆಟವಾಡುತ್ತಾರೆ. ಜೊತೆಗಾರನ ಆಟವು ನಿಧಾನವಾದಾಗ ಇನಿಂಗ್ಸ್‌ಗೆ ಬೇಕಾದ ಆಟವನ್ನು ಸಹಜವಾಗಿಯೆ ವಿರಾಟ್ ಮುಂದುವರಿಸುತ್ತಾರೆ” ಎಂದು ಪ್ರಶಂಸಿಸಿದ್ದಾರೆ.