ಬಿಸಿಯೂಟ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುತ್ತಿದ್ದ ಮೊಟ್ಟೆಗಳನ್ನು ಯಾವುದೇ ಕಾರಣಕ್ಕೂ ಮೊಟ್ಟೆಗಳ ಸಂಖ್ಯೆಯನ್ನು ಕಡಿತ ಮಾಡಬಾರದು ಎಂದು ಎಐಡಿಎಸ್‌ಒ ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ಆಗ್ರಹಿಸಿದ್ದಾರೆ.
“ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆಯಡಿ ನೀಡುವ ಮೊಟ್ಟೆಗಳ ಸಂಖ್ಯೆಯನ್ನು ಕಡಿತಗೊಳಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಎಐಡಿಎಸ್‌ಒ ಜಿಲ್ಲಾ ಸಮಿತಿ ಖಂಡಿಸುತ್ತದೆ” ಎಂದರು.
“ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಣದ ಕೊರತೆಯ ಕಾರಣ ನೀಡಿ, ಮಕ್ಕಳಿಗೆ ನೀಡುವ ಮೊಟ್ಟೆಗಳ ಸಂಖ್ಯೆಯನ್ನು ಎರಡರಿಂದ ಒಂದಕ್ಕೆ ಇಳಿಸುವುದಾಗಿ ಸುತ್ತೋಲೆ ಮೂಲಕ ತಿಳಿಸಿದೆ. ಕಡಿಮೆ ಆದಾಯದ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳಲ್ಲಿ ಕಂಡುಬರುವ ತೀವ್ರ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಮೊಟ್ಟೆಗಳನ್ನು ನೀಡಲಾಗುತ್ತಿತ್ತು” ಎಂದು ಹೇಳಿದರು.
“ದೇಶದಲ್ಲಿ ಪ್ರತಿದಿನ 5,000 ಮಂದಿ ಮಕ್ಕಳು ಅಪೌಷ್ಠಿಕತೆಯಿಂದ ಸಾಯುತ್ತಿದ್ದಾರೆ. ಸರಿಯಾದ ಪೌಷ್ಟಿಕ ಆಹಾರ ಸಿಗದೆ ರಾಜ್ಯದಲ್ಲಿ ಲಕ್ಷಾಂತರ ಮಕ್ಕಳ ಬೆಳವಣಿಗೆ ಕುಂಠಿತಗೊಂಡಿದೆ. ಬಿಸಿಯೂಟ ಯೋಜನೆ ಮತ್ತು ಶಾಲೆಗಳಲ್ಲಿ ನೀಡಲಾಗುವ ಮೊಟ್ಟೆ, ಬಾಳೆಹಣ್ಣು, ಚಿಕ್ಕಿಗಳ ಮೇಲೆ ಬಡಮಕ್ಕಳು ಅವಲಂಬಿತರಾಗಿದ್ದರು” ಎಂದರು.
ರಾಜ್ಯ ಸರ್ಕಾರದ ಪ್ರಸ್ತುತ ಕ್ರಮವು ಬಡ ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕಾಂಶದಿಂದ ವಂಚನೆ ಮಾಡಿದಂತಾಗುತ್ತದೆ. ಇತ್ತೀಚಿಗೆ ದೇಶಾದ್ಯಂತ ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದನ್ನು ನಾವು ನೋಡಿದ್ದೇವೆ. ರಾಷ್ಟ್ರೀಯ ಸರಾಸರಿಯಲ್ಲಿ ಶಾಲೆಯಿಂದ ಹೊರಗಿರುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳ ಕಂಡಿದೆ.
ತೀವ್ರ ಬಡತನ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಶಾಲಾ ಮಕ್ಕಳೂ ಕೂಡ ಉದ್ಯೋಗಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅಂತಹ ಸಮಯದಲ್ಲಿ, ಅವರ ಶಿಕ್ಷಣವನ್ನು ಮುಂದುವರಿಸುವಂತೆ, ಮಕ್ಕಳನ್ನು ಆಕರ್ಷಿಸಲು ಸಾಕಷ್ಟು ಮಾರ್ಗಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಹಣದ ಕೊರತೆಯಿದ್ದರೆ, ಸರ್ಕಾರ ಅದಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕೆ ವಿನಃ, ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಒಂದು ಮೊಟ್ಟೆಯನ್ನೂ ನೀಡಲು ಇಲಾಖೆಗೆ ಸಾಧ್ಯವಾಗದಿದ್ದರೆ ಇನ್ನೇನು ಕೊಡಲು ಸಾಧ್ಯ?
ರಾಜ್ಯ ಸರ್ಕಾರವು ತನ್ನ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು. ಶಿಕ್ಷಣ ತಜ್ಞರ ಶಿಫಾರಸಿನಂತೆ ಎರಡು ಮೊಟ್ಟೆಗಳನ್ನು ನೀಡಬೇಕೆಂದು ಒತ್ತಾಯಿಸುತ್ತದೆ ಎಂದರು. ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ನೀಡುವ ಹಾಲಿಗೂ ಕೊರತೆ ಎದುರಾಗಿದೆ ಎಂಬ ವರದಿಗಳಿವೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸಾರ್ವಜನಿಕ ಈಜುಕೊಳದಲ್ಲಿ ಅಕ್ರಮ; ಸೂಕ್ತ ಕ್ರಮಕ್ಕೆ ಆಗ್ರಹ
ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ವಿಷಯದಲ್ಲಿ ಸರ್ಕಾರ ಯಾವುದೇ ನೆಪಗಳನ್ನು ಒಡ್ಡುವಂತಿಲ್ಲ. ಈ ಹಕ್ಕುಗಳನ್ನು ಕಾಪಾಡುವುದು ಪ್ರಜಾಪ್ರಭುತ್ವ ದೇಶದಲ್ಲಿನ ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ಈ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ.
ಕರ್ನಾಟಕದ ಬಡ ಮಕ್ಕಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಎಲ್ಲ ಯೋಜನೆಗಳನ್ನು ಮುಂದುವರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವಂತೆ ನಾವು ಎಲ್ಲಾ ಶಿಕ್ಷಣ ಪ್ರೇಮಿ ಜನತೆ, ಪೋಷಕರು ಮತ್ತು ಶಿಕ್ಷಣ ತಜ್ಞರಲ್ಲಿ ಎಐಡಿಎಸ್‌ಒ ವತಿಯಿಂದ ಕೋರುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.