ಫೇಸ್‌ಬುಕ್‌ನಿಂದ | ಕೇರಳದ ಅಡಿಕೆ ಕಳ್ಳ ರಾಜು ಮತ್ತು ಉಜಿರೆಯ ಸೌಜನ್ಯ ಕೊಲೆ ಪ್ರಕರಣ

Date:

Advertisements

ಒಡನಾಡಿ ಸ್ಟ್ಯಾನ್ಲಿ ಬರಹ | ಕೊಲೆ ನಡೆದ ದಿನವದು. ನಡುರಾತ್ರಿಯ ಕಲ್ಲು ಕರಗುವ ಸಮಯ. ಅಡಕ್ಕ ರಾಜು ಕನ್ಯಾಸ್ತ್ರೀ ಮಠಕ್ಕೆ ಕದಿಯಲೆಂದು ಬಂದು ಮರ ಹತ್ತಿದ್ದ. ಆಗ ಇಬ್ಬರು ಪಾದ್ರಿಗಳು ಮಠದ ಮಹಡಿಯ ಮೆಟ್ಟಿಲೇರಿ ಹೋಗುತ್ತಿದ್ದುದನ್ನು ಕಂಡಿದ್ದ. ನಂತರದ್ದು ದೊಡ್ಡ ಚರಿತ್ರೆ!

ಈ ‘ಅಡಕ್ಕ ರಾಜು’ ಯಾರೋ ಉದ್ಯಮಿಯೋ, ಪ್ರಗತಿಪರ ಚಿಂತಕನೋ, ಸೆಲೆಬ್ರಿಟಿಯೋ ಅಲ್ಲ. ಒಬ್ಬ ಸಾಮಾನ್ಯ ಅಡಿಕೆ ಕಳ್ಳ. ಕೇರಳದಲ್ಲಿ ಎಲ್ಲಿಯಾದರೂ ಕಳುವಾದರೆ ಪೊಲೀಸರು ಈತನನ್ನು ಕರೆತಂದು ವಿಚಾರಣೆ ಮಾಡುತ್ತಿದ್ದರು. ಅಗತ್ಯಬಿದ್ದರೆ ಬಾಕಿ ಉಳಿದ ಪ್ರಕರಣಗಳನ್ನು ಇವನ ಅಕೌಂಟಿಗೆ ಜಮಾ ಮಾಡಿ ಕೈ ತೊಳೆದುಕೊಳ್ಳುತ್ತಿದ್ದರು. ಅಡಿಕೆ ಕದಿಯುತ್ತಿದ್ದ ರಾಜು, ಕೇರಳದ ಜನಸಾಮಾನ್ಯರ ಹೃದಯಗಳನ್ನು ಕದ್ದು ಬೆಳಗಾಗುವುದರಲ್ಲಿ ಸೆಲೆಬ್ರಿಟಿ ಪಟ್ಟಕ್ಕೇರಿದ್ದ.  ಇವತ್ತು ಜನ ಆತನನ್ನು ನೆನಪಿಟ್ಟುಕೊಂಡಿದ್ದಾರೋ ಇಲ್ಲವೋ ಕಾಣೆ. ನಮ್ಮಲ್ಲಿ ಅತ್ಯಾಚಾರ, ಕೊಲೆ ನಡೆದಾಗಲೆಲ್ಲ ಈ ಕಳ್ಳ ನನ್ನನ್ನು ಆಗಾಗ ಕಾಡುತ್ತಿರುತ್ತಾನೆ. ಧರ್ಮಸ್ಥಳ ಸಂಸ್ಥಾನದ ಉಜಿರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಅಮಾನುಷವಾಗಿ ಕೊಲ್ಲಲ್ಪಟ್ಟರೂ ಇಂದಿಗೂ ನ್ಯಾಯ ದೊರಕಿಸಿಕೊಳ್ಳಲಾಗದೆ ಮಣ್ಣಲ್ಲಿ ಮಣ್ಣಾಗಿಹೋದ ಹದಿನೇಳರ ಬಾಲಕಿ ಸೌಜನ್ಯ ಈ ಕಳ್ಳನನ್ನು ಮತ್ತೆ ನೆನಪಿಸುತ್ತಿದ್ದಾಳೆ.

