ಗದಗ | ರಾಜ್ಯಕ್ಕೆ ಅಕ್ಕಿ ನೀಡಲು ಒಕ್ಕೂಟ ಸರ್ಕಾರ ನಿರಾಕರಣೆ; ಸಿಪಿಐಎಂ ಪ್ರತಿಭಟನೆ

ಗದಗ
  • ಬಡವರಿಗೆ ಉಚಿತ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ತೊಡಕು
  • ಆಹಾರ ನಿಗಮದ ಅಧಿಕಾರಿಗಳು ಒಪ್ಪಿದ್ದರೂ ಕೇಂದ್ರ ಸರ್ಕಾರ ವಿರೋಧ

ಒಕ್ಕೂಟ ಸರ್ಕಾರವು ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಣೆ ಮಾಡಿರುವುದನ್ನು ಖಂಡಿಸಿ ಸಿಪಿಐಎಂ ಸಂಘಟನೆಯ ನೇತೃತ್ವದಲ್ಲಿ ಗದಗ ಜಿಲ್ಲೆಯ ರೋಣ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್‌ ಮುಖಾಂತರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಿಪಿಐಎಂ ಗದಗ ಜಿಲ್ಲಾ ಅಧ್ಯಕ್ಷ ಮಹೇಶ ಹಿರೇಮಠ ಮಾತನಾಡಿ, “ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯು ಬಡವರ ಹಸಿವು ನೀಗಿಸಲು ನೆರವಾಗಲಿದ್ದು, ಇದು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ತಳ ಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆ ಎಂಬುದನ್ನು ಒಕ್ಕೂಟ ಸರ್ಕಾರ ಅರಿಯಬೇಕು” ಎಂದು ಮನವಿ ಮಾಡಿದರು.

“ಕರ್ನಾಟಕ ಸರ್ಕಾರ ಜೂಲೈ 1ರಿಂದ ಎಲ್ಲ ಬಿಪಿಎಲ್, ಅಂತ್ಯೋದಯ ಕಾರ್ಡುದಾರ ಕುಟುಂಬದ ವ್ಯಕ್ತಿಗೆ ಈಗ ನೀಡುತ್ತಿದ್ದ ತಲ ಐದು ಕೆ.ಜಿ ಅಕ್ಕಿಯನ್ನು ಹೆಚ್ಚಿಸಿ ತಲಾ 10 ಕೆ.ಜಿ ಅಕ್ಕಿ ಅಥವಾ ಆಹಾರಧಾನ್ಯವನ್ನು ಉಚಿತವಾಗಿ ನೀಡಲು ನಿರ್ಧರಿಸಿ ಪ್ರಕಟಿಸಿದ್ದು, ಸ್ವಾಗತಾರ್ಹ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಒಕ್ಕೂಟ ಸರ್ಕಾರವು ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದು ತೀವ್ರ ಖಂಡನೀಯ. ರಾಜ್ಯ ಸರ್ಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಆಹಾರಧಾನ್ಯ ನೀಡಲು ಭಾರತ ಆಹಾರ ನಿಗಮದ ಅಧಿಕಾರಿಗಳು ಒಪ್ಪಿದ್ದರೂ ಒಕ್ಕೂಟ ಸರ್ಕಾರ ಬಡವರ ವಿರೋಧಿಯಾಗಿ ನಿಂತಿರುವುದು ಅಕ್ಷಮ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬಿಜೆಪಿ ಮತ್ತು ಒಕ್ಕೂಟ ಸರ್ಕಾರ ತಮ್ಮ ಸಂಕುಚಿತ ಜನ ವಿರೋಧಿ ರಾಜಕಾರಣವನ್ನು ಕೂಡಲೇ ಕೈ ಬಿಟ್ಟು ಒಪ್ಪಂದದಂತೆ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐಎಂ ಪಕ್ಷವು, ಒಕ್ಕೂಟ ಸರ್ಕಾರವನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತದೆ” ಎಂದು ಮಹೇಶ ಹಿರೇಮಠ ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಎರಡೇ ಬಲ್ಬ್ ಇರುವ ತಗಡಿನ ಮನೆಗೆ 1 ಲಕ್ಷ ರೂ. ವಿದ್ಯುತ್‌ ಬಿಲ್; ವೃದ್ಧೆ ಕಣ್ಣೀರು

ಸಿಪಿಐಎಂ ಮುಖಂಡ ಸಲೀಂ ಹುಲ್ಲೂರು ಮಾತನಾಡಿ, “ಕರ್ನಾಟಕ ರಾಜ್ಯದಲ್ಲಿ ಬಹುತೇಕರು ಬಿಜೆಪಿಯ ಸಂಸದರು ಇದ್ದರೂ ಅವರು, ಅಕ್ಕಿ ನೀಡಲು ನಿರಾಕರಣೆ ಮಾಡಿರುವ ಇಚಾರದಲ್ಲಿ ಬಾಯಿಗೆ ಬೀಗ ಹಾಕಿಕೊಂಡಿರುವುದು ಅವರ ವಿರೋಧಿ ನೀತಿಯನ್ನು ಬಯಲುಗೊಳಿಸುತ್ತದೆ” ಎಂದು ಕಟುವಾಗಿ ಟೀಕಿಸಿದರು.

“ಜನರಿಗೆ ಆಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರ ಪರವಾಗಿರದೇ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯಾಗಿದೆ. ಒಕ್ಕೂಟ ಸರ್ಕಾರ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯದಾದ್ಯಂತ ‘ಒಕ್ಕೂಟ ಸರ್ಕಾರದ ಬಡವರ ವಿರೋಧಿ ನೀತಿಯ ಭೂತ’ ದಹನ ಮಾಡುವ ಮೂಲಕ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ಸಲೀಂ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡರಾದ ಸಂಕಪ್ಪ ಕುರಟ್ಟಿ, ಹನಂತ ತಾಳಿ, ಗುರಪ್ಪ ಕೊಣ್ಣುರು, ಮೈಲಾರಪ್ಪ ಮಾದರ, ಶಿವಲಿಂಗ ಮಾದರ ಹಾಗೂ ದೇವದಾಸಿ ಮಹಿಳಾ ಸಂಗಾತಿ ದೇವಮ್ಮ ಮತ್ತಿತರಿದ್ದರು.

LEAVE A REPLY

Please enter your comment!
Please enter your name here