ಸಾಹಿತ್ಯದ ಎಲ್ಲಾ ಪ್ರಕಾರಗಳಿಗಿಂತ ಕಾವ್ಯ ಪ್ರಕಾರವು ಬೇಗನೆ ಜನಮನ ಮುಟ್ಟುತ್ತದೆ. ಕಾವ್ಯಗಳು ಜನರಿಗೆ ಸಂದೇಶ ಕೊಡುವಂತಿರಬೇಕು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು ಎಂದು ಹಿರಿಯ ಸಾಹಿತಿ ದೊಡ್ಡಣ್ಣ ಭಜಂತ್ರಿ ಅಭಿಪ್ರಾಯಪಟ್ಟರು.
ವಿಜಯಪುರದ ಕರ್ನಾಟಕ ಲೇಖಕಿಯರ ಸಂಘವು ನಗರದ ವನಿತಾ ಉತ್ಕರ್ಷ ಮಂಡಳಿಯಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಆಯೋಜಿಸಿಉದ್ದ ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕಾವ್ಯ ಪ್ರಕಾರವು ಬಹು ಬೇಗನೇ ಜನಮಾನಸದಲ್ಲಿ ನಿಲ್ಲುತ್ತದೆ. ದಲಿತ, ಬಂಡಾಯ ಸಾಹಿತ್ಯವೇ ಇದಕ್ಕೆ ಸಾಕ್ಷಿ” ಎಂದರು.
ಕರ್ನಾಟಕದ ಲೇಖಕಿಯರ ಸಂಘದ ಕಾರ್ಯದರ್ಶಿ ಡಾ.ಸುಜಾತಾ ಚಲವಾದಿ ಮಾತನಾಡಿ, “ದಿನನಿತ್ಯದ ಬದುಕಲ್ಲಿ ಮಹಿಳೆಯ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮಹಿಳೆ ಜಾಗೃತಳಾಗಬೇಕು ಹಾಗೇ ಸಂಘಟಕಳಾಗಬೇಕು ಆಗ ಮಹಿಳಾ ದಿನಾಚರಣೆಯಂತಹ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯ” ಎಂದರು.
ಬಾದಾಮಿಯ ಹಿರಿಯ ಲೇಖಕಿ ಜಯಶ್ರೀ ಭಂಡಾರಿ ಅವರು ಮಾತನಾಡಿ, “ಸುನಿತಾ ವಿಲಿಯಮ್ಸ್, ಇಂದಿರಾಗಾಂಧಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ, ಜೀಜಾಮಾತೆ, ಸ್ವಾತಂತ್ರ್ಯದ ಕಿಡಿ ಹಚ್ಚಿದ ಕಿತ್ತೂರುರಾಣಿ ಚೆನ್ನಮ್ಮಾದಿಯಾಗಿ ಮಹಿಳೆಯರು ಎಲ್ಲ ರಂಗದಲ್ಲೂ ಮುಂದಿದ್ದಾರೆ, ಮಾದರಿಯಾಗಿದ್ದಾರೆ. ಕಾಲ ಕಾಲಕ್ಕೆ ನಡೆಯುವ ಆಪತ್ತುಗಳನ್ನು ಎದುರಿಸಲು ಇಂಥ ಮಹಿಳೆಯರೇ ಸ್ಪೂರ್ತಿಯಾಗಿದ್ದಾರೆ. ಜಾನಪದವು ಎಲ್ಲ ಸಾಹಿತ್ಯದ ತಾಯಿಬೇರಾಗಿದ್ದು, ಇದು ಅನಕ್ಷರ ಮಹಿಳೆಯರಿಂದ ರಚಿಸಲ್ಪಟ್ಟಿದೆ. ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವವರು ಹೆಣ್ಣು ಮಕ್ಕಳೇ” ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯೆ ದಾಕ್ಷಾಯಿಣಿ ಹುಡೇದ ಮಾತನಾಡಿ, “ಹೆಣ್ಣು ಮತ್ತು ಗಂಡಿನಲ್ಲಿ ಜೈವಿಕ ವ್ಯತ್ಯಾಸ ಬಿಟ್ಟರೆ ಉಳಿದಂತೆ ಎಲ್ಲದರಲ್ಲಿಯೂ ಸಮಾನರು. ಮಹಿಳೆಯರ ಉಡುಗೆ ತೊಡುಗೆ, ಬದುಕಿನ ನಿರ್ಧಾರಗಳ ಮೇಲೆಲ್ಲಾ ಪುರುಷ ಪಾರಮ್ಯ ಯಾಕೆ? ನಮಗೆ ಬೇಕೆ ಇದು ಎಂಬ ಜಿಜ್ಞಾಸೆಯೊಂದಿಗೆ ಮಹಿಳೆಯು ವೈಚಾರಿಕತೆಗೆ ಮಹತ್ವ ಕೊಡಬೇಕು. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು” ಎಂದರು.
ಹಲಸಂಗಿ ಗೆಳೆಯರ ಟ್ರಸ್ಟ್ ನ ಸದಸ್ಯರಾದ ದಾಕ್ಷಾಯಿಣಿ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಹೇಮಲತಾ ವಸ್ತ್ರದವರು ಮಾತನಾಡಿ, “ಕಾಲದ ಕುಲುಮೆಯಲ್ಲಿ ಬೆಂದು ಉಳಿದದ್ದು ಮಾತ್ರ ಗಟ್ಟಿ ಕಾವ್ಯ. ಕವಿಗೆ ಅಧ್ಯಯನಶೀಲತೆ ಅಗತ್ಯ. ವ್ಯಾಪಕ ಓದು ಇರಬೇಕು. ಪರಕಾಯ ಪ್ರವೇಶ ಮಾಡಿ ಬರೆಯಬೇಕಾಗುತ್ತದೆ. ಬರಹವೆಂದರೆ ಅದೊಂದು ಧ್ಯಾನ, ತಪಸ್ಸು ಇದ್ದಂತೆ. ಜೊತೆಗೆ ಒಳ್ಳೆಯ ಕಿವಿಯಾದರೆ ಮಾತ್ರ ಸಶಕ್ತ ಕವಿಯಾಗಬಹುದು” ಎಂದರು.
ಕವಿಗೋಷ್ಠಿಯಲ್ಲಿ ಮೀನಾಕ್ಷಿ ಪಾಟೀಲ, ಸಿದ್ಧಾರೂಢ ಕಟ್ಟೀಮನಿ, ಗೀತಾ ಕುದುರಕರ್, ಲಕ್ಷ್ಮಿ ತೊರವಿ, ಭಾಗ್ಯಶ್ರೀ ಸಕನಾದಗಿ, ರುಕ್ಮಿಣಿ ಅಗಸರ, ಶಾನುಬಿ ಮುಜಾವರ್, ದಿವ್ಯಪಾರ್ವತಿ ಹಸ್ಮಕಲ್, ರುದ್ರಮ್ಮ ಗಿಡ್ಡಪ್ಪಗೋಳ, ಸದ್ದಾಂ ಮುಜಾವರ್, ಪ್ರಿಯಾ ಹರಿದಾಸ್, ಶೋಭಾ ಕಬಾಡೆ, ವಿಶಾಲಾಕ್ಷಿ ಪಾಟೀಲ, ಸುನಂದಾ ಕೋರಿ, ಶಶಿಕಲಾ ಬುಯ್ಯಾರ, ದೀಪಾ ಗೊಣಸಗಿ, ಧನಲಕ್ಷ್ಮಿ ದೊಡ್ಡಮನಿ, ವಿಜಯಲಕ್ಷ್ಮಿ ದಿವಾನಜಿ, ಎಲ್ಲರೂ ಮಹಿಳಾ ಪರವಾದ ಹಾಗೂ ಮಹಿಳಾ ಸಂವೇದನೆಯುಳ್ಳ ಕವಿತೆಗಳನ್ನು ವಾಚಿಸಿದರು.
ಇದನ್ನೂ ಓದಿ: ವಿಜಯಪುರ | ಬಜೆಟ್ ಕುರಿತು ಬಿಜೆಪಿ ಟೀಕೆ; ತಿರುಗೇಟು ಕೊಟ್ಟ ಕೆಪಿಸಿಸಿ ವಕ್ತಾರ ಗಣಿಹಾರ
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಇಂದುಮತಿ ಲಮಾಣಿ, ಖ್ಯಾತ ಗಜಲ್ಕಾರ್ತಿ ಪ್ರಭಾವತಿ ದೇಸಾಯಿ, ಅನುರಾಧಾ ಅಡುರಾಜೂರ, ನಿವೃತ್ತ ಡೈಟ್ ಉಪನ್ಯಾಸಕ ಆರ್ ವೈ ಕೊಣ್ಣೂರ, ರವಿ ಗೋಲಾ, ಎಸ್ ಎಸ್ ಬಬಲೇಶ್ವರ, ಚೆನ್ನಪ್ಪ ಹಂಚಿನಾಳ, ಮಿನಾಜಬೇಗಂ ಸುಂಬಡ ಸೇರಿ ಹಲವರು ಉಪಸ್ಥಿತರಿದ್ದರು.