1992ರ ಮಾರ್ಚ್ 27. ಕೇರಳದ ಕೊಟ್ಟಾಯಂನ ‘ಪಯಸ್ ಎಕ್ಸ್’ ಕ್ರೈಸ್ತ ಕನ್ಯಾಸ್ತ್ರೀ ಮಠದಲ್ಲಿ 19 ವರ್ಷ ವಯಸ್ಸಿನ, ‘” ‘ಅಭಯಾ’ ಎಂಬ ಕನ್ಯಾಸ್ತ್ರೀಯೊಬ್ಬರ ಹತ್ಯೆಯಾಗಿತ್ತು. ಪದವಿಪೂರ್ವ ವಿದ್ಯಾಭ್ಯಾಸ ನಡೆಸುತ್ತಿದ್ದ ಆಕೆ, ಅಂದು ಮಠದ ಬಾವಿಯಲ್ಲಿ ಹೆಣವಾಗಿ ತೇಲುತ್ತಿದ್ದಾಗ, ಸ್ಥಳೀಯ ಪೊಲೀಸರು ಅದನ್ನು ಆತ್ಮಹತ್ಯೆ ಎಂದು ಸುಲಭವಾಗಿ ಕೊನೆಗಾಣಿಸಿದ್ದರು. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಬಲಹೀನಳಲ್ಲ ಎಂದು ಬಲವಾಗಿ ನಂಬಿದ್ದ ಕುಟುಂಬಸ್ಥರು ಪಟ್ಟು ಹಿಡಿದಿದ್ದರಿಂದಾಗಿ ಕೇಸು ಕ್ರೈಮ್ ಬ್ರಾಂಚ್ ತಲುಪಿತು. ಆ ಪೊಲೀಸರೂ ಮೂಲ ತನಿಖೆಯನ್ನೇ  ಬಲಗೊಳಿಸಿ, ಆತ್ಮಹತ್ಯೆ ಎನ್ನಲು ಮತ್ತಷ್ಟು ಅಂತೆ-ಕಂತೆಗಳನ್ನು ಕಡತಕ್ಕೆ ಸೇರಿಸಿದ್ದರು. ಸಮಾಧಾನ ಕಳೆದುಕೊಂಡ ಜನ ಕಾನೂನಿನ ಹೋರಾಟ ರೂಪಿಸಿದರು. ಪ್ರಕರಣವನ್ನು ರಾಷ್ಟ್ರದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐಗೆ ವಹಿಸಲಾಯಿತು. ಆದರೆ, ಅದೂ ಕೂಡ ಎರಡು ಬಾರಿ ಮುಗ್ಗರಿಸಿತು. ಕೊಲೆಯಾಗಿರುವುದು ನಿಜವಾದರೂ ಕೊಲೆ ಮಾಡಿದವರಾರು ಎಂಬುದಕ್ಕೆ ಸಿಬಿಐ ಬಳಿ ಉತ್ತರ ಇರಲಿಲ್ಲ. ಸ್ಥಳೀಯ ನ್ಯಾಯಾಧೀಶರ ವಿವೇಕಯುಕ್ತ ಎಚ್ಚರಿಕೆಯನ್ನು ಪಾಲಿಸಿದ ಸಿಬಿಐ, ತನ್ನ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ, ಇನ್ನಷ್ಟು ಸಾಕ್ಷ್ಯಗಳನ್ನು ಕಲೆಹಾಕಿ, ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯಕ್ಕೆ ತಂದು, ಕೊಲೆ ಮಾಡಿದವರನ್ನು ಹೆಡೆಮುರಿ ಕಟ್ಟಿ ಸಮಾಜದ ಮುಂದೆ ನಿಲ್ಲಿಸಿತ್ತು. ಸಿಸ್ಟರ್ ಅಭಯಾ ಕೊಲೆಯಾಗಿ 28 ವರ್ಷಗಳ ನಂತರ ಸಿಕ್ಕ ನ್ಯಾಯವದು!

