ಡೊಮಿನಿಕನ್ ರಿಪಬ್ಲಿಕ್ನಲ್ಲಿ ಭಾರತೀಯ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು ಆಕೆಯ ಪೋಷಕರು ತಮ್ಮ ಮಗಳು ಮೃತಪಟ್ಟಿರುವುದಾಗಿ ಘೋಷಿಸುವಂತೆ ಡೊಮಿನಿಕನ್ ರಿಪಬ್ಲಿಕ್ಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಪ್ರಜೆ ಮತ್ತು ಅಮೆರಿಕದ ಖಾಯಂ ನಿವಾಸಿಯಾಗಿರುವ 20 ವರ್ಷದ ಸುಧೀಕ್ಷಾ ಕೋಣಂಕಿ ಕೊನೆಯ ಬಾರಿಗೆ ಮಾರ್ಚ್ 6ರಂದು ಪಂಟಾ ಕಾನಾದ ರಿಯು ರಿಪಬ್ಲಿಕಾ ರೆಸಾರ್ಟ್ನಲ್ಲಿ ಕಾಣಿಸಿಕೊಂಡಿದ್ದಾಳೆ. ಆದರೆ ಅದಾದ ಬಳಿಕ ನಾಪತ್ತೆಯಾಗಿದ್ದು, ಈವರೆಗೂ ಆಕೆಯ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದರಿಂದಾಗಿ ಆಕೆ ಜೀವಂತವಾಗಿಲ್ಲ ಎಂದು ನಂಬುವುದಾಗಿ ಆಕೆಯ ಪೋಷಕರು ಹೇಳಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಮಹಾ ಕುಂಭಮೇಳಕ್ಕೆ ತೆರಳಿದ್ದ 900 ಮಂದಿ ಇನ್ನೂ ಪತ್ತೆಯಾಗಿಲ್ಲ: ಅಖಿಲೇಶ್ ಯಾದವ್ ಗಂಭೀರ ಆರೋಪ
ವಿದ್ಯಾರ್ಥಿನಿ ಕೋಣಂಕಿಯ ಕುಟುಂಬಸ್ಥರು ಆಕೆಯನ್ನು ಅಧಿಕೃತ ಸಾವನ್ನಪ್ಪಿರುವುದಾಗಿ ಘೋಷಿಸುವಂತೆ ಕೋರಿ ಪತ್ರ ಬಂದಿರುವುದನ್ನು ಡೊಮಿನಿಕನ್ ರಿಪಬ್ಲಿಕ್ ರಾಷ್ಟ್ರೀಯ ಪೊಲೀಸರು ದೃಢಪಡಿಸಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ. ಆಕೆಯ ನಾಪತ್ತೆಯ ಹಿಂದೆ ಯಾವುದೇ ಅಪರಾಧ ಇರುವ ಅನುಮಾನ ನಮಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹಾಗೆಯೇ ಆಕೆಯ ಪೋಷಕರು ನಡೆಯುತ್ತಿರುವ ತನಿಖೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಗತ್ಯವಿರುವ ಯಾವುದೇ ಕಾನೂನು ವಿಧಿವಿಧಾನಗಳನ್ನು ಅನುಸರಿಸಲು ಸಿದ್ಧರಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ಕೋಣಂಕಿ ನಾಪತ್ತೆಯಾದ ಬಳಿಕ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲಾಗಿದ್ದು ಕೊನೆಯದಾಗಿ ಮಾರ್ಚ್ 3ರಂದು ಐವರು ಸ್ನೇಹಿತೆಯರೊಂದಿಗೆ ಪಂಟಾ ಕಾನಾಗೆ ತೆರಳಿರುವುದು ಕಂಡುಬಂದಿದೆ. ಹಾಗೆಯೇ ಮಾರ್ಚ್ 6ರಂದು, ತನ್ನ ಸ್ನೇಹಿತರ ಜೊತೆ ಹೋಟೆಲ್ ಬಾರ್ನಲ್ಲಿ ಮದ್ಯಪಾನ ಮಾಡುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ಇದನ್ನು ಓದಿದ್ದೀರಾ? ಪರ್ವತದಲ್ಲಿ ನಾಪತ್ತೆ | ಟೂತ್ಪೇಸ್ಟ್ ತಿಂದು 10 ದಿನಗಳ ಕಾಲ ಬದುಕಿ ಬಂದ ಯಾತ್ರಿಕ
ಹಾಗೆಯೇ ಬೆಳಿಗ್ಗೆ 4:15ಕ್ಕೆ ಕೋಣಂಕಿ ಮತ್ತು ಆಕೆಯ ಸ್ನೇಹಿತರು ಬೀಚ್ಗೆ ಹೋಗುತ್ತಿರುವುದು ಕಂಡುಬಂದಿದೆ. ಒಂದು ಗಂಟೆಯ ನಂತರ, ಐವರು ಯುವತಿಯರು ಮತ್ತು ಒಬ್ಬ ಯುವಕ ಕೋಣಂಕಿ ಇಲ್ಲದೆಯೇ ಹಿಂದಿರುಗುತ್ತಿರುವುದು ಕಂಡುಬಂದಿದೆ.
ಸದ್ಯ ಕೋಣಂಕಿ ಸ್ನೇಹಿತರ ಪೈಕಿ ಓರ್ವನಾದ ಅಯೋವಾದ 22 ವರ್ಷದ ಜೋಶುವಾ ಸ್ಟೀವನ್ ರೈಬ್ ಪಾಸ್ಪೋರ್ಟ್ ಅನ್ನು ಡೊಮಿನಿಕನ್ ರಿಪಬ್ಲಿಕ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೂ ಆತನನ್ನು ಶಂಕಿತ ಎಂದು ಪರಿಗಣಿಸಲಾಗಿಲ್ಲ. ಕೋಣಂಕಿ ಈಜುವಾಗ ಅಲೆಗೆ ಸಿಲುಕಿದರು ಎಂದು ರೈಬೆ ಹೇಳಿದ್ದಾನೆ. ಆದರೆ ಇಂದಿಗೂ ಅಮೆರಿಕ ಮತ್ತು ಡೊಮಿನಿಕನ್ ರಿಪಬ್ಲಿಕ್ ಎರಡೂ ದೇಶಗಳ ಅಧಿಕಾರಿಗಳು ಇದನ್ನು ನಾಪತ್ತೆ ಪ್ರಕರಣವಾಗಿಯೇ ಉಳಿಸಿಕೊಂಡಿದೆ. ಕ್ರಿಮಿನಲ್ ಪ್ರಕರಣವಲ್ಲ ಎಂದು ಹೇಳಿದೆ.
