ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಬರೋಬ್ಬರಿ 100 ಅನ್ನದಾತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ರೈತರ ಆತ್ಮಹತ್ಯೆ ಪ್ರಕರಣಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಆರು ತಾಲ್ಲೂಕುಗಳಿವೆ. ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾಗಿವೆ. ಆದರೆ ಬರ, ಬೆಲೆ ಕುಸಿತ, ಅತೀವೃಷ್ಟಿ, ಅನಾವೃಷ್ಟಿ ತತ್ತರಿಸಿತು. ಹೀಗಾಗಿ ಸಾಲ ಬಾಧೆಯಿಂದ 2023-24ನೇ ಸಾಲಿನಲ್ಲಿ 70 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2024-25 ರಲ್ಲಿ 30 ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.
ಒಟ್ಟು ಸಾವಿಗೀಡಾದ ಪ್ರಕರಣಗಳನ್ನು ಕೃಷಿ ಇಲಾಖೆ ಮಾನದಂಡಗಳಿಗೆ ಅನುಗುಣವಾಗಿ ಪರಿಗಣಿಸಿ ಪರಿಹಾರ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ 70 ಪ್ರಕರಣಗಳು ಅಧಿಕೃತವಾಗಿ ದಾಖಲಾಗಿವೆ. ಈ ಪೈಕಿ ಸಮರ್ಪಕ ಕಾರಣ ಲಭ್ಯವಾಗದ ಕಾರಣ 4 ಅರ್ಜಿ ತಿರಸ್ಕೃತಗೊಳಿಸಿದೆ. ಬಹುತೇಕ 66 ಪ್ರಕರಣಗಳ ರೈತ ಕುಟುಂಬಗಳಿಗೆ ಈಗಾಗಲೇ ರಾಜ್ಯ ಸರ್ಕಾರದ ತಲಾ ₹5 ಲಕ್ಷ ಪರಿಹಾರ ಒದಗಿಸಲಾಗಿದೆ. 2024-25ರಲ್ಲಿ ದಾಖಲಾದ 30 ಪ್ರಕರಣಗಳಲ್ಲಿ 4 ಅರ್ಜಿ ತಿರಸ್ಕೃತಗೊಳಿಸಿದೆ. 26 ಅರ್ಜಿಗಳಲ್ಲಿ ಕೆಲವರಿಗೆ ಪರಿಹಾರ ತಲುಪಿದೆ. ಉಳಿದವರಿಗೆ ಇನ್ನಷ್ಟೇ ಅನುಮೋದನೆ ನೀಡಿ ಪರಿಹಾರ ನೀಡಬೇಕಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರೈತರ ಆತ್ಮಹತ್ಯೆಗೆ ಮುಖ್ಯವಾಗಿ ಬೆಳೆ ನಷ್ಟ, ಬೆಲೆ ಕುಸಿತವೇ ಕಾರಣ. ಬೆಳೆ ನಿರೀಕ್ಷೆಯಲ್ಲಿರುವ ರೈತ ನಷ್ಟವಾದಾಗ ಸಾಲದ ಹೊರೆ ಸಹಿಸದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಹಿಂದಿನ ವರ್ಷ ಉತ್ತಮ ಬೆಲೆ ಬಂದಿದ್ದ ಬೆಳೆಯನ್ನೇ ಬಹುತೇಕ ರೈತರು ಬೆಳೆಯುವುದರಿಂದ ಉತ್ಪಾದನೆ ಹೆಚ್ಚಾಗಿ ಬೆಲೆ ಕುಸಿತವಾಗುತ್ತದೆ. ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು. ಹಾನಿಯಾದ ಬೆಳೆಗೆ ಸಕಾಲಕ್ಕೆ ವಿಮಾ ಸೌಲಭ್ಯ ದಕ್ಕದಿರುವುದು ರೈತರನ್ನು ಕಂಗಾಲಾಗಿಸುತ್ತಿದೆ.
ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು ರೈತರ ಆತ್ಮಹತ್ಯೆ :
ʼ2023-24ರಲ್ಲಿ ಜಿಲ್ಲೆಯ ಶಹಾಪುರ (21), ವಡಗೇರಾ (12), ಸುರಪುರ (20), ಹುಣಸಗಿ (15), ಯಾದಗಿರಿ (1), ಗುರುಮಠಕಲ್ (1) ತಾಲೂಕುಗಳಲ್ಲಿ ಒಂದು ವರ್ಷದಲ್ಲಿ 70 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2024-25ರಲ್ಲಿ ಜಿಲ್ಲಾದ್ಯಂತ 30 ಜನ ರೈತರು ಬೆಳೆ ಹಾನಿ, ಬ್ಯಾಂಕ್ ಸಾಲ ಸೇರಿದಂತೆ ವಿವಿಧ ಕಾರಣದಿಂದ ನೇಣಿಗೆ ಕೊರಳೊಡ್ಡಿದ್ದಾರೆ.