Advertisements

ಈ ಸಂದರ್ಶನ ಕೇಳಿದ್ದೀರಾ?: ರಂಗ ನಿರ್ದೇಶಕ ಲಕ್ಷ್ಮಣ್ ಕೆ ಪಿ ಸಂದರ್ಶನ | ‘ಅವತ್ತು ಥಟ್ಟನೆ ಅಳು ಬಂದು ಗಾಂಧಿಯ ವೇಷ ಕಿತ್ತು ಬಿಸಾಡಿಬಿಟ್ಟಿದ್ದೆ!’

ಈ ಸಾವು ಸ್ಥಳೀಯ ಪೊಲೀಸರಿಗೆ ಸವಾಲಾಗಿತ್ತು ಎಂದೇನೂ ಅಲ್ಲ. ಪ್ರಾಮಾಣಿಕ ಪ್ರಯತ್ನವಿದ್ದಿದ್ದರೆ, ಮೂರು ತಿಂಗಳಿನಿಂದ ಮೂರು ವರ್ಷದೊಳಗಾಗಿ ನ್ಯಾಯ ಕೊಡಿಸಬಹುದಾಗಿತ್ತು. ಆದರೆ ಇಲ್ಲಿ ಧರ್ಮ, ಹಣ ಹಾಗೂ ರಾಜಕೀಯದ ಒಟ್ಟಾರೆ ಶಕ್ತಿ ಹೊಂದಿದ್ದವರು ಮತ್ತು ಅದರ ಕಡೆ ವಾಲಿಕೊಂಡಿದ್ದ ಅಧಿಕಾರಿಗಳು ಆರೋಪಿಗಳನ್ನು ಬಚಾವ್ ಮಾಡಲೆಂದೇ ಕೆಲಸ ಮಾಡಿದ್ದರು. ಅತಂತ್ರ ಸ್ಥಿತಿಯಲ್ಲಿದ್ದ ಜನರೇ ಆಕೆಗಾಗಿ ಸಮಿತಿ ರಚಿಸಿ, ಬಿಡದೆ ಹೋರಾಡಿದರೂ, ನ್ಯಾಯದ ಮೇಲೆ, ನ್ಯಾಯಾಂಗದ ಮೇಲೆ ನಂಬಿಕೆ ಉಳಿಯುವಂತೆ ಮಾಡಿದ್ದು ಇದೇ ಕಳ್ಳ ‘ಅಡಕ್ಕ ರಾಜು.’ ಆತ ನೀಡಿದ್ದ ಅದ್ಭುತ ಸಾಕ್ಷ್ಯ  ಅಭಯಾಳಿಗೆ ನ್ಯಾಯ ದೊರಕಿಸಿತ್ತು.

