ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮಹತ್ವದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೆಣಸಲಿದೆ. 25 ವರ್ಷಗಳ ಬಳಿಕ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದು, ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
12 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಲು ಟೀ ಇಂಡಿಯಾ ಸನ್ನದ್ಧವಾಗಿದೆ. ಸೆಮಿಫೈನಲ್‌ನಲ್ಲಿ ಒಂದು ಕಡೆ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ಎದುರು ಗೆಲುವು ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟರೆ, ಮತ್ತೊಂದು ಕಡೆ ಟೀಂ ಇಂಡಿಯಾ ಆಸ್ಟ್ರೇಲಿಯಾ ಎದುರು 4 ವಿಕೆಟ್ ರೋಚಕ ಗೆಲುವು ಕಂಡಿದೆ.
ಇಂದಿನ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡವಾದರೂ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ನ್ಯೂಜಿಲೆಂಡ್ ತಂಡವನ್ನು ಕಡೆಗಣಿಸುವಂತಿಲ್ಲ. ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ, ಶುಭಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್‌ನಲ್ಲಿ ಪ್ರಮುಖರಾಗಿದ್ದರೆ , ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ.
ಗಿಲ್ 4 ಪಂದ್ಯಗಳಲ್ಲಿ 1 ಶತಕದ ಸಹಾಯದಿಂದ 157 ರನ್ ಗಳಿಸಿದ್ದಾರೆ. ವಿರಾಟ್ 4 ಪಂದ್ಯಗಳಲ್ಲಿ 1 ಶತಕ ಮತ್ತು 1 ಅರ್ಧಶತಕದ ಸಹಾಯದಿಂದ 217 ರನ್ ಗಳಿಸಿದ್ದಾರೆ. ಅಯ್ಯರ್ 4 ಪಂದ್ಯಗಳಲ್ಲಿ 2 ಅರ್ಧಶತಕಗಳೊಂದಿಗೆ 195 ರನ್ ಬಾರಿಸಿದ್ದಾರೆ. ಬೌಲಿಂಗ್‌ನಲ್ಲಿ ಶಮಿ 4 ಪಂದ್ಯಗಳಲ್ಲಿ 8 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ 2 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಕುಲದೀಪ್ 4 ಪಂದ್ಯಗಳಲ್ಲಿ 5 ವಿಕೆಟ್ ಉರುಳಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಬ್ಬರು ವೇಗದ ಬೌಲರ್‌ಗಳ ಜೊತೆ ನಾಲ್ವರು ಸ್ಪಿನ್ನರ್‌ಗಳು ಕಣಕಿಳಿದಿದ್ದರು. ಇಂದು ಕೂಡ ಅದೇ ಬೌಲಿಂಗ್ ಪಡೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಸದ್ಯ ಶಮಿ, ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಫಾರ್ಮ್‌ನಲ್ಲಿರುವುದು ಕಿವೀಸ್ ತಂಡಕ್ಕೆ ತಲೆನೋವಾಗಬಹುದು.
ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಟಾಮ್ ಲ್ಯಾಥಮ್, ರಚಿನ್ ರವೀಂದ್ರ ಮತ್ತು ಕೇನ್ ವಿಲಿಯಮ್ಸನ್ ಬಲ ತುಂಬಿದ್ದಾರೆ. ಲ್ಯಾಥಮ್ 4 ಪಂದ್ಯಗಳಲ್ಲಿ 1 ಶತಕದೊಂದಿಗೆ 191 ರನ್ ಗಳಿಸಿದರೆ, ರಚಿನ್ 3 ಪಂದ್ಯಗಳಲ್ಲಿ 2 ಶತಕಗಳೊಂದಿಗೆ 226 ರನ್ ಕಲೆ ಹಾಕಿದ್ದಾರೆ. ವಿಲಿಯಮ್ಸನ್ 4 ಪಂದ್ಯಗಳಲ್ಲಿ 189 ರನ್ ಹೊಡೆದಿದ್ದಾರೆ. ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಸ್ಪಿನ್ ಬೌಲಿಂಗ್ ಚೆಂಡಿನೊಂದಿಗೆ ತಂಡಕ್ಕೆ ನೆರವಾಗುತ್ತಿದ್ದಾರೆ. ಸ್ಯಾಂಟ್ನರ್ 4 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಮತ್ತು ಬ್ರೇಸ್‌ವೆಲ್ 4 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ರೋಹಿತ್ ಶರ್ಮಾ ಬೊಜ್ಜು ಹೊಂದಿರುವ ಕ್ರೀಡಾಳು, ತೂಕ ಇಳಿಸಿಕೊಳ್ಳಬೇಕು ಎಂದ ಕಾಂಗ್ರೆಸ್ ನಾಯಕಿ
ದುಬೈ ಕ್ರೀಡಾಂಗಣದ ಪಿಚ್ ನಿಧಾನವಾಗಿದೆ. ಇದು ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಆದರೆ ನಂತರ ಚೆಂಡು ನಿಂತು ಬರಲಿದೆ. ಇದು ಬ್ಯಾಟರ್‌ಗಳಿಗೆ ರನ್ ಗಳಿಸಲು ಕಷ್ಟವಾಗುತ್ತದೆ. ಹೊಸ ಬ್ಯಾಟರ್‌ಗಳು ಕ್ರೀಸ್‌ಗೆ ಬಂದು ಬಿರುಸಿನ ಬ್ಯಾಟಿಂಗ್ ಮೂಲಕ ರನ್ ಗಳಿಸಲು ಸಾಧ್ಯವಿಲ್ಲ. ಮೊದಲು, ಅವರು ಕ್ರೀಸ್‌ನಲ್ಲಿ ನಿಂತು ಚೆಂಡನ್ನು ಗಮನಿಸಿ ರನ್ ಗಳಿಸಬೇಕು. ಇಲ್ಲಿ ಸ್ಪಿನ್ ಬೌಲರ್‌ಗಳು ಹಳೆಯ ಚೆಂಡಿನ ಸಹಾಯವನ್ನೂ ಪಡೆಯಲಿದ್ದು, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಬಹಳ ಪರಿಣಾಮಕಾರಿಯಾಗಲಿದ್ದಾರೆ. ಎದುರಾಳಿ ತಂಡದ ಬ್ಯಾಟರ್‌ಗಳಿಗೆ ಸ್ಪಿನ್ನರ್‌ಗಳು ಕಾಟ ನೀಡುವ ಸಾಧ್ಯತೆಯಿದೆ.
ಉಭಯ ತಂಡಗಳ ಸಮಬಲ
ಒಟ್ಟು ಪಂದ್ಯ – 2
ಭಾರತ ಗೆಲುವು – 1
ನ್ಯೂಜಿಲೆಂಡ್ ಗೆಲುವು – 1
ಏಕದಿನ ಪಂದ್ಯಗಳಲ್ಲಿ ಭಾರತ-ಕಿವೀಸ್ ಅಂಕಿಅಂಶ
ಒಟ್ಟು ಪಂದ್ಯ – 119
ಭಾರತ ಗೆಲುವು – 61
ನ್ಯೂಜಿಲೆಂಡ್ ಜಯ – 50
ಫಲಿತಾಂಶವಿಲ್ಲ – 7
ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದ್ದು, ಟಾಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ. ಭಾರತ 3ನೇ ಬಾರಿ ಕಪ್ ಗೆಲ್ಲಲಿ ಅಂತ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.
ಉಭಯ ತಂಡಗಳ ಸಂಭಾವ್ಯ ಆಟಗಾರರು:
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್.
ನ್ಯೂಜಿಲೆಂಡ್: ರಚಿನ್ ರವೀಂದ್ರ, ವಿಲ್ ಯಂಗ್, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ವಿಲಿಯಂ ಒ’ರೂರ್ಕ್.