ಅಚ್ಚರಿ ಸಂಗತಿ ಎಂದರೆ 2023-24 ಹಾಗೂ 2024-25ರ ಎರಡು ವರ್ಷದ ಅವಧಿಯಲ್ಲಿ ದಾಖಲಾದ 100 ಆತ್ಮಹತ್ಯೆ ಪ್ರಕರಣಗಳಲ್ಲಿ ಶಹಾಪುರ ಒಂದೇ ತಾಲ್ಲೂಕಿನಲ್ಲಿ 32 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆಯಾದ 2023-24ನೇ ಸಾಲಿನಲ್ಲಿ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದಾರೆ. ಇನ್ನು ಅಧಿಕ ನೀರಾವರಿ ಪ್ರದೇಶ ಹೊಂದಿರುವ ಶಹಾಪುರ, ಸುರಪುರ ಹಾಗೂ ಹುಣಸಗಿ ತಾಲ್ಲೂಕಿನಲ್ಲಿ ಹೆಚ್ಚು ರೈತರು ಜೀವ ತ್ಯಜಿಸಿರುವುದು ಗಮನಿಸಬಹುದು.

2020-23ರ ಮೂರು ವರ್ಷದಲ್ಲಿ 115 ರೈತರ ಸಾವಿಗೆ ಶರಣು :
ಯಾದಗಿರಿ ಜಿಲ್ಲೆಯಲ್ಲಿ 2020ರಿಂದ ಫೆಬ್ರವರಿ 15ರವರೆಗೆ 2023ರವರೆಗೆ ಒಟ್ಟು 115 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸರ್ಕಾರದ ಅಧಿಕೃತವಾಗಿ ನೀಡಿದ ಅಂಕಿ-ಅಂಶಗಳೇ ಹೇಳುತ್ತವೆ. 2020-21ರಲ್ಲಿ 41, 2021-22ರಲ್ಲಿ 61 ಹಾಗೂ 2022-23ರ ಫೆ.23ರವರೆಗೆ 13 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ವಾಮಿನಾಥನ್ ವರದಿ ಜಾರಿಗೊಳಿಸಿ :
ಯಾದಗಿರಿ ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ ಬೆಳೆದ ಭತ್ತ, ಹತ್ತಿ, ಮೆಣಸಿನಕಾಯಿ, ಶೇಂಗಾ ಸೇರಿದಂತೆ ಇತರೆ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕುತ್ತಿಲ್ಲ. ಹವಾಮಾನ ವೈಪರೀತ್ಯದಿಂದ ಸಾಗುವಳಿಗಾಗಿ ಮಾಡಿದ ಖರ್ಚು ಬಾರದಂತಹ ಪರಿಸ್ಥಿತಿ ಇದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀಸುವ ಆದೇಶವಿದ್ದರೂ ಖರೀದಿ ಪ್ರಕ್ರಿಯೆ ನಡೆಯುವುದಿಲ್ಲ. ಇದರಿಂದ ಸಾಲ ತೀರಿಸಲು ಸಾಧ್ಯವಾಗದ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆʼ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಚೆನ್ನಪ್ಪ ಆನೆಗೊಂದಿ ಹೇಳುತ್ತಾರೆ.
ʼಎಲ್ಲ ಪಕ್ಷಗಳು ಅಧಿಕಾರಕ್ಕೇರುವ ಮುನ್ನ ರೈತರನ್ನು ಸುಳ್ಳು ಹೇಳುವುದು ವಾಡಿಕೆ ಎಂಬಂತಾಗಿದೆ. ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ, ಪ್ರಾಮಾಣಿಕತೆ ಕಿಂಚಿತ್ತೂ ಇಲ್ಲ. ರೈತರ ಕಲ್ಯಾಣ ಎಂಬುದು ಯಾವಾಗಲೂ ಚುನಾವಣೆ ವಿಚಾರವಾಗಿದೆ. ರೈತರು ಬೆಳೆದ ಯಾವುದೇ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯಿಂದ ರೈತರು ಪ್ರಗತಿಯಾಗಲು ಸಾಧ್ಯವಿಲ್ಲ. ಹೀಗಾಗಿ ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ರೈತ ವಿರೋಧಿ ಮೂರು ಕೃಷಿ ಕಾಯ್ದೆ ರದ್ದಾಗಬೇಕುʼ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ : ಸವಾರರಿಬ್ಬರ ಸಾವು
ʼಗ್ರಾಮೀಣ ಭಾಗದಲ್ಲಿ ಕುಡಿತ, ಜೂಜಿಗೆ ಯುವ ಸಮೂಹ ಬಲಿಯಾಗುತ್ತಿದೆ. ಎಲ್ಲೆಡೆ ಭ್ರಷ್ಟಾಚಾರ ಮಿತಿಮೀರಿದೆ. ಇದನ್ನು ತಡೆಗಟ್ಟುವ ಕೆಲಸ ಮಾಡಬೇಕಿದೆ. ಸರ್ಕಾರದ ಯೋಜನೆಗಳು ರೈತರಿಗೆ ನೇರವಾಗಿ ತಲುಪದಿರುವುದು, ಆರ್ಥಿಕ ಸಂಕಟ ಎದುರಾದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯದೇ ಇರುವುದು ಆತ್ಮಹತ್ಯೆಗೆ ಕಾರಣ ಎನ್ನಬಹುದು. ಇವರಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಸಾವಿಗೆ ಶರಣಾಗುತ್ತಿರುವುದು ನೋವಿನ ಸಂಗತಿ. ಈ ಬಗ್ಗೆ ಸರ್ಕಾರ, ಈ ಭಾಗದ ಜನಪ್ರತಿನಿಧಿಗಳು ಗಂಭೀರವಾಗಿ ಯೋಚಿಸಬೇಕಾಗಿದೆʼ ಎಂದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.