ವೈವಾಹಿಕ ವಿವಾದ ಪ್ರಕರಣವೊಂದರಲ್ಲಿ ನ್ಯಾಯಾಲಯದ ನಡೆಯಿಂದ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಲಾಗಿದ್ದ ಕುಟುಂಬ ನ್ಯಾಯಾಲಯದ ನ್ಯಾಯಾಧೀಶರ ವಾಹನಕ್ಕೆ ಹಾನಿ ಮಾಡಿದ ಘಟನೆ ಕೇರಳದ ಪಟ್ಟಣಂತಿಟ್ಟದ ತಿರುವಲ್ಲದಲ್ಲಿ ನಡೆದಿದೆ.
ಸುಮಾರು 55 ವರ್ಷದ ವ್ಯಕ್ತಿ ನ್ಯಾಯಾಲಯದಿಂದ ಹೊರಗೆ ಆಗಮಿಸುತ್ತಲೇ ಸಿಟ್ಟಿನಿಂದ ನ್ಯಾಯಾಧೀಶರ ಕಾರಿನ ಗಾಜುಗಳನ್ನು ಒಡೆದು ಹಾಕಿದ್ದಲ್ಲದೆ ಕಾರಿಗೆ ಗುದ್ದಿ ಹಾನಿಯುಂಟುಮಾಡಿದ್ದಾನೆ.
ನ್ಯಾಯಾಧೀಶರ ಕಾರಿಗೆ ಹಾನಿ ಎಸಗಿದ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನ ವಿರುದ್ಧ ನ್ಯಾಯಾಲಯದ ಕಲಾಪಕ್ಕೆ ಆಡ್ಡಿ, ಬೆದರಿಕೆ ಹಾಗೂ ಸಾರ್ವಜನಿಕ ಆಸ್ತಿ ಹಾನಿ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ ರಾಷ್ಟ್ರದ ಆತ್ಮಸಾಕ್ಷಿಗಾದ ಆಳವಾದ ಗಾಯ: ಶಾಂತಿಗೆ ಮನವಿ ಮಾಡಿದ ಸೋನಿಯಾ ಗಾಂಧಿ
ತನ್ನ ಪರವಾಗಿ ತಾನೇ ವಾದ ಮಂಡನೆ ಮಾಡುತ್ತಿರುವ ಆರೋಪಿಯು ತನಗೆ ನ್ಯಾಯಾಲಯದಿಂದ ನ್ಯಾಯ ಸಿಗುತ್ತಿಲ್ಲ ಹಾಗೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ, ಪತ್ನಿ ಮತ್ತು ನ್ಯಾಯಾಧೀಶರು ಜೊತೆಗೂಡಿ ತನ್ನ ವಾದವನ್ನು ಆಲಿಸುತ್ತಿಲ್ಲ ಎಂದು ಆರೋಪಿ ದೂರಿದ್ದಾನೆ.
ದಂಪತಿಯ ನಡುವಿನ ವಿವಾದವನ್ನು 2017ರಲ್ಲಿ ಪಟ್ಟಣಂತಿಟ್ಟ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಆದರೆ ಈ ನ್ಯಾಯಾಲಯದ ಮೇಲೆ ತನಗೆ ನಂಬಿಕೆ ಇಲ್ಲ ಎಂದು ಹೇಳಿಕೊಂಡು ಈ ವ್ಯಕ್ತಿ ಹೈಕೋರ್ಟ್ ಮೆಟ್ಟಿಲೇರಿದ್ದ. ನಂತರ, ದಂಪತಿಗಳ ನಡುವಿನ ಪ್ರಕರಣವನ್ನು ಈ ವರ್ಷ ಇಲ್ಲಿನ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.