ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಬಳಿಕ ಅತ್ಯಂತ ಮಹತ್ವ ಪಡೆದಿರುವ ಪ್ರತಿಷ್ಠಿತ ಆ್ಯಶಸ್ ಟೆಸ್ಟ್ ಸರಣಿಗೆ ಎಡ್ಜ್ಬಾಸ್ಟನ್ನಲ್ಲಿ ಶುಕ್ರವಾರ ಚಾಲನೆ ದೊರತಿದೆ.
ಆಸ್ಟ್ರೇಲಿಯಾ ಇಂಗ್ಲೆಂಡ್ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಆರಂಭದಲ್ಲೇ ಆತಿಥೇಯ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನ 78 ಓವರ್ ಬ್ಯಾಟಿಂಗ್ ಮಾಡಿದ್ದ ಬೆನ್ ಸ್ಟೋಕ್ಸ್ ಪಡೆ, 8 ವಿಕೆಟ್ ನಷ್ಟದಲ್ಲಿ 393 ರನ್ ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ಅಚ್ಚರಿಯ ನಿರ್ಧಾರ ಕೈಗೊಂಡಿತ್ತು.
ಅತ್ಯುತ್ತಮವಾಗಿ ಆಡುತ್ತಿರುವ ವೇಳೆಯೇ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ ಇಂಗ್ಲೆಂಡ್ ನಿರ್ಧಾರಕ್ಕೆ ಕ್ರಿಕೆಟ್ ಜಗತ್ತಿನ ಹಲವು ದಿಗ್ಗಜರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೀಗ ತೆಲುಗು ಚಿತ್ರರಂಗದ ಖ್ಯಾತ ನಟ ಮಹೇಶ್ ಬಾಬು, ಇಂಗ್ಲೆಂಡ್ ತಂಡವನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದಾರೆ.
ʻ393-8 ಡಿಕ್ಲೇರ್… ನಾನು ಓದುತ್ತಿರುವುದು ಸರಿಯಾಗಿದೆಯಲ್ಲವೇ.. ವಾವ್… ಜಸ್ಟ್ ವಾವ್… ಕ್ರಿಕೆಟ್ನ ಹೊಸ ಯುಗಕ್ಕೆ ಸಾಕ್ಷಿಯಾಗಿದ್ದೇನೆ… ಬಝ್ಬಾಲ್ʼ ಎಂದು ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.
ಆ್ಯಶಸ್ ಸರಣಿಯಲ್ಲಿ ಶತಕದ ಬರ ನೀಗಿಸಿದ ರೂಟ್
ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಕೊನೆಗೂ ತಮ್ಮ ಶತಕದ ಬರ ನೀಗಿಸಿದ್ದಾರೆ. 32 ವರ್ಷದ ರೂಟ್, 8 ವರ್ಷಗಳ ಅವಧಿಯಲ್ಲಿ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಶುಕ್ರವಾರ, 17ನೇ ಪಂದ್ಯದಲ್ಲಿ ಮೊದಲ ಶತಕದ ಸಂಭ್ರಮವನ್ನಾಚರಿಸಿದರು.
ರೂಟ್ 110 ರನ್ ತಲುಪಿದ್ದ ವೇಳೆ, ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು. ಸ್ಟೋಕ್ಸ್ ನಿರ್ಧಾರ ಅಚ್ಚರಿ ಉಂಟು ಮಾಡಿದೆ ಎಂದು ಇಂಗ್ಲೆಂಡ್ನ ಮಾಜಿ ನಾಯಕರಾದ ಮೈಕಲ್ ವಾನ್, ಕೆವಿನ್ ಪೀಟರ್ಸನ್ ಹಾಗೂ ಇಯಾನ್ ಮಾರ್ಗನ್ ಪ್ರತಿಕ್ರಿಯಿಸಿದ್ದಾರೆ.
ʻಸ್ಟೋಕ್ಸ್ ಸ್ಥಾನದಲ್ಲಿ ನಾನಾಗಿರುತ್ತಿದ್ದರೆ ಡಿಕ್ಲೇರ್ ಘೋಷಿಸುತ್ತಿರಲಿಲ್ಲ. ಈ ಹಿಂದೆ ಯಾವುದೇ ತಂಡ ಮಾಡದ ಪ್ರಯತ್ನ ಮತ್ತು ಎದುರಾಳಿಗೆ ಸಂದೇಶವೊಂದನ್ನು ಕಳುಹಿಸಲು ಇಂಗ್ಲೆಂಡ್ ಪ್ರಯತ್ನಿಸುತ್ತಿದೆ. ನಾಯಕನಾಗಿ ನಾನು ಮತ್ತಷ್ಟು ರನ್ಗಳನ್ನು ಬಯಸುತ್ತಿದ್ದೆʼ ಎಂದು ಮೈಕೆಲ್ ವಾನ್ ಹೇಳಿದ್ಧಾರೆ.
ಆದರೆ, ಸ್ಟೋಕ್ಸ್ ದಿಟ್ಟ ನಿರ್ಧಾರವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿನಂದಿಸಿದ್ದಾರೆ.