ಹತ್ತಾರು ವರ್ಷಗಳವರೆಗೆ ದುಡಿಸಿಕೊಂಡು ಸೂಕ್ತ ವೇತನ ನೀಡದೇ ಅನ್ಯಾಯ ಮಾಡಿದ್ದಲ್ಲದೇ, ಕೆಲಸ ಕಾಯಂ ಮಾಡುವ ವೇಳೆ ಅಕ್ರಮ ಎಸಗಿ ಪ್ರಾಮಾಣಿಕವಾಗಿ ದುಡಿದವರು ಬೀದಿಗೆ ಬರುವಂತೆ ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜೇವರ್ಗಿ ತಾಲ್ಲೂಕು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಹೇಶಕುಮಾರ ರಾಠೋಡ ಆಗ್ರಹಿಸಿದರು.
ಜೇವರ್ಗಿ ಪಟ್ಟಣದ ಪುರಸಭೆ ಕಚೇರಿಯ ಎದುರು ನಡೆಯುತ್ತಿರುವ ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಸಲಾಗುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ʼಖಾಲಿಯಿರುವ 17 ಪೌರಕಾರ್ಮಿಕರ ಹುದ್ದೆಗಳಿಗೆ ಹಿಂದೆ ಜೇವರ್ಗಿ ಪುರಸಭೆಯಲ್ಲಿ ಕೆಲಸ ಮಾಡಿದ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಈವರೆಗೆ ಕೆಲಸ ಮಾಡಿದ ವೇತನ ಪಾವತಿಸಬೇಕು. ದಲಿತರು ಬದುಕುವ ಹಕ್ಕನ್ನು ಅಧಿಕಾರಿಗಳು ಕಸಿಯುವಂತಹ ದೌರ್ಜನ್ಯ ಎಸಗಿದ್ದು, ಇಂತಹ ಅನ್ಯಾಯ, ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಕೂಡಲೇ ಪೌರಕಾರ್ಮಿಕರಿಗೆ ನ್ಯಾಯ ಸಿಗಬೇಕುʼ ಎಂದು ಒತ್ತಾಯಿಸಿದರು.
ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷೆ ಶಂಕುಬಾಯಿ, ಷಣ್ಮುಖಮ್ಮ ಮತ್ತು ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ʼನಾವು ಅಧಿಕಾರಿಗಳ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದ್ದೇವೆ. ವೇತನ ದೊರೆಯಲಿ, ದೊರೆಯದೇ ಇರಲಿ.. ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಆದರೆ ಅಧಿಕಾರಿಗಳು ಕೆಲಸ ಕಾಯಂಗೊಳಿಸುತ್ತೇವೆ ಎಂದು ಭರವಸೆ ನೀಡಿ, ಮೋಸ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ. ಶಾಸಕರು ಹಲವು ಬಾರಿ ಭರವಸೆ ನೀಡಿದ್ದರೂ, ನಮಗೆ ನ್ಯಾಯ ಕೊಡಲು ಸಾಧ್ಯವಾಗಿಲ್ಲ. ಹೀಗಾಗಿ ಪಟ್ಟಣಕ್ಕೆ ಬರುತ್ತಿರುವ ಮುಖ್ಯಮಂತ್ರಿಗಳಿಗೆ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಯುವಜನರಿಗೆ ನಿರಾಸೆ ಮೂಡಿಸಿದ ರಾಜ್ಯ ಬಜೆಟ್ : ಡಿವೈಎಫ್‌ಐ
ಎಐಟಿಯುಸಿ ತಾಲ್ಲೂಕು ಅಧ್ಯಕ್ಷ ಬಾಬು ಕೆ. ಮುಲ್ಲಾ, ಎಐಟಿಯುಸಿ ತಾಲ್ಲೂಕು ಕಾರ್ಯದರ್ಶಿ ಅಶೋಕ ಸಾಸಾನೂರ, ಉಗಾರ ಶುಗರ್ ಕಾರ್ಮಿಕರ ಸಂಘದ ಕಾರ್ಯದರ್ಶಿ ವಿಜಯಕುಮಾರ, ಮಡಿವಾಳಪ್ಪ, ನಿತ್ಯಾನಂದ ಹಿರೇಮಠ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಅಬ್ದುಲ್ ರಶೀದ, ಶಬ್ಬೀರ ಮಡಕಿ, ಸಕ್ರೆಪ್ಪ ಪೂಜಾರಿ, ನಾಗರಾಜ ಮತ್ತು 17 ಪೌರಕಾರ್ಮಿಕರು ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.