ರಾಯಚೂರಿನ ದೇವದುರ್ಗ ತಾಲೂಕು ಆಡಳಿತ ನಿರ್ಲಕ್ಷ್ಯದಿಂದ ಕಳೆದ 2 ವರ್ಷಗಳಿಂದ ಅಂಬೇಡ್ಕರ್ ವೃತ್ತ ದುರಸ್ತಿ ಕಾಮಗಾರಿ ಸ್ಥಗಿತಗೊಂಡಿರುವುದಕ್ಕೆ ದಲಿತಪರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗುತ್ತಿಗೆದಾರರ ಉದಾಸೀನದಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಲೋಕೋಪಯೋಗಿ ಇಲಾಖೆಯವರು ಪುರಸಭೆ ಮೇಲೆ.. ಪುರಸಭೆಯವರು ತಾಲೂಕಾಡಳಿತದ ಮೇಲೆ ಆರೋಪದ ನೆಪ ಹೇಳಿ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಹಲವು ಜಯಂತಿಗಳ ಪೂರ್ವಭಾವಿ ಸಭೆ, ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಕಾಮಗಾರಿ ಮುಂದುವರೆಯುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಲಾರಿಯೊಂದು ಅಂಬೇಡ್ಕರ್ ವೃತ್ತಕ್ಕೆ ಡಿಕ್ಕಿಯಾಗಿ ಕೆಳಗಿನ ಮೆಟ್ಟಿಲು ಮತ್ತು ಗ್ರಿಲ್ ಮುರಿದು ಹೋಗಿದ್ದವು. ಅದರ ದುರಸ್ತಿಗಾಗಿ ಇಂದು ನಾಳೆ ಎಂದು ಎರಡು ವರ್ಷಗಳು ಕಳೆದಿವೆ. ಬರೀ ಅಂಬೇಡ್ಕರ್ ಮೂರ್ತಿಗೆ ಕಾಮಗಾರಿ ಎರಡು ವರ್ಷಗಳು ಕಳೆದಿವೆ ಎಂದರೆ ಬೇರೆ ಕೆಲಸ ಹೇಗೆ ಎಂಬುದು ಸಾಅರ್ವಜನಿಕರ ಪ್ರಶ್ನೆಯಾಗಿದೆ.
ಈ ಬಗ್ಗೆ ದಲಿತ ಹೋರಾಟಗಾರ ಹನುಮಂತ ಮನ್ನಾಪುರು ಮಾತನಾಡಿ, “₹12 ಲಕ್ಷ ಅನುದಾನ ಮಂಜೂರಾದರೂ ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಲೋಕೋಪಯೋಗಿ ಇಲಾಖೆ ಎಇಇ ಮತ್ತು ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಅವರನ್ನು ಅಮಾನತು ಮಾಡಿ ಏಪ್ರಿಲ್ 14ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮುಂದುವರಿದರೆ ಮಾ.21ರಂದು ರಸ್ತೆ ಬಂದ್ ಮಾಡಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.

“ಎರಡು ವರ್ಷಗಳಿಂದ ಅಂಬೇಡ್ಕರ್ ಫೋಟೋ ಇಟ್ಟು ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ. ಈ ಬಾರಿ ಕಾಮಗಾರಿ ಪೂರ್ಣಗೊಂಡು ಆಚರಣೆಗೆ ಅನುಕೂಲ ಮಾಡಿಕೊಡಬೇಕು” ಎಂದರು.
ಇದನ್ನೂ ಓದಿ: ರಾಯಚೂರು | ಪಿಡಿಓ, ಅಧಿಕಾರ ದುರ್ಬಳಕೆ ಆರೋಪ: ಕೂಲಿ ಕಾರ್ಮಿಕರು ಧರಣಿ
ದೇವದುರ್ಗ ಶಾಸಕಿ ಕರೆಮ್ಮ ಜಿ ನಾಯಕ ಅವರು ಕೂಡಲೇ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