ಕೊಲೆ ನಡೆದ ದುರ್ದಿನದ ನಡುರಾತ್ರಿ. ಕಲ್ಲು ಕರಗುವ ಸಮಯದಲ್ಲಿ ಅಡಕ್ಕ ರಾಜು ಕನ್ಯಾಸ್ತ್ರೀ ಮಠಕ್ಕೆ ಕದಿಯಲೆಂದು ಬಂದು ಮರ ಹತ್ತಿದ್ದಾಗ, ಇಬ್ಬರು ಪಾದ್ರಿಗಳು ಕನ್ಯಾಸ್ತ್ರೀ ಮಠದ ಮಹಡಿಯ ಮೆಟ್ಟಿಲೇರಿ ಹೋಗುತ್ತಿದ್ದುದನ್ನು ಕಂಡಿದ್ದ.  ಅವರೇ ಫಾದರ್ ಜೋಸೆಫ್ ಕೊಟ್ಟೂರ್ ಮತ್ತು ಫಾದರ್ ಜೋಸ್ ಪೂತ್ರುಕಾಯಿಲ್. ಸಿಸ್ಟರ್ ಸಿಫಿ ಜೊತೆ ಅಕ್ರಮ ಸಂಬಂಧದಲ್ಲಿದ್ದ ಫಾದರ್ ಜೋಸೆಫ್ ಕೊಟ್ಟೂರ್, ಅಂದು ಅಡುಗೆಮನೆಯಲ್ಲಿ ಜೊತೆ ಸೇರಿದ್ದರು. ನೀರು ಕುಡಿಯಲು ಅಲ್ಲಿಗೆ ಬಂದಿದ್ದ ಸಿಸ್ಟರ್ ಅಭಯಾ, ಏನೋ ಶಬ್ದವಾಗುತ್ತಿದ್ದುದನ್ನು ಕೇಳಿ ಆ ಬದಿ ನಡೆದಾಗ, ಫಾದರ್ ಆಕೆಯನ್ನು  ಹಿಡಿದೆಳೆದು ಬಾಯಿ ಅದುಮಿ ಹಿಡಿದಾಗ, ಸಿಸ್ಟರ್ ಸಿಫಿ ಕೈಗೊಡಲಿಯ ಹಿಂಬದಿಯಿಂದ ಆಕೆಯ ತಲೆಗೆ ಹೊಡೆದು ಶಾಶ್ವತವಾಗಿ ಆಕೆಯ ಬಾಯಿ ಮುಚ್ಚಿಸಿದ್ದಳು. ನಂತರ ಬಾವಿಗೆ ಎಸೆದಿದ್ದರು.

ಈ ಸಂದರ್ಶನ ಕೇಳಿದ್ದೀರಾ?: ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್‌ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’

