ಸಸಿಗೆ ನೀರೆರದು ಪೋಷಿಸಿದರೆ ಉತ್ತಮ ಫಲ ದೊರೆಯುವಂತೆ, ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಿ ಪೋಷಿಸಿದರೆ ದೇಶದ ಅತ್ಯುತ್ತಮ ಕೊಡುಗೆಯಾಗಲಿದ್ದಾರೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ ಪಾಟೀಲ ಅಭಿಪ್ರಾಯಪಟ್ಟರು.
ಕಲಬುರಗಿ ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ್ ಪಾಟೀಲ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಸರ್ವಜ್ಞ ಚಿಣ್ಣರ ಲೋಕ ಹಮ್ಮಿಕೊಂಡಿದ್ದ ʼಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರೊಂದಿಗೆ ಸಂವಾದʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮಕ್ಕಳು ದೇಶದ ಮಹೋನ್ನತ ಸಂಪತ್ತು. ಅವರನ್ನು ನಿರ್ಲಕ್ಷಿಸುವುದು ದೇಶದ ಬುನಾದಿಯನ್ನು ಮತ್ತು ಭವಿಷ್ಯವನ್ನು ನಿರ್ಲಕ್ಷಿಸಿದಂತೆ. ಶಿಕ್ಷಕನ ಸಕಾಲಿಕ ಮಾರ್ಗದರ್ಶನಕ್ಕೆ ವಿದ್ಯಾರ್ಥಿಯ ದಿಕ್ಕನ್ನೇ ಬದಲಾಯಿಸುವ ಶಕ್ತಿ ಇದೆ. ಈ ಅವಕಾಶವನ್ನು ಪ್ರತಿ ಶಿಕ್ಷಕನೂ ಉತ್ತಮವಾಗಿ ಬಳಸಿಕೊಂಡು ಸದೃಢ ದೇಶ ಕಟ್ಟುವಲ್ಲಿ ಕೈಜೋಡಿಸಬೇಕು” ಎಂದರು.
ಇದನ್ನೂ ಓದಿ: ಕಲಬುರಗಿ | ಕೇಬಲ್ ವೈರ್ ಕಳ್ಳತನ; ಇಬ್ಬರು ಬಂಧನ
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ ರಂಜಾನ್ ದರ್ಗಾ, ಸಿಎಗಳಾದ ಆರ್ ಪಿ ಬಿಜಾಸಪುರ, ಪ್ರಶಾಂತ ಬಿಜಾಸಪುರ, ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾ ಚನ್ನಾರೆಡ್ಡಿ ಪಾಟೀಲ, ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ ಚನ್ನಾರೆಡ್ಡಿ ಪಾಟೀಲ, ಪ್ರಾಚಾರ್ಯ ಪ್ರಶಾಂತ ಕುಲಕರ್ಣಿ, ಉಪನ್ಯಾಸಕರಾದ ವಿಜಯ ನಾಲವಾರ, ವಿರುಪನಗೌಡ ಪಾಟೀಲ, ಕರುಣೇಶ ಹಿರೇಮಠ, ಪ್ರಸಾದ ಬಿಜಾಸಪುರ, ಗುರುರಾಜ ಕುಲಕರ್ಣಿ ಉಪಸ್ಥಿತರಿದ್ದರು.