1981ರಲ್ಲಿ, ಉತ್ತರ ಪ್ರದೇಶದ ಫಿರೋಜಾಬಾದ್‌ನ ದಿಹುಲೀ ಗ್ರಾಮದಲ್ಲಿ 24 ಮಂದಿ ದಲಿತರನ್ನು ಗುಂಡಿಟ್ಟು ಕೊಂದು ಹತ್ಯಾಕಾಂಡ ನಡೆಸಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿದೆ. ಮೂವರಿಗೂ ಮರಣದಂಡನೆ ಶಿಕ್ಷೆ ವಿಧಿಸಿದೆ.
ನರಮೇಧ ನಡೆದು 44 ವರ್ಷಗಳ ಬಳಿಕ ಪ್ರಕರಣದಲ್ಲಿ ನ್ಯಾಯ ದೊರೆತಿದೆ. ದಲಿತರನ್ನು ಹತ್ಯೆಗೈದಿದ್ದ 17 ಮಂದಿ ಆರೋಪಿಗಳಲ್ಲಿ ಈಗಾಗಲೇ 13 ಮಂದಿ ಮೃತಪಟ್ಟಿದ್ದಾರೆ. ಓರ್ವ ನಾಪತ್ತೆಯಾಗಿದ್ದಾನೆ. ಪ್ರಕರಣದಲ್ಲಿ ಉಳಿದಿದ್ದ ಮೂವರು ಆರೋಪಿಗಳಿಗೆ ಈಗ ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ಮೈನ್‌ಪುರಿ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ವರದಿ ಪ್ರಕಾರ, 1981ರ ನವೆಂಬರ್ 18ರಂದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 24 ಮಂದಿಯನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಅಂದು ರಾತ್ರಿ, ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ದಿಹುಲೀ ಗ್ರಾಮದ ದಲಿತ ಕಾಲೋನಿಗೆ ನುಗ್ಗಿ ಗುಂಡಿನ ದಾಳಿ ನಡೆಸಿತ್ತು. ಮೂರು ಗಂಟೆಗಳ ಕಾಲ ನಡೆದ ನಿರಂತರ ದಾಳಿಯಲ್ಲಿ, 23 ಜನರು ಸ್ಥಳದಲ್ಲೇ ಸಾವನ್ನಪ್ಪಿದರು. ಮತ್ತೋರ್ವ ವ್ಯಕ್ತಿ ಫಿರೋಜಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆದರು.
ಹತ್ಯಾಕಾಂಡ ನಡೆದ ಮರುದಿನ, (ನವೆಂಬರ್ 19) ಗ್ರಾಮದ ನಿವಾಸಿ ಲಯಕ್ ಸಿಂಗ್ ಎಂಬವರು ಜಸ್ರಾನಾ ಪೊಲೀಸರಿಗೆ ದೂರು ನೀಡಿದ್ದರು. ರಾಧೇಶ್ಯಾಮ್ ಅಲಿಯಾಸ್ ರಾಧೆ, ಸಂತೋಷ್ ಚೌಹಾಣ್ ಅಲಿಯಾಸ್ ಸಂತೋಷ, ರಾಮಸೇವಕ್, ರವೀಂದ್ರ ಸಿಂಗ್, ರಾಂಪಾಲ್ ಸಿಂಗ್ ಸೇರಿದಂತೆ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಚಾರ್ಜ್‌ಶೀಟ್‌ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಲಯದಲ್ಲಿ ಆರಂಭಿಕ ವಿಚಾರಣೆ ನಡೆದು ಬಳಿಕ, ಪ್ರಕರಣವನ್ನು ಪ್ರಯಾಗ್‌ರಾಜ್‌ಗೆ ವರ್ಗಾಯಿಸಲಾಯಿತು. ಮತ್ತೆ ಅಲ್ಲಿಂದ, ಪ್ರಕರಣವನ್ನು ಮೈನ್‌ಪುರಿ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ಈ ವರದಿ ಓದಿದ್ದೀರಾ?: ದಿಹುಲೀ ದಲಿತ ಹತ್ಯಾಕಾಂಡ; 44 ವರ್ಷ ನಡೆದ ಕೇಸಿನ ಬೆವರು-ನೆತ್ತರು-ಕಂಬನಿಯ ಕತೆಯೇನು?
ಈ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಿರಂತರ 15 ವರ್ಷಗಳ ಕಾಲ ನಡೆದಿದೆ. ಸುದೀರ್ಘ ವಿಚಾರಣೆಯ ಬಳಿಕ, ಮಾರ್ಚ್ 11ರಂದು ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಸಿಂಗ್ ಅವರು ಮೂವರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಿದ್ದರು. ಮಂಗಳವಾರ (ಮಾರ್ಚ್ 18) ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದು, ಕಪ್ತಾನ್ ಸಿಂಗ್, ರಾಮಸೇವಕ್ ಹಾಗೂ ರಾಮ್ ಪಾಲ್‌ಗೆ ಮರಣದಂಡನೆ ವಿಧಿಸಿದೆ. ಇನ್ನು, ಜ್ಞಾನಚಂದ್ರ ಎಂಬ 4ನೇ ಆರೋಪಿ ಪರಾರಿಯಾಗಿದ್ದಾನೆ.