ಈ ಪ್ರಕರಣದಲ್ಲಿ ಅಡಿಕೆ ಕಳ್ಳ ರಾಜುನನ್ನು ಹೊರತುಪಡಿಸಿ ಸಾಕ್ಷಿಗಳಾಗಿದ್ದ ಮಿಕ್ಕೆಲ್ಲ ಸಜ್ಜನರು ಕೊಟ್ಟ ಮಾತಿಗೆ ತಪ್ಪಿ  ಉಲ್ಟಾ ಹೊಡೆದಿದ್ದರು. ಈ ಪ್ರಕರಣದಿಂದ ವಿಮುಖನಾಗಲು ರಾಜುಗೆ ಸ್ಥಳೀಯ ಪೊಲೀಸರು ಮತ್ತು ಬಲಿಷ್ಠರು ಸಾಕಷ್ಟು ಚಿತ್ರಹಿಂಸೆ ನೀಡಿದ್ದರು, ಆಮಿಷಗಳನ್ನೂ ಒಡ್ಡಿದ್ದರು. ಆದರೆ, ರಾಜು ಬಗ್ಗಲಿಲ್ಲ. ಹೆಣವಾಗಿದ್ದ ಅಭಯಾಳಲ್ಲಿ ಆತ ತನ್ನ ಮಗಳನ್ನು ಕಾಣತೊಡಗಿದ್ದ. ಕೋರ್ಟಿನಲ್ಲಿ ಆತನ ಚರಿತ್ರೆ ಓದಿ ಅವಮಾನಿಸಿ, ಆತನ ಸಾಕ್ಷ್ಯವನ್ನು ಅನುಮಾನಿಸಲಾಗಿತ್ತು. ಆದರೂ ನ್ಯಾಯಾಲಯ ಆತನ ಸಾಕ್ಷ್ಯವನ್ನು ಮಾನ್ಯ ಮಾಡಿತು. ಜೊತೆಗೆ, “ಕಳ್ಳನಲ್ಲದೆ ಇನ್ನೊಬ್ಬ ಈ ಕೃತ್ಯವನ್ನು ಅಂತಹ ಅವೇಳೆಯಲ್ಲಿ ನೋಡಲು ಸಾಧ್ಯವಿಲ್ಲ. ಧರ್ಮದೊಳಗಿರುವ ಜನ ಈ ಅಪರಾಧವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದರೆ, ಜಗತ್ತಿನ ದೃಷ್ಟಿಯಲ್ಲಿ ಕಳ್ಳನಾಗಿರುವ ಈತ, ತಾನು ಅನುಭವಿಸಬಹುದಾದ ಎಲ್ಲ ರೀತಿಯ ಹಿಂಸೆಗಳನ್ನು ತಿಳಿದೂ, ಈ ಪ್ರಕರಣವನ್ನು ಲಾಭಕ್ಕೆ ಬಳಸಿಕೊಳ್ಳಬಹುದಾಗಿದ್ದರೂ ಹಾಗೆ ಮಾಡದೆ, ಎಲ್ಲ  ಅವಮಾನಗಳನ್ನು ಸಹಿಸಿ, ಸತ್ಯದ ಪರವಾಗಿ ಸಾಕ್ಷ್ಯ ನುಡಿದಿದ್ದಾನೆ. ಈ ನಡೆ ಪ್ರಶಂಸನೀಯ. ಈತ ಏಸುವಿನ ಜೊತೆ ಶಿಲುಬೆಗೆ ಏರಿಸಲ್ಪಟ್ಟ ಒಳ್ಳೆಯ ಕಳ್ಳನನ್ನು ನೆನಪಿಸುತ್ತಾನೆ…” ಎಂದಿತ್ತು.  ತದನಂತರದಲ್ಲಿ ಎಲ್ಲೆಲ್ಲೂ ರಾಜು ಬಗ್ಗೆ ಪ್ರಶಂಸೆಯ ಸುರಿಮಳೆಯೇ. “ಲೋಕ ಆತನನ್ನು ಕಳ್ಳನೆಂದು ಕರೆದರೂ ಆತನಲ್ಲೊಬ್ಬ ಸಂತನಿದ್ದಾನೆ,” ಎಂದರು ಜಾಕೊಬೈಟ್‌ನ ಬಿಷಪ್. ಕೇರಳದ ಪ್ರಖ್ಯಾತ ಕವಿ ಬಾಲಚಂದ್ರನ್ ಚುಲ್ಲಿಕಾಡ್, “ಓ ಏಸುವೇ, ನಿನ್ನೊಡನೆ ಮರಣ ಹೊಂದಿದ ಆ ಒಳ್ಳೆಯ ಕಳ್ಳನೊಬ್ಬನೇ ನಿನ್ನ ನ್ಯಾಯದ ಪರವಾಗಿ ನಿಂತ!” ಎಂಬ ಅರ್ಥ ಬರುವ ನಾಲ್ಕು ಸಾಲುಗಳನ್ನು ಕಳ್ಳ ರಾಜುವಿಗೆ ಅರ್ಪಿಸಿದರು.

ಇತ್ತ ಅಗಣಿತ ಕೋಟಿ ಕನಸುಗಳನ್ನು ನಕ್ಷತ್ರಗಳನ್ನಾಗಿಸಿ ತನ್ನ ಕಂಗಳಲ್ಲಿ ಬಂಧಿಸಿಟ್ಟಿದ್ದ ಉಜಿರೆಯ ವಿದ್ಯಾರ್ಥಿನಿ, ಹದಿನೇಳರ ಬಾಲೆ, ಸೌಜನ್ಯಳ ಮಾನ-ಪ್ರಾಣ ಹರಣಕ್ಕೆ ನ್ಯಾಯ ಸಿಗದಿರುವುದು ಭಾರತೀಯ ತನಿಖಾ ವ್ಯವಸ್ಥೆಯ ಅವಸ್ಥೆಯನ್ನು ನಗ್ನಗೊಳಿಸಿ ನಮ್ಮ ಮುಂದಿಟ್ಟಿದೆ. ಅದರೊಡನೆ, ಸುಖಾಸುಮ್ಮನೆ ಈ ಘನಘೋರ ಕ್ರೌರ್ಯವನ್ನು ಮೆರೆದ ‘ಪಾಪಿ’ ಎಂಬ ಹಣೆಪಟ್ಟಿಯನ್ನು ಬರೆಯಿಸಿಕೊಂಡು, ಆರು ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಮನೋ ವ್ಯಾಕುಲತೆಗೊಳಗಾಗಿ ಬದುಕಿ ಸತ್ತಿರುವ ಸಂತೋಷ್ ರಾವ್‌ರಂಥವರ ಕತೆ! ಕನಿಷ್ಠಪಕ್ಷ ಅವರಿಗೆ ‘ಪರಿಶುದ್ಧ’ ಎಂಬ ಚೀಟಿ ಸಿಕ್ಕಿದ್ದರಿಂದಾಗಿ ಈ ಪ್ರಕರಣದಲ್ಲಿ ಮಾನವೀಯತೆ ಒಂದಿಷ್ಟು ಇನ್ನೂ ಉಸಿರಾಡುತ್ತಿದೆ. ಸೌಜನ್ಯಳ ಬರ್ಬರ ಅತ್ಯಾಚಾರ-ಕೊಲೆ ನಡೆದಿದೆ. ಈಗ ಸಂತೋಷ್ ರಾವ್ ನಿರಪರಾಧಿ. ಹಾಗಾದರೆ ಅಪರಾಧಿ ಯಾರು? ಸತ್ಯದ ಪರ ನಿಲ್ಲಬೇಕಾದ ಸಾಕ್ಷ್ಯಗಳು, ತನಿಖಾಧಿಕಾರಿಗಳು, ಧಾರ್ಮಿಕ ವ್ಯಕ್ತಿಗಳು ಸಜ್ಜನರ ಸೋಗು ತಳೆದು ಸೌಜನ್ಯಳ ಗೋರಿಯನ್ನು ಮತ್ತಷ್ಟು ಗಟ್ಟಿ ಮಾಡುತ್ತಿದ್ದರೆ, ಅಡಕ್ಕ ರಾಜುನಂತಹ ಕಳ್ಳನಾದರೂ ಆಕೆಯ ಸಾವಿಗೆ ನ್ಯಾಯ ದೊರಕಿಸಲು ಬರಲಿ ಎಂದು ಆಶಿಸುತ್ತಿದೆ ಮನಸ್ಸು. ನನ್ನ ಅನುಭವಕ್ಕೆ ಬಂದಿರುವ ಸತ್ಯವೆಂದರೆ… ಜಾತಿ, ಧರ್ಮ, ಅಧಿಕಾರಗಳು ಹಾಕಿದ ಗಂಟನ್ನು ಬಿಡಿಸಿಕೊಳ್ಳದವನು ದೇವರಿಗೆ ಅಂಟಿಕೊಳ್ಳಲೂಬಹುದು; ಆದರೆ ಮನುಷ್ಯನಿಗೆ ಖಂಡಿತವಾಗಿಯೂ ಹತ್ತಿರವಾಗಲಾರ!

(ಲೇಖಕರ ಪೂರ್ವಾನುಮತಿಯೊಂದಿಗೆ ಯಥಾವತ್ತಾಗಿ ಪ್ರಕಟಿಸಲಾದ ಬರಹವಿದು)

 ಬರಹಗಳನ್ನು ಆಲಿಸಲು ಇಲ್ಲಿ ಕ್ಲಿಕ್ ಮಾಡಿ: ಈದಿನ.ಕಾಮ್‌ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು...

ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ...

Download Eedina App Android / iOS

